ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ನಗರದಲ್ಲಿ ಮಾರ್ಚ್ 21 ಮತ್ತು ಮಾರ್ಚ್ 22ರಂದು ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸದ್ಯ ಇಡೀ ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ನೀರಿನ ಸಮಸ್ಯೆ ಉಂಟಾಗಿದ್ದು, ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಅಲ್ಲದೇ, ಬಿಸಿಲಿನ ತಾಪಮಾನ ಏರಿಕೆಯಾಗಿದ್ದು ಜನರು ಈ ಬಿಸಿಲಿನ ತಾಪ ತಡೆಕೊಳ್ಳುವಲ್ಲಿ ಹೈರಾಣಾಗಿದ್ದಾರೆ. ಬಿಸಿಲಿನ ಬೇಗೆಗೆ ಕೊಂಚ ತಂಪೆರೆಯಲು ಈ ಮಳೆ ಅವಶ್ಯಕವಾಗಿದೆ.
ತಾಪಮಾನದ ಹೆಚ್ಚಳ ಮತ್ತು ಮಳೆಯಾಗದಿರುವ ಪರಿಣಾಮ ಇದೀಗ ಹಲವಾರು ಕೊಳವೆಬಾವಿಗಳು ಬತ್ತಿದ್ದು, ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರುವರಿಯಲ್ಲಿ ಕನಿಷ್ಠ ಮಳೆ ಬೀಳುತ್ತದೆ. ಸರಾಸರಿ 18.5 ಮಿ.ಮೀ ಮಾಸಿಕ ಮಳೆಯೊಂದಿಗೆ ಮಾರ್ಚ್ ತಿಂಗಳು ಪೂರ್ವ ಮುಂಗಾರು ಋತುವಿನ ಆರಂಭವನ್ನು ಸೂಚಿಸುತ್ತದೆ. ನೈಋತ್ಯ ಮಾನ್ಸೂನ್ ಅವಧಿಯಲ್ಲಿ ಮೇ ತಿಂಗಳಿನಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ನಗರದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಸರಾಸರಿ 213 ಮಿಮೀ ಮಳೆಯಾಗಲಿದೆ ಎಂದು ಹೇಳಿದೆ.
ಮಾರ್ಚ್ 21 ರಿಂದ 23ರ ನಡುವೆ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಭಾರತದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಳೆ ಸುರಿಯಲು ಆರಂಭಿಸಿದೆ. ಭಾನುವಾರದಂದು ಉತ್ತರ ಒಳನಾಡಿನಲ್ಲಿ ಲಘು ಮಳೆಯಾದ ನಂತರ, ಬೆಂಗಳೂರು ಮತ್ತು ದಕ್ಷಿಣ ಆಂತರಿಕ ಕರ್ನಾಟಕದ ಉಳಿದ ಭಾಗಗಳಲ್ಲಿ ಈ ಬುಧವಾರದಿಂದ (ಮಾರ್ಚ್ 20) ಆರ್ದ್ರ ವಾತಾವರಣವನ್ನು ಅನುಭವಿಸುವ ಮುನ್ಸೂಚನೆ ಇದೆ.
ಈ ಸುದ್ದಿ ಓದಿದ್ದೀರಾ? ಹೋಳಿ ಹಬ್ಬ | ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್‌ಗೆ ಕಾವೇರಿ ನೀರು, ಬೋರ್‌ವೆಲ್ ನೀರು ಬಳಸದಿರಿ ಎಂದ ಜಲಮಂಡಳಿ
ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಹಾಗೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬುಧವಾರದಿಂದ ಭಾನುವಾರದವರೆಗೆ ಅಂದರೆ, ಮಾರ್ಚ್ 20 ರಿಂದ ಮಾರ್ಚ್ 23ರ ವರೆಗೆ ಲಘು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಉತ್ತರ ಒಳ ಕರ್ನಾಟಕದ ಪ್ರತ್ಯೇಕ ಪ್ರದೇಶಗಳಲ್ಲಿ ಲಘು ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಮುಂದುವರೆಯಲಿದೆ. ಹೆಚ್ಚುವರಿಯಾಗಿ, ಬಾಗಲಕೋಟೆ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಮೈಸೂರು ಜಿಲ್ಲೆಗಳು ಸೇರಿದಂತೆ ಮಧ್ಯ ಕರ್ನಾಟಕದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ.




