ಬೆಂಗಳೂರಿನ ಪರಪ್ಪನ ಕೇಂದ್ರ ಕಾರಾಗೃಹದ ಆವರಣದಲ್ಲಿ ಅಳವಡಿಸಲಾಗಿರುವ ಟವರ್-ಹಾರ್ಮೋನಿಯಸ್ ಕಾಲ್ ಬ್ಲಾಕಿಂಗ್ ಸಿಸ್ಟಮ್ (ಟಿ-ಎಚ್‌ಸಿಬಿಎಸ್) ಜಾಮರ್‌ಗಳನ್ನು ವಿರೋಧಿಸಿ ಪರಪ್ಪನ ಅಗ್ರಹಾರ ಸುತ್ತಮುತ್ತಲಿನ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಜಾಮರ್‌ಗಳಿಂದ ಮೊಬೈಲ್ ಫೋನ್‌ಗಳಿಗೆ ಸರಿಯಾಗಿ ಸಿಗ್ನಲ್ ಸಿಗದ ಕಾರಣ ಪರಪ್ಪನ ಅಗ್ರಹಾರ ಮತ್ತು ಸುತ್ತಮುತ್ತಲಿನ ನಿವಾಸಿಗಳು ಸಂಪರ್ಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿಭಟನಕಾರರನ್ನು ಪೊಲೀಸರು ತಡೆದಿದ್ದು, ಸ್ಥಳೀಯರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.
ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಕೆ ಮಾಡದಂತೆ ನಿಯಂತ್ರಿಸುವ ಸಲುವಾಗಿ ಕಾರಾಗೃಹ ಸುತ್ತಮುತ್ತ ಜಾಮರ್ ಅಳವಡಿಕೆ ಮಾಡಲಾಗಿದೆ. ಇದರಿಂದ ಕಾರಾಗೃಹದ ಸುತ್ತಮುತ್ತಲ ಸುಮಾರು ಎರಡು ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೊಬೈಲ್‌ಗಳಿಗೆ ನೆಟ್‌ವರ್ಕ್ ಸಿಗದೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಹೇಳಿದರು.
“ಪರಪ್ಪನ ಅಗ್ರಹಾರ ಸುತ್ತಮುತ್ತ 4G ಮತ್ತು 5G ನೆಟ್‌ವರ್ಕ್‌ಗಳಿಗೂ ಕೂಡ ಅಡ್ಡಿಯಾಗುತ್ತಿದೆ. ಉದ್ಯಮಿಗಳು, ಟೆಕ್ಕಿಗಳು ಮತ್ತು ಆರ್‌ಡಬ್ಲ್ಯೂಎಗಳನ್ನು ಒಳಗೊಂಡ ಪ್ರತಿಭಟನಾಕಾರರು, ಜಾಮರ್‌ಗಳು ಸಿಗ್ನಲ್‌ಗಳು, ಎಸ್‌ಎಂಎಸ್‌ಗಳು, ಒಳಬರುವ ಮತ್ತು ಹೊರಹೋಗುವ ಕರೆ ಸೇವೆಗಳಿಗೆ ಅಡ್ಡಿಯಾಗುತ್ತಿವೆ. ಇದು ಅವರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಬಗ್ಗೆ ಕಾರಾಗೃಹದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ” ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
“ಜಾಮರ್ ಅಳವಡಿಸಿರುವುದರಿಂದ ಕಳೆದ ಏಳು ತಿಂಗಳಿಂದ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಾಗಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್‌ಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ವ್ಯಾಪಾರಿಗಳಿಗೆ ಡಿಜಿಟಿಲ್ ವ್ಯವಹಾರಕ್ಕೂ ಸಮಸ್ಯೆಯಾಗಿದೆ” ಎಂದು ದೂರಿದ್ದಾರೆ.
ಆಗ್ನೇಯ ಬೆಂಗಳೂರಿನಲ್ಲಿರುವ ಕರ್ನಾಟಕದ ಅತಿದೊಡ್ಡ ಜೈಲಿನಲ್ಲಿ ಮೊಬೈಲ್ ಫೋನ್‌ಗಳ ಅಕ್ರಮ ಬಳಕೆಯನ್ನು ತಡೆಯಲು ಈ ವರ್ಷದ ಜನವರಿಯಲ್ಲಿ T-HCBS ಜಾಮರ್‌ಗಳನ್ನು ಸ್ಥಾಪಿಸಲಾಯಿತು. ಜೈಲಿನ ಸುತ್ತಮುತ್ತಲಿನ 20,000ಕ್ಕೂ ಹೆಚ್ಚು ಜನರಿಗೆ ಜಾಮರ್‌ಗಳು ಪರಿಣಾಮ ಬೀರಿವೆ” ಎಂದು ನಿವಾಸಿಗಳು ಹೇಳುತ್ತಾರೆ.
“ಜೈಲು ಅಧಿಕಾರಿಗಳು ಜೈಲಿನಲ್ಲಿ ಜಾಮರ್ಗಳನ್ನು ಅಳವಡಿಸಿದ್ದಾರೆ, ಅವುಗಳ ತ್ರಿಜ್ಯವು 500 ಮೀ ವರೆಗೆ ವಿಸ್ತರಿಸಿದೆ, ಇದು ನೆರೆಹೊರೆಯ 20,000 ಕ್ಕೂ ಹೆಚ್ಚು ನಿವಾಸಿಗಳ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ” ಎಂದು ನಿವಾಸಿ ಆಕಾಶ್ ಎಸ್.ಹೇಳಿದ್ದಾರೆ.
“ಈ ವ್ಯವಸ್ಥೆಯು 100-ಮೀಟರ್ ತ್ರಿಜ್ಯದವರೆಗಿನ ಸಿಗ್ನಲ್‌ಗಳನ್ನು ನಿರ್ಬಂಧಿಸಬೇಕು. ಆದರೆ, ಇದು ಜೈಲಿನಿಂದ 700 ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ನೆಟ್‌ವರ್ಕ್ ಸೇವೆಗಳನ್ನು ನಿರ್ಬಂಧಿಸುತ್ತಿದೆ” ಎಂದು ಹೊಸ ರಸ್ತೆಯ ಬಳಿ ವಾಸಿಸುವ ನಿವಾಸಿಯೊಬ್ಬರು ಹೇಳಿದ್ದಾರೆ.
“500 ರಿಂದ 700 ಮೀಟರ್ ದೂರದಲ್ಲಿರುವ ಬಹುಮಹಡಿ ಅಪಾರ್ಟ್‌ಮೆಂಟ್ ಬ್ಲಾಕ್‌ಗಳಲ್ಲಿ ವಾಸಿಸುವ ಜನರು ಸಹ ತೊಂದರೆಗೊಳಗಾಗಿದ್ದಾರೆ” ಎಂದು ಹೊಸ ರಸ್ತೆಯ ಸದರ್ನ್ ವಿಂಡ್‌ನ ಟೆಕ್ಕಿ ನಿತ್ಯಾನಂದನ್ ತಿಳಿಸಿದ್ದಾರೆ.
“ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಬಳಿ ವಾಸಿಸುತ್ತಿರುವ ನಮ್ಮಲ್ಲಿ ಹೆಚ್ಚಿನವರು ಶಾಲೆಗೆ ಹೋಗುವ ಮಕ್ಕಳನ್ನು ತುರ್ತು ಸಂದರ್ಭಗಳಲ್ಲಿ ತಲುಪಲು ಸಾಧ್ಯವಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಹೊಂದಿದ್ದರೂ, ಪ್ರದೇಶದಲ್ಲಿ ಅಸಮರ್ಪಕ ಮೊಬೈಲ್ ನೆಟ್‌ವರ್ಕ್ ಕವರೇಜ್‌ನಿಂದಾಗಿ ಅನೇಕ ಟೆಕ್ಕಿಗಳು ಕಚೇರಿಯಿಂದಲೇ ಕೆಲಸ ಮಾಡಲು ಆರಿಸಿಕೊಳ್ಳುತ್ತಾರೆ. ಜ್ಯಾಮರ್‌ಗಳು ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳನ್ನು ತಲುಪುವುದು ಅಥವಾ ಶಾಲಾ ಬಸ್‌ನ ಜಿಪಿಎಸ್ ಅನ್ನು ಟ್ರ್ಯಾಕ್ ಮಾಡುವುದು ಮುಂತಾದ ಸವಾಲುಗಳನ್ನು ಒಡ್ಡುತ್ತವೆ. ಹೆಚ್ಚುವರಿಯಾಗಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕರೆ ಮಾಡಲು ಅಥವಾ ಸ್ವೀಕರಿಸಲು ಸರಿಯಾದ ಸಂವಹನ ಸೌಲಭ್ಯಗಳಿಲ್ಲ. ಸೌತ್‌ವಿಂಡ್ ಲೇಔಟ್‌ನ ಹಲವಾರು ಬೀದಿಗಳಲ್ಲಿ ಕಳೆದ ಆರು ತಿಂಗಳಿಂದ ಮೊಬೈಲ್ ಸಂಪರ್ಕವಿಲ್ಲ. ಒಟಿಪಿ ಬರಲ್ಲ. ಇಡೀ ಪ್ರದೇಶದಲ್ಲಿ ನೆಟ್‌ವರ್ಕ್ ಅಡೆತಡೆಗಳಿಂದಾಗಿ ಆನ್‌ಲೈನ್ ವಿತರಣಾ ಸೇವೆಗಳು ಮತ್ತು ತುರ್ತು ಕರೆಗಳಿಗೆ ಗಂಭೀರ ಸಮಸ್ಯೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುದುರೆ ರೇಸ್‌ಗೆ ಅನುಮತಿ ನಿರಾಕರಿಸಿದ ಸರ್ಕಾರ; ಹೈಕೋರ್ಟ್ ಮೆಟ್ಟಿಲೇರಿದ ಟರ್ಫ್ ಕ್ಲಬ್
“ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ, ನಾವು ಜಾಮರ್‌ಗಳನ್ನು ತೆಗೆದುಹಾಕಲು ಅಥವಾ ಜೈಲಿನ ಆವರಣಕ್ಕೆ ಅವುಗಳ ವ್ಯಾಪ್ತಿಯನ್ನು ನಿರ್ಬಂಧಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ, ಕೈದಿಗಳು ಅನಧಿಕೃತವಾಗಿ ಮೊಬೈಲ್ ಫೋನ್‌ಗಳನ್ನು ಬಳಸುವುದನ್ನು ಮುಂದುವರೆಸಿದ್ದರಿಂದ ಜೈಲು ಅಧಿಕಾರಿಗಳು ಹಳೆಯ ಜಾಮರ್‌ಗಳನ್ನು ಟವರ್-ಹಾರ್ಮೋನಿಯಸ್ ಕಾಲ್ ಬ್ಲಾಕಿಂಗ್ ಸಿಸ್ಟಮ್ (ಟಿ-ಎಚ್‌ಸಿಬಿಎಸ್) ನೊಂದಿಗೆ ಬದಲಾಯಿಸಿದರು.
ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.




