ಕೊಂದವರು ಯಾರು ಆಂದೋಲನದ ನಿಯೋಗದಿಂದ ಮುಖ್ಯಮಂತ್ರಿಗಳ ಭೇಟಿ, ಹಕ್ಕೊತ್ತಾಯ ಪತ್ರ ಸಲ್ಲಿಕೆ

Date:

ರಾಜ್ಯದ ವಿವಿಧ ಮಹಿಳಾ ಸಂಘಟನೆಗಳು, ಹೋರಾಟಗಾರ್ತಿಯರು ಹಾಗೂ ಹೆಸರಾಂತ ಲೇಖಕಿಯರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಗಟ್ಟುವ ಕುರಿತು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿರುವ ಅತ್ಯಾಚಾರ ಮತ್ತು ಕೊಲೆಗಳ ಪ್ರಕರಣಗಳಲ್ಲಿ ನ್ಯಾಯ ಒದಗಿಸುವ ಬಗ್ಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿತು.

ಈ ನಿಯೋಗವು ಕಳೆದ ಮೂರು-ನಾಲ್ಕು ದಶಕಗಳಿಂದ ಮಹಿಳೆಯರ ಹಕ್ಕುಗಳು ಮತ್ತು ಘನತೆಗಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳು ಹಾಗೂ ವ್ಯಕ್ತಿಗಳನ್ನು ಪ್ರತಿನಿಧಿಸುತ್ತಿದ್ದು, ಆಗಸ್ಟ್ ತಿಂಗಳಲ್ಲಿ ಆರಂಭವಾದ ‘ಕೊಂದವರು ಯಾರು?’ ಎಂಬ ಆಂದೋಲನದ ಭಾಗವಾಗಿದೆ. ಸರ್ಕಾರದ ಉಗ್ರಪ್ಪ ಸಮಿತಿ ವರದಿಯ ಅನುಷ್ಠಾನವನ್ನು ಇನ್ನಷ್ಟು ಚುರುಕುಗೊಳಿಸುವಂತೆ ಕೋರಿದ ಈ ನಿಯೋಗ, ಮಹಿಳೆಯರ ಹಿಂಸೆಯ ವಿರುದ್ಧ ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದೆ.

ಹಕ್ಕೊತ್ತಾಯ ಪತ್ರದಲ್ಲಿ ಸರ್ಕಾರದ ಹಿಂದಿನ ಅವಧಿಯಲ್ಲಿ ಉಗ್ರಪ್ಪ ಸಮಿತಿಯನ್ನು ರೂಪಿಸಿ ಮಹಿಳಾ ಪರ ಚಿಂತಕರು, ಹೋರಾಟಗಾರರು ಮತ್ತು ತಜ್ಞರನ್ನು ಒಳಗೊಂಡು ಸಮಗ್ರ ವರದಿ ತಯಾರಿಸಿದ್ದನ್ನು ಗುರುತಿಸಲಾಗಿದ್ದು, ಈ ವರದಿಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸುವ ಸರ್ಕಾರದ ದೂರದೃಷ್ಟಿಯನ್ನು ಶ್ಲಾಘಿಸಲಾಗಿದೆ. ಜೊತೆಗೆ ಧರ್ಮಸ್ಥಳದಲ್ಲಿ ನಡೆದಿರುವ ದೌರ್ಜನ್ಯಗಳ ಕುರಿತು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದ ಸರ್ಕಾರದ ನಡೆಯನ್ನು ಸ್ವಾಗತಿಸಲಾಗಿದ್ದು, ಇದು ರಾಜ್ಯಾದ್ಯಂತ ಮಹಿಳೆಯರು ಮತ್ತು ಯುವತಿಯರಲ್ಲಿ ಸರ್ಕಾರದ ಬಗ್ಗೆ ಅಭಿಮಾನ ಮೂಡಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಈ ತನಿಖೆಯು ತಾರ್ಕಿಕ ಅಂತ್ಯಕ್ಕೆ ತಲುಪಿ ಸಂತ್ರಸ್ತರಿಗೆ ನ್ಯಾಯ ಒದಗಿಸುತ್ತದೆ ಎಂಬ ಭರವಸೆಯನ್ನು ನಿಯೋಗ ವ್ಯಕ್ತಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪತ್ರದಲ್ಲಿ ಹಲವು ನಿರ್ದಿಷ್ಟ ಬೇಡಿಕೆಗಳನ್ನು ಮುಂದಿಟ್ಟಿದ್ದು, ಎಸ್‌ಐಟಿಯ ಸ್ವಾತಂತ್ರ್ಯವನ್ನು ರಕ್ಷಿಸಿ ಹೊರಗಿನ ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಕೋರಲಾಗಿದೆ. ಕಳೆದ ದಶಕದಲ್ಲಿ ವರದಿಯಾಗಿರುವ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು, ವಿಶೇಷವಾಗಿ ಸೌಜನ್ಯ, ಪದ್ಮಲತಾ ಮತ್ತು ಯಮುನ /ನಾರಾಯಣ ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಗಿದೆ. ಇದರ ಜೊತೆಗೆ ಅನುಮಾನಾಸ್ಪದ ಸಾವುಗಳು ಹಾಗೂ ಸಾಕ್ಷಿಗಳ ಮರಣ ಪ್ರಕರಣಗಳನ್ನು ತನಿಖೆ ಮಾಡಬೇಕು ಎಂದು ಹೇಳಲಾಗಿದೆ. ಕರ್ನಾಟಕ ಹೈಕೋರ್ಟ್‌ನ ಸೆಪ್ಟೆಂಬರ್ 13, 2024ರ ತೀರ್ಪಿನಂತೆ ಸೌಜನ್ಯ ಪ್ರಕರಣದಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಉಳಿವಿಗಾಗಿ ಉಡಾಳನ ವಿರುದ್ಧ ಎದ್ದುನಿಂತ ಅಮೆರಿಕ

ಲಿಂಗತ್ವ ನ್ಯಾಯ ಮತ್ತು ಹೊಣೆಗಾರಿಕೆ ಖಾತ್ರಿಪಡಿಸುವ ಸ್ವತಂತ್ರ ಬೆಂಬಲ ಗುಂಪನ್ನು ಸ್ಥಾಪಿಸುವಂತೆ, ಸಾಕ್ಷಿಗಳು ಮತ್ತು ದೂರುದಾರರಿಗೆ ರಕ್ಷಣೆ ಒದಗಿಸುವಂತೆ ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವಂತೆ ಬೇಡಿಕೆ ಇರಿಸಲಾಗಿದೆ. ಜಾತಿ, ವರ್ಗ, ಧರ್ಮ ಅಥವಾ ರಾಜಕೀಯ ಪ್ರಾಬಲ್ಯ ಬಳಸಿ ಸತ್ಯವನ್ನು ಹತ್ತಿಕ್ಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ. ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು, ಮಹಿಳಾ ಸಹಾಯ ಡೆಸ್ಕ್‌ಗಳಂತಹ ಭದ್ರತಾ ಕ್ರಮಗಳನ್ನು ಜಾರಿಗೊಳಿಸಬೇಕು ಹಾಗೂ ಹಿಂಸೆಯ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಹೇಳಲಾಗಿದೆ. ಎಲ್ಲ ಧರ್ಮಗಳ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿ ಸ್ವತಂತ್ರ ಸಮಿತಿ ಸ್ಥಾಪಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ದೀರ್ಘಾವಧಿ ಕ್ರಮಗಳಾಗಿ ಉಗ್ರಪ್ಪ ಸಮಿತಿ ಮತ್ತು ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಗಳನ್ನು ಮರುಪರಿಶೀಲಿಸಿ ನಿಗದಿತ ಅವಧಿಯಲ್ಲಿ ಜಾರಿಗೊಳಿಸಬೇಕು ಹಾಗೂ ಆರೋಗ್ಯಕರ ಲೈಂಗಿಕ ಶಿಕ್ಷಣವನ್ನು ಅಳವಡಿಸಬೇಕು ಎಂದು ಹಕ್ಕೊತ್ತಾಯ ಪತ್ರದಲ್ಲಿ ತಿಳಿಸಲಾಗಿದೆ. ಈ ಭೇಟಿಯು ಮಹಿಳೆಯರ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಆಂದೋಲನಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ನಿಯೋಗದ ಸದಸ್ಯರು ಹೇಳಿದ್ದಾರೆ.

ಈ ನಿಯೋಗದಲ್ಲಿ ಭಾಗವಹಿಸಿದವರು ಹಾಗೂ ಸಹಿ ಹಾಕಿದರು: ವಿಜಯಮ್ಮ (ಹಿರಿಯ ಪತ್ರಕರ್ತೆ ಮತ್ತು ಚಲನಚಿತ್ರ ವಿಮರ್ಶಕಿ), ಅರುಂಧತಿ ನಾಗ್ (ಸತ್ಯಕ್ಕಾಗಿ ಶ್ರಮಿಸಲು ಸಿದ್ಧವಾಗಿರುವ ರಂಗಭೂಮಿ ಕಾರ್ಯಕರ್ತೆ), ಡಾ. ಸಬಿತಾ ಬನ್ನಾಡಿ (ಲೇಖಕಿ ಮತ್ತು ಅಂಕಣಕಾರ್ತಿ), ಪದ್ಮಾವತಿ ರಾವ್ (ರಂಗಭೂಮಿ ಮತ್ತು ಚಲನಚಿತ್ರ ತಜ್ಞೆ), ಕವಿತಾ ಲಂಕೇಶ್ (ಚಲನಚಿತ್ರ ನಿರ್ಮಾಪಕಿ), ಡಿ. ಸುಮನ್ ಕಿತ್ತೂರು (ಪತ್ರಕರ್ತೆ, ಚಲನಚಿತ್ರ ನಿರ್ದೇಶಕಿ), ಅಕ್ಕೈ ಪದ್ಮಶಾಲಿ (ಲಿಂಗತ್ವ ಮತ್ತು ಲೈಂಗಿಕ ಹಕ್ಕುಗಳ ಕಾರ್ಯಕರ್ತೆ), ಪ್ರೊ. ಎ.ಆರ್. ವಾಸವಿ (ಸ್ವತಂತ್ರ ವಿದ್ವಾಂಸೆ), ಪ್ರೊ. ಜಾನಕಿ ನಾಯರ್ (ನಿವೃತ್ತ ಇತಿಹಾಸ ಪ್ರಾಧ್ಯಾಪಕಿ, ಜೆಎನ್‌ಯು), ಸಿ.ಜಿ. ಮಂಜುಳಾ (ಹಿರಿಯ ಪತ್ರಕರ್ತೆ), ಡಾ. ವಸುಂಧರಾ ಭೂಪತಿ (ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ), ಡಾ. ಸಬಿಹಾ ಭೂಮಿಗೌಡ (ನಿವೃತ್ತ ಉಪಕುಲಪತಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ), ಡಾ. ಆರ್. ಸುನಂದಮ್ಮ (ನಿವೃತ್ತ ರಿಜಿಸ್ಟ್ರಾರ್, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ), ಡಾ. ಎಚ್.ಎಸ್. ಅನುಪಮಾ (ಖ್ಯಾತ ವೈದ್ಯೆ, ಬರಹಗಾರ್ತಿ ಮತ್ತು ಪ್ರಕಾಶಕಿ), ಇಶ್ರತ್ ನಿಸ್ಸಾರ್ (ಶಿಕ್ಷಣ ತಜ್ಞೆ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತೆ), ಅನಸೂಯಮ್ಮ ಅರಳಾಳುಸಂದ್ರ (ಹಿರಿಯ ರೈತ ನಾಯಕಿ), ನಂದಿನಿ ಜಯರಾಮ್ (ಹಿರಿಯ ರೈತ ನಾಯಕಿ), ಚುಕ್ಕಿ ನಂಜುಂಡಸ್ವಾಮಿ (ರಾಜ್ಯ ಸಂಚಾಲಕಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ – ಸಾಮೂಹಿಕ ನಾಯಕತ್ವ), ಬಿ. ಟಿ. ಜಾಹ್ನವಿ (ಖ್ಯಾತ ಲೇಖಕಿ), ರೂಪಾ ಹಾಸನ್ (ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ), ಡಾ. ರತಿ ರಾವ್ (ನಿವೃತ್ತ ವಿಜ್ಞಾನಿ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ),

ರೂಪಾ ರಾವ್ (ಕಾಳಜಿಯುಳ್ಳ ನಾಗರಿಕರು), ಮಾಯಾ ರಾವ್ (ರಂಗಭೂಮಿ ಕಲಾವಿದೆ), ಡಾ. ದು. ಸರಸ್ವತಿ (ಲೇಖಕಿ, ಕವಿ, ರಂಗಭೂಮಿ ಕಲಾವಿದೆ), ಕವಿತಾ ಕುರುಗಂಟಿ (ಸಾಮಾಜಿಕ ಕಾರ್ಯಕರ್ತೆ), ದೀಪಾ ಧನ್ರಾಜ್ (ಸಾಕ್ಷ್ಯಚಿತ್ರ ನಿರ್ಮಾಪಕಿ), ಜ್ಯೋತಿ ಅನಂತಸುಬ್ಬರಾವ್ (ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವುಮೆನ್ – NFIW), ಕೆ.ಎಸ್. ವಿಮಲ (ಜನವಾದಿ ಮಹಿಳಾ ಸಂಘಟನೆ), ಗೌರಮ್ಮ (ಜನವಾದಿ ಮಹಿಳಾ ಸಂಘಟನೆ), ಮಲ್ಲಿಗೆ ಸಿರಿಮನೆ (ಮಹಿಳಾ ಮುನ್ನಡೆ), ಗೌರಿ (ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ), ಗೀತಾ ಮೆನನ್ (ಸ್ತ್ರೀ ಜಾಗೃತಿ ಸಮಿತಿ; ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ), ಎಂ. ಗೀತಾ (ಬೀದಿ ಆಧಾರಿತ ಲೈಂಗಿಕ ಕಾರ್ಯಕರ್ತರ ಹಕ್ಕುಗಳಿಗಾಗಿ ಕೆಲಸ ಮಾಡುವ ಸಾಧನಾ ಮಹಿಳಾ ಸಂಘ), ಪ್ರಜ್ವಲ್ ಶಾಸ್ತ್ರಿ (ಭೌತಶಾಸ್ತ್ರಜ್ಞೆ ಮತ್ತು ವಿಚಾರವಾದಿ), ಆಶಾ ರಮೇಶ್ (ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ), ಗಾಯತ್ರಿ.ವಿ (ಕೃಷಿ ತಜ್ಞೆ), ಮಮತಾ ಯಜಮಾನ್ (ಸಾಮಾಜಿಕ ಕಾರ್ಯಕರ್ತೆ), ಪೂರ್ಣಾ ರವಿಶಂಕರ್ (ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತೆ), ಆರ್. ಇಂದಿರಮ್ಮ (ನಿವೃತ್ತ ಪ್ರಾಂಶುಪಾಲರು, ಚಿಕ್ಕನಾಯಕನಹಳ್ಳಿ), ಜಬೀನಾ ಖಾನಂ (ಬೀಡಿ ಕಾರ್ಮಿಕರ ಸಂಘಟನೆ, ದಾವಣಗೆರೆ), ಪದ್ಮಾ ಪಾಟೀಲ್ (NFIW, ಕಲಬುರ್ಗಿ), ಮಲ್ಲಮ್ಮ ಯಳವಾರ್ (ಸಬಲ, ಬಿಜಾಪುರ), ನೀಲಮ್ಮ (ಸಿಂಧಗಿ, ಬಿಜಾಪುರ), ವಿನುತಾ (ನಾವೆದ್ದು ನಿಲ್ಲದಿದ್ದರೆ – ಕರ್ನಾಟಕ), ಆಯೇಷಾ (ನಾವೆದ್ದು ನಿಲ್ಲದಿದ್ದರೆ – ಕರ್ನಾಟಕ), ಪ್ರತಿಮಾ ರೋಹಿಣಿ ರಾಜಶೇಖರನ್ (ಬರಹಗಾರ್ತಿ, ಬಹುಶಿಸ್ತೀಯ ಕಲಾವಿದೆ), ಸಿಂಥಿಯಾ ಸ್ಟೀಫನ್ (ಸ್ವತಂತ್ರ ಪತ್ರಕರ್ತೆ ಮತ್ತು ಸಾಮಾಜಿಕ ನೀತಿ ಸಂಶೋಧಕಿ), ಕರ್ನಾಟಕ ರಾಜ್ಯ ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ, ಗಮನ ಮಹಿಳಾ ಕಲೆಕ್ಟಿವ್, ನಾವೆದ್ದು ನಿಲ್ಲದಿದ್ದರೆ (ಕರ್ನಾಟಕ), ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...