ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧವನ್ನು ವಿಧಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿದೆ.
ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಆದೇಶವನ್ನು ಪ್ರಶ್ನಿಸಿ ಡಿಜಿಟಲ್ ಮಾಧ್ಯಮ ಸಂಸ್ಥೆ ಕುಡ್ಲ ರ‍್ಯಾಂಪೇಜ್ ಪ್ರಧಾನ ಸಂಪಾದಕ ಅಜಯ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ, “ನಿರ್ಲಜ್ಜವಾಗಿ ಎಲ್ಲರನ್ನು ನಿರ್ಬಂಧಿಸುವ ಇದೆಂಥಾ ಆದೇಶ” ಎಂದು ಹರ್ಷೇಂದ್ರ ಕುಮಾರ್ ಪರ ವಕೀಲರನ್ನು ಪ್ರಶ್ನಿಸಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ದೂರುದಾರನ ಮಾಹಿತಿ ಬಹಿರಂಗಪಡಿಸಿದವರ ವಿರುದ್ಧ ಪ್ರತ್ಯೇಕ ತನಿಖೆ: ಎಸ್‌ಪಿ
ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ಎ ವೇಲನ್, “ಎಫ್‌ಐಆರ್‌ನಲ್ಲಿನ ಅಂಶಗಳ ಬಗ್ಗೆ ಮಾತನಾಡದಂತೆ 390 ಮಾಧ್ಯಮಗಳನ್ನು ನಿರ್ಬಂಧಿಸಲಾಗಿದೆ. 9,000 ಯುಆರ್‌ಎಲ್‌ಗಳನ್ನು ಡಿಲೀಟ್ ಮಾಡಬೇಕು ಎಂದು ವಿಚಾರಣಾಧೀನ ನ್ಯಾಯಾಲಯ ಮೂರು ಗಂಟೆಗಳಲ್ಲಿ ಆದೇಶಿಸಿದೆ. ಇದರಿಂದಾಗಿ ಅರ್ಜಿದಾರರ ಮೂಲಭೂತ ಹಕ್ಕಿಗೆ ಹಾನಿಯಾಗಿದೆ. ಈ ನ್ಯಾಯಾಲಯಕ್ಕೆ ವ್ಯಾಪ್ತಿ ಇದೆ ಎಂಬುದಕ್ಕೆ ಸುಪ್ರೀಂ ಕೋರ್ಟ್ ತೀರ್ಪಿದ್ದು, ಅದನ್ನು ಸಾಬೀತುಪಡಿಸಲಾಗುವುದು” ಎಂದರು.
“ಮಾಧ್ಯಮಗಳನ್ನು ನಿರ್ಬಂಧಿಸಿರುವ ಆದೇಶ ಪ್ರಶ್ನಿಸಲಾಗಿದೆ ಎಂಬುದು ತಿಳಿದಿದೆ. ವಿಚಾರಣಾಧೀನ ನ್ಯಾಯಾಲಯ ಪರಿಗಣಿಸದಿದ್ದರೆ ನೀವು ಇಲ್ಲಿ ಬರಬಹುದಿತ್ತು. ಆದರೆ ಇದು ಈ ನ್ಯಾಯಾಲಯದ ವ್ಯಾಪ್ತಿಯಲ್ಲ. ನಿಮ್ಮ ವಾದ ಆಲಿಸಲಾಗುವುದು. ಆದರೆ ಮೊದಲು ಈ ಪ್ರಕರಣ ಈ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಸಾಬೀತುಪಡಿಸಬೇಕು” ಎಂದು ಪೀಠ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, “ಈ ನ್ಯಾಯಾಲಯಕ್ಕೆ ವಿಚಾರಣಾ ವ್ಯಾಪ್ತಿ ಇದೆ ಎಂಬುದನ್ನು ಮನನ ಮಾಡಿಕೊಡಲಾಗುವುದು” ಎಂದು ತಿಳಿಸಿದ್ದಾರೆ.
ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿತು.





