ಕಣ್ಮರೆಯಾದ ಎಣ್ಣೆಕಾಳು ಬೆಳೆ: ಹವಾಮಾನ ವೈಪರೀತ್ಯ, ಸ್ಪಂದಿಸದ ಸರ್ಕಾರವೇ ಕಾರಣ

Date:

ಮಳೆ ಕಡಿಮೆಯಾದರೆ ಉತ್ತಮ ಇಳುವರಿ ಕೊಡುವ ಸೂರ್ಯಕಾಂತಿ, ಶೇಂಗಾ ಮತ್ತು ಕುಸುಬೆ(ಎಣ್ಣೆಕಾಳು ಬೆಳೆಗಳು) ಬೆಳೆಯಲು ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಈ ಬೆಳೆಗಳ ಬಿತ್ತನೆ ಪ್ರದೇಶ ಕರಗುತ್ತ ಸಾಗಿದೆ.

ಹೌದು, 1970-80ರ ದಶಕದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ 20,000 ಹೆಕ್ಟೇರ್‌ ಪ್ರದೇಶದಲ್ಲಿ ಸೂರ್ಯಕಾಂತಿ, ಕುಸುಬೆ, ಶೇಂಗಾ ಬೆಳೆಯಲಾಗುತ್ತಿತ್ತು. ಸದ್ಯ ಈ ಮೂರು ಬೆಳೆಗಳನ್ನು ರೈತರು ಬೆಳೆಯುತ್ತಿಲ್ಲ. ಕೆಲ ರೈತರು ಅಂತರ ಬೆಳೆಯಾಗಿ ಸೂರ್ಯಕಾಂತಿ, ಕುಸುಬೆ, ಎಳ್ಳು, ಸಾಸಿವೆ, ಶೇಂಗಾ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಈಗ ಈ ಬೆಳೆಗಳಿಂದ ಅಂತರ ಕಾದುಕೊಳ್ಳುತ್ತಿದ್ದಾರೆ.

1970-80ರ ದಶಕದಲ್ಲಿ ಅಂದಾಜು 20,000 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, 90ರ ದಶಕದಲ್ಲಿ ಅಂದಾಜು 20,000 ಹೆಕ್ಟೇರ್ ಪ್ರದೇಶದಲ್ಲಿ ಕುಸುಬೆ ಬೆಳೆಯಲಾಗುತ್ತಿತ್ತು. ಆಗ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳು ಬೆಳೆಗಳಿಗೆ ರೈತರು ಆದ್ಯತೆ ನೀಡುತ್ತಿದ್ದರು. ತಾಲೂಕಿನಲ್ಲಿ ಸದ್ಯ 200 ಹೆಕ್ಟೇರ್‌ ಪ್ರದೇಶದಲ್ಲಿ ಸೂರ್ಯಕಾಂತಿ, 300 ಹೆಕ್ಟೇರ್‌ ಕುಸುಬೆ ಮತ್ತು 1000 ಹೆಕ್ಟೇರ್‌ ಪ್ರದೇಶದಲ್ಲಿ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತಿದೆ. ಆದರೂ ಎಣ್ಣೆಕಾಳು ಕೃಷಿಗೆ ರೈತರು ಸಂಪೂರ್ಣ ನಿರಾಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಶೇಂಗಾ
ಇಂಡಿ ತಾಲೂಕಿನಲ್ಲಿ ಕಂಡುಬಂದ ಶೇಂಗಾ ಬೆಳೆ

ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರೈತರು ಎಣ್ಣೆಕಾಳು ಬಿತ್ತನೆ ಮಾಡುವುದರಿಂದ ಹಿಂದೆ ಸರಿಯುವಂತಾಗಿದೆ. ಮೊದಲೆಲ್ಲ ಏಪ್ರಿಲ್, ಮೇ ತಿಂಗಳಲ್ಲಿ ಮುಂಗಾರು ಮಳೆ ಆರಂಭವಾಗುತ್ತಿತ್ತು. ಜೂನ್ ವೇಳೆಗೆ ರೈತರು ಎಣ್ಣೆಕಾಳು ಬೆಳೆಗಳನ್ನು ಬಿತ್ತನೆ ಮಾಡಿ ನವೆಂಬರ್ ಹೊತ್ತಿಗೆ ಕಟಾವು ಮಾಡಿಕೊಳ್ಳುತ್ತಿದ್ದರು. ಆದರೀಗ ಮಳೆ ಯಾವಾಗ ಬರುತ್ತದೆಯೋ, ಹೋಗುತ್ತದೆಯೋ ಎನ್ನುವುದು ಗೊತ್ತಾಗುತ್ತಿಲ್ಲ. ಹೀಗಾಗಿ ಇಂತಹ ಬೆಳೆಗಳನ್ನು ಬಿತ್ತನೆ ಮಾಡಿದಾಗ ಮಧ್ಯ ಎರಡು ತಿಂಗಳ ಮಳೆ ಬಂದರೆ ಬೆಳೆ ಎಲ್ಲವೂ ಹಾನಿಯಾಗುತ್ತದೆ. ಇದರಿಂದ ಬೆಳೆ ನಷ್ಟವಾಗುವುದರಿಂದ ರೈತರು ಎಣ್ಣೆಕಾಳು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ.

ಶೇಂಗಾ ಬೆಳೆ ಉತ್ಪಾದನೆಯ ಕುಸಿತ, ದಲ್ಲಾಳಿಗಳ ಹಾವಳಿ, ಕಲಬೆರಕೆ, ಹವಾಮಾನ ವೈಪರೀತ್ಯ, ಸರ್ಕಾರದ ನೀತಿ ಹಾಗೂ ಕೃಷಿ ವಲಯದ ಸಮಸ್ಯೆಗಳು ಎಣ್ಣೆ ಮಿಲ್‌ಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದವು. ಇದೇ ರೀತಿಯ ಎಲ್ಲ ಸಂಕಷ್ಟಗಳಿಗೆ ಪರಿಹಾರ ರೂಪಿಸದ ಸರ್ಕಾರ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಅವಕಾಶ ಕಳೆದುಕೊಂಡಿತು.

ದಶಕಗಳ ಹಿಂದೆ ಬಯಲುಸೀಮೆ ಪ್ರದೇಶದಲ್ಲಿ ಶೇಂಗಾ, ಕುಸುಬೆಯಂತಹ ಎಣ್ಣೆಕಾಳು ಬೆಳೆಗಳನ್ನು ವಿಪುಲವಾಗಿ ಬೆಳೆಯಲಾಗುತ್ತಿತ್ತು. ಕೃಷಿಕರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರ, ಆಮದು ಮಾಡಿಕೊಳ್ಳುವುದೇ ಸುಲಭ ಎನ್ನುವ ಧೋರಣೆ ಅನುಸರಿಸಿತು. ಇದರಿಂದ ಕೃಷಿಕರು ಎಣ್ಣೆಕಾಳುಗಳ ಬದಲು ಮೆಕ್ಕೆಜೋಳದಂತಹ ಪರ್ಯಾಯ ಬೆಳೆಗೆ ಮೊರೆ ಹೋದರು.

ಅಡುಗೆ ಎಣ್ಣೆ ಬೇಡಿಕೆಯನ್ನು ನೀಗಿಸಲು ಆಮದು ಮಾಡಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಸಿದ್ದೇ ಸರ್ಕಾರ ಎನ್ನುವುದು ತಜ್ಞರ ವಿಶ್ಲೇಷಣೆ. 2020–21ರಲ್ಲಿ ಭಾರತ ₹80 ಸಾವಿರ ಕೋಟಿ ಮೊತ್ತದ 133.52 ಲಕ್ಷ ಟನ್‌ ಅಡುಗೆ ಎಣ್ಣೆ ಆಮದು ಮಾಡಿಕೊಂಡಿತ್ತು. ಇದರಲ್ಲಿ ಶೇ 56ರಷ್ಟು ತಾಳೆಎಣ್ಣೆ, ಶೇ 27ರಷ್ಟು ಸೋಯಾ ಎಣ್ಣೆ ಮತ್ತು ಶೇ 16ರಷ್ಟು ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳಲಾಗಿತ್ತು. 2020–21ರಲ್ಲಿ ದೇಶದಲ್ಲಿ 122.89 ಲಕ್ಷ ಟನ್‌ ಅಡುಗೆ ಎಣ್ಣೆ ಉತ್ಪಾದಿಸಲಾಗಿತ್ತು.

ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಎಣ್ಣೆಕಾಳುಗಳ ಬೆಳೆ ಹೆಚ್ಚಿಸಲು 1980ರಲ್ಲಿ ಕೇಂದ್ರ ಸರ್ಕಾರ ‘ಎಣ್ಣೆಕಾಳು ಮತ್ತು ಬೇಳೆಕಾಳುಗಳ ತಂತ್ರಜ್ಞಾನ ಮಿಷನ್‌’ಗೆ (ಟಿಎಂಒಪಿ) ಚಾಲನೆ ನೀಡಿತ್ತು. ರಾಜ್ಯವೂ ಈ ಯೋಜನೆಗೆ 1984ರಿಂದ ಚಾಲನೆ ನೀಡಿತ್ತು. ಇಂತಹ ಯೋಜನೆಗಳ ಪರಿಣಾಮ 1980-90ರ ಅವಧಿಯಲ್ಲಿ ಎಣ್ಣೆ ಕ್ರಾಂತಿ ಸಾಧಿಸಿ ದೇಶ ಸ್ವಾವಲಂಬಿಯಾಗಿತ್ತು.

ಸೂರ್ಯಕಾಂತಿ ಮತ್ತು ಸೋಯಾಬೀನ್‌ ಬೆಳೆಯನ್ನು ಹೆಚ್ಚು ಬೆಳೆಯಲು ಸರ್ಕಾರ ಪ್ರೋತ್ಸಾಹಿಸಿತ್ತು. ಬೇಡಿಕೆಗೆ ತಕ್ಕಂತೆ ಶೇ.30ರಷ್ಟು ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆಗ ಆಮದು ಸುಂಕ ಶೇ.60ರಷ್ಟಿತ್ತು. ಆಮದು ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ, ನಂತರದ ಸರ್ಕಾರಗಳು ಆಮದು ಸುಂಕವನ್ನು ಶೇ.16ಕ್ಕೆ ಇಳಿಸಿದವು. ವರ್ತಕರ ಪರವಿದ್ದ ಧೋರಣೆಗಳೂ ಕೂಡ ಇದಕ್ಕೆ ಕಾರಣವಾಗಿದ್ದವು. ಇದರಿಂದ, ತಾಳೆ ಎಣ್ಣೆ ಅಗ್ಗವಾಯಿತು. ಶೇಂಗಾ ಎಣ್ಣೆ ದುಬಾರಿಯಾಯಿತು.

ಇದರಿಂದಾಗಿ ರಾಜ್ಯದಲ್ಲಿ ಶೇಂಗಾ ಮತ್ತು ಸೂರ್ಯಕಾಂತಿ ಬೆಳೆಯುವ ಪ್ರದೇಶವೂ ಕ್ರಮೇಣ ಕಡಿಮೆಯಾಗುತ್ತಿದೆ. ಕಳೆದ 15 ವರ್ಷಗಳಲ್ಲಿ ಶೇಂಗಾ ಬೆಳೆಯುವ ಪ್ರದೇಶ ಶೇ.4ರಷ್ಟು ಕಡಿಮೆಯಾಗಿದೆ. ಹತ್ರಿಂದ ಹದಿನೈದು ವರ್ಷಗಳ ಹಿಂದೆ 8.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತಿತ್ತು. 2020–21ರಲ್ಲಿ 7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿತ್ತು. ಹದಿಮೂರು ವರ್ಷಗಳ ಹಿಂದೆ ಸೂರ್ಯಕಾಂತಿಯನ್ನು 3.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಆದರೆ, ಈಗ 1.22 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಗಳ ಜಾಗವನ್ನು ಮೆಕ್ಕೆಜೋಳ ಆಕ್ರಮಿಸಿಕೊಳ್ಳುತ್ತಿದೆ. 2011–12ರಲ್ಲಿ 13.49 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಇದ್ದ ಮೆಕ್ಕೆಜೋಳ 2020–21ರಲ್ಲಿ 17.13 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಹೆಚ್ಚಿದೆ ಎಂದು ಕೃಷಿ ಬೆಳೆ ಆಯೋಗ ವರದಿ ಪ್ರಕಟಿಸಿತ್ತು.

2025ರ ವೇಳೆಗೆ ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆಯುವ ಪ್ರದೇಶವು ಸುಮಾರು 15.50 ಲಕ್ಷ ಹೆಕ್ಟೇರ್‌ಗಳಿಗೆ ಏರಿಕೆಯಾಗಿದೆ. ಇದು ಕಳೆದ ವರ್ಷದ(5.68 ಲಕ್ಷ ಹೆಕ್ಟೇರ್) ಬಿತ್ತನೆ ಪ್ರದೇಶಕ್ಕಿಂತ ಗಣನೀಯವಾಗಿ ಹೆಚ್ಚಾಗಿದ್ದು, ಸುಮಾರು ಶೇ.12ರಷ್ಟು ಏರಿಕೆಯಾಗಿದೆ. ಇತರ ಬೆಳೆಗಳಾದ ಭತ್ತ, ರಾಗಿ ಮತ್ತು ದ್ವಿದಳ ಧಾನ್ಯಗಳ ಬಿತ್ತನೆ ಪ್ರದೇಶ ಕಡಿಮೆಯಾಗಿರುವುದು ಮೆಕ್ಕೆಜೋಳ ಬೆಳೆಯುವ ಪ್ರದೇಶದ ಹೆಚ್ಚಳಕ್ಕೆ ಕಾರಣವಾಗಿದೆ.

ಇದನ್ನೂ ಓದಿದ್ದೀರಾ? ಬೀದರ್ | ಪ್ರತಿ ಟನ್ ಕಬ್ಬಿಗೆ ₹3,500 ಬೆಲೆಗೆ ಆಗ್ರಹಿಸಿ ರಸ್ತೆಗಿಳಿದ ರೈತರು

“ದಶಕಗಳ ಹಿಂದೆ ನವೆಂಬರ್ ಬಂತೆಂದರೆ ಸಾಕು ತಾಲೂಕಿನ ಜಮೀನುಗಳಲ್ಲಿ ಸೂರ್ಯಕಾಂತಿ ನಳ ನಳಿಸುತ್ತಿತ್ತು. ಸೂರ್ಯಕಾಂತಿ ಹೂಗಳು ಚಂದದ ಚೆಲುವು ಹೊದ್ದು ನಿಂತುಬಿಡುತ್ತಿದ್ದವು. ಹೇಗೆಂದರೆ ಹಳದಿ ಸೀರೆಯುಟ್ಟ ಭೂತಾಯಿಯನ್ನು ಕಣ್ತುಂಬಿಕೊಳ್ಳುವುದೇ ರೈತನಿಗೆ ಒಂದು ರೀತಿಯ ಖುಷಿ. ಆದರೆ ಈಗ ಇಂತಹ ಸೌಂದರ್ಯ ಕಣ್ಮರೆಯಾಗುತ್ತಿದೆ. ಅಲ್ಲದೆ, ಸೂರ್ಯಕಾಂತಿ ಬೆಳೆಯುವುದರಿಂದಲೂ ದುಂಬಿಗಳು ಸಾಕಷ್ಟೂ ಸಹಕಾರಿಯಾಗಿರುತ್ತಿದ್ದವು. ಹೂ ಬಿಟ್ಟಾಗ ದುಂಬಿ ಜೇನುಗಳು ಹೊಲದತ್ತ ಬಂದು ಪರಾಗಸ್ಪರ್ಶ ಕ್ರಿಯೆ ನಡೆಸುತ್ತವೆ. ಅದು ಇಳುವರಿಗೆ ಹೆಚ್ಚು ಅನುಕೂಲವಾಗಿರುತ್ತದೆ” ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ.

“ಮಳೆ ಅನಿಶ್ಚಿತತೆ ಮತ್ತು ತಾಲೂಕಿನಲ್ಲಿ ಕೃಷ್ಣ ಕಾಲುವೆಯಿಂದ ನೀರಾವರಿ ಸೌಲಭ್ಯ ದೊರೆತು ಕಬ್ಬು ಮತ್ತು ನಿಂಬೆ ಬೆಳೆಯುವತ್ತ ರೈತರು ಹೆಚ್ಚು ಆಸಕ್ತಿ ತೋರಿಸುತ್ತಿದ್ದು, ಎಣ್ಣೆಕಾಳು ಬೆಳೆ ಬೆಳೆಯಲು ನಿರಾಸಕ್ತಿ ತೋರುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.

ಭಾರತದಲ್ಲಿ 2025ರ ವೇಳೆಗೆ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗಿದ್ದು, ಜಾಗತಿಕ ಸರಬರಾಜು ಕೊರತೆ, ಎಲ್‌ನಿನೊ ಪರಿಣಾಮ, ಬಯೋಡೀಜೆಲ್ ಉತ್ಪಾದನೆಗೆ ವ್ಯವಹಾರ ಮತ್ತು ಚೀನಾದಂತಹ ದೇಶಗಳ ಒತ್ತಡದಿಂದ ಉಂಟಾಗಿದೆ. ತಾಳೆ ಎಣ್ಣೆಯಂತಹ ಆಮದುಗಳ ಮೇಲಿನ ಅವಲಂಬನೆ(ದೇಶದ ಖಾದ್ಯ ತೈಲ ಅಗತ್ಯದ 57%) ಇನ್ನೂ ಮುಂದುವರೆದಿರುವ ಪರಿಣಾಮ ರೈತರು ಸೋಯಾಬೀನ್, ಕಡಲೆಕಾಯಿ ಮುಂತಾದ ಎಣ್ಣೆಕಾಳುಗಳ ಬದಲಿಗೆ ಮೆಕ್ಕೆಜೋಳ ಬೆಳೆಗೆ ಪರಿವರ್ತನೆಯಾಗಿದ್ದಾರೆ. ಹಾಗಾಗಿ ಎಣ್ಣೆಕಾಳು ಬೆಳೆಗಳ ಉತ್ಪಾದನೆ ಕಡಿಮೆಯಾಗಿರುವ ಕಾರಣ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾತ್ತಿದೆ. ಅಲ್ಲದೆ ಹವಾಮಾನ ಅಥವಾ ನೀರಿನ ಕೊರತೆಗಿಂತ ಮಾರುಕಟ್ಟೆ ಬೆಲೆಗಳ(ಮೆಕ್ಕೆಜೋಳಕ್ಕೆ ಉತ್ತೇಜನೆ) ಪರಿಣಾಮ ಹೆಚ್ಚು.

WhatsApp Image 2025 02 05 at 18.09.20 1
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...