ಕಾವೇರಿ 5ನೇ ಹಂತದ ಯೋಜನೆ ಜುಲೈ ಅಂತ್ಯದೊಳಗೆ ಕಾರ್ಯಾರಂಭ ಮಾಡಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ಘೋಷಿಸಿದೆ. ಇದರಿಂದ 110 ಹಳ್ಳಿಗಳಲ್ಲಿ ವಾಸಿಸುವ ಬೆಂಗಳೂರಿನ ಲಕ್ಷಾಂತರ ನಿವಾಸಿಗಳ ಕಾವೇರಿ ನೀರಿಗಾಗಿನ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ.
ಜಲಮಂಡಳಿಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಂಡು ಜುಲೈನಲ್ಲಿ 775 ಎಂಎಲ್‌ಡಿ ಕಾವೇರಿ ನೀರು ಬೆಂಗಳೂರಿನ 110 ಹಳ್ಳಿಗಳಿಗೆ ಹರಿದು ಬರಲಿದೆ. ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿಯಲ್ಲಿ 3 ಪ್ರತ್ಯೇಕ ಪಂಪಿಂಗ್ ಸ್ಟೇಷನ್ ನಿರ್ಮಿಸಲಾಗಿದೆ.
ಕಾವೇರಿ ನೀರು ಪಡೆಯುವ 110 ಗ್ರಾಮಗಳು
ಆರ್.ಆರ್.ನಗರ ವಲಯಗಳಲ್ಲಿ ಉಲ್ಲಾಳು, ವಸಂತಪುರ, ಹೊಸಹಳ್ಳಿ, ಸುಬ್ರಹ್ಮಣ್ಯಪುರ, ಸೋಂಪುರ, ಹೆಮ್ಮಿಗೆಪುರ ಸೇರಿ 17 ಹಳ್ಳಿಗಳು ಬರಲಿವೆ.
ಬ್ಯಾಟರಾಯನಪುರ ವಲಯಗಳಲ್ಲಿ ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಹಾರೋಹಳ್ಳಿ, ಗೋವಿಂದಪುರ, ಹೊರಮಾವು ಆಗರ, ಬೈರತಿ, ದಾಸರಹಳ್ಳಿ, ಚಿಕ್ಕನಹಳ್ಳಿ, ಕೊತ್ತನೂರು ಸೇರಿ 26 ಹಳ್ಳಿಗಳು ಬರಲಿವೆ.
ದಾಸರಹಳ್ಳಿ ವಲಯಗಳಲ್ಲಿ ಚಿಕ್ಕಲಸಂದ್ರ, ಅಬ್ಬಿಗೆರೆ, ಹೇರೋಹಳ್ಳಿ, ಹೊಸಹಳ್ಳಿ ಸೇರಿ 11 ಹಳ್ಳಿಗಳು ಬರಲಿವೆ.
ಮಹದೇವಪುರ ವಲಯಗಳಲ್ಲಿ ಚೆನ್ನಸಂದ್ರ, ದೇವರ ಬೀಸನಹಳ್ಳಿ, ಕಾಡಬೀಸನಹಳ್ಳಿ, ವರ್ತೂರು, ಹೊರಮಾವು ಸೇರಿ 23 ಹಳ್ಳಿಗಳು ಬರಲಿವೆ. ಬೊಮ್ಮನಹಳ್ಳಿ ವಲಯಗಳಲ್ಲಿ ಅಂಬಲಿಪುರ, ಬೇಗೂರು ಸೇರಿ 33 ಹಳ್ಳಿಗಳು ಬರಲಿವೆ.
ಯೋಜನೆಗೆ ಸಹಕರಿಸಿರುವ ಜೈಕಾ ಸೇರಿದಂತೆ ನಾನಾ ಸಂಸ್ಥೆಗಳ ಸಮ್ಮುಖದಲ್ಲಿ ಕಾವೇರಿ 5ನೇ ಹಂತದ ಯೋಜನೆ ಚಾಲನೆಗೆ ದಿನಗಣನೆ ಶುರುವಾಗಿದೆ. ಜಲಮಂಡಳಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ಕಾವೇರಿ 5ನೇ ಹಂತದ ಯೋಜನೆಯಡಿ 110 ಹಳ್ಳಿಗಳಲ್ಲಿ 3.50 ಲಕ್ಷ ಸಂಪರ್ಕ ಕಲ್ಪಿಸಲು ಅವಕಾಶಗಳಿದ್ದರೂ, ಇದುವರೆಗೆ ಸುಮಾರು 48 ಸಾವಿರ ಸಂಪರ್ಕ ನೀಡಲಾಗಿದೆ ಎನ್ನಲಾಗಿದೆ.
2008ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾಗಿದ್ದ 110 ಹಳ್ಳಿಗಳಿಗೆ ಕಾವೇರಿ ನೀರು ನೀಡಲು ಕೊಳವೆ ಜಾಲ ಸೃಷ್ಟಿಸಲಾಗುತ್ತಿದೆ. ಕಾವೇರಿ 5 ನೇ ಹಂತದ ಯೋಜನೆಯ ಒಂದನೇ ಘಟ್ಟದಲ್ಲಿ 500 ದಶಲಕ್ಷ ಲೀಟರ್ ಹಾಗೂ 2ನೇ ಘಟ್ಟದಲ್ಲಿ 225 ದಶಲಕ್ಷ ಲೀಟರ್ ನೀರು ದೊರೆಯಲಿದೆ. ಈಗ ಕಾವೇರಿ 5 ನೇ ಹಂತದ ಒಂದನೇ ಘಟ್ಟದ ಯೋಜನೆ ಅನುಷ್ಠಾನಗೊಳ್ಳುತ್ತಿದೆ. 2017ರ ಏಪ್ರಿಲ್‌ನಲ್ಲಿ ಆರಂಭವಾಗಿದ್ದ ಈ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು.
ಇದೀಗ, ಜಲಮಂಡಳಿ ನಗರ ನೀರಿನ ನಿರ್ವಹಣೆಯಲ್ಲಿ ಮುಂದೇನು ಎಂಬುದು ಪ್ರತಿಯೊಬ್ಬರ ಮನಸ್ಸಿನಲ್ಲಿ ಉಳಿಯುವ ಪ್ರಶ್ನೆಯಾಗಿದೆ. ನೀರು ಸರಬರಾಜು ಯೋಜನೆಗಳು ದೀರ್ಘಾವಧಿ ಸಮಯ ತೆಗೆದುಕೊಳ್ಳತ್ತವೆ ಮತ್ತು ಹೆಚ್ಚಿನ ಆರ್ಥಿಕ ಅವಶ್ಯಕತೆ ಇರುತ್ತದೆ.
“ಸ್ಪಷ್ಟವಾಗಿ ಕಾವೇರಿ ಹಂತ 5ನೇ ಹಂತ ಪೂರ್ಣಗೊಳ್ಳಲು ನಮಗೆ ಸುಮಾರು ಒಂದು ದಶಕ ಬೇಕಾಯಿತು. ನೀರು ಸರಬರಾಜು ಯೋಜನೆಗಳು ಶ್ರಮದಾಯಕ ಮತ್ತು ಆರ್ಥಿಕವಾಗಿ ದೊಡ್ಡದಾಗಿರುವುದರಿಂದ ಜಲಮಂಡಳಿ ಮುಂದಿನ ಹಂತವನ್ನು ತಕ್ಷಣವೇ ಯೋಜಿಸಲು ಪ್ರಾರಂಭಿಸಬೇಕು. ವಿಶೇಷವಾಗಿ ನಿಧಿ ಕ್ರೋಢೀಕರಣವನ್ನು ನೋಡಬೇಕು” ಎಂದು ಜಲ ಸಂರಕ್ಷಣಾ ತಜ್ಞ ವಿಶ್ವನಾಥ್ ಎಸ್ ಹೇಳಿದ್ದಾರೆ.
“ಮಂಡಳಿ ಅಥವಾ ಸರ್ಕಾರವು ಅಂತಹ ದೊಡ್ಡ ಯೋಜನೆಗೆ ಹಣ ನೀಡಲು ಸಾಧ್ಯವಾಗದ ಕಾರಣ ಸಂಪನ್ಮೂಲ ಕ್ರೋಢೀಕರಣವು ನಿರ್ಣಾಯಕವಾಗಿದೆ” ಎಂದು ಹಿರಿಯ ಬಿಡಬ್ಲೂಎಸ್‌ಎಸ್‌ಬಿ ಅಧಿಕಾರಿಗಳು ಹೇಳಿದ್ದಾರೆ.
“ಭವಿಷ್ಯದ ಬಗ್ಗೆ ಯೋಜಿಸುವ ಅವಶ್ಯಕತೆಯಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ, ನಾವು ಈಗಾಗಲೇ ಕಾವೇರಿ 6ನೇ ಹಂತದ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲು ಪ್ರಾರಂಭಿಸಿದ್ದೇವೆ. ವರದಿಯು ವರ್ಷಾಂತ್ಯದೊಳಗೆ ಸಿದ್ಧವಾಗಲಿದೆ ಎಂದು ಭಾವಿಸುತ್ತೇವೆ. ನಂತರ ನಾವು ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಹಣದ ಬೆಂಬಲವನ್ನು ಕೋರುತ್ತೇವೆ” ಎಂದು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ತಿಳಿಸಿದ್ದಾರೆ.
“ನಗರದಲ್ಲಿ ಮಳೆಯ ಸ್ವರೂಪವೂ ಬದಲಾಗುತ್ತಿರುವ ಕಾರಣ, ನಾವು ಖಂಡಿತವಾಗಿಯೂ ದೀರ್ಘಾವಧಿಯ ಸುಸ್ಥಿರ ಯೋಜನೆಗಳನ್ನು ನೋಡಬೇಕಾಗಿದೆ. ಇಂತಹ ಹಲವು ಯೋಜನೆಗಳು ನಮ್ಮ ಮುಂದಿವೆ” ಎಂದು ಹೇಳಿದ್ದಾರೆ.
ಯೋಜನೆಗೆ ಅನುದಾನ ಅಥವಾ ಸಾಲದ ರೂಪದಲ್ಲಿ ಹಣ ನೀಡಲು ಅಂತಾರಾಷ್ಟ್ರೀಯ ಏಜೆನ್ಸಿಗಳನ್ನು ಸಂಪರ್ಕಿಸಲು ಸರ್ಕಾರದಿಂದ ಬೆಂಬಲವನ್ನು ಪಡೆಯಲು ಮಂಡಳಿಯು ಯೋಜಿಸಿದೆ.
ಬಿಡಬ್ಲೂಎಸ್‌ಎಸ್‌ಬಿ ಮೂಲಗಳ ಪ್ರಕಾರ, ಆನೇಕಲ್, ನೆಲಮಂಗಲ, ಹೊಸಕೋಟೆ ಮತ್ತು ದೇವನಹಳ್ಳಿ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲಿನ ಉಪನಗರ ಪ್ರದೇಶಗಳಿಗೆ ಕಾವೇರಿ ನೀರನ್ನು ಪೂರೈಸಲು 6ನೇ ಹಂತ ಸಹಾಯ ಮಾಡುತ್ತದೆ. ಅಗತ್ಯವಿರುವ ವೆಚ್ಚ ಮತ್ತು ನಿರ್ವಹಣಾ ಪ್ರಯತ್ನಗಳನ್ನು ಪರಿಗಣಿಸಿ, ಮಂಡಳಿ ಈ ಪಟ್ಟಣಗಳಿಗೆ ಬೃಹತ್ ಪ್ರಮಾಣದ ನೀರನ್ನು ಮಾತ್ರ ಒದಗಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಈ ಪ್ರದೇಶಗಳಲ್ಲಿನ ನಗರ ಸ್ಥಳೀಯ ಸಂಸ್ಥೆಗಳು (ಯುಎಲ್‌ಬಿ) ಮನೆ-ಮನೆಗೆ ಸರಬರಾಜು ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತವೆ. ಈಗಿನಂತೆ, ಯೋಜನೆಗೆ 2028ರ ಗಡುವನ್ನು ಮಂಡಳಿಯು ನೋಡುತ್ತಿದೆ. ಆದರೆ, ಹಣ ಕ್ರೂಢಿಕರಣವಾಗಲು ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
“ಸದ್ಯದಲ್ಲೇ ಕಾವೇರಿ 6ನೇ ಹಂತದ ಯೋಜನೆ ಜಾರಿಗೊಳಿಸಲು ಮಂಡಳಿ ಉತ್ಸುಕತೆ ತೋರಿರುವುದು ಸಂತಸದ ಸುದ್ದಿಯಾದರೂ, ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನದ ಹೋರಾಟವನ್ನು ಕಂಡಿರುವ 110 ಗ್ರಾಮಗಳ ನಿವಾಸಿಗಳು ಬಿಡಬ್ಲ್ಯುಎಸ್‌ಎಸ್‌ಬಿ ಮುಂದಿನ ಯೋಜನೆಗಳನ್ನು ಉತ್ತಮವಾಗಿ ರೂಪಿಸಬೇಕು” ಎಂದು ಸಲಹೆ ನೀಡಿದ್ದಾರೆ.
“ನಾವು ಐದು ವರ್ಷಗಳಿಂದ ಕಾವೇರಿ ನೀರಿಗಾಗಿ ಕಾಯುತ್ತಿದ್ದೇವೆ. ಆದರೆ, ಅಧಿಕಾರಿಗಳು ಹೊಸ ಗಡುವುಗಳನ್ನು ಮಾತ್ರ ನೀಡುತ್ತಿದ್ದಾರೆ. ಯೋಜನೆಗಳನ್ನು ಜನಕೇಂದ್ರಿತವಾಗಿಸುವ ಮತ್ತು ನೆಲದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಕಾವೇರಿ ಐದನೇ ಹಂತದ ಯೋಜನೆಯಲ್ಲಿ ಹಲವು ತಿಂಗಳುಗಳಿಂದ ನಮ್ಮ ಎಂಜಿನಿಯರ್‌ಗಳು ಭೂಸ್ವಾಧೀನ ಸಮಸ್ಯೆಗಳ ಬಗ್ಗೆ ಹೇಳುತ್ತಲೇ ಇದ್ದರು. ಭವಿಷ್ಯದಲ್ಲಾದರೂ ಅಧಿಕಾರಿಗಳು ರಸ್ತೆಗಳನ್ನು ಅಗೆದು ಸಾರ್ವಜನಿಕರಿಗೆ ತೊಂದರೆಯಾಗುವ ಮುನ್ನ ಎಲ್ಲ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು” ಎಂದು ಉತ್ತರ ಬೆಂಗಳೂರಿನ ಟ್ರಿನಿಟಿ ಎನ್‌ಕ್ಲೇವ್ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ ಕೊಚ್ಚು ಶಂಕರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶವರ್ಮಾದಲ್ಲಿ ಅಪಾಯಕಾರಿ ಬಾಕ್ಟೀರಿಯಾ ಪತ್ತೆ; ಬ್ಯಾನ್ಗೆ ಚಿಂತನೆ ನಡೆಸಿದ ಎಫ್‌ಎಎಸ್‌ಎಸ್‌ಎಐ
“ನೀರು ನಿರ್ವಹಣೆ ಮತ್ತು ಸಮಗ್ರ ಯೋಜನೆಗೆ ಸಮಗ್ರ ವಿಧಾನದ ಅಗತ್ಯವಿದೆ. ಅಂತರ್ಜಲ ಮಟ್ಟವನ್ನು ಸುಧಾರಿಸುವುದು, ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯುವುದು ಮತ್ತು ತ್ಯಾಜ್ಯ ನೀರನ್ನು ಸದುಪಯೋಗಪಡಿಸಿಕೊಳ್ಳುವತ್ತ ಗಮನಹರಿಸಬೇಕು. ಕಾವೇರಿ 6ನೇ ಹಂತ ಖಂಡಿತವಾಗಿಯೂ ಪರಿಸ್ಥಿತಿಯನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುತ್ತದೆ. ನಾವು ಏಕಕಾಲದಲ್ಲಿ ಅಂತಹ ಸುಸ್ಥಿರ ಯೋಜನೆಗಳನ್ನು ನೋಡಬೇಕು” ಎಂದು ವೆಲ್ ಲ್ಯಾಬ್ಸ್‌ನಲ್ಲಿ ನಗರ ನೀರು ಕಾರ್ಯಕ್ರಮದ ವ್ಯವಸ್ಥಾಪಕ ಪಾಲುದಾರ ಶ್ರೇಯಾ ನಾಥ್ ಹೇಳಿದ್ದಾರೆ.




