ರಾಜ್ಯದಲ್ಲಿ ಸದ್ಯ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಅಲ್ಲದೇ, ಕಳೆದೆರಡು ದಿನಗಳ ಹಿಂದೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ₹3 ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ, ಇದೀಗ ನೀರಿನ ದರ ಏರಿಕೆಗೆ ಬೆಂಗಳೂರು ಜಲಮಂಡಳಿ ಪ್ರಸ್ತಾವಣೆ ಸಲ್ಲಿಸಿದ್ದು, “ನೀರಿನ ದರ ಏರಿಕೆ ಅನಿವಾರ್ಯ” ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಜೂನ್ 18ರಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಈಗಾಗಲೇ ನೀರಿನ ದರ ಏರಿಕೆ ಬಗ್ಗೆ ಬೆಂಗಳೂರು ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. 14 ವರ್ಷದಿಂದ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಆಗಿಲ್ಲ. ಈ ಹಿನ್ನಲೆ ಬೆಂಗಳೂರು ಜಲಮಂಡಳಿ ಸಿಬ್ಬಂದಿಗೆ ವೇತನ ನೀಡಲು ಸಮಸ್ಯೆ ಆಗುತ್ತಿದೆ. ನೀರಿನ ಬಳಕೆಯ ವಿದ್ಯುತ್ ವೆಚ್ಚ ಸಹ ಪಾವತಿಸಲು ಆಗುತ್ತಿಲ್ಲ. ಹೀಗಾಗಿ, ನೀರಿನ ದರ ಏರಿಕೆ ಅನಿವಾರ್ಯ” ಎಂದಿದ್ದಾರೆ.
ಜಲಮಂಡಳಿ ಸಿಬ್ಬಂದಿಗೆ ವೇತನ ನೀಡಲು ಹಣ ಇಲ್ಲ. ಹಾಗಾಗಿ, ನೀರಿನ ಬಿಲ್ ಹೆಚ್ಚಿಸಬೇಕೋ, ಬೇಡವೋ ಎಂದು ನೀವೇ ಹೇಳಿ ಎಂದು ನೀರಿನ ದರ ಏರಿಕೆಯ ಮುನ್ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಭ್ರಷ್ಟಾಚಾರ, ಕಮಿಷನ್ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತದೆ: ಎಎಪಿ
“2014ರ ಬಳಿಕ ಕುಡಿಯುವ ನೀರಿನ ದರ ಏರಿಕೆ ಮಾಡಿಲ್ಲ. ವಿದ್ಯುತ್ ದರವೂ ಏರಿಕೆ ಆಗಿದೆ. ಜಲಮಂಡಳಿಗೆ ಪ್ರತಿ ವರ್ಷ ನಷ್ಟ ಆಗುತ್ತಲೇ ಇದೆ. ಆದರೆ, ಬೆಂಗಳೂರಿಗೆ ಕುಡಿಯುವ ನೀರು ಬೇಕು. ಬಿಜೆಪಿಯವರು ಇದ್ದಾಗ ವಿದ್ಯುತ್ ದರ ಜಾಸ್ತಿ ಮಾಡಿದರು. ನಾವು ಬಂದು ಕಡಿಮೆ ಮಾಡಿದೆವು. ಕಡಿಮೆ ಮಾಡಿದ್ದಕ್ಕೆ ಪ್ರಶಂಸೆ ಮಾಡುವುದಿಲ್ಲ. ದರ ಹೆಚ್ಚಿಸಿದರೆ ಮಾತನಾಡುತ್ತೀರಿ” ಎಂದು ಅವರು ಬೇಸರ ವ್ಯಕ್ತಪಡಿಸಿದರು.




