ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಗುರುವಾರ ಇನ್ನೂ ಕೆಲವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿರುವ ತೆಲುಗು ನಟಿ ಆಶಿ ರೈ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ. ನಟಿ ಹೇಮಾ ಕೊಲ್ಲಾ ಅವರಿಗೆ ಸಿಸಿಬಿ ಎರಡನೇ ನೋಟಿಸ್ ನೀಡಿದೆ. ಹೇಮಾ ಅವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಇದಕ್ಕೂ ಮುನ್ನ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ 16 ಮಂದಿಗೆ ನೋಟಿಸ್ ಜಾರಿ ಮಾಡಿತ್ತು.
ಮೇ 19 ಮತ್ತು 20ರ ಮಧ್ಯರಾತ್ರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ರೇವ್‌ಪಾರ್ಟಿ ನಡೆದಿತ್ತು. ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ತೆಲುಗು ನಟಿ ಹೇಮಾ ಮತ್ತು ಇತರ 85 ಮಂದಿ ಮಾದಕ ದ್ರವ್ಯ ಸೇವನೆ ಮಾಡಿದ್ದಾರೆ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಪಾರ್ಟಿಯಲ್ಲಿ ಕನಿಷ್ಠ 101 ಜನರು ಭಾಗವಹಿಸಿದ್ದರು. ಅಲ್ಲದೇ, ಈ ಪಾರ್ಟಿಯನ್ನು ಹುಟ್ಟುಹಬ್ಬದ ಸಂಭ್ರಮಾಚರಣೆ ಎಂದು ಪ್ರಚಾರ ಮಾಡಲಾಯಿತು.
ಶಂಕಿತರು 80ಕ್ಕೂ ಹೆಚ್ಚು ಮಂದಿ ಇರುವುದರಿಂದ ಅವರನ್ನು ಬ್ಯಾಚ್‌ಗಳಲ್ಲಿ ಪ್ರಶ್ನಿಸಲು ಸಿಸಿಬಿ ಯೋಜಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬರ್ತ್‌ಡೇ ಪಾರ್ಟಿ ಎಂದು ಭಾವಿಸಿ ಕೂಟಕ್ಕೆ ಹಾಜರಾಗಿದ್ದೇನೆ. ಡ್ರಗ್ ಸೇವನೆಯ ಬಗ್ಗೆ ತಿಳಿದಿರಲಿಲ್ಲ ಎಂದು ಆಶಿ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಡ್ರಗ್ ಸೇವನೆಯ ಪರೀಕ್ಷೆಯಲ್ಲಿ ಇವರದ್ದು ನೆಗೆಟಿವ್ ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಾಮಾಜಿಕ ಜಾಲತಾಣ ಬಳಸದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಶಾಲೆಗಳು
ಪಾರ್ಟಿಯಲ್ಲಿ ಸಂಘಟಕರು ಮತ್ತು ಮಾದಕ ದ್ರವ್ಯ ದಂಧೆಕೋರರು ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಇದುವರೆಗೆ ಬಂಧಿಸಿದೆ.
ಹೆಬ್ಬಗೋಡಿನಲ್ಲಿರುವ ಜಿಆರ್ ಫಾರಂಹೌಸ್ ಮೇಲೆ ದಾಳಿ ನಡೆಸಿ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೇನ್, ಆರು ಗ್ರಾಂ ಹೈಡ್ರೋಗಾಂಜಾ ಮತ್ತು ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಆಂಧ್ರಪ್ರದೇಶದ ಶಾಸಕ ಮತ್ತು ಸಚಿವರೊಬ್ಬರ ಸ್ಟಿಕ್ಕರ್ ಇರುವ ಕಾರು ಪತ್ತೆಯಾಗಿದೆ. ಕಾರು ಯಾರ ಮಾಲೀಕತ್ವದಲ್ಲಿದೆ ಮತ್ತು ಅವರಿಗೆ ಶಾಸಕ ಮತ್ತು ಸಚಿವರ ಸ್ಟಿಕ್ಕರ್ ಹೇಗೆ ಸಿಕ್ಕಿತು ಎಂಬ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ.




