“ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಸತ್ವಯುತ ಲೇಖನಗಳು, ಬರಹಗಳು ಸಮಾಜದ ಬದಲಾವಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಜನರ ಸಮಸ್ಯೆಗಳ ಬಗ್ಗೆ ಮನಮುಟ್ಟುವಂತೆ ಬರೆದು ಜನರಿಗೆ ತಲುಪಿಸುವುದು ಅತ್ಯವಶ್ಯಕ” ಎಂದು ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಹೇಳಿದರು.
ಬೆಂಗಳೂರಿನಲ್ಲಿ ಭಾನುವಾರ ಎಐಡಿವೈಒ ಆಯೋಜಿಸಿದ್ದ ‘ರಾಜ್ಯಮಟ್ಟದ ಬರಹಗಾರರ ಕಮ್ಮಟ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ನಾನಾ ವಿಭಾಗದ ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುವುದು ಒಂದೆಡೆಯಾದರೆ, ಸಮಸ್ಯೆಗಳನ್ನು ಮನಮುಟ್ಟುವ ರೀತಿಯಲ್ಲಿ ಬರವಣಿಗೆಗಳ ಮೂಲಕ ಜನರಿಗೆ ತಲುಪಿಸುವುದು ಕೂಡಾ ಅಷ್ಟೇ ಅವಶ್ಯಕ. ಇಂದು ಅಂತಹ ಲೇಖನಗಳನ್ನು ಬರೆಯುವ ಲೇಖಕರ ಕೊರತೆಯನ್ನು ನಾವು ಕಾಣುತ್ತಿದ್ದೇವೆ” ಎಂದರು.
“ಉತ್ತಮ ಬರಹಗಾರರನ್ನು ಸೃಷ್ಟಿಸಲು ಬರಹಗಾರರ ಕಮ್ಮಟ ಪ್ರಸ್ತುತವಾದದ್ದು ಹಾಗೂ ಅವಶ್ಯಕವಾದುದು. ಸೋವಿಯತ್ ರಷ್ಯಾದ ಸಮಾಜವಾದಿ ಕ್ರಾಂತಿಯ ಶಿಲ್ಪಿ ಲೆನಿನ್ ಅವರು ‘ಸಂಘಟನೆಯ ಮುಖ ಪತ್ರಿಕೆಯೇ ಓರ್ವ ಸಂಘಟನಾಕಾರನಿದ್ದಂತೆ’ ಎಂದಿದ್ದರು. ಅವರ ಮಾತಿನ ಸಾರವನ್ನು ಗ್ರಹಿಸಿ, ಸಾಮಾಜಿಕ ಬದ್ಧತೆಯೊಂದಿಗೆ ಯುವ ಬರಹಗಾರರನ್ನು ರೂಪಿಸಬೇಕು” ಎಂದರು.
ಎಐಡಿವೈಓ ರಾಷ್ಟ್ರ ಉಪಾಧ್ಯಕ್ಷ ಡಾ. ಜಿ.ಎಸ್. ಕುಮಾರ್ ಮಾತನಾಡಿ, “ಎಐಡಿವೈಓ ದೇಶದಾದ್ಯಂತ ಯುವಜನರ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಸಾಂಸ್ಕೃತಿಕ ಅಧಃಪತನಗಳ ವಿರುದ್ಧ ಯುವಜನ ಚಳುವಳಿಯನ್ನು ಸಂಘಟಿಸುತ್ತಿದೆ. ಜೊತೆಗೆ, ಯುವಜನರ ನಡುವೆ ಸದಭಿರುಚಿಯ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಮಾಜದಲ್ಲಿನ ಸಮಸ್ಯೆಗಳ ಕುರಿತು, ಯುವಜನರು ಎದುರಿಸುತ್ತಿರುವ ನಾನಾ ಸಮಸ್ಯೆಗಳ ಕುರಿತು ಲೇಖನಗಳನ್ನು ಬರೆಯಲು, ಸಮಾಜದಲ್ಲಿ ಉನ್ನತ ನೀತಿ ನೈತಿಕತೆಯನ್ನು ಬಿತ್ತಲು ಅವಶ್ಯಕತೆಯಿರುವ ಲೇಖನಗಳನ್ನು ಬರೆಯುವುದನ್ನು ಶಿಬಿರಾರ್ಥಿಗಳು ಪರಿಣಿತಿ ಹೊಂದಲಿ. ಸಾಮಾಜಿಕ ಬದ್ಧತೆಯೊಂದಿಗೆ ಸಾಹಿತ್ಯವನ್ನು ಒಂದು ಸಾಮಾಜಿಕ ಪರಿವರ್ತನೆಯ ಮಾಧ್ಯಮವಾಗಿ ಬಳಸಲು ಈ ಕಮ್ಮಟ ಸಹಕಾರಿಯಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಇಂಧನ ದರ ಇಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ; ಖಾಸಗಿ ಸಾರಿಗೆ ಸಂಘಟನೆಗಳ ಎಚ್ಚರಿಕೆ
ಎಐಡಿವೈಓ ರಾಜ್ಯ ಉಪಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ವೇದಿಕೆಯಲ್ಲಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ 50ಕ್ಕೂ ಹೆಚ್ಚು ಯುವ ಬರಹಗಾರರು ಈ ಬರಹಗಾರರ ಕಮ್ಮಟದಲ್ಲಿ ಭಾಗವಹಿಸಿದ್ದರು.





