- ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಸೌತ್ ಜೋನ್ ಸಭೆಯಲ್ಲಿ ಭಾಗಿ
- ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗಳ ನೀರಿನ ಅಗತ್ಯತೆಯ ಬಗ್ಗೆ ಮಾಹಿತಿ ಸಂಗ್ರಹಣೆ
“ಮಳೆ ನೀರು ಮರುಪೂರಣೆಯ ಪದ್ದತಿಯನ್ನು ಅಳವಡಿಕೊಳ್ಳುವುದನ್ನ ಪ್ರೋತ್ಸಾಹಿಸಲು ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ” ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಮಾರ್ಚ್ 16ರಂದು ಬೆಂಗಳೂರಿನ ಅಪಾರ್ಟ್‌ಮೆಂಟ್ ಫೆಡರೇಷನ್ ಆಯೋಜಿಸಿದ್ದ ಸೌತ್ ಜೋನ್ ಸಭೆಯಲ್ಲಿ ಭಾಗವಹಿಸಿ ನಿವಾಸಿಗಳೊಂದಿಗೆ ಸಂವಾದ ನಡೆಸಿದರು.
“ಬೆಂಗಳೂರು ನಗರ ಕಳೆದ 15 ವರ್ಷಗಳಲ್ಲಿ 50 ವರ್ಷಗಳ ಬೆಳವಣಿಗೆಯನ್ನು ಕಂಡಿದೆ. ದೇಶದ ಬಹು ಜನಸಂಖ್ಯೆ ನಗರಗಳಲ್ಲಿ ಒಂದಾಗಿರುವ ನಗರದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. 1.40 ಕೋಟಿಯಷ್ಟು ಜನಸಂಖ್ಯೆಗೆ ನಾವು ಪ್ರತಿ ದಿನ 145 ಕೋಟಿ ಲೀಟರ್‌ಗಳಷ್ಟು ಕಾವೇರಿ ನೀರನ್ನ ಒದಗಿಸುತ್ತಿದ್ದೇವೆ. ಇದಲ್ಲದೇ ಬೋರ್‌ವೆಲ್‌ಗಳ ಮೂಲಕ ಜನರು ತಮ್ಮ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತಿದ್ದರು. ಆದರೆ, ಅಂತರ್ಜಲ ಕುಸಿತವಾಗಿರುವ ಹಿನ್ನಲೆ, ಬೋರ್‌ವೆಲ್‌ಗಳನ್ನ ಬಳಸುತ್ತಿದ್ದ ಜನರು ಕಾವೇರಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ” ಎಂದರು.
“ಇದು ನಮ್ಮ ವಿತರಣಾ ವ್ಯವಸ್ಥೆಯ ಮೇಲೆ ಒತ್ತಡ ಬೀಳುವಂತೆ ಮಾಡಿದೆ. ಈ ಸಮಸ್ಯೆಯನ್ನು ಊಹಿಸಿದ್ದ ಜಲಮಂಡಳಿ ಈಗಾಗಲೇ ನಗರಕ್ಕೆ ಅಗತ್ಯವಿರುವ ನೀರನ್ನ ಪೂರೈಸುವ ನಿಟ್ಟಿನಲ್ಲಿ ಎಲ್ಲ ಸಿದ್ದತೆ ಮಾಡಿಕೊಂಡಿದೆ. ಆದರೆ, ಭವಿಷ್ಯದ ಅನುಕೂಲಕ್ಕಾಗಿ ನಗರದಲ್ಲಿ ಬೀಳುವ ಮಳೆಯ ನೀರನ್ನ ಇಂಗುವಂತೆ ಮಾಡುವುದು ಬಹಳ ಅಗತ್ಯ. ಮಳೆ ನೀರು ಮರುಪೂರಣೆಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳದೇ ಇರುವುದರಿಂದ ಮಳೆಯಾದ ಸಂಧರ್ಭದಲ್ಲಿ ನಮ್ಮ ಒಳಚರಂಡಿಗಳ ಮೇಲೆ ಬಹಳಷ್ಟು ಒತ್ತಡ ಹೆಚ್ಚಾಗುತ್ತದೆ. ಇದರಿಂದ ಪ್ರವಾಹ ಪರಿಸ್ಥಿತಿಯೂ ಉಂಟಾಗುತ್ತದೆ” ಎಂದು ಹೇಳಿದರು.
ಅಪಾರ್ಟ್‌ಮೆಂಟ್ ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್
“ಇದನ್ನ ತಪ್ಪಿಸುವ ನಿಟ್ಟಿನಲ್ಲಿ ಮಳೆ ನೀರು ಮರುಪೂರಣೆಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದನ್ನ ಪ್ರೋತ್ಸಾಹಿಸುವುದು ಅಗತ್ಯವಿದೆ. ಹಲವಾರು ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆ ನೀರು ಮರುಪೂರಣ ವ್ಯವಸ್ಥೆ ಪರಿಣಾಮಕಾರಿಯಾಗಿ ಅಳವಡಿಕೆ ಆಗದೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಈ ವ್ಯವಸ್ಥೆಯ ಅಳವಡಿಕೆಯಿಂದ ಭೂಮಿಯಿಂದ ತಗೆದುಕೊಳ್ಳುತ್ತಿರುವ ನೀರನ್ನ ಮತ್ತೆ ಮರುಪೂರಣ ಗೊಳಿಸಬಹುದಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಇದರ ಅಳವಡಿಕೆಯಿಂದ ಜಲಕ್ಷಾಮದ ಸಂಧರ್ಭಗಳಲ್ಲಿ ನೀರಿಗಾಗಿ ಪರಿತಪಿಸುವುದು ತಪ್ಪುತ್ತದೆ. ಇದನ್ನ ಪ್ರೋತ್ಸಾಹಿಸಲು ಜಲಮಂಡಳಿಯ ವತಿಯಿಂದ ಅಪಾರ್ಟ್‌ಮೆಂಟ್‌ಗಳಿಗೆ ಅವುಗಳ ಮಳೆ ಮರುಪೂರಣ ವ್ಯವಸ್ಥೆಯ ಆಧಾರದ ಮೇಲೆ ಗ್ರೀನ್ ಸ್ಟಾರ್ ರೇಟಿಂಗ್ ನೀಡಲು ಚಿಂತಿಸಲಾಗುತ್ತಿದೆ” ಎಂದರು.
1,700 ಟ್ಯಾಂಕರ್‌ಗಳ ನೊಂದಣಿ
“ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳನ್ನು ನೊಂದಾಯಿಸಿಕೊಳ್ಳಲು ನೀಡಿದ್ದ ಗಡುವು ಮುಕ್ತಾಯಗೊಂಡಿದ್ದು, 1,700 ಟ್ಯಾಂಕರ್‌ಗಳು ನೊಂದಾಯಿತವಾಗಿವೆ. ಈ ಟ್ಯಾಂಕರ್‌ಗಳ ಮೇಲೆ ನಿಗದಿತ ಸ್ಟಿಕ್ಕರ್ ಅಳವಡಿಸಲಾಗುವುದು. ವಿಶೇಷ ಸಂಖ್ಯೆಯನ್ನು ನೀಡಲಾಗುವುದು. ಇವುಗಳ ಮೇಲೆ ದರದ ಪಟ್ಟಿಯನ್ನು ಹಾಗೂ ದೂರು ನೀಡಲು ದೂರವಾಣಿ ಸಂಖ್ಯೆಯನ್ನು ನಮೂದಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಫ್ರೀಡಂ ಪಾರ್ಕ್ ಪಾರ್ಕಿಂಗ್ ಸೌಲಭ್ಯ ನಿರ್ವಹಣೆ ಗುತ್ತಿಗೆ ಪಡೆದ ಕೆಂಗೇರಿ ಸಂಸ್ಥೆ
“ಅಪಾರ್ಟ್‌ಮೆಂಟಗಳಿಂದ ಉತ್ಪತ್ತಿಯಾಗುವ ಸಂಸ್ಕರಿಸಿದ ನೀರನ್ನ ಬೇರೆಯವರಿಗೆ ನೀಡಲು ಅಗತ್ಯವಿರುವ ಅನುಮತಿಯನ್ನು ನೀಡಲಾಗಿದೆ. ಈ ಬಗ್ಗೆ ಆಯವ್ಯಯದಲ್ಲಿ ಮುಖ್ಯಮಂತ್ರಿ ಅವರು ಘೋಷಣೆ ಮಾಡಿದ್ದಾರೆ. ಇದು ಏಪ್ರಿಲ್ 1ರಿಂದ ಅಧಿಕೃತವಾಗಿ ಸುತ್ತೋಲೆ ಹೊರಡಿಸಲಾಗುವುದು” ಎಂದು ನಿವಾಸಿಗಳ ಪ್ರಶ್ನೆಗೆ ಉತ್ತರಿಸಿದರು.
ಸಂವಾದದಲ್ಲಿ ಬೆಂಗಳೂರು ಫೆಡರೇಷನ್‌ನ ಅಧ್ಯಕ್ಷ ಅರುಣ್‌ಕುಮಾರ್, ಉಪಾಧ್ಯಕ್ಷ ಸತೀಶ್ ಮಲ್ಯ ಸೇರಿದಂತೆ ಜಲಮಂಡಳಿ ಅಧಿಕಾರಿಗಳು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.




