ಬಳ್ಳಾರಿ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಕೊಪ್ಪಳ, ಕಲಬುರಗಿ, ಬೀದರ್, ಯಾದಗಿರಿ, ಗದಗ, ರಾಯಚೂರು ಸಹಿತ ಹಲವು ಜಿಲ್ಲೆಗಳಲ್ಲಿ ‘ದಿತ್ವಾ’ ಚಂಡಮಾರುತದ ಪರಿಣಾಮ ಮುಂದಿನ ಆರು ದಿನ ತುಂತುರು ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಡಿ.1ರಂದು ನಿರಂತರ ಗಾಳಿಯೊಂದಿಗೆ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಡಿ.2ರಂದು ರಾಮನಗರ, ಮಂಡ್ಯ, ದಾವಣಗೆರೆ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲೂ ಒಂದೆರಡು ಕಡೆ ಹಗುರ ಮಳೆಯಾಗುವ ಸೂಚನೆಯಿದೆ.
ನಗರದಲ್ಲಿ ಭಾನುವಾರ ಮೋಡಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯ ಜೊತೆಗೆ ಚಳಿಗೆ ನಡುಗಿದ ಜನರು, ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪಿನ ಮೊರೆ ಹೋದರು.
ಬೆಂಗಳೂರಿನಲ್ಲಿ ಹೆಚ್ಚಿದ ಚಳಿ
ಶ್ರೀಲಂಕಾದ ಉತ್ತರ ಭಾಗದಲ್ಲಿ ಕಾಣಿಸಿಕೊಂಡಿದ್ದ ‘ದಿತ್ವಾ’ ಚಂಡಮಾರುತವು ತಮಿಳುನಾಡಿನ ಕರಾವಳಿ ತಲುಪಿದ ಪರಿಣಾಮ, ಬೆಂಗಳೂರಿನಲ್ಲಿ ಚಳಿ ಹೆಚ್ಚಳವಾಗಿತ್ತು. ಬೆಳಿಗ್ಗೆಯಿಂದಲೇ ಕಾಣಿಸಿಕೊಂಡ ಜಿಟಿಜಿಟಿ ಮಳೆ ಹಾಗೂ ತೇವಾಂಶಯುಕ್ತ ಗಾಳಿಯಿಂದಾಗಿ, ಜನರು ಚಳಿಯಿಂದ ರಕ್ಷಿಸಿಕೊಳ್ಳಲು ಸ್ವೆಟರ್ ಹಾಗೂ ಜಾಕೆಟ್‌ಗಳನ್ನು ಧರಿಸಿ ಓಡಾಡಿದರು.
ಭಾನುವಾರ ಸಂಜೆ 5.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಗರಿಷ್ಠ ಉಷ್ಣಾಂಶವು 20.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿತ್ತು. ಸಾಮಾನ್ಯಕ್ಕಿಂತ ಏಳು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಡಿಮೆ ವರದಿಯಾದ ಪರಿಣಾಮ ಇಡೀ ದಿನ ಚಳಿಯಿತ್ತು. ಕನಿಷ್ಠ ಉಷ್ಣಾಂಶ 18.4 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಗರಿಷ್ಠ ಉಷ್ಣಾಂಶ 21.5 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 18.2 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಎಚ್‌ಎಎಲ್ ವಿಮಾನ ನಿಲ್ದಾಣದ ಸುತ್ತಮುತ್ತ ಕ್ರಮವಾಗಿ 20.7 ಡಿಗ್ರಿ ಸೆಲ್ಸಿಯಸ್ ಹಾಗೂ 18.2 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಕೊಟ್ಟ ಮಾತು’ ಗದ್ದಲ ಸೃಷ್ಟಿಸಿದ ಬಳಿಕ ಎಚ್ಚೆತ್ತ ಕಾಂಗ್ರೆಸ್
ನಗರದಲ್ಲಿ ಕನಿಷ್ಠ ಉಷ್ಣಾಂಶವು ಶನಿವಾರ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿತ್ತು. ಇದು ನವೆಂಬರ್‌ನಲ್ಲಿ ಮೂರು ವರ್ಷಗಳ ಅವಧಿಯಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶವಾಗಿತ್ತು. 2022ರ ನ.25ರಂದು ಕನಿಷ್ಠ ಉಷ್ಣಾಂಶ 15.4 ಡಿಗ್ರಿ ಸೆಲ್ಸಿಯಸ್ ವರದಿಯಾದರೆ, 2023 ರ ನ.24ರಂದು 17.1 ಡಿಗ್ರಿ ಸೆಲ್ಸಿಯಸ್, 2024ರ ನ.27ರಂದು 19.4 ಡಿಗ್ರಿ ಸೆಲ್ಸಿಯಸ್ ಇತ್ತು.
ತಮಿಳುನಾಡಿನಲ್ಲಿ ಮೂವರು ಸಾವು
ದಿತ್ವಾ’ ಚಂಡ ಮಾರುತದಿಂದಾಗಿ ತಮಿಳುನಾಡಿದ ಹಲವು ಭಾಗಗಳಲ್ಲಿ ಮಳೆಯಾಗು ತ್ತಿದ್ದು, ಅವಘಡಗಳಲ್ಲಿ ಮೂವರು ಮೃತ ಪಟ್ಟಿದ್ದಾರೆ. ಗೋಡೆ ಕುಸಿದು ಇಬ್ಬರು, ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಒಬ್ಬರು ಮೃತಪಟ್ಟಿದ್ದಾರೆ.
‘ಭಾರಿ ಮಳೆಯಿಂದಾಗಿ 234 ಜೋಪಡಿಗಳಿಗೆ ಹಾನಿಯಾಗಿದೆ, 149 ಜಾನುವಾರುಗಳು ಮೃತಪಟ್ಟಿವೆ ಮತ್ತು ಡೆಲ್ಟಾ ಜಿಲ್ಲೆಗಳ (ನದಿ ಮುಖಜ ಭೂಮಿ) 57,000 ಹೆಕ್ಟೇರ್ ಕೃಷಿ ಜಮೀನುಗಳಿಗೆ ಹಾನಿಯಾಗಿದೆ’ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಕೆ.ಕೆ.ಎಸ್.ಎಸ್.ಆರ್ ರಾಮಚಂದ್ರನ್ ಅವರು ತಿಳಿಸಿದರು.
‘ನಾಗಪಟ್ಟಣಂನ 24,000 ಹೆಕ್ಟೇರ್, ತಿರುವರೂರ್‌ನ 15,000 ಹೆಕ್ಟೇರ್, ಮೈಲಾಡುಥುರೈನ 8,000 ಹೆಕ್ಟೇರ್ ಸೇರಿ ಒಟ್ಟು 57,000 ಹೆಕ್ಟೇರ್ ಕೃಷಿ ಜಮೀನುಗಳು ಹಾನಿಗೊಳಗಾಗಿವೆ’ ಎಂದರು.
ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ 28 ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಸಿದ್ಧವಿವೆ.
ಶ್ರೀಲಂಕಾದಲ್ಲಿ 330 ಮಂದಿ ಸಾವು
ದಿತ್ವಾ’ ಚಂಡಮಾರುತದ ಪ್ರಭಾವದಿಂದಾಗಿ ಶ್ರೀಲಂಕಾದ ತಗ್ಗು ಪ್ರದೇಶಗಳಲ್ಲಿ ಭಾನುವಾರವೂ ಪ್ರವಾಹ ಪರಿಸ್ಥಿತಿ ಮುಂದುವರಿದಿತ್ತು. ಭಾರಿ ಮಳೆ ಮತ್ತು ಅದಕ್ಕೆ ಸಂಬಂಧಿಸಿದ ಅವಘಡಗಳಿಂದಾಗಿ ಕನಿಷ್ಠ 334 ಮಂದಿ ಮೃತಪಟ್ಟಿದ್ದಾರೆ.
ವರುಣಾರ್ಭಟದಿಂದಾಗಿ ಮರಗಳು ಧರೆಗೆ ಉರುಳಿವೆ, ರಸ್ತೆಗಳು ಜಲಾವೃತವಾಗಿ ಸಂಚಾರ ಬಂದ್ ಆಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ಮರಗಳನ್ನು ತೆರವುಗೊಳಿಸುವಲ್ಲಿ ನಿರತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
‘ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕನಿಷ್ಠ 334 ಮಂದಿ ಮೃತಪಟ್ಟಿದ್ದಾರೆ ಮತ್ತು 218 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ವಿಪತ್ತು ನಿರ್ವಹಣಾ ಕೇಂದ್ರವು (ಡಿಎಂಸಿ) ತಿಳಿಸಿದೆ.
‘2.73 ಲಕ್ಷ ಕುಟುಂಬಗಳ 9.98 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ಮಳೆಯಿಂದಾಗಿ 20,000 ಮನೆಗಳಿಗೆ ಹಾನಿಯಾಗಿದೆ. 1.22 ಲಕ್ಷ ಜನರು ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.ಉಳಿದ 8.33 ಲಕ್ಷ ಮಂದಿಗೆ ನೆರವಿನ ಅಗತ್ಯವಿದೆ’ ಎಂದು ಡಿಎಂಸಿ ಹೇಳಿದೆ.
ಕೆಲಾನಿ ನದಿಯ ನೀರಿನ ಮಟ್ಟ ಶನಿವಾರದಿಂದ ಏರಿಕೆಯಾಗುತ್ತಿರುವ ಕಾರಣ ಕೊಲಂಬೊದ ಉತ್ತರ ಭಾಗವು ಜಲಾವೃತಗೊಂಡಿದ್ದು, ಜನರ ಸ್ಥಳಾಂತರಕ್ಕೆ ಆದೇಶ ಹೊರಡಿಸಲಾಗಿದೆ.
ಭಾರತದ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಭಾನುವಾರ 24 ಮಂದಿಯನ್ನು ರಕ್ಷಿಸಿದೆ. ಪಾಕಿಸ್ತಾನ, ಜಪಾನ್ ಸಹ ರಕ್ಷಣಾ ತಂಡವನ್ನು ಕಳುಹಿಸಿವೆ ಎಂದು ಶ್ರೀಲಂಕಾ ವಾಯುಪಡೆಯು ತಿಳಿಸಿದೆ.
ಚಂಡಮಾರುತವು ಬೇರೆ ದಿಕ್ಕಿನತ್ತ ಮುಖ ಮಾಡಿದ್ದರೂ ಕೊಲಂಬೊದಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಿಸಲು ಕನಿಷ್ಠ ಒಂದು ದಿನ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.





