ಕನ್ನಡಕ್ಕೆ ಚಿಂತನಶೀಲ ಸಂವಾದಗಳ ಅಗತ್ಯವಿದೆ ಎಂದು ನಂಬುವ ಪ್ರತಿಯೊಬ್ಬರನ್ನು ಸಮಾಜಮುಖಿ ಸಾಹಿತ್ಯ ಸಮ್ಮೇಳನವು ಆಹ್ವಾನಿಸುತ್ತದೆ. ಕನ್ನಡಕ್ಕಾಗಿ, ಕನ್ನಡ ನಾಡಿಗಾಗಿ ಮತ್ತು ಮುಂದಿನ ಪೀಳಿಗೆಗಳನ್ನು ಸ್ವಾಭಿಮಾನಿ ಕನ್ನಡಿಗರಾಗಿ ಉಳಿಸಿಕೊಳ್ಳುವಲ್ಲಿ ಸಮಾಜಮುಖಿ ಬಳಗದ ಈ ಪ್ರಯತ್ನ.
ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ನಾಡು ರಾಜ್ಯೋತ್ಸವದ ಸಂಭ್ರಮದಲ್ಲಿ ಕೆಂಪು ಮತ್ತು ಹಳದಿ ವರ್ಣಮಯ ಜಗತ್ತಾಗಿ ಬದಲಾಗುತ್ತದೆ. ಈ ಸಂಭ್ರಮಾಚರಣೆಯ ಹಾಡುಗಳು, ಮೆರವಣಿಗೆಗಳು ಮತ್ತು ಘೋಷಣೆಗಳನ್ನು ಮೀರಿ ಗಂಭೀರವಾದ ಪ್ರಶ್ನೆಗಳನ್ನು ಕನ್ನಡಿಗರಾದ ನಾವು ಕೇಳಿಕೊಳ್ಳಬೇಕಾದ ಅಗತ್ಯವಿದೆ: ಇಂದು ನಮ್ಮ ಸಾಂಸ್ಕೃತಿಕ ಮತ್ತು ಬೌದ್ಧಿಕ ಜೀವನದಲ್ಲಿ ಕನ್ನಡ ಭಾಷೆ ಯಾವ ಸ್ಥಿತಿಯಲ್ಲಿದೆ? ಕನ್ನಡ ಭಾಷೆಯ ಸದೃಢ ಭವಿಷ್ಯಕ್ಕಾಗಿ ನಾವು ಮಾಡಬೇಕಾದ ಕಾರ್ಯಯೋಜನೆಯೇನು? ಕನ್ನಡ ನಾಡಿನ ಸಾಂಸ್ಕ್ರತಿಕ, ರಾಜಕೀಯ, ಆರ್ಥಿಕ, ಸಾಹಿತ್ಯಿಕ ಸ್ಥಿತಿಗತಿ ಹೇಗಿದೆ ಮತ್ತು ಹೇಗಿರಬೇಕಾಗಿದೆ? ಇಂಗ್ಲಿಷ್ ಭಾಷೆಯ ಅಬ್ಬರ ಮತ್ತು ಹಿಂದಿ ಹೇರಿಕೆಯ ಆತಂಕದ ನಡುವೆ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗಳಿಗೆ ದಾಟಿಸುವ ಪರಿ ಏನು?…
ಸಾಮಾನ್ಯವಾಗಿ ನಮ್ಮ ರಾಜ್ಯೋತ್ಸವ ಸಮಾರಂಭಗಳು ಗತಕಾಲದ ವೈಭವಗಳ ಸ್ಮರಣೆಯಲ್ಲೇ ಮೈಮರೆಯುತ್ತವೆಯೇ ಹೊರತು, ಆತಂಕದ ಭವಿಷ್ಯದ ಕುರಿತು ಚಿಂತಿಸುವುದು ಬಹಳ ಕಡಿಮೆ. ರಾಜ್ಯೋತ್ಸವವೆಂದರೆ ಕೇವಲ ಸಾಂಕೇತಿಕ ಆಚರಣೆಯಲ್ಲ, ಬದಲಾಗಿ ಕನ್ನಡ ಭಾಷೆ, ಸಂಸ್ಕ್ರತಿ, ಮತ್ತು ನಾಡಿನ ಕುರಿತಾದ ಗಂಭೀರ ಚಿಂತನೆಗಳು ನಡೆಸಬೇಕಾದ ಸುಸಂದರ್ಭ. ಇದನ್ನು, ಕ್ರಿಯಾಶೀಲ ಬರಹಗಾರರು, ವಿಮರ್ಶಾತ್ಮಕ ಚಿಂತಕರು, ಯುವ ಕನ್ನಡಿಗರೊಂದಿಗೆ ಜೊತೆಗೂಡಿಕೊಂಡು ಚರ್ಚಿಸಿ ಅವರಿಗೆ ದಾಟಿಸುವ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ.
ಇದನ್ನು ಓದಿದ್ದೀರಾ?: ಆರ್‌ಎಸ್‌ಎಸ್ ಸಮವಸ್ತ್ರಕ್ಕೆ ‘ಗಣವೇಷ’ ಎನ್ನುವುದು ತಪ್ಪಲ್ಲವೇ?
ಇತ್ತೀಚಿನ ವರ್ಷಗಳಲ್ಲಿ, ಸರಕಾರೀ ಪ್ರಾಯೋಜಿತ ಸಾಹಿತ್ಯ ಸಮ್ಮೇಳನಗಳನ್ನೂ ಒಳಗೊಂಡಂತೆ ದೇಶಾದ್ಯಂತ ಸಾಹಿತ್ಯ ಉತ್ಸವಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದರೆ ಇವುಗಳಲ್ಲಿ ಹೆಚ್ಚಿನವುಗಳು ಯಾವುದೇ ದೂರದೃಷ್ಟಿಯ ಗಂಭೀರ ಚರ್ಚೆಗಳನ್ನು ನಡೆಸದೇ, ಸೃಜನಶೀಲತೆಯನ್ನು ಪೋಷಿಸದೇ, ಕೆಲವು ಬೆರಳೆಣಿಕೆಯ ಸಾಹಿತಿಗಳು ಮತ್ತು ಸಮ್ಮೇಳನದ ಪೋಷಕರುಗಳ ಸ್ವಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿವೆ. ಈ ವಿದ್ಯಮಾನವನ್ನು ಕನ್ನಡಕ್ಕೆ ಅನ್ವಯಿಸುವುದಾದರೆ, ಆರಂಭದಲ್ಲಿ ಕನ್ನಡಿಗರ ಚಿಂತನೆಯನ್ನು ಪ್ರಚೋದಿಸಲು ಉದ್ದೇಶಿಸಲಾದ, ಕನ್ನಡದ ಭವಿಷ್ಯಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನೇಕ ಸಾಹಿತ್ಯ ಕೂಟಗಳು ಇಂದು ಮನಮೋಹಕ, ವೈಭವದ, ಔತಣಗಳ ಸಾಮಾಜಿಕ ಸಂದರ್ಭಗಳಾಗಿ ಮಾರ್ಪಟ್ಟಿವೆ, ಭಾಷಣಗಳಿಂದ ತುಂಬಿ ಹೋಗಿವೆ, ಗೊಂದಲಗಳ ಗೂಡಾಗಿವೆ ಮತ್ತು ಇವುಗಳ ನಡುವೆ ಅರ್ಥಪೂರ್ಣ ಸಂವಾದಗಳು ಮಾಯವಾಗಿವೆ. ಈ ಪ್ರದರ್ಶನ ಸಂಸ್ಕೃತಿಯಿಂದಾಗಿ, ಮೂಲತಃ ಸಾಹಿತ್ಯ ಸಮ್ಮೇಳನಗಳು ಉದ್ದೀಪನಗೊಳಿಸಬೇಕಾದ ಪ್ರಗತಿಪರ ಕನ್ನಡ ಬರವಣಿಗೆಯು ಮೂಲೆಗೆ ಸರಿದಿದೆ.

ಈ ನಿಟ್ಟಿನಲ್ಲಿ, ಸಮಾಜಮುಖಿ ಮಾಸಪತ್ರಿಕೆಯು, ಈ ವರ್ಷದಿಂದ ನವೆಂಬರ್ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರದಂದು ಒಂದು ವಿನೂತನ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಿದೆ. ಇದೇ ನವೆಂಬರ್ 8 ಮತ್ತು 9ರಂದು ಬೆಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಈ ಸಮ್ಮೇಳನವು ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ. ಪ್ರಸಕ್ತ ಸಮಾಜಮುಖಿ ಆಯೋಜಿಸುತ್ತಿರುವ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಒಂದು ಗಂಭೀರವಾದ ಮಹತ್ವದ ಆರಂಭವನ್ನು ಸೂಚಿಸುತ್ತದೆ. ಜನಸಾಮಾನ್ಯ ಕನ್ನಡಿಗರ ಸಾಹಿತ್ಯ ಉತ್ಸವವಾಗಿ ರೂಪುಗೊಳ್ಳುತ್ತಿರುವ ಈ ವಾರ್ಷಿಕ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಂವಾದಗಳಿಗೆ ಹೊಸ ಸಾಧ್ಯತೆಗಳು, ಮತ್ತು ಒಳನೋಟಗಳನ್ನು ಒದಗಿಸುವ ಮೂಲಕ ಕನ್ನಡ ಪ್ರಜ್ಞೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತದೆ. ಕನ್ನಡ ಭಾಷೆಯನ್ನು ಪ್ರೀತಿಸುವ ಎಲ್ಲರನ್ನು- ಬರಹಗಾರರು ಮತ್ತು ಓದುಗರು, ಚಿಂತಕರು ಮತ್ತು ಶಿಕ್ಷಕರು, ಕಲಾವಿದರು ಮತ್ತು ವಿದ್ಯಾರ್ಥಿಗಳನ್ನು ಸದೃಢ ಭವಿಷ್ಯದ ಭರವಸೆಯ ಸೂರಿನಡಿ ಒಂದುಗೂಡಿಸುವ ಆಶಯವನ್ನು ಹೊಂದಿದೆ. ಕುವೆಂಪು ಆಶಯದಂತೆ, ‘ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ, ನಿರ್ದಿಗಂತವಾಗಿ ಏರಿ’… ಕನ್ನಡ ನಾಡು ಸಾಮರಸ್ಯದಿಂದ, ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನ ಉಳಿಸಿಕೊಂಡು, ನಿರಂತರವಾಗಿ ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಔನತ್ಯವನ್ನು ಸಾಧಿಸಬೇಕೆನ್ನುವ ಹೆಬ್ಬಯಕೆಯನ್ನು ಹೊಂದಿದೆ.
ಸಮ್ಮೇಳನವನ್ನು ಆಯೋಜಿಸುತ್ತಿರುವ ಸಮಾಜಮುಖಿ ಪ್ರಕಾಶನದ ಕುರಿತು ಒಂದು ಮಾತು ಹೇಳುವುದಾದರೆ, ಅದು ಕಳೆದ ಒಂದು ದಶಕದಿಂದಲೂ ನಡೆಸುತ್ತಿರುವ ಸಮಾಜಮುಖಿ ಕೆಲಸಗಳಲ್ಲಿ ಕೆಲವನ್ನು ಹೆಸರಿಸುವುದಾದರೆ; ಕನ್ನಡಿಗರಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವುದಕ್ಕಾಗಿ ಮತ್ತು ಅವರ ಜ್ಞಾನ ವಿಸ್ತರಣೆಗಾಗಿ ‘ಸಮಾಜಮುಖಿ’ ಕನ್ನಡ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಇದು ಪ್ರತಿ ತಿಂಗಳು ವಿಷಯ ತಜ್ಞ ಮತ್ತು ಹೊಸ ಬರಹಗಾರರಿಂದ ವೈವಿಧ್ಯಮಯ ವಿಚಾರಗಳ ಲೇಖನಗಳನ್ನು ಪ್ರಕಟಿಸುತ್ತಿದೆ. ಪ್ರತಿವರ್ಷ ಯುವ ಲೇಖಕರಿಗಾಗಿ ವೈಚಾರಿಕ ಲೇಖನ ಸ್ಪರ್ಧೆ ಮತ್ತು ಸಣ್ಣ ಕಥಾ ಸ್ಪರ್ಧೆ ಆಯೋಜಿಸುವ ಮೂಲಕ ಕನ್ನಡ ಬರಹಗಾರರಿಗೆ ಉತ್ತೇಜನ ನೀಡುತ್ತಿದೆ. ‘ನಡೆದು ನೋಡು ಕರ್ನಾಟಕ’ ಕಾರ್ಯಕ್ರಮದ ಮೂಲಕ ಆಸಕ್ತ ಕನ್ನಡಿಗರಿಗೆ ಮೂರು ತಿಂಗಳಿಗೊಮ್ಮೆ ಕನ್ನಡ ನಾಡಿನ ಪ್ರಾದೇಶಿಕ ಸಂಸ್ಕ್ರತಿ ಮತ್ತು ವೈಶಿಷ್ಟ್ಯತೆಯನ್ನು ಪರಿಚಯಿಸುತ್ತಿದೆ. ‘ಸಮಾಜಮುಖಿ ರಂಗ ಬಳಗ’ ಮತ್ತು ‘ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು’ ಕನ್ನಡಿಗರಲ್ಲಿ ಹೊಸ ಪ್ರಜ್ಞೆಯನ್ನು ಬೆಳೆಸುತ್ತಿದೆ. ಇವುಗಳೊಂದಿಗೆ ಪ್ರತಿವರ್ಷವೂ ಯುವಜನರಿಗಾಗಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿಯಲ್ಲಿ ನಡೆಸುವ ‘ವಿಚಾರಕ್ರಾಂತಿಯ ಹಗಲಿರುಳು’ ಶಿಬಿರವು ಮತ್ತು ಬೆಂಗಳೂರಿನ ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ನಡೆಸುವ ‘ಸತ್ಯಮೇವ ಜಯತೇ’ ಶಿಬಿರವು ಕರ್ನಾಟಕದ ಕಾಲೇಜು ವಿದ್ಯಾರ್ಥಿಗಳು ಮತ್ತು ಸಂಶೋಧಕರಲ್ಲಿ ನಾಡುನುಡಿಯ ಪ್ರಜ್ಞೆಯನ್ನು ಬೆಳೆಸಲು, ವೈಚಾರಿಕ ಚಿಂತನೆ ಮತ್ತು ಬರಹವನ್ನು ಉದ್ದೀಪನಗೊಳಿಸಲು ಸಹಾಯ ಮಾಡುತ್ತಿದೆ. ಇವೆಲ್ಲವೂ, ಕನ್ನಡಿಗರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ಬದ್ಧತೆಯ ಸಂಸ್ಕೃತಿಯನ್ನು ಸದ್ದಿಲ್ಲದೆ ಬೆಳೆಸುತ್ತಿದೆ. ಇದರ ಮುಂದುವರಿದ ಭಾಗವಾಗಿ, ಕನ್ನಡಿಗರ ಸೃಜನಶೀಲತೆಯನ್ನು ಬೆಳೆಸುವ, ಎಲ್ಲಾ ಕನ್ನಡಿಗರನ್ನು ಒಂದಾಗಿಸುವ ಮತ್ತು ನಾಡುನುಡಿಯ ಕುರಿತಂತೆ ಗಂಭೀರ ಚಿಂತನೆಯನ್ನು ಬೆಳೆಸಲು ಉದ್ದೇಶಿಸಿರುವ ಈ ಸಾಹಿತ್ಯ ಸಮ್ಮೇಳನದೊಂದಿಗೆ ಸಮಾಜಮುಖಿ ತನ್ನ ಸಾಮಾಜಿಕ ಬದ್ಧತೆಯ ಪರಂಪರೆಯನ್ನು ಮುಂದುವರೆಸಿದೆ.
ಇದನ್ನೂ ಓದಿರಿ: ಕಲ್ಲಡ್ಕ ಭಟ್ ಕೋಮುದ್ವೇಷದ ಇತಿಹಾಸ; ಸರ್ಕಾರ ಎಲ್ಲಿ ಎಡವುತ್ತಿದೆ?
ಈ ಸಮ್ಮೇಳನದ ವೈಶಿಷ್ಟ್ಯತೆಯೆಂದರೆ, ಯಾವುದೇ ಅಧಿಕಾರ ಕೇಂದ್ರಗಳು ಮತ್ತು ಕಾರ್ಪೊರೇಟ್ ಜಗತ್ತನ್ನು ಆರ್ಥಿಕ ಬೆಂಬಲಕ್ಕಾಗಿ ಆಶ್ರಯಿಸದೆ ಎರಡರಿಂದಲೂ ಅಂತರ ಕಾಯ್ದುಕೊಂಡಿದೆ. ಸಂಪೂರ್ಣವಾಗಿ ಸಾರ್ವಜನಿಕರ ಧನಸಹಾಯದಿಂದ ಈ ಸಮ್ಮೇಳನವು ನಡೆಯುತ್ತಿದ್ದು, ಸಾಹಿತ್ಯವು ಸಮುದಾಯದ ಒಗ್ಗಟ್ಟಿನ ಮೂಲಕ ಬೆಳೆಯಬಹುದು ಎನ್ನುವುದನ್ನು ಇದು ಸಾಬೀತುಪಡಿಸಲು ಹೊರಟಿದೆ. ಸಾಧಾರಣ ನೋಂದಣಿ ಶುಲ್ಕ, ಮಾಧ್ಯಮಗಳ ಸ್ವಯಂಪ್ರೇರಿತ ಬೆಂಬಲ ಮತ್ತು ಮುಕ್ತ ಭಾಗವಹಿಸುವಿಕೆಯು ಕಾರ್ಯಕ್ರಮಕ್ಕೆ ಅದರ ನೈತಿಕ ಸ್ವಾತಂತ್ರ್ಯವನ್ನು ನೀಡುತ್ತದೆ.
ಈ ಸಮ್ಮೇಳನದಲ್ಲಿ, ಕನ್ನಡ ಮತ್ತು ಭಾರತೀಯ ಸಾಹಿತ್ಯ ಕ್ಷೇತ್ರದ ಅನೇಕ ಪ್ರಸಿದ್ಧ ಮತ್ತು ಸಮಾಜಮುಖಿ ಸಾಹಿತಿಗಳು ಹಾಗು ಚಿಂತಕರು ಭಾಗವಹಿಸಲಿದ್ದಾರೆ. ಕನ್ನಡದ ಹಿರಿಯ ಚಿಂತಕರಾದ ಎಚ್.ಎಸ್. ಶಿವಪ್ರಕಾಶ್, ಹಂಪನಾ, ಬರಗೂರು ರಾಮಚಂದ್ರಪ್ಪ, ಎಸ್.ಜಿ. ಸಿದ್ದರಾಮಯ್ಯ, ಕೆ. ರಾಮಯ್ಯ, ಗಿರೀಶ್ ಕಾಸರವಳ್ಳಿ, ಜಿ. ರಾಮಕೃಷ್ಣ, ಓ.ಎಲ್. ನಾಗಭೂಷಣಸ್ವಾಮಿ ಮುಂತಾದವರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದ ಸಮಕಾಲೀನ ಚಿಂತಕರಾದ ಸುಂದರ್ ಸರುಕ್ಕಾಯ್, ಗೀತಾ ಹರಿಹರನ್, ಅಮಿತ್ ಚೌಧರಿ, ಸುಧನ್ವ ದೇಶಪಾಂಡೆ, ಸುಗತ ಶ್ರೀನಿವಾಸರಾಜು, ಮೀನಾ ಕಂಡಸಾಮಿ, ಸುಮನಾ ರಾಯ್, ಎ.ಜೆ. ಥಾಮಸ್ ಮುಂತಾದ ವಿದ್ವಾಂಸರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಈ ಸಮ್ಮೇಳನದ ಕೆಲವು ವಿಶಿಷ್ಟ ಸಂವಾದ ವಿಷಯಗಳನ್ನು ಉದಾಹರಿಸುವುದಾದರೆ; ಮುಖ್ಯವೇದಿಕೆಯಲ್ಲಿ ‘ಕನ್ನಡ ಭಾಷಾ ಬಿಕ್ಕಟ್ಟುಗಳು’, ‘ಬಿಕ್ಕಟ್ಟಿನಲ್ಲಿ ಪ್ರಜಾಪ್ರಭುತ್ವ’, ‘ಕನ್ನಡದಲ್ಲಿ ಹೋರಾಟ ಸಾಹಿತ್ಯ ಏಕಿಲ್ಲ?’… ಚರ್ಚೆಗಳು ನಡೆದರೆ; ಸೃಜನಶೀಲ ವೇದಿಕೆಯಲ್ಲಿ, ‘ಕನ್ನಡ ವಿಮರ್ಶಾ ಸಾಹಿತ್ಯವೇಕೆ ಬತ್ತಿಹೋಗಿದೆ?’, ‘ದಮನಿತರ ಸಾಹಿತ್ಯ ಮುಖ್ಯಧಾರೆಗೆ ವಿಲೀನವಾಗಿದೆಯೇ?’, ‘ಅಸಹನೆಯ ಯುಗದಲ್ಲಿ ಹೊಸಕಾವ್ಯ’… ಚರ್ಚೆಗಳು ನಡೆಯಲಿವೆ. ಮೊದಲ ಬಾರಿಗೆ, ಸಾಹಿತ್ಯ ಸಮ್ಮೇಳನದಲ್ಲಿ ಶಾಸ್ತ್ರೀಯ ಕನ್ನಡಕ್ಕೆಂದೇ ಮೀಸಲಾದ ಗೋಷ್ಠಿಗಳು ನಮ್ಮ ಭಾಷಾ ಪರಂಪರೆ ಮತ್ತು ಅದರ ನಿರಂತರ ಪ್ರಸ್ತುತತೆಯನ್ನು ಮರುಪರಿಶೀಲಿಸುತ್ತದೆ. ಈ ವೇದಿಕೆಯಲ್ಲಿ, ಹಳೆಗನ್ನಡ ಸಾಹಿತ್ಯದಲ್ಲಿ ಪ್ರತಿರೋಧದ ದನಿ, ಶ್ರೀಸಾಮನ್ಯರ ಹುಡುಕಾಟ, ಕ್ರಾಂತಿಯ ನೆಲೆಗಳು, ಕನ್ನಡ ನಾಡು ನುಡಿ ಪರವಾಗಿ ದನಿಯೆತ್ತಿದವರು, ಸಾಹಿತ್ಯ ಚರಿತ್ರೆಯಲ್ಲಿ ಬಿಟ್ಟುಹೋದ ದನಿಗಳು, ಶ್ರಮ ಸಂಸ್ಕ್ರತಿ, ಕಿರಿಯರಿಗೊಂದು ಕಿವಿಮಾತು ಮುಂತಾದ ವಿಷಯಗಳ ಸಂವಾದಗಳು ನಡೆಯಲಿವೆ. ಇನ್ನು ಸಾಹಿತ್ಯೇತರ ವೇದಿಕೆಯು, ಚಿತ್ರಕಲೆ, ಸಂಗೀತ, ಸಿನೆಮಾ, ನಾಟಕ, ಪತ್ರಿಕೋದ್ಯಮ ಮತ್ತು ಛಾಯಾಗ್ರಹಣ, ಜನಪದ, ರಂಗಭೂಮಿ, ನೃತ್ಯ, ಬಾಲವನ… ವೈವಿಧ್ಯಮಯ ವಿಷಯಗಳನ್ನು ಚರ್ಚಿಸಲಿದೆ.
ಕನ್ನಡ ಭಾಷೆಗೆ ಜಗತ್ತಿನ ಆಗುಹೋಗುಗಳನ್ನು ಜೋಡಿಸುವ ಮತ್ತು ಕನ್ನಡಿಗರಿಗೆ ಅವುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ವಿಶಿಷ್ಟ ಸಂವಾದಗಳನ್ನು ಏರ್ಪಡಿಸಲಾಗಿದೆ. ‘ದಿ ವರ್ಡ್ ಆಸ್ ವಿಟ್ನೆಸ್’, ‘ಕ್ಯಾಸ್ಟ್, ರಿಲಿಜನ್ ಆಂಡ್ ನ್ಯಾಷನಲಿಸ್ಮ್’, ‘ಡಾಕ್ಯುಮೆಂಟಿಂಗ್ ಡಿಸ್ಸೆಂಟ್’, ‘ಲೈಟರೇಚರ್ ಇನ್ ದಿ ಏಜ್ ಆಫ್ ಕ್ಲೈಮೇಟ್ ಕ್ರೈಸಿಸ್’, ‘ಲಿಟರರಿ ಆಕ್ಟಿವಿಸಂ’ ‘ವಾಟ್ ಇಸ್ ಹ್ಯಾಪನಿಂಗ್ ಟು ಅವರ್ ಸಿಟೀಸ್?’ ಮುಂತಾದ ಚರ್ಚೆಗಳು ವರ್ತಮಾನ ಕಾಲದ ಬಿಕ್ಕಟ್ಟುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಪರಿಶೀಲಿಸುತ್ತದೆ.
ಸಮ್ಮೇಳನವು, ತಮ್ಮ ಪುಸ್ತಕಗಳನ್ನು ಬಿಡುಗಡೆ ಮಾಡಲಿಚ್ಛಿಸುವ ಲೇಖಕರು ಮತ್ತು ಪ್ರಕಾಶಕರಿಗೆ ಅವಕಾಶವನ್ನು ಒದಗಿಸುತ್ತದೆ. ಕನ್ನಡದ ಸಾಹಿತ್ಯ ಕೃಷಿಗೆ ಬೆಂಬಲ ನೀಡುತ್ತಿರುವ ಪ್ರಕಾಶಕರಿಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಲೇಖಕರಿಗೆ ತಮ್ಮ ಓದುಗರೊಂದಿಗೆ ಮುಖಾಮುಖಿಯಾಗಿ ಸಂವಾದಿಸಲು ವೇದಿಕೆ ನೀಡಲಾಗುತ್ತದೆ. ಯುವ ಮತ್ತು ಉದಯೋನ್ಮುಖ ಬರಹಗಾರರ ಕುಶಲತೆ ಮತ್ತು ಆತ್ಮವಿಶ್ವಾಸವನ್ನು ಪರಿಷ್ಕರಿಸಲು ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ. ಅನುಭವಿ ಬರಹಗಾರರು ಮತ್ತು ಹೊಸಬರ ನಡುವಿನ ಈ ಸಂವಹನವು ಭಾಷೆಯನ್ನು ಜೀವಂತವಾಗಿರಿಸುತ್ತದೆ. ಇದು, ಕನ್ನಡದ ಸಾಹಿತ್ಯ ನದಿಯು ಎಂದಿಗೂ ಬತ್ತದಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿರಿ: ಸಂಘಪರಿವಾರ ಹೇಳುವ ‘ಸಾಮರಸ್ಯ’ ಕೇವಲ ಬೂಟಾಟಿಕೆ; ಆರ್‌ಎಸ್‌ಎಸ್‌ನಲ್ಲಿ ಜಾತಿ ನೋವುಂಡ ದಲಿತನ ಅನುಭವ ಕಥನ
ಈ ಸಮ್ಮೇಳನವನ್ನು ಲೇಖಕರ ಸಮಾವೇಶ ಎನ್ನುವುದಕ್ಕಿಂತ ಹೆಚ್ಚಾಗಿ, ನಮ್ಮ ನಾಡು ನುಡಿ ಮತ್ತು ನಮ್ಮ ಸಾಮುದಾಯಿಕ ಕಲ್ಪನೆಯ ಕುರಿತಂತೆ ಕಾಳಜಿಯಿಂದ ರೂಪಿಸಿರುವ ಒಂದು ಕಾರ್ಯಯೋಜನೆಯೆನ್ನಬಹುದು. ವರ್ತಮಾನದ ಅನಗತ್ಯ ಗೊಂದಲ, ಅಸಹನೆ ಮತ್ತು ವಿಭಜನೆಯ ಯುಗದಲ್ಲಿ, ಜನರು ಒಟ್ಟಿಗೆ ಸೇರಿ ಯೋಚಿಸಲು, ಪ್ರಶ್ನಿಸಲು, ಕನ್ನಡ ಪ್ರಜ್ಞೆಯನ್ನು ಬೆಳೆಸಲು ಮತ್ತು ಒಂದು ಬಹುತ್ವದ ನಾಡನ್ನು ನಿರ್ಮಿಸಲು ಇದು ಆಶಿಸುತ್ತದೆ. ಕನ್ನಡದ ಉಜ್ವಲ ಭವಿಷ್ಯಕ್ಕಾಗಿ ಇಂತಹ ವೇದಿಕೆಗಳ ಅಗತ್ಯವಿದೆ. ಇದು ಕನ್ನಡನಾಡಿನ ಗತಕಾಲದ ಹೆಮ್ಮೆಯ ಸ್ಮಾರಕವಲ್ಲ, ಬದಲಾಗಿ ಭವಿಷ್ಯದ ಮೇಲಿನ ಪ್ರೀತಿಯಿಂದ ನಿರ್ಮಿಸುತ್ತಿರುವ ಕನ್ನಡ ಜಗತ್ತು. ಪ್ರತಿವರ್ಷವೂ, ರಾಜ್ಯೋತ್ಸವದ ನವೆಂಬರ್ ತಿಂಗಳಲ್ಲಿ ಈ ಚೈತನ್ಯ ನವೀಕರಿಸುವ ವೇದಿಕೆಯನ್ನು ನೀಡುವ ಯೋಜನೆ ಸಮಾಜಮುಖಿ ಬಳಗಕ್ಕಿದೆ.
ಮೂಲತಃ, ಈ ಸಮ್ಮೇಳನವು ರಾಜ್ಯೋತ್ಸವದ ನಿಜವಾದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ: ಏಕತೆ, ಸ್ವಾಭಿಮಾನ ಮತ್ತು ಮುಕ್ತತೆ. ಕನ್ನಡಕ್ಕೆ ಕೇವಲ ಹೆಮ್ಮೆಯ ಸಾಂಕೇತಿಕ ಆಚರಣೆಯ ಬದಲು, ಕನ್ನಡ ನಾಡು ನುಡಿಯನ್ನು ಜವಾಬ್ದಾರಿಯಿಂದ ಮುಂದುವರಿಸುವ ಯೋಜನೆಗಳ ಅಗತ್ಯವಿದೆ- ಚಿಂತನೆಯನ್ನು ಪೋಷಿಸುವುದು, ಯುವ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಮತ್ತು ಸಾಹಿತ್ಯದ ನೈತಿಕ ಶಕ್ತಿಯನ್ನು ಜೀವಂತವಾಗಿರಿಸುವುದು.
ಕನ್ನಡಕ್ಕೆ ಚಿಂತನಶೀಲ ಸಂವಾದಗಳ ಅಗತ್ಯವಿದೆ ಎಂದು ನಂಬುವ ಪ್ರತಿಯೊಬ್ಬರನ್ನು ಸಮಾಜಮುಖಿ ಸಾಹಿತ್ಯ ಸಮ್ಮೇಳನವು ಆಹ್ವಾನಿಸುತ್ತದೆ. ಸಾಮೂಹಿಕ ಭಾಗವಹಿಸುವಿಕೆಯ ಮೂಲಕ ಮಾತ್ರ ಈ ದೃಷ್ಟಿಕೋನವು ಸದೃಢಗೊಳ್ಳುತ್ತದೆ- ಕನ್ನಡಕ್ಕಾಗಿ, ಕನ್ನಡ ನಾಡಿಗಾಗಿ ಮತ್ತು ಮುಂದಿನ ಪೀಳಿಗೆಗಳನ್ನು ಸ್ವಾಭಿಮಾನಿ ಕನ್ನಡಿಗರಾಗಿ ಉಳಿಸುಕೊಳ್ಳುವಲ್ಲಿ ಸಮಾಜಮುಖಿ ಬಳಗದ ಈ ಪ್ರಯತ್ನ. ಇದರ ಯಶಸ್ಸು ತಮ್ಮ ಉಪಸ್ಥಿತಿಯಲ್ಲಿ ಮತ್ತು ಸಂವಾದಗಳಲ್ಲಿ ಭಾಗವಹಿಸಿವಲ್ಲಿ ಅಡಗಿದೆ. ಒಟ್ಟಿನಲ್ಲಿ, ಇದು ಕನ್ನಡದ ಕ್ರಿಯಾಶೀಲ ಮನಸ್ಸುಗಳನ್ನು ಒಂದೆಡೆ ಸೇರಿಸಿ ಕನ್ನಡ ನಾಡು ಮತ್ತು ನುಡಿಯನ್ನು ಅಭಿಮಾನದಿಂದ ಇನ್ನಷ್ಟು ಸದೃಢಗೊಳಿಸುವ ಆಶಯವನ್ನು ಹೊಂದಿದೆ. ಈ ಸಮಾಜಮುಖಿ ಸಾಹಿತ್ಯ ಸಮ್ಮೇಳನಕ್ಕೆ ಸಹಭಾಗಿಯಾಗಿರುವವರು- ಪ್ರಜಾವಾಣಿ, ಈದಿನ.ಕಾಮ್, ಬಿಎಂಶ್ರೀ ಪ್ರತಿಷ್ಠಾನ, ಬೆಂಗಳೂರಿನ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘ. ಈ ಸಮ್ಮೇಳನದ ಕುರಿತ ಹೆಚ್ಚಿನ ಮಾಹಿತಿಗಾಗಿ ಮತ್ತು ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲು ಸಂಪರ್ಕಿಸಿ- www.samajamukhi.com





