ಕೈರೋ ಸ್ಟೇಷನ್: ಅರಬ್ ಸಿನೆಮಾದ ಆಧುನಿಕತೆಯ ಉದಯ ಮತ್ತು ಅಲಕ್ಷಿತ ಮಾನವನ ದುರಂತ

Date:

ಸ್ಥಳೀಯ ಕಥನಗಳನ್ನು ಜಾಗತಿಕ ಚಲನಚಿತ್ರ ಭಾಷೆಯೊಂದಿಗೆ ಬೆಸೆಯುವ ಮೂಲಕ, ಯೂಸಫ್ ಶಹೀನ್ ಅರಬ್ ಸಿನೆಮಾವನ್ನು ವಿಶ್ವ ಸಿನೆಮಾ ನಕ್ಷೆಯಲ್ಲಿ ಸ್ಥಾಪಿಸಿದ ಅಪರೂಪದ ನಿರ್ದೇಶಕ. ಕೈರೋ ಸ್ಟೇಷನ್ ಅಂತಹ ಒಂದು ಅದ್ಭುತ ಸಿನೆಮಾ.

ಈ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ‘ಶತಮಾನದ ಸ್ಮರಣೆ’ ವಿಭಾಗದಲ್ಲಿ ಖ‍್ಯಾತ ನಿರ್ದೇಶಕ ಯೂಸಫ್ ಶಹೀನ್ ಅವರ ‘ಕೈರೋ ಸ್ಟೇಷನ್’ ಚಿತ್ರವನ್ನು ನೋಡುವ ಅವಕಾಶ ದೊರೆಯಿತು. ಈಜಿಪ್ಟ್ ದೇಶದಲ್ಲಿ ಏಳು ದಶಕಗಳ ಹಿಂದೆ ತಯಾರಾದ ಈ ಚಿತ್ರವು ಜಗತ್ತಿನ ಬಹುಮುಖ್ಯವಾದ ಸಿನೆಮಾ ಕೃತಿಯೆಂದು ಮನ್ನಣೆಗೆ ಪಾತ್ರವಾಗಿದೆ.   ಹಲವು ಓಟಿಟಿ ವೇದಿಕೆ ಮತ್ತು ಯೂ ಟ್ಯೂಬ್‌ನಲ್ಲೂ ದೊರೆಯುವ ಈ ಚಿತ್ರವನ್ನು ದೊಡ್ಡ ತೆರೆಯ ಮೇಲೆ ನೋಡುವಾಗ ಆಗುವ ಅನುಭವವೇ ಬೇರೆ ಎನಿಸಿತು. ಬಿಡುಗಡೆಯಾಗಿ ಅರವತ್ತೆಂಟು ವರ್ಷ ಕಳೆದರೂ, ಈ ಚಿತ್ರ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ. ಏಕೆಂದರೆ ಇದು ಒಂದು ಕಾಲಘಟ್ಟದ ಕಥೆಯಲ್ಲ- ಇದು ಆಧುನಿಕತೆಯ ಅಂತರಾಳದಲ್ಲಿ ಸದಾ ಮರುಕಳಿಸುವ ಮಾನವ ದುರಂತದ ಸಿನೆಮಾ ಸಾಕ್ಷ್ಯ.

1958ರಲ್ಲಿ ಬಿಡುಗಡೆಯಾದ ಕೈರೋ ಸ್ಟೇಷನ್(ಮೂಲ ಹೆಸರು ಬಾಬ್ ಎಲ್-ಹದೀದ್ -Bab El Hadid / The Iron Gate) ಚಿತ್ರವು ಆಫ್ರಿಕನ್ ಖಂಡದ ಮಹಾನ್ ನಿರ್ದೇಶಕರಲ್ಲೊಬ್ಬರಾದ, ಯೂಸಫ್ ಶಹೀನ್ ಅವರ(1926–2008) ಹನ್ನೊಂದನೇ ಚಿತ್ರ. ಆದರೆ ಅವರ ವೃತ್ತಿಜೀವನದ ಆ ಹಂತದವರೆಗಿನ ಅತ್ಯಂತ ವಿವಾದಾತ್ಮಕ ಚಿತ್ರವೂ ಇದಾಗಿತ್ತು. ಮೇಲ್ನೋಟಕ್ಕೆ ಇದು  ಒಂದು ಕುತೂಹಲಕಾರಿಯಾದ ಮನೋವೈಜ್ಞಾನಿಕ ಥ್ರಿಲ್ಲರ್ ಚಿತ್ರದಂತೆ ಕಾಣಿಸಿಕೊಂಡರೂ, ಒಳಗೊಳಗೆ ಇದು ಆಧುನಿಕ ನಗರ ಜೀವನದಲ್ಲಿ ಅಡಗಿರುವ ಅಶಾಂತಿಗಳನ್ನು, ದಮನಿತ ಲೈಂಗಿಕ ಕಾಮನೆಗಳ ಸ್ವರೂಪ ಮತ್ತು ಪುರುಷ ಅಹಂಕಾರದ ಅಪಾಯಕರ ಮನೋಭಾವಗಳನ್ನು ಬಹಿರಂಗಗೊಳಿಸುವ ಗಂಭೀರ ಕೃತಿಯಾಗಿದೆ. ಕೈರೋ ರೈಲು ನಿಲ್ದಾಣದಲ್ಲಿ ಜೀವನ ಸಾಗಿಸಲು ಹೋರಾಡುವ, ದೈಹಿಕವಾಗಿ ಸವಾಲು ಎದುರಿಸುವ ಯುವಕನ ಮನಸ್ಸಿನಲ್ಲಿ ಕ್ರಮೇಣ ಬೆಳೆದುಬರುವ ನ್ಯೂರೋಸಿಸ್‌ಗಳ ಮೇಲೆ ಬೆಳಕು ಬೀರುವ ಚಿತ್ರವು ಅವನ ವಿಕೃತ ಹಾಗೂ ಏಕಪಕ್ಷೀಯ ಲೈಂಗಿಕ ಕಾಮನೆಗಳ ಪರಿಣಾಮವಾಗಿ ಉಂಟಾಗುವ ಮಾರಕ ಪರಿಣಾಮಗಳನ್ನೂ ಅನಾವರಣಗೊಳಿಸುತ್ತದೆ.

ಇದನ್ನು ಓದಿದ್ದೀರಾ?: ಇದು ಲ್ಯಾಂಡ್‌ಲಾರ್ಡ್‌ ಮಾತ್ರವಲ್ಲ ʼಲ್ಯಾಂಡ್‌ಮಾರ್ಕ್‌ʼ ಕೂಡ: ಕೋಟಿಗಾನಹಳ್ಳಿ ರಾಮಯ್ಯ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದು ಕೈರೋ ನಿಲ್ದಾಣದಲ್ಲಿ ನಡೆಯುವ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅತಿ ಸಾಮಾನ್ಯರ ಬದುಕಿನ ಬೇರೆ ಬೇರೆ ರೂಹುಗಳನ್ನು ಶೋಧಿಸುವ ಚಿತ್ರ. ಕಿನಾವಿ ಎಂಬ ಅನಾಥ ಹುಡುಗನ ಬದುಕು ಚಿತ್ರದ ಕೇಂದ್ರ. ಕಿನಾವಿಯ ಬದುಕಿನ ದುರಂತವನ್ನು ಅವನ ಆಶ್ರಯದಾತ ಮದ್ಬೂಲಿಯು ಪ್ರೇಕ್ಷಕರೊಡನೆ ಸಹಾನುಭೂತಿಯಿಂದ ಹಂಚಿಕೊಳ್ಳುವ ವಿಧಾನದಲ್ಲಿ ಈ ಚಿತ್ರ ನಿರೂಪಣೆಗೊಂಡಿದ್ದರೂ ಹಲವಾರು ವ್ಯಕ್ತಿಗಳೂ, ಸಂಗತಿಗಳೂ ಸೇರಿ ಅಂದಿನ ಸಮಾಜದ ಅಂಚಿಗೆ ತಳ್ಳಲಾದ ಜನರ ಬದುಕಿನ ವಿವಿಧ ಪದರಗಳನ್ನು ಅನ್ವೇಷಿಸುತ್ತದೆ. ಸಮಾಜದ ಅಸಮಾನತೆಯ ರೋಗವು ತನ್ನ ಇರುವಿಕೆಯನ್ನು ಕಿನಾವಿಯಂಥ ಅತೃಪ್ತ ವ್ಯಕ್ತಿಗಳ ಹಿಂಸಾತ್ಮಕ ಕೃತ್ಯಗಳಲ್ಲಿ ವ್ಯಕ್ತಗೊಳ್ಳುವ ಸ್ವರೂಪವನ್ನು ನಿಧಾನವಾಗಿ ಅನಾವರಣಗೊಳಿಸುವ ಕಲಾಕೃತಿಯಾಗಿದೆ.

CairoStation 1

ಕೈರೋ ಸ್ಟೇಷನ್ ಚಿತ್ರದಲ್ಲಿ ಬಿಂಬಿತವಾಗಿರುವ ಬದುಕಿಗೆ ಅಲ್ಲಿನ ಸಮಕಾಲೀನ ಚರಿತ್ರೆಯ ಗಾಢ ನಂಟಿದೆ. ಈಜಿಪ್ಟಿನ ರಾಜಪ್ರಭುತ್ವವನ್ನು ಅಧಿಕಾರದಿಂದ 1952ರ ಕ್ರಾಂತಿಯಲ್ಲಿ ಕಿತ್ತೆಸೆದ ‘ವಿಮೋಚನಾ ಅಧಿಕಾರಿಗಳ ಆಂದೋಲನ'(Free Officers Movement) ಸ್ಥಾಪಿಸಿದ ಗಣರಾಜ್ಯದ ಆರಂಭವು ಅಧಿಕಾರದ ಸಂಘರ್ಷದಿಂದಲೇ ಕೂಡಿತ್ತು. ಕ್ರಾಂತಿಯ ನಂತರ ಈಜಿಪ್ಟ್ ಗಣರಾಜ್ಯದ ಅಧ್ಯಕ್ಷನಾಗಿ ಆಯ್ಕೆಯಾದ ಮಹಮದ್ ನಗಾಯಿಬ್‍ನನ್ನು ಒಂದು ವರ್ಷದಲ್ಲೇ ಪದಚ್ಯುತಗೊಳಿಸಿದ ಗಮಾಲ್ ಅಬ್ದುಲ್ ನಾಸರ್ ಗೆ ಎದುರಾಳಿಗಳನ್ನು ಹಣಿದು ಸ್ಥಿರತೆಯನ್ನು ತರುವ ಕಾಯಕವೇ ಮುಖ್ಯವಾಗಿ ಜನಜೀವನ ಸುಧಾರಿಸುವತ್ತ ಲಕ್ಷ್ಯವಿಲ್ಲದೆ ಅರಾಜಕ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕ್ರಾಂತಿಯ ನಂತರದ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದ ಈಜಿಪ್ಟಿನ ರಾಜಧಾನಿ ಕೈರೋ ರೈಲು ನಿಲ್ದಾಣದಲ್ಲಿ ಕಾಣುವ ಜೀವನದ ಚಟುವಟಿಕೆಯನ್ನು ತೋರಿಸುವ ಮಂಟಾಜ್‌ನೊಂದಿಗೆ ಈ ಚಿತ್ರವು ಆರಂಭಗೊಳ್ಳುತ್ತದೆ.

ಕೈರೋ ನಗರದ ರೈಲು ನಿಲ್ದಾಣವು ಕಥೆಯ ಘಟನೆಗಳು ಜರುಗುವ ಪರಿಸರ ಭಿತ್ತಿ ಮಾತ್ರವಲ್ಲ; ಅದು ಕಥೆಯ ಜೀವಾಳ. ರೈಲು ನಿಲ್ದಾಣವನ್ನು ಶಹೀನ್ ಒಂದು ಸಜೀವ ವ್ಯಕ್ತಿಯಂತೆ ಚಿತ್ರಿಸಿದ್ದಾರೆ. ಜನರ ಗದ್ದಲ, ವ್ಯಾಪಾರ, ಚಲನೆ- ಇವೆಲ್ಲವೂ ಸೇರಿ ‘ಆಧುನಿಕ ಜೀವನದ ಸ್ಫೋಟ’ವನ್ನು ರೂಪಿಸುತ್ತವೆ. ಈ ದೃಶ್ಯಗಳಿಗೆ ಪತ್ರಿಕೆ ಮಾರುವ ಮದ್ಬೂಲಿ ಎಂಬ ಪಾತ್ರದ ಧ್ವನಿವಿವರಣೆ ಹಿನ್ನೆಲೆಯಾಗಿ ಬರುತ್ತದೆ. ಅವನ ಮಾತುಗಳು ನಿಲ್ದಾಣವನ್ನು ಬದುಕಿನ ಕೇಂದ್ರಬಿಂದುವೆಂಬತ್ತೆ ವಿವರಿಸುತ್ತವೆ. ಕೈರೋ ರೈಲು ನಿಲ್ದಾಣವು ಜನರ ಚಲನವಲನ, ಗದ್ದಲ, ವಾಣಿಜ್ಯ ಮತ್ತು ರಾಜಕೀಯ ಒತ್ತಡಗಳ ಸಂಗಮಸ್ಥಳ. ಎಲ್ಲರೂ ಬರುತ್ತಾರೆ, ಹೋಗುತ್ತಾರೆ; ಆದರೆ ಯಾರೂ ಯಾರೊಂದಿಗೂ ನಿಜವಾಗಿ ಸಂಪರ್ಕ ಸಾಧಿಸುವುದಿಲ್ಲ. ನಿರಂತರ ಚಲನೆಯ ನಡುವೆ ಚಲನರಹಿತವಾದ ಕಿನಾವಿಯ ಬದುಕು ತೀವ್ರವಾಗಿ ಕಾಣಿಸುತ್ತದೆ. ರೈಲುಗಳ ಓಟ ಅವನ ಚಲನೆಯ ವಿರುದ್ಧ ನಿಂತಂತಿದೆ. ಶಹೀನ್ ಅವರ ಕ್ಯಾಮೆರಾ ಸಹ ಸ್ಥಿರವಾಗಿ ನಿಲ್ಲುವುದಿಲ್ಲ. ಜನಸಂದಣಿಯೊಳಗೆ ನುಗ್ಗುತ್ತದೆ, ಮುಖಗಳನ್ನು ಹತ್ತಿರದಿಂದ ಹಿಡಿದುಕೊಳ್ಳುತ್ತದೆ. ಶಬ್ದ ವಿನ್ಯಾಸ ಗದ್ದಲಯುಕ್ತ; ಮೌನವೂ ಸಹ ಅಸಹನೀಯ. ಈ ಎಲ್ಲವೂ ಕಿನಾವಿಯ ಮನಸ್ಥಿತಿಯ  ಪ್ರತಿಬಿಂಬ. ಈ ಸ್ಥಳವು ಆಧುನಿಕ ಸಮಾಜದ ಕ್ರೂರ ವೈರುಧ್ಯವನ್ನು ಪ್ರತಿಬಿಂಬಿಸುತ್ತದೆ- ಜನಸಂದಣಿ ಇದ್ದರೂ ಒಂಟಿತನ ಹೆಚ್ಚಾಗುತ್ತದೆ. ಈ ರೀತಿಯ ಸ್ಥಳ ಬಳಕೆ ಯುರೋಪಿಯನ್ ಆಧುನಿಕ ಸಿನೆಮಾದ, ವಿಶೇಷವಾಗಿ Italian Neorealismನ ಪ್ರಭಾವವನ್ನು ಸೂಚಿಸುತ್ತದೆ. ಆದರೆ ಶಹೀನ್ ಇಲ್ಲಿ ನವ ವಾಸ್ತವತೆಯನ್ನು ಮೀರಿ, ಮನೋವೈಜ್ಞಾನಿಕ ಅಭಿವ್ಯಕ್ತಿವಾದದತ್ತ ಹೆಜ್ಜೆ ಇಡುತ್ತಾರೆ.

ಇದನ್ನು ಓದಿದ್ದೀರಾ?: ಮಮ್ಮುಟ್ಟಿಗೆ ಪದ್ಮ ಭೂಷಣ ಪ್ರಶಸ್ತಿ: ಪ್ರತಿಭೆಗಾಗಿಯೇ, ಇಲ್ಲ ಕೇರಳ ಚುನಾವಣೆಗಾಗಿಯೇ?

ಚಿತ್ರದ ಕಥೆಯ ಹಂದರ ಹೀಗಿದೆ: ಹಸಿವಿನಿಂದ ಕಂಗಾಲಾಗಿ ರೈಲ್ವೇ ಸ್ಟೇಷನ್‍ನಲ್ಲಿ ಬಿದ್ದಿದ್ದ ಅನಾಥ ಕಿನಾವಿಯನ್ನು ಅಲ್ಲಿ ಪತ್ರಿಕೆ ಮಾರುವ ಅಂಗಡಿಯ ಮಾಲೀಕ ಮದ್ಬೂಲಿ ಎಂಬಾತ ಕನಿಕರಿಸಿ ಅವನಿಗೆ ರೈಲುಗಳಲ್ಲಿ ಪತ್ರಿಕೆ ಮಾರುವ ಕೆಲಸಕೊಟ್ಟು, ವಸತಿಯನ್ನೂ ಏರ್ಪಡಿಸುತ್ತಾನೆ. ಸ್ವಲ್ಪ ಕುಂಟುವ, ಸಂಕೋಚ ಸ್ವಭಾವದ, ಒಂಟಿ ಯುವಕನಾದ ಕಿನಾವಿ ನಿಲ್ದಾಣದಲ್ಲಿ ಚಿಲ್ಲರೆ ಕೆಲಸಗಳನ್ನು ಮಾಡಿಕೊಂಡು ಬದುಕುತ್ತಾನೆ.

ರೈಲ್ವೇ ನಿಲ್ದಾಣದಲ್ಲಿ ಮತ್ತೊಂದು ಜಗತ್ತೂ ಇದೆ. ಅಧಿಕೃತ ಮಾರಾಟಗಾರರ ಕಣ್ಣು ತಪ್ಪಿಸಿ ಚಲಿಸುವ ರೈಲುಗಳನ್ನು ಹತ್ತಿ, ತಂಪು ಪಾನೀಯ ಮಾರಿ ಹಣ ಸಂಪಾದಿಸುವ ಯುವತಿಯರ ಸಮೂಹ. ಬಿಂದಾಸಾಗಿ ವರ್ತಿಸುವ ಅವರು ಬಡತನದಲ್ಲೂ ಜೀವನೋತ್ಸಾಹಕ್ಕೆ ಕೊರತೆ ಇಲ್ಲದವರು. ಅವರ ಕೇಕೆ, ಚೇಡಿಕೆ, ಮಾತಿನ ಕಲರವ ರೈಲ್ವೆ ನಿಲ್ದಾಣದ ಗದ್ದಲವನ್ನೂ ಮೀರಿ ನಿಲ್ಲುತ್ತದೆ. ಅಲ್ಲಿಯೇ ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಡಲು ಯತ್ನಿಸುವ ರೈಲ್ವೇ ಪೋರ್ಟರ್ ಗಳ ಘೋಷಣೆಗಳು ಮೊಳಗುತ್ತವೆ. ಕಳ್ಳತನದಿಂದ ವ್ಯಾಪಾರ ಮಾಡುವ ಯುವತಿಯರ ವಿರುದ್ಧ ಅಧಿಕೃತ ಮಾರಾಟಗಾರರ ಮತ್ತು ಕಾರ್ಮಿಕರ ವಿರುದ್ಧವಾಗಿ ನಿಂತಿರುವ ವ್ಯವಸ್ಥೆಯ ಪ್ರತಿನಿಧಿಗಳ ಸಂಘರ್ಷದ ಸಮಾನಾಂತರ ಆರ್ಥಿಕ ಬದುಕಿನ ಚಿತ್ರಣವೂ ಇದೆ. ಕಾರ್ಮಿಕ ನಾಯಕ ಅಬು ಸಲೀಹ್‍ನನ್ನು ಪ್ರೇಮಿಸುತ್ತಿರುವ, ಅವನೊಡನೆ ಮದುವೆ ನಿಷ್ಕರ್ಷೆಯಾಗಿರುವ ಹನೂಮಾ- ಉಲ್ಲಾಸದ ಹರಿಣಿ, ಹರಟೆ ಮಲ್ಲಿ, ನಿರ್ಭಿಡೆಯ ದೃಢಚಿತ್ತದ ಯುವತಿ. ಕಿನಾವಿಗೆ ಆಕೆಯನ್ನು ಪಡೆವ ತವಕ. ಇದು ತ್ರಿಕೋನ ಪ್ರೇಮ ಕಥೆಯಲ್ಲ. ಹನೂಮಾಳಿಗೆ ಆತನ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲ. ತಾವಿಬ್ಬರೂ ಪ್ರೀತಿಸಿ ದೂರದೂರಿನಲ್ಲಿ ಚಂದವಾಗಿ ಬದುಕುವ ಕನಸನ್ನು ಹಂಚಿಕೊಳ್ಳುವ ಕಿನಾವಿಯ ಬಯಕೆಗೆ ಸೊಪ್ಪು ಹಾಕದ ಆಕೆಯ ತಿರಸ್ಕಾರದಿಂದ ಉಂಟಾದ ನಿರಾಶೆ ಅವನಲ್ಲಿ ಹುಚ್ಚು ಹಿಡಿಸುತ್ತದೆ. ಅವಳನ್ನು ಪಡೆದೇ ತೀರಬೇಕೆಂಬ ಪ್ರಯತ್ನ ವಿಫಲವಾದಾಗ ಹನೂಮಾಳನ್ನು ಕೊಲ್ಲಲು ಯತ್ನಿಸುವ ಕಿನಾವಿಯ ದುರಂತ ಗಾಢವಾಗಿ ತಟ್ಟುತ್ತದೆ.

ಆರಂಭದಲ್ಲೇ ಕಿನಾವಿಯ ಗುಡಿಸಿಲಿಗೆ ಮದ್ಬೂಲಿಯು ಭೇಟಿ ನೀಡುವ ದೃಶ್ಯದಲ್ಲಿ, ಗೋಡೆಗಳ ತುಂಬಾ ಅಂಟಿಸಿರುವ ಅಶ್ಲೀಲ ಚಿತ್ರಗಳು ಕಿನಾವಿಯ ಒಳಗಿನ ದಮನಿತ ಲೈಂಗಿಕತೆಯ ಮೊದಲ ದೃಶ್ಯಾತ್ಮಕ ಸೂಚನೆ ನೀಡುತ್ತವೆ. ಬಡತನ, ಕೀಳರಿಮೆ, ಕರುಳಿರಿಯುವ ಏಕಾಕಿತನ, ಪರಕೀಯತೆ, ಅಸಮಾನತೆ, ದಮನಿಸಿದ ಕಾಮನೆಗಳು ಕಿನಾವಿಯ ವ್ಯಕ್ತಿತ್ವವನ್ನು ವಿರೂಪಗೊಳಿಸುವ ವಿಧಾನವನ್ನು ಚಿತ್ರವು ತಣ್ಣಗೆ ತೋರಿಸುತ್ತಾ ಹೋಗುತ್ತದೆ.

ಚಿತ್ರದಲ್ಲಿ ಕಿನಾವಿಯ ಪಾತ್ರವನ್ನು ಶಾಹೀನ್ ತಾವೇ ನಿರ್ವಹಿಸಿದ್ದಾರೆ. ಅವರ ಅಭಿನಯದಲ್ಲಿ ಯಾವುದೇ ನಾಟಕೀಯ ಅತಿರೇಕವಿಲ್ಲ; ಬದಲಿಗೆ ಕಣ್ಣಂಚಿನ ಭಯ, ಕುಂಟುತ್ತಾ ನಡೆಯುವ ಅಸಹಜ ಚಲನೆಗಳು, ಲೈಂಗಿಕ ಆಸೆಗಳಿಂದ ರೈಲು ನಿಲ್ದಾಣದಲ್ಲಿ ಎದುರಾಗುವ ಮಹಿಳೆಯರನ್ನು ಕಳ್ಳನೋಟದಿಂದ ನೋಡುವ ವಿಧಾನ, ತಪ್ಪಿಸಿಕೊಳ್ಳುವ ದೃಷ್ಟಿ- ಇವೆಲ್ಲವೂ ಒಬ್ಬ ತೀವ್ರಾತ್ಮಮರುಕದಿಂದ ನರಳುತ್ತಿರುವ ವ್ಯಕ್ತಿಯನ್ನು ಕಟ್ಟಿಕೊಡುತ್ತವೆ. ಮಹಿಳೆಯರತ್ತ ಅವನು ನೋಡುವ ದೃಷ್ಟಿ ಸಹಜ ಆಕರ್ಷಣೆಯಲ್ಲ; ಅದು ಸಾಮಾಜಿಕವಾಗಿ ಅನುಭವಿಸುವ ಕೀಳರಿಮೆಯಿಂದ ಹುಟ್ಟಿದ ವಿಕೃತ ನೋಟ.

ಇದನ್ನು ಓದಿದ್ದೀರಾ?: Eko ಮಲೆಯಾಳಂ ಚಲನಚಿತ್ರ| ಹೆಣ್ಣನ್ನು ತಣ್ಣನೆಯ ಕ್ರೌರ್ಯದ ಪಂಜರದಲ್ಲಿ ಕೂಡಿಡುವ ಪಿತೃತ್ವದ ಪ್ರತಿಧ್ವನಿ!

ಚಿತ್ರದ ನಾಯಕಿ ಹನೂಮಾಳ ಪಾತ್ರವನ್ನು ವಹಿಸಿರುವ ಹಿಂದ್ ರೊಸ್ತಮ್ ತನ್ನ ಸಹಜ ಚಲುವಿನಿಂದ ಕಿನಾವಿಯನ್ನು ಮಾತ್ರವಲ್ಲ ಪ್ರೇಕ್ಷಕರನ್ನೂ ಸೆಳೆಯುತ್ತಾಳೆ. ತನ್ನ ಕಾಲದಲ್ಲಿ ಈಜಿಪ್ಟ್ ಸಿನೆಮಾದ ಪರಮ ಸುಂದರಿ ಎನಿಸಿದ್ದ ರೊಸ್ತಮ್‍ಗೆ ತನ್ನ ಮಾದಕ ಸೌಂದರ್ಯದಿಂದಾಗಿ ‘ಪೂರ್ವ ಜಗತ್ತಿನ ಮರ್ಲಿನ್ ಮನ್ರೋ’ ಎಂಬ ಖ್ಯಾತಿಯಿತ್ತು. ಉಲ್ಲಾಸದ ಚಿಲುಮೆಯಾಗಿ, ಕಟ್ಟುಪಾಡುಗಳ ಹಂಗಿಲ್ಲದ ಸ್ವತಂತ್ರ ಮನಸ್ಸಿನ ಹೆಣ್ಣಾಗಿ ಹನೂಮಾಳ ಪಾತ್ರದ ಆಕೆಯ ನಟನೆ ಅತ್ಯಂತ ಸಹಜವಾಗಿ ಅರಳಿದೆ.

ದಮನಿತ ಲೈಂಗಿಕತೆ ಮತ್ತು ನಿರಂತರ ಭಾವನಾತ್ಮಕ ವಂಚನೆಗಳು ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಹೇಗೆ ಹಾಳುಮಾಡುತ್ತವೆ ಎಂಬುದನ್ನು ನಿರ್ದೇಶಕ ಶಹೀನ್ ನಿರ್ಭಾವುಕವಾಗಿ ಕಟ್ಟಿರುವುದು ಕೈರೋ ಸ್ಟೇಷನ್‌ನ ಅತ್ಯಂತ ಗಮನಾರ್ಹ ಸಾಧನೆ. ಇಲ್ಲಿ ಕಿನಾವಿಯ ಅಪರಾಧಗಳಿಗೆ ಚಿತ್ರ ಯಾವ ಕ್ಷಣದಲ್ಲೂ ನ್ಯಾಯ ಒದಗಿಸುವುದಿಲ್ಲ, ನಿಜ. ಆದರೆ ಅವನು ತೋರುವ ಅಸಹ್ಯಕರ ವರ್ತನೆಗೆ ಕಾರಣವಾದ ಮನೋಭಾವದ ಹಿನ್ನೆಲೆಯನ್ನು ಚಿತ್ರವು ಸ್ಪಷ್ಟವಾಗಿ ಒದಗಿಸುತ್ತದೆ.

ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ, ಕಿನಾವಿಯ ಮನೋಭಾವ 21ನೇ ಶತಮಾನದ ‘ಇನ್ಸೆಲ್'(involuntarily celibate) ಮನಸ್ಥಿತಿಯ ಬೀಜರೂಪದಂತಿದೆ. ಮಹಿಳೆಯರನ್ನು ಕಾಮದ ಸರಕೆಂದು ಭಾವಿಸಿ ಹಕ್ಕು ಸಾಧಿಸಲೆತ್ನಿಸುವ ಪುರುಷ ಮನಸ್ಥಿತಿಯ ಆಕ್ರಮಣ ಭಾವ, ಲೈಂಗಿಕ ಹತಾಶೆ ಮತ್ತು ಅದರ ಪರಿಣಾಮವಾಗಿ ಹುಟ್ಟುವ ಹಿಂಸಾತ್ಮಕ ಆಲೋಚನೆಗಳು- ಇವುಗಳನ್ನೆಲ್ಲ ಶಹೀನ್ 1958ರಲ್ಲೇ ಸಂಕೇತಾತ್ಮಕವಾಗಿ ಚಿತ್ರಿಸಿದ್ದರು ಎಂಬುದು ಅಚ್ಚರಿಯ ಸಂಗತಿ.

cairo station hr

ಇದು ಕೇವಲ ವೈಯಕ್ತಿಕ ಕಥೆಯಲ್ಲ; ಇದು ಗಂಡಾಳ್ವಿಕೆಯ ಸಮಾಜಗಳಲ್ಲಿ ಸಾಮಾನ್ಯವಾಗಿರುವ ಪುರುಷ ಅಹಂಕಾರದ ವಿಮರ್ಶೆ. ಮಹಿಳೆಯ ಮೇಲೆ ಸ್ವಯಂ ಹಕ್ಕು ಸಾಧಿಸುವ ಭಾವಕ್ಕೆ ವರ್ಗದ ತಾರತಮ್ಯ ಇರುವುದಿಲ್ಲ ಎಂಬ ಸತ್ಯವನ್ನು ಚಿತ್ರ ಹೇಳುತ್ತದೆ. ಮಹಿಳೆಯರ ಮೇಲಿನ ಹಿಂಸೆಗೆ ‘ಅವಳ ವರ್ತನೆ’, ‘ಅವಳ ಉಡುಗೆ’ ಎಂದು ಸಮರ್ಥಿಸಿಕೊಳ್ಳುವ ಮನೋಭಾವಗಳ ಮೂಲವನ್ನು ಚಿತ್ರ ಆಳವಾಗಿ ಪ್ರಶ್ನಿಸುತ್ತದೆ.

ಈಜಿಪ್ಟ್ ಸಿನಿಮಾ, ಆ ಮೂಲಕ ಅರಬ್ ರಾಷ್ಟ್ರಗಳ ಸಿನಿಮಾ ವ್ಯಾಕರಣಕ್ಕೆ ಹೊಸ ಭಾಷ್ಯ ಬರೆದ ಚಿತ್ರವಾಗಿ ಕೈರೋ ಸ್ಟೇಷನ್ ಚಾರಿತ್ರಿಕ ಮಹತ್ವ ಪಡೆದಿದೆ. ನಿರ್ದೇಶಕ ಶಹೀನ್ ಅವರ ನಿರೂಪಣಾ ಶೈಲಿಯು ಹೊರಳುದಾರಿ ಹಿಡಿದ ವಿದ್ಯಮಾನಕ್ಕೆ ಅದು ಸಾಕ್ಷಿಯಾಗಿದೆ. ದೃಶ್ಯ ಸಂಯೋಜನೆ, ಪಾತ್ರಗಳ ಪೋಷಣೆ, ಸಾಮಾಜಿಕ ಸಂಗತಿಗಳ ಪ್ರಭಾವ ಮತ್ತು ಮನೋವೈಜ್ಞಾನಿಕ ನೆಲೆಗಳ ಹಿನ್ನೆಲೆಯಲ್ಲಿ ಸಿನೆಮಾ ಪರಿಕರಗಳನ್ನು ಬಳಸಿ ಕುತೂಹಲಭರಿತ ಕಲಾತ್ಮಕ ಕೃತಿಯನ್ನಾಗಿ ರೂಪಿಸಿದ ಶಹೀನ್ ಅವರ ಮೇಲೆ 1950ರ ದಶಕದ ಕೊನೆಯಲ್ಲಿ ಜಾಗತಿಕ ಸಿನೆಮಾ ಭಾಷೆಯಲ್ಲಿ ನಡೆಯುತ್ತಿದ್ದ ನವವಾಸ್ತವವಾದ, auteur ಚಿಂತನೆ, ಮತ್ತು ಪ್ರಯೋಗಾತ್ಮಕ ದೃಶ್ಯಶೈಲಿಗಳ ಪ್ರಭಾವ ಈ ಚಿತ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅದರಲ್ಲೂ ಇಟಲಿಯ ನವವಾಸ್ತವವಾದಿ ಪಂಥಕ್ಕೆ ಈ ಚಿತ್ರ ಹೆಚ್ಚು ಋಣಿಯಾಗಿದೆ. ಚಿತ್ರದಲ್ಲಿ ಬಳಸಿದ ತೀವ್ರ ಕಾಂಟ್ರಾಸ್ಟ್ ಲೈಟಿಂಗ್ (chiaroscuro) ಕಿನಾವಿಯ ಮನೋಸ್ಥಿತಿಯನ್ನು ದೃಶ್ಯರೂಪದಲ್ಲಿ ವ್ಯಕ್ತಪಡಿಸುತ್ತದೆ. ಕಥೆ ಮುಂದುವರಿದಂತೆ ಬೆಳಕು ಕತ್ತಲೆಯಾಗುತ್ತ ಹೋಗುತ್ತದೆ- ಅದು ಕಿನಾವಿಯ ಮನಸ್ಸಿನೊಳಗಿನ ಕತ್ತಲೆಯ ಪ್ರತಿರೂಪ. ಹ್ಯಾಂಡ್‌ಹೆಲ್ಡ್ ಕ್ಯಾಮೆರಾ, ಕ್ಲೋಸ್-ಅಪ್‌ಗಳು ಮತ್ತು point-of-view ಶಾಟ್‌ಗಳು ಪ್ರೇಕ್ಷಕರನ್ನು ನೇರವಾಗಿ ಕಿನಾವಿಯ ಮನಸ್ಸಿನೊಳಗೆ ಎಳೆಯುತ್ತವೆ.

ಆವರೆವಿಗೂ ಹಾಲಿವುಡ್ ಚಿತ್ರಗಳ ನಿರೂಪಣೆಯ ಕ್ರಮ ಮತ್ತು ಭಾರತೀಯ ಚಿತ್ರಗಳಂತೆ ಹಾಡು-ನೃತ್ಯಗಳ ದೃಶ್ಯಗಳನ್ನು ಅಳವಡಿಸಿ ರಂಜನಾ ಪ್ರಧಾನ ಚಿತ್ರ ಹೆಣೆಯುತ್ತಿದ್ದ ಅರಬ್ ಚಿತ್ರ ಪರಂಪರೆಗೆ ಒಗ್ಗಿಕೊಂಡಿದ್ದ ಈಜಿಪ್ಟ್ ಪ್ರೇಕ್ಷಕರು ಈ ಚಿತ್ರ ಬಿಡುಗಡೆಯಾದಾಗ ಅಸಹಜ ಎಂದು ತಿರಸ್ಕರಿಸಿದರು. ಅದುವರೆಗೆ ಪ್ರೇಕ್ಷಕರಿಗೆ ಪರಿಚಿತವಾಗಿದ್ದ ಜೀವಂತ ಮೇಲೋಡ್ರಾಮಾಗಳಿಂದ ದೂರ ಸರಿದು, ಕೈರೋ ನಗರದ ಕಠಿಣ ವಾಸ್ತವಗಳು, ಮಾನಸಿಕ ತುಮುಲಗಳು ಪ್ರೇಕ್ಷಕರಿಗೆ ಸಹಜವಾಗಿಯೇ ರುಚಿಸಲಿಲ್ಲ. ಅರಬ್ ಸಿನೆಮಾದ ಇತಿಹಾಸದಲ್ಲಿ ಕೆಲವು ಚಿತ್ರಗಳು ತಮ್ಮ ಕಾಲಕ್ಕಿಂತ ಮೊದಲೇ ರೂಪುಗೊಂಡು ಆರಂಭದಲ್ಲಿ ತಿರಸ್ಕೃತಗೊಂಡು ಕಾಲಾನಂತರದಲ್ಲಿ ಅರ್ಥ ಪಡೆದುಕೊಂಡ ಘಟನೆಗಳಿವೆ. ಕೈರೋ ಸ್ಟೇಷನ್ ಸಹ ಅಂಥದ್ದೇ ಪ್ರತಿಕ್ರಿಯೆ ಎದುರಿಸಿದ ಚಿತ್ರ. ಬಿಡುಗಡೆಯ ಸಮಯದಲ್ಲಿ ತೀವ್ರ ವಿರೋಧ, ನಿರಾಕರಣೆ ಮತ್ತು ನೈತಿಕ ಆಕ್ಷೇಪಗಳನ್ನು ಎದುರಿಸಿದ ಈ ಚಿತ್ರ, ಇಂದು ಅರಬ್ ರಾಷ್ಟ್ರಗಳ ಆಧುನಿಕ ಸಿನೆಮಾದ ಮೊದಲ ಮಹತ್ವದ ಧ‍್ವನಿಯೆಂದು ಮಾನ್ಯತೆ ಪಡೆದಿದೆ.

ಯೂಸಫ್ ಶಹೀನ್ ತಮ್ಮ ನಂತರದಲ್ಲಿ ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದರೂ, ಕೈರೋ ಸ್ಟೇಷನ್ ಅವರ ಅತ್ಯಂತ ಪ್ರಭಾವಶಾಲಿ ಮತ್ತು ದೂರದೃಷ್ಟಿಯ ಕೃತಿಯಾಗಿ ಉಳಿದಿದೆ. ಇದು ಕೇವಲ ಒಂದು ಥ್ರಿಲ್ಲರ್ ಅಲ್ಲ- ಇದು ನಗರ, ಲೈಂಗಿಕತೆ, ಮಾನಸಿಕ ಆರೋಗ್ಯ ಮತ್ತು ಪುರುಷತ್ವದ ಸಂಕೀರ್ಣ ಸಂಬಂಧಗಳ ಮೇಲೆ ಮಾಡಿದ ತೀಕ್ಷ್ಣ ಸಿನೆಮಾಟಿಕ್ ವಿಮರ್ಶೆ. ಶಹೀನ್ ಅವರು ಕಿನಾವಿಯನ್ನು ಕೇವಲ ದುರಂತ ನಾಯಕನಾಗಿ ಚಿತ್ರಿಸುವುದಿಲ್ಲ. ಅವನು ಸಮಾಜದ ನಿರ್ಲಕ್ಷ್ಯದ ಬಲಿ, ಆದರೆ ಅದೇ ಸಮಯದಲ್ಲಿ ಹಿಂಸೆಯ ಬೀಜವನ್ನು ಹೊತ್ತಿರುವ ವ್ಯಕ್ತಿ. ಈ ದ್ವಂದ್ವಭಾವವೇ ಚಿತ್ರದ ನೈತಿಕ ಗಂಭೀರತೆಯನ್ನು ಹೆಚ್ಚಿಸುತ್ತದೆ.

ಶಹೀನ್ ಇಲ್ಲಿ ಒಂದು ತಾತ್ವಿಕತೆಯನ್ನು ಕಟ್ಟುತ್ತಾರೆ. ಅದೆಂದರೆ ಲೈಂಗಿಕತೆಯನ್ನು ನಿರಾಕರಿಸುವ ಸಮಾಜ, ನೈತಿಕತೆಯನ್ನು ನಿರ್ಮಿಸುವುದಿಲ್ಲ; ಅದು ಅಸಮಾನತೆಯನ್ನು ಹುಟ್ಟಿಸುತ್ತದೆ. ಚಿತ್ರದ ಅಂತಿಮ ಹಂತದಲ್ಲಿ ಸಂಭವಿಸುವ ಹಿಂಸಾಚಾರ, ಕಿನಾವಿಯ ವೈಯಕ್ತಿಕ ಪತನ ಮಾತ್ರವಲ್ಲ- ಅದು ಸಮಾಜವು ಒಟ್ಟಾರೆಯಾಗಿ ಸೋತಿರುವುದರ ಫಲ. ಕೈರೋ ಸ್ಟೇಷನ್ ಸುಲಭ ಉತ್ತರಗಳನ್ನು ನೀಡುವುದಿಲ್ಲ. ಅದು ಪ್ರೇಕ್ಷಕರನ್ನು ಅಸಹಜ ಸ್ಥಿತಿಗೆ ತಳ್ಳುತ್ತದೆ. ಸಮಾಜ ತನ್ನ ದುರ್ಬಲರನ್ನು ನಿರ್ಲಕ್ಷಿಸಿದಾಗ ಹುಟ್ಟುವ ಅಪಾಯವನ್ನು ಶಹೀನ್ ನಿರ್ದಯವಾಗಿ ತೋರಿಸುತ್ತಾರೆ.

ಆದರೆ ಕೈರೋ ಸ್ಟೇಷನ್ ಶಹೀನ್‌ರ ಸಿನೆಮಾದಲ್ಲಿ ಒಂದು ತಿರುವು.

ಯೂಸಫ್ ಶಹೀನ್(1926–2008) ಅರಬ್ ಸಿನೆಮಾದ ಅತ್ಯಂತ ಪ್ರಮುಖ ಹಾಗೂ ಪ್ರಭಾವಶಾಲಿ ನಿರ್ದೇಶಕರಲ್ಲಿ ಒಬ್ಬರು. ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ನಗರದಲ್ಲಿ ಜನಿಸಿದ ಅವರು, ತಮ್ಮ ಅಮೆರಿಕಾದ ಪಾಸಡೆನಾದಲ್ಲಿ ಸಿನೆಮಾ ಶಿಕ್ಷಣವನ್ನು ಪಡೆದರು. 1950ರ ದಶಕದಿಂದ ಆರಂಭವಾಗಿ ಸುಮಾರು ಐದು ದಶಕಗಳಿಗಿಂತ ಹೆಚ್ಚು ಕಾಲದ ವೃತ್ತಿ ಬದುಕಿನಲ್ಲಿ 43 ಚಿತ್ರಗಳನ್ನು ನಿರ್ದೇಶಿಸಿ ಈಜಿಪ್ಟಿಯನ್ ಮತ್ತು ಅರಬ್ ಸಿನೆಮಾದ ಪರಂಪರೆಯ ಪಥವನ್ನು ಬದಲಿಸಿ ಆಧುನಿಕತೆಯ ದಿಕ್ಕು ತೋರಿದರು. ಅವರ ನೈಲ್ ಬಾಯ್(1951) ಮೊದಲ ಚಿತ್ರವೇ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅಂತಾರಾಷ್ಟ್ರೀಯ ಪ್ರೇಕ್ಷಕರ ಗಮನ ಸೆಳೆಯಲು ಕಾರಣವಾಯಿತು.

ಇದನ್ನೂ ಓದಿ eko | ಮುಗಿದ ನಂತರವೂ ಕಾಡುವ-ಕೆಣಕುವ ಚಿತ್ರ

1958ರಲ್ಲಿ ಬಿಡುಗಡೆಯಾದ ‘ಕೈರೋ ಸ್ಟೇಷನ್’ ಅವರ ವೃತ್ತಿಜೀವನದ ಮಹತ್ವದ ತಿರುವು. ಈ ಚಿತ್ರ ಅರಬ್ ಸಿನೆಮಾದಲ್ಲಿ ಅಸ್ತಿತ್ವವಾದಿ ಚಿಂತನೆ, ಸಾಮಾಜಿಕ ಅಂಚಿನ ಪಾತ್ರಗಳು ಮತ್ತು ನೈಜ ನಗರಜೀವನವನ್ನು ದೃಶ್ಯ ಮಾಧ್ಯಮದಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿತು. ಆರಂಭದಲ್ಲಿ ವಿವಾದಕ್ಕೀಡಾದರೂ, ನಂತರ ಇದು ಅರಬ್ ಆಧುನಿಕ ಸಿನೆಮಾದ ಮೈಲುಗಲ್ಲಾಗಿ ಗುರುತಿಸಲಾಯಿತು.

Cairo station yousef chahine

ಶಹೀನ್ ಅವರ ಸಿನೆಮಾ ರಾಜಕೀಯ, ವರ್ಗಸಂಘರ್ಷ, ವಸಾಹತು ಪರಂಪರೆ ಮತ್ತು ವೈಯಕ್ತಿಕ ಗುರುತಿನ ಪ್ರಶ್ನೆಗಳನ್ನು ಧೈರ್ಯವಾಗಿ ಎದುರಿಸಿತು. The Land(1969), Alexandria… Why?(1979), Destiny(1997) ಮುಂತಾದ ಚಿತ್ರಗಳು ಅವರ ಬೌದ್ಧಿಕ ಮತ್ತು ಮಾನವೀಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ತಮ್ಮ ಬ್ಲೇಜಿಂಗ್ ಸನ್ಸ್(1954) ಚಿತ್ರದ ಮೂಲಕ ಮುಂದೆ ಅಂತಾರಾಷ್ಟ್ರೀಯ ಕಲಾವಿದರಾಗಿ ಜಾಗತಿಕ ಮನ್ನಣೆ ಪಡೆದ ಓಮರ್ ಶರೀಫ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ  ಖ್ಯಾತಿ ಅವರದು.

ಸ್ಥಳೀಯ ಕಥನಗಳನ್ನು ಜಾಗತಿಕ ಚಲನಚಿತ್ರ ಭಾಷೆಯೊಂದಿಗೆ ಬೆಸೆಯುವ ಮೂಲಕ, ಯೂಸಫ್ ಶಹೀನ್ ಅರಬ್ ಸಿನೆಮಾವನ್ನು ವಿಶ್ವ ಸಿನೆಮಾ ನಕ್ಷೆಯಲ್ಲಿ ಸ್ಥಾಪಿಸಿದ ಅಪರೂಪದ ನಿರ್ದೇಶಕರು.

ಕೈರೋ ಸ್ಟೇಷನ್(1958), ಭಾಷೆ: ಈಜಿಪ್ಷಿಯನ್ ಅರೇಬಿಕ್, ಅವಧಿ: 77 ನಿಮಿಷಗಳು, ನಿರ್ದೇಶಕ: ಯೂಸಫ್ ಶಹೀನ್.

WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...