ಕೋಟೆನಾಡು ಎಂದೇ ಹೆಸರಾದ ಚಿತ್ರದುರ್ಗ ನಗರದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕಹಳೆ ಮೊಳಗಿತು. ರಾಜ್ಯೋತ್ಸವದ ಅಂಗವಾಗಿ ನವೆಂಬರ್ ೧ರಂದು ಶನಿವಾರ ಆಯೋಜಿಸಲಾದ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರದೊಂದಿಗೆ ಜನಮನ ಸೂರೆಗೊಳ್ಳುವ ಆಕರ್ಷಕ
ಸ್ಥಬ್ದಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೇಳೈಸಿತು.
ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸ್ಥಬ್ದಚಿತ್ರ ಮೆರವಣಿಗೆ ಆಕರ್ಷಕವಾಗಿತ್ತು. ಇಲಾಖೆಗಳ ಸ್ಥಬ್ದಚಿತ್ರ ಮೆರವಣಿಗೆ ಮಧ್ಯೆ ತೋಟಗಾರಿಕೆ ಇಲಾಖೆಯ ಮಧುವನ ಹಾಗೂ ಜೇನು ಸಾಗಣಿಕೆ ಮಹತ್ವ ಸಾರುವ ಬೃಹತ್ ದುಂಬಿ ಸ್ಥಬ್ದಚಿತ್ರ, ಅದರಿಂದ ಹೊರಡುತ್ತಿದ್ದ, ಮಧುವನದ ಗುಂಯ್ಯೀ ಗುಟ್ಟಿದ ದುಂಬಿ ನಿನಾದ ಎಲ್ಲರೂ ಆಶ್ಚರ್ಯ ನೋಟದಿಂದ ಮೆರವಣೆಗೆ ಕಡೆ ನೋಡುವಂತೆ ಮಾಡಿತು.

ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ನೀಲಕಂಠೇಶ್ವರ ದೇಗುಲದ ಬಳಿ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸ್ಥಬ್ದಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.

ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ ಬಳಕೆ ಹಾಗೂ ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದ ಪ್ರಾದೇಶಿಕ ಸಾರಿಗೆ ಇಲಾಖೆ ಸ್ಥಬ್ದಚಿತ್ರ ಮೂರನೇ ಬಹುಮಾನಕ್ಕೆ ಭಾಜನವಾಯಿತು.
ತೋಟಗಾರಿಕೆ ಇಲಾಖೆ ಸ್ಥಬ್ದಚಿತ್ರ ದ್ವಿತೀಯ ಸ್ಥಾನ ಪಡೆದರೆ, ದುರ್ಬಲ ವರ್ಗದವರ ಏಳಿಗಾಗಿ ಸರ್ಕಾರ ರೂಪಿಸಿರುವ ಹಲವಾರು ಯೋಜನೆಗಳ ಮಹತ್ವ ಸಾರಿದ ಸಮಾಜ ಕಲ್ಯಾಣ ಸ್ಥಬ್ದಚಿತ್ರ ಪ್ರಥಮ ಪ್ರಶಸ್ತಿಗೆ ಭಾಜನವಾಯಿತು. ಕೆ.ಎಸ್.ಆರ್.ಟಿ ಸ್ತಬ್ದಚಿತ್ರ ಶಕ್ತಿ ಯೋಜನೆ ವಿಶ್ವ ದಾಖಲೆಯನ್ನು ಸ್ಮರಿಸಿತು. 2023 ಜೂನ್ 11 ರಂದು ಚಾಲನೆ ನೀಡಲಾದ ಶಕ್ತಿ ಯೋಜನೆಯಡಿ 2025 ಜೂನ್ 11 ವರೆಗೆ 504 ಕೋಟಿ 90 ಲಕ್ಷ ಬಾರಿ ಮಹಿಳೆಯರು ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಗಣಿಬಾಧಿತ ತಾಲೂಕುಗಳ ವ್ಯಾಪ್ತಿಯಲ್ಲಿ ಕೆ.ಎಂ.ಇ.ಆರ್.ಸಿ ಹಾಗೂ ಸಿಇಪಿಎಂಐಝಡ್ ಅನುದಾನ ಅಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ವಿತರಿಸುವ ವಿನೂತನ ಕಾರ್ಯಕ್ರಮದ ಕುರಿತು ಶಿಕ್ಷಣ ಇಲಾಖೆ ಸ್ಥಬ್ದಚಿತ್ರ ಮಾಹಿತಿ ನೀಡಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕೈಗಾರಿಕೆ ತರಬೇತಿ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪ್ರವಾಸೋದ್ಯಮ ಇಲಾಖೆಗಳ ಸ್ಥಬ್ದಚಿತ್ರಗಳು ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸಿದವು. ಮೆರವಣಿಗೆಯಲ್ಲಿ ಕಹಳೆ,ವೀರಗಾಸೆ, ತಮಟೆ ವಾದ್ಯ ವೃಂದ,ಡೋಲು,ಲಂಬಾಣಿ ನೃತ್ಯ ಕಲಾತಂಡ, ಸೇವಾದಳ, ವಿವಿಧ ಶಾಲಾ ಮಕ್ಕಳು ಇತರೆ ಸಾಂಸ್ಕøತಿಕ ಕಲಾ ತಂಡಗಳು ಪಾಲ್ಗೊಂಡಿದ್ದವು.

ಈ ಸುದ್ದಿ ಓದಿದ್ದೀರಾ? ಭಾರೀ ಮಳೆ | ನೆಲಕಚ್ಚಿದ ಮೆಕ್ಕೆಜೋಳದ ಇಳುವರಿ ಕುಸಿತ: ನಷ್ಟದಲ್ಲಿರುವ ರೈತರನ್ನು ಮೇಲೆತ್ತುವವರು ಯಾರು?
ಸ್ಥಬ್ದಚಿತ್ರ ಮತ್ತು ಭುವನೇಶ್ವರಿಯ ಮೆರವಣಿಗೆ ಗಾಂಧಿ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ರಾಣಿ ( ಎಸ್.ಬಿ.ಐ) ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಪೊಲೀಸ್ ಕವಾಯತು ಮೈದಾನ ತಲುಪಿತು. ಈ ವೇಳೆ ಜಿ.ಪಂ. ಸಿಇಓ ಡಾ.ಆಕಾಶ್, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ನಗರ ಸಭೆ ಆಯುಕ್ತೆ ಲಕ್ಷ್ಮೀ, ತಹಶೀಲ್ದಾರ್ ಗೋವಿಂದ ರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೆ ಸಿಂಘೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.





