“3 ರಿಂದ 6 ವರ್ಷದ ಮಕ್ಕಳಿಗೆ LKG-UKG ಅನ್ನು ʼಕೆಪಿಎಸ್ʼ ಶಾಲೆಗಳಲ್ಲಿಯೇ ತೆರೆಯುವ ಮೂಲಕ ರಾಜ್ಯ ಸರ್ಕಾರ ರಾಜ್ಯದ ಸಾವಿರಾರು ಅಂಗನವಾಡಿಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಇದರಿಂದ ಅಂಗನವಾಡಿ ನೌಕರರು ಬೀದಿಗೆ ಬರುವಂತಾಗುತ್ತದೆ” ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ (ಮಾ 23) ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ಮಾತಾನಡಿದರು.
“ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ 50 ವರ್ಷಗಳಾಯಿತು ಸರ್ಕಾರ ಕೂಡ ICDS 50ರ ಕಾರ್ಯಕ್ರಮವನ್ನು ನಡೆಸಿದೆ. 2013 ರ ಆಹಾರ ಭದ್ರತಾ ಕಾಯ್ದೆ ಹಾಗೂ 2009ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟಿದೆ. ಆದರೆ, ರಾಜ್ಯ ಸರ್ಕಾರ ಇದನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ” ಎಂದರು.
“ರಾಜ್ಯ ಸರ್ಕಾರದ ಅನೇಕ ಕೆಲಸಗಳಲ್ಲಿ ಅಂಗನವಾಡಿ ನೌಕರರನ್ನು ಬಳಸಿಕೊಳ್ಳಲಾಗಿದೆ. ಐದು ಗ್ಯಾರಂಟಿ ಯೋಜನೆ ಜಾರಿ ಮಾಡುವಲ್ಲಿ, ಅದರಲ್ಲೂ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರದ ಬೆನ್ನುಲುಬಾಗಿ ಕೆಲಸ ಮಾಡಿದ್ದಾರೆ. ಆದರೂ ರಾಜ್ಯದಲ್ಲಿ ಇರುವ ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ 15,000 ರೂ. ಗೌರವ ಧನವನ್ನು ಹೆಚ್ಚಳ ಮಾಡಿಲ್ಲ” ಎಂದು ಆರೋಪಿಸಿದರು.

ಪ್ರತಿಭಟನೆಯ ಸ್ಥಳಕ್ಕೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಂದಿದ್ದರು. ಪ್ರತಿಭಟನಕಾರರ ಅಹವಾಲನ್ನು ಸ್ವೀಕರಿಸಿದರು.
ಪ್ರತಿಭಟನೆಯ ವೇಳೆ ಅನೇಕ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದೆ ಇಟ್ಟರು.
1. 6 ವರ್ಷದೊಳಗಿನ ಮಕ್ಕಳು ICDS ನಡಿಯಲ್ಲಿರುವುದನ್ನು ಖಾತ್ರಿ ಪಡಿಸಿ : ICDS ಯೋಜನೆ ಪ್ರಾರಂಭವಾಗಿರುವುದೇ 6 ವರ್ಷದೊಳಗಿನ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರದ ಮುಖಾಂತರ ಆಹಾರ, ಆರೋಗ್ಯ ಮತ್ತು ಶಿಕ್ಷಣ ಕೊಡಲಾಗುತ್ತಿದೆ. ಇಂದಿನ ಸಾಮಾಜಿಕ ವ್ಯವಸ್ಥೆಗನುಗುಣವಾಗಿ ಅಂಗನವಾಡಿ ಕೇಂದ್ರಗಳು ಬಹಳಷ್ಟು ವೈಜ್ಞಾನಿಕವಾಗಿ ಮುಂದುವರೆದು ಕೆಲಸ ಮಾಡುತ್ತಿವೆ. ಈ ಕೇಂದ್ರಗಳಲ್ಲಿ ಇಂದು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಲಾಗುತ್ತಿದೆ. 2025 ನವೆಂಬರ್ 12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು 5,000 ಅಂಗನವಾಡಿ ಕೇಂದ್ರಗಳಲ್ಲಿ LKG-UKG ಯನ್ನು ಪ್ರಾರಂಭಿಸಲು ಘೋಷಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶ ಮಾಡಿದ್ದರು.
ಆದರೆ, ಶಿಕ್ಷಣ ಇಲಾಖೆ 2025 ರಲ್ಲಿ 5,000 ಸರ್ಕಾರಿ ಶಾಲೆಯಲ್ಲಿ LKG-UKG ಪ್ರಾರಂಭಿಸುವುದಾಗಿ ಹೇಳಿದೆ. ಸಮಗ್ರ ಶಿಕ್ಷಣ ಯೋಜನೆಯಡಿ-1.105 ಶಾಲೆ, ಪಿಎಂಶ್ರೀ ಯೋಜನೆಯಡಿ 126 ಶಾಲೆ, ಕೆಕೆಆರ್‌ಡಿಬಿ ಅಡಿ 1,126 ಶಾಲೆ, ಮ್ಯಾಗ್ನೆಟ್ ಅಡಿ 1699 ಶಾಲೆ ಸೇರಿದಂತೆ, 4,056 ಶಾಲೆಗಳಲಿ LKG-UKG ನಡೆಸಲು ಅನುಮತಿ ನೀಡಿದೆ.
ಆದ್ದರಿಂದ 14/11/2025 ಶಿಕ್ಷಣ ಇಲಾಖೆ ಮಾಡಿರುವ ಆದೇಶ ರದ್ದು ಮಾಡಬೇಕು, ಬಜೆಟ್‌ನಲ್ಲಿ ಘೋಷಿಸಿರುವಂತೆ 800 ಪಬ್ಲಿಕ್ ಶಾಲೆಗಳಲ್ಲಿ LKG-UKG ಪ್ರಾರಂಭಿಸುವಾಗ ಆ ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಯನ್ನು ಅವಲೋಕಿಸಬೇಕು.
ರಾಜ್ಯದಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿಯೂ LKG-UKG ಪ್ರಾರಂಭಿಸಲು ಆದೇಶಿಸಿ ಆಗತ್ಯವಿರುವ ಬಜೆಟ್‌ನ್ನು ಮೀಸಲಿಡಬೇಕು.
2. ಎಲ್ಲ ಅಂಗನವಾಡಿ ನೌಕರರನ್ನು ಕನಿಷ್ಠಕೂಲಿಯ ಕಾಯ್ದೆಯ ವ್ಯಾಪ್ತಿಗೆ ತಂದು ESI, PF ಅನ್ನು ಕೊಡಬೇಕು.
3. ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡುವ ಆಹಾರ ಪದಾರ್ಥಗಳು ಗುಣಮಟ್ಟ ಸರಿ ಇಲ್ಲದ ಕಾರಣ BIS ಪರವಾನಿಗೆ ರದ್ದು ಮಾಡಿ ಸ್ಥಳೀಯವಾಗಿ ಸಿಗುವ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯ ಆಹಾರ ಸರಬರಾಜು ಮಾಡಬೇಕು.
4. ಶಿಶು ಅಭಿವೃದ್ಧಿ ಯೋಜನೆಗಾಗಿ ದುಡಿದು ಬರಿಗೈಯಲ್ಲಿ 2011 ರಿಂದ 2023 ಮಾರ್ಚ್ ತನಕ ನಿವೃತ್ತರಾದ ಕಾರ್ಯಕರ್ತೆ ಸಹಾಯಕಿಯರಿಗೂ ಕೂಡಲೇ ಗ್ರಾಚ್ಯುಟಿ ಹಣ 183 ಕೋಟಿ ಕೂಡಲೇ ಬಿಡುಗಡೆ ಮಾಡಬೇಕು.
5. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ತುಂಬಬೇಕು ಮತ್ತು ಇಲಾಖೆಯಲ್ಲಿ ಖಾಲಿ ಇರುವ ಮೇಲ್ವಿಚಾರಕಿ, CDPO ಹುದ್ದೆ ಭರ್ತಿ ಮಾಡಬೇಕು.
6. ಚುನಾವಣೆ ಕೆಲಸಗಳಿಂದ (BLO) ಅಂಗನವಾಡಿ ನೌಕರರನ್ನು ಬಿಡುಗಡೆ ಮಾಡಬೇಕು. ಈಗಾಗಲೇ ರಾಜ್ಯದಲ್ಲಿ BLO ಕೆಲಸಕ್ಕೆ ಹಾಜರಾಗದಿರುವ ಕಾರಣ ಕೊಟ್ಟು ವಜಾಗೊಳಿಸಿರುವ ಕಾರ್ಯಕರ್ತೆಯರ ವಜಾ ತೆರವುಗೊಳಿಸಬೇಕು.
7. ನಗರ ಪ್ರದೇಶಗಳಲ್ಲಿ ಅಂಗನವಾಡಿ ಸಹಾಯಕಿ ಆಯ್ಕೆಗೆ ಇರುವ ಮಾನದಂಡ ಬದಲಾಯಿಸಬೇಕು ಮತ್ತು ನಗರ ಪ್ರದೇಶಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು.
8. ಮುಂಗಡವಾಗಿ ಮೊಟ್ಟೆ, ಬಾಡಿಗೆ, ಗ್ಯಾಸ್, ಕರೆಸ್ಸಿ ಹಣ, ತರಕಾರಿ, ಆಡಳಿತ ವೆಚ್ಚ ಹಾಕದೇ ಫಲಿತಾಂಶ ಕೇಳಬಾರದು.
9. ಮಾನ್ಯ ಇಲಾಖೆ ಸಚಿವರು ಒಪ್ಪಿಕೊಂಡಂತೆ ಸಾಮೂಹಿಕ ಆರೋಗ್ಯ ವಿಮೆ ಜಾರಿ ಮಾಡಬೇಕು.
10. ಅಂಗನವಾಡಿ ನೌಕರರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ಕೊಡಬೇಕು.
11. FRS ಕೈಬಿಡಬೇಕು. ಅಂಗನವಾಡಿ ಕೇಂದ್ರಕ್ಕೆ ಗುಣಮಟ್ಟದ ಮೊಬೈಲ್ ನೀಡಬೇಕು ಮತ್ತು WI-FI ನೀಡಬೇಕು.
12. ರಾಜ್ಯ ಸರ್ಕಾರ ಮತ್ತು ಖಾಸಗಿ ವಲಯಗಳಲ್ಲಿ ದುಡಿಯುವ ಮಹಿಳೆಯರಿಗೆ ನೀಡಿರುವ ಮುಟ್ಟಿನ ರಜೆ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಗೂ ಜಾರಿ ಆಗಬೇಕು.
13. ಅಂಗನವಾಡಿ ನೌಕರರಿಗೆ ʼಆರೋಗ್ಯ ಸಂಜೀವಿನಿ ಯೋಜನೆʼ ಅನ್ವಯಿಸಬೇಕು.
14. ನಿವೃತ್ತರಾದವರಿಗೆ ಇಡಿಗಂಟು ಹೆಚ್ಚಳ ಮಾಡಬೇಕು ಹಾಗೂ ಮಾಸಿಕ 10 ಸಾವಿರ ಪಿಂಚಣಿ ನೀಡಬೇಕು.
15. ICDS ಪ್ರತ್ಯೇಕ ನಿರ್ದೇಶನಾಲಯ ಮಾಡಬೇಕು.
16. ಮೊಟ್ಟೆ ನೀಡುವ ಬದಲಿಗೆ ನೇರ ನಗದು ಜಮಾವಣೆ ಡಿಬಿಟಿ ತರುತ್ತಿರುವುದನ್ನು ಕೈಬಿಡಬೇಕು.
17. ಬಜೆಟ್‌ನಲ್ಲಿ ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಳ ಮಾಡಿಲ್ಲ. ಚುನಾವಣಾ ಸಂದರ್ಭದಲ್ಲಿಯ ಭರವಸೆ ನೀಡದಂತೆ ತಕ್ಷಣ ವೇತನ ಹೆಚ್ಚಳ ಮಾಡಬೇಕು.
ಈ ಮೇಲ್ಕಂಡ ಬೇಡಿಕೆಗಳ ಈಡೇರಿಕೆಗಾಗಿ ಮಾ 23 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಅವಧಿಯ ಹೋರಾಟವನ್ನು ನಡೆಸಲಾಗುತ್ತಿದೆ.
ಈ ಪ್ರತಿಭಟನೆಯಲ್ಲಿ ರಾಜ್ಯ ಎಲ್ಲಾ ಭಾಗಗಳಿಂದ ಸಾವಿರಾರು ನೌಕರರು ಭಾಗವಹಿಸಿದ್ದರು.





