ರಾಷ್ಟ್ರೀಕೃತ, ಸಹಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಇರುವಂತಹ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಹಾಗೂ ಬಡ್ಡಿರಹಿತ ಸಾಲ ವಿತರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆಯನ್ನು ನಡೆಸಿತು.
ಇಂದು ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ರೈತ ಸಂಘ (ಡಾ.ವಾಸುದೇವ ಮೇಟಿ ಬಣ) ದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮಧ್ಯಹ್ನದವರೆಗೂ ರಾಜ್ಯ ಸರ್ಕಾರದ ಕಡೆಯಿಂದ ಯಾರೂ ಧರಣಿ ಸ್ಥಳಕ್ಕೆ ಬರದೆ ಇದ್ದಾಗ, ಪ್ರತಿಭಟನಕಾರರು ಆಕ್ರೋಶದಿಂದ ವಿಧಾನಸೌಧ ಮುತ್ತಿಗೆಗೆ ಪ್ರಯತ್ನಿಸಿದರು.
ʼಕೇಂದ್ರ ಸರಕಾರವು ಮೂರು ಕೃಷಿ ಕಾಯ್ದೆಗಳನ್ನು ಈಗಾಗಲೇ ಹಿಂಪಡೆದ್ದು, ರಾಜ್ಯ ಸರಕಾರ ವತಿಯಿಂದ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆದು ಆದೇಶ ಹೊರಡಿಸಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಯಾಗಬೇಕು ಹಾಗೂ ರಾಜ್ಯ ಸರಕಾರ ಜಾನುವಾರು ಹತ್ಯೆ ಕಾಯ್ದೆ ಹಿಂಪಡೆಯಬೇಕು. ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ಕಾನೂನಾತ್ಮಕವಾಗಿ ಜಾರಿಗೆ ತರಬೇಕು ಮತ್ತು ಹಾಗೂ ರೈತರಿಗೆ ಸಿಬಿಲ್ ಸ್ಕೋರ್‌ಗಳನ್ನು ತೆಗೆದು, ಮುಕ್ತವಾಗಿ ಬ್ಯಾಂಕ್‌ನಲ್ಲಿ ಸಾಲ ಸಿಗುವಂತೆ ಮಾಡಬೇಕುʼ ಎಂದು ಹೋರಾಟಗಾರರು ಒತ್ತಾಯಿಸಿದರು.

ʼರಾಜ್ಯಾದ್ಯಂತ ಬಗರ ಹುಕುಂ ಸ್ಥಳೀಯ ಸಾಗುವಳಿದಾರರು ಉಳುಮೆ ಮಾಡುತ್ತಿರುವ ರೈತರಿಗೆ ಹಾಗೂ ಇನ್ನಿತರೆ ನಿಯಮಗಳನ್ನು ಸರಿಪಡಿಸಿ ರೈತರಿಗೆ ಪಟ್ಟಾ ನೀಡಬೇಕು. ಸರಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡಬೇಕು. ತುಂಗಭದ್ರ ನದಿಯಲ್ಲಿ ಹಲವಾರು ವರ್ಷಗಳಿಂದ ಹೂಳು ತುಂಬಿದ್ದು, ನವಲಿ ಹತ್ತಿರ ಹೊಸದಾಗಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಅನುದಾನ ಮೀಸಲಿಡಬೇಕುʼ ಎಂದು ರೈತ ಮುಖಂಡರು ಆಗ್ರಹಿಸಿದರು.
ಧರಣಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ, ಪದಾಧಿಕಾರಿಗಳಾದ ಈಶ್ವರ್, ಮಾಧವಿ ಪಾಟೀಲ್, ಮಧುರಾ ಸೇರಿದಂತೆ ಹಲವರು ಭಾಗವಹಿಸಿದ್ದರು.





