ಧಾರವಾಡದ ಹೈಕೋರ್ಟ್ ಪೀಠ ಹಾಗೂ ಗದಗ ಮತ್ತು ಬಾಗಲಕೋಟೆಯ ಜಿಲ್ಲಾ ನ್ಯಾಯಾಲಯಗಳಿಗೆ ಮಂಗಳವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ನ್ಯಾಯಾಂಗ ಸಂಕೀರ್ಣಗಳಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಬೆದರಿಕೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಧಾರವಾಡ ಹೈಕೋರ್ಟ್ ಪೀಠದ ಕಲಾಪಗಳನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಯಿತು. ಅಲ್ಲದೆ, ಮೂರೂ ಕಡೆಗಳಲ್ಲಿ ನ್ಯಾಯಾಲಯದ ಕಟ್ಟಡಗಳನ್ನು ತಕ್ಷಣವೇ ಖಾಲಿ ಮಾಡಿಸಿ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ನೇತೃತ್ವದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಧಾರವಾಡದ ಪಿಬಿ ರಸ್ತೆಯಲ್ಲಿರುವ ಹೈಕೋರ್ಟ್ ಪೀಠದ ರಿಜಿಸ್ಟ್ರಾರ್ ಅವರಿಗೆ ಅನಾಮಧೇಯ ಇಮೇಲ್ ಒಂದು ಬಂದಿದ್ದು, ಅದರಲ್ಲಿ ನ್ಯಾಯಾಲಯದ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಿರುವುದಾಗಿ ಬೆದರಿಕೆ ಹಾಕಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರನ್ನು ಸುರಕ್ಷಿತವಾಗಿ ಹೊರಕಳುಹಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇವರಾಜ ಅರಸು ದಾಖಲೆ ದಾಟಿದರೇ ಸಿದ್ದರಾಮಯ್ಯ?
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಸೂಚನೆಯಂತೆ ಸುಮಾರು 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ವಿವಿಧ ಹಂತದ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಕಟ್ಟಡವನ್ನು ತಮ್ಮ ಸುಪರ್ದಿಗೆ ಪಡೆದರು. ಶ್ವಾನದಳ ಮತ್ತು ಬಾಂಬ್ ಪತ್ತೆ ದಳವು ಸಂಕೀರ್ಣದ ಮೂಲೆಮೂಲೆಗಳನ್ನು ಜಾಲಾಡಿದವು.
ಗದಗ ಮತ್ತು ಬಾಗಲಕೋಟೆಯಲ್ಲೂ ಆತಂಕ
ಇದೇ ಮಾದರಿಯ ಬೆದರಿಕೆ ಸಂದೇಶಗಳು ಗದಗ ಮತ್ತು ಬಾಗಲಕೋಟೆ ಜಿಲ್ಲಾ ನ್ಯಾಯಾಲಯಗಳಿಗೂ ರವಾನೆಯಾಗಿವೆ. ಅಲ್ಲೂ ಸಹ ಪೊಲೀಸರು ಕೂಡಲೇ ಭದ್ರತೆಯನ್ನು ಬಿಗಿಗೊಳಿಸಿ, ತಪಾಸಣೆ ನಡೆಸಿದರು. ಬಾಗಲಕೋಟೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಸೂಚನೆಯ ಮೇರೆಗೆ ಕಲಾಪಗಳನ್ನು ಸ್ಥಗಿತಗೊಳಿಸಿ ತಪಾಸಣೆ ಕೈಗೊಳ್ಳಲಾಯಿತು.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಇದೇ ರೀತಿ ನಕಲಿ ಬಾಂಬ್ ಬೆದರಿಕೆಗಳು ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವುದು ಮತ್ತು ಆಡಳಿತ ಯಂತ್ರದ ಸಮಯ ಹಾಳುಮಾಡುವುದು ಇಂತಹ ಕೃತ್ಯಗಳ ಹಿಂದಿನ ಉದ್ದೇಶವಾಗಿರಬಹುದು





