ಕಲುಷಿತವಾದ ವಾತಾವರಣದಲ್ಲಿ ಸಮಾಜದ ಉನ್ನತಿಗಾಗಿ ವಸ್ತುನಿಷ್ಠ, ಪ್ರಾಮಾಣಿಕತೆ, ದಕ್ಷತೆ ಹಾಗೂ ನಿರ್ಭಡೆಯಿಂದ ಕಂಡದ್ದು ಕಂಡ ಹಾಗೇ ಜನಪರ ಸುದ್ದಿಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಸಮಾಜದ ಪರಿವರ್ತನೆಗಾಗಿ ʼಈದಿನ.ಕಾಮ್ʼ ಮಾಧ್ಯಮ ಶ್ರಮಿಸುತ್ತಿದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಖಾತೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ ಖಂಡ್ರೆ ಅವರು ಹೇಳಿದರು.
ಭಾನುವಾರ ಬೀದರ್ ಜಿಲ್ಲೆಯ ಭಾಲ್ಕಿಯ ತಮ್ಮ ಗೃಹ ಕಚೇರಿಯಲ್ಲಿ ʼಈದಿನ.ಕಾಮ್ʼ ಮಾಧ್ಯಮದ ಬೀದರ್ ಜಿಲ್ಲೆಯ ಸಹಾಯವಾಣಿ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿ, “ಈ ಭಾಗದ ಸರ್ವತೋಮುಖ ಅಭಿವೃದ್ದಿಗಾಗಿ ಈದಿನ ಮಾಧ್ಯಮ ಹೆಚ್ಚಿನ ಶ್ರಮವಹಿಸಲಿ” ಎಂದು ಸರ್ಕಾರದ ಪರವಾಗಿ ಹಾರೈಸಿದರು.
“ಬೀದರ್ ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿ ನಾನು ಉದ್ಘಾಟಿಸಿದ್ದು ತುಂಬಾ ಸಂತಸ ನೀಡಿದೆ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಶೋಷಿತರು, ಬಡವರು, ಕಾರ್ಮಿಕರು, ರೈತರು ಅನೇಕ ಸಮಸ್ಯೆಗಳಿಂದ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದರೂ ಅದನ್ನು ಜನಸಾಮಾನ್ಯರಿಗೆ ತಲುಪಬೇಕಾದರೆ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ” ಎಂದರು.
“ರಾಜ್ಯಾದ್ಯಂತ ಜನರ ದನಿಯಾಗಿ ಸಮಾಜದ ಉನ್ನತಿಗಾಗಿ ನಿಷ್ಪಕ್ಷಪಾತ ವಿಶೇಷ ಸುದ್ದಿಗಳನ್ನು ನೀಡುವ ಮೂಲಕ ಜನರ ಹೆಮ್ಮೆಗೆ ಪಾತ್ರರಾಗಿದ್ದಾರೆ. ʼಈದಿನʼ ಸಹಾಯವಾಣಿ ಮೂಲಕ ಜಿಲ್ಲೆಯ ಗ್ರಾಮೀಣ ಭಾಗದ ಜನರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಲಿ” ಎಂದು ನುಡಿದರು.
ನೊಂದವರ ನೋವಿಗೆ ಸ್ಪಂದಿಸುವ ʼಈದಿನ.ಕಾಮ್ʼ ಮಾಧ್ಯಮ:

ಸಮಾಜದಲ್ಲಿ ಶೋಷಿತರ, ನಿರ್ಗತಿಕರ ನೋವು, ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ʼಈದಿನ.ಕಾಮ್ʼ ನ್ಯೂಸ್ ಮಾಡುತ್ತಿದೆ. ಇದೇ ನಿಜವಾದ ಜನಪರ ಮಾಧ್ಯಮದ ಸೇವಾ ಕಾರ್ಯ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು ಹಾಗೂ ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಸಭಾಂಗಣದಲ್ಲಿ ಭಾನುವಾರ ಈದಿನ.ಕಾಮ್ ಮಾಧ್ಯಮದ ಬೀದರ್ ಜಿಲ್ಲೆಯ ಸಹಾಯವಾಣಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಸಂಖ್ಯಾತ ಜನರು ಸಮಾಜದಲ್ಲಿದ್ದಾರೆ. ಅಂತವರನ್ನು ಗುರುತಿಸಿದರೆ ಮತ್ತೊಬ್ಬರಿಗೆ ಪ್ರೇರಣಾದಾಯಕವಾಗುತ್ತದೆ. ಸಂಕಷ್ಟದಲ್ಲಿರುವ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸುದ್ದಿ ಬಿತ್ತರಿಸಿದರೆ ಹೆಚ್ಚಿನ ಜನರ ಬದುಕಿಗೆ ನಿಮ್ಮ ಮಾಧ್ಯಮ ಬೆಳಕಾಗುತ್ತದೆ” ಎಂದು ಸಲಹೆ ನೀಡಿದರು.
“ಅತ್ಯುತ್ತಮ ವಿಶ್ಲೇಷಣೆಯ ಸುದ್ದಿಗಳ ಮುಖಾಂತರ ಈಗಾಗಲೇ ಜನಪ್ರಿಯ ಸಮಾಜಮುಖಿ ಮಾಧ್ಯಮ ಎನಿಸಿಕೊಳ್ಳುತ್ತಿರುವ ʼಈದಿನ.ಕಾಮ್ʼ ಮಾಧ್ಯಮ ಸಂಸ್ಥೆ ಮುಂದಿನ ದಿನಗಳಲ್ಲಿ ಹೀಗೆ ವಿಸ್ತಾರಗೊಳ್ಳಿʼ ಎಂದು ಶುಭ ಹಾರೈಸಿದರು.
ಬೀದರ್ ಜಿಲ್ಲೆಯ ಸುದ್ದಿ, ವಿಡಿಯೋಗಳನ್ನು ಈದಿನ.ಕಾಮ್ ನ್ಯೂಸ್ ಬೀದರ್ ಸಹಾಯವಾಣಿ ಸಂಖ್ಯೆ 9035053805 ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.




