ಚಿತ್ರದಲ್ಲಿ 'ಸಮ್‌ಟೈಮ್ಸ್ ರಿಸ್ಟ್ರಿಕ್ಷನ್ ಅಂಡ್ ಪ್ರೊಟೆಕ್ಷನ್ ದೇ ಬೋತ್ ಲುಕ್ ಸೇಮ್' ಎನ್ನುವ ಮಾತೊಂದಿದೆ. ಅದನ್ನು ಚಿತ್ರತಂಡ ಬಳಸಿಕೊಂಡಿರುವ ಬಗೆ ಬೆರಗುಟ್ಟಿಸುತ್ತದೆ. ಕಂಡದ್ದನ್ನು ಅನುಮಾನಿಸುವಂತೆ ಮಾಡುತ್ತದೆ.
ಪಶ್ಚಿಮ ಘಟ್ಟದ ಕಾಟುಕುನ್ನು ಬೆಟ್ಟ-ಗುಡ್ಡಗಳ ಮೇಲೆ ಮಂಜಿನ ಮೆರವಣಿಗೆ, ಗಾಳಿಯೊಂದಿಗೇ ತೇಲಿಬರುವ ತುಂತುರು ಮಳೆ, ಜುಳು ಜುಳು ನೀರಿನ ಸದ್ದು, ಹಕ್ಕಿಗಳ ಕೂಗು, ಕಣ್ಣು ಹಾಯಿಸಿದಷ್ಟು ಹಸಿರು- ಅದರ ಮುಂದೆ ನೀವೇ ನಿಂತಂತೆ, ಒದ್ದೆಯಾದಂತೆ, ಮುದಗೊಂಡಂತೆ ಭಾಸವಾಗುತ್ತದೆ.
ಇದು ‘ಎಕೋ'(eko) ಎಂಬ ಮಲಯಾಳಂ ಚಿತ್ರ. ಈ ಚಿತ್ರವನ್ನು animal trilogyಯ ಮೂರನೇ ಚಿತ್ರ ಎಂದೂ ಕರೆಯುತ್ತಾರೆ. ಈ ಚಿತ್ರದ ಹಿಂದಿನ ಎರಡು ಭಾಗವಾಗಿ ‘ಕಿಷ್ಕಿಂಧಾ ಕಾಂಡಂ’, ‘ಕೇರಳ ಕ್ರೈಮ್ ಫೈಲ್ಸ್ ಸೀಸನ್-2’ ಚಿತ್ರಗಳು ಬಂದಿವೆ. ಆದರೆ ಇವೆಲ್ಲವೂ ಸ್ವತಂತ್ರ ಕತೆಗಳೇ.
‘ಎಕೋ’ ಚಿತ್ರವು ದ್ವಿತೀಯ ಮಹಾಯುದ್ಧದ ಕಾಲಘಟ್ಟದಿಂದ ಆರಂಭವಾಗುತ್ತದೆ. ಮಲಯಾಳಿಗಳು ಮಲೇಷಿಯಾ ಮತ್ತು ಸಿಂಗಾಪುರದಂತಹ ದೇಶಗಳಿಗೆ ವಲಸೆ ಹೋದ ಅವಧಿ ಹಾಗೂ ಇತ್ತೀಚಿನವರೆಗೆ ವಿಭಿನ್ನ ಕಾಲಮಾನಗಳು ಮತ್ತು ಭೌಗೋಳಿಕ ಪ್ರದೇಶಗಳನ್ನು ವ್ಯಾಪಿಸುತ್ತದೆ.
ಇದನ್ನು ಓದಿದ್ದೀರಾ?: ಲ್ಯಾಂಡ್ ಲಾರ್ಡ್: ಸಂವಿಧಾನದ ಆಶಯವಾದ ‘ಸಮಾನತೆ’ಯನ್ನು ಸಾರುವ ಚಿತ್ರ
ಚಿತ್ರದಲ್ಲಿ ಮನುಷ್ಯರಷ್ಟೇ ಅಲ್ಲ, ಬೆಟ್ಟ-ಗುಡ್ಡಗಳು ಮತ್ತು ನಾಯಿಗಳು ಕೂಡ ಪಾತ್ರವಾಗಿವೆ. ಆ ಬೆಟ್ಟ, ಗುಡ್ಡ, ನಾಯಿಗಳ ನಡುವೆ ಬದುಕುಳಿಯಲು ಹೆಣಗಾಡುತ್ತಿರುವ ಮ್ಲಾಥಿ ಚೆಡಥಿ ಮತ್ತು ಪಿಯೂಸ್ ಎಂಬ ಇಬ್ಬರು ವ್ಯಕ್ತಿಗಳ ಕಥೆ- ನಿಧಾನವಾಗಿ ಸುರಳಿಯಂತೆ ಬಿಚ್ಚಿಕೊಳ್ಳುತ್ತದೆ.
ಮ್ಲಾಥಿ ಚೆಡಥಿ- ವಯಸ್ಸಾದ ಮಲೇಷಿಯನ್ ಮಹಿಳೆ. ಆಕೆಯನ್ನು ಕಾವಲು ಕಾಯಲು ಮತ್ತು ಕಾಪಾಡಲು ಒಂದಷ್ಟು ಮಲೇಷಿಯನ್ ಬ್ರೀಡ್ ನಾಯಿಗಳು. ಪಿಯೂಸ್- ಆಕೆಯ ಆರೈಕೆಗಾಗಿ ನೇಮಿಸಲ್ಪಟ್ಟ ಯುವಕ. ಇವರಿಬ್ಬರೂ ವಾಸಿಸುವ ಅತಿ ಎತ್ತರದ ಜಾಗಕ್ಕೆ ಮನುಷ್ಯರ ಪ್ರವೇಶವಿಲ್ಲ; ಅವರೂ ಬರುವುದಿಲ್ಲ, ನಾಯಿಗಳೂ ಬಿಡುವುದಿಲ್ಲ.
ಆದರೆ, ಆಕೆಯ ಪತಿ ಕುರಿಯಾಚ್ಚನ್- ಕುಖ್ಯಾತ ನಾಯಿ ತರಬೇತುದಾರ ಮತ್ತು ಸಾಕಣೆದಾರ. ಆತ ಅನೇಕ ವರ್ಷಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದಾನೆ. ಆತನ ಸುತ್ತ ಅನೇಕ ದಂತಕತೆಗಳಿವೆ. ಆತನನ್ನು ಹುಡುಕಿಕೊಂಡು ಬರುವ- ಸ್ನೇಹಿತರು, ನಕ್ಸಲರು, ಅಪರಿಚಿತರಿಂದಾಗಿ ಬದುಕಿರುವ ವೃದ್ಧೆ ಮತ್ತು ಯುವಕನ ಬದುಕು ಸಮಸ್ಯೆಗೆ ಸಿಲುಕುತ್ತದೆ. ಅವರ ಪ್ರಶ್ನೆ ಮತ್ತು ಬೇಟೆ ತೀವ್ರಗೊಂಡಂತೆ, ಸತ್ಯ ಬಯಲಾದಂತೆ, ಮನುಷ್ಯರೂ ಬೆತ್ತಲಾಗುತ್ತಾರೆ. ಆದರೆ ನಾಯಿಗಳು ನಾಯಿಗಳಾಗಿಯೇ ಉಳಿಯುತ್ತವೆ.
ಅಪರೂಪದ ಮಲೇಷಿಯನ್ ತಳಿಯ ನಾಯಿಗಳು ಈ ಕಥಾನಕದ ಬಹುಮುಖ್ಯ ಭಾಗವಾಗಿದ್ದು, ಕೆಲ ಸಂದರ್ಭಗಳಲ್ಲಿ ಕಥೆಯನ್ನು ಮುನ್ನಡೆಸುವ ಶಕ್ತಿಯನ್ನೂ ಪ್ರದರ್ಶಿಸುತ್ತವೆ. ಅವು ಬೊಗಳುವ ಬಗೆ, ದಿಟ್ಟಿಸಿ ನೋಡುವ ನೋಟ, ವರ್ತನೆ ವಿಚಿತ್ರವೆನಿಸುತ್ತದೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂವಹನಗಳು; ಮನುಷ್ಯರು ಪ್ರಾಣಿಗಳ ಮೇಲೆ ಅಧಿಕಾರ ಮತ್ತು ನಿಯಂತ್ರಣ ಸಾಧಿಸುವುದು; ಅದಕ್ಕೆ ಚಿತ್ರ ಮಂಡಿಸುವ ಸಿದ್ಧಾಂತ ಒಪ್ಪುವುದು ಕೊಂಚ ಕಷ್ಟವಾಗುತ್ತದೆ. ಆದರೆ ಬಳಸಿರುವ ಸಂಭಾಷಣೆ ಹಾಗೂ ದೃಶ್ಯ ಸಂಯೋಜನೆಗಳು, ವಾಸ್ತವ ಜಗತ್ತಿನಲ್ಲಿ ಸಾಧ್ಯವಿರುವ ಸಂಗತಿಗಳೆಂದು ನಂಬಿಸುವಂತಿವೆ.

ಕುರಿಯಾಚ್ಚನ್‌ಗಾಗಿ ನಡೆಯುವ ಹುಡುಕಾಟ ಆರಂಭವಾದ ನಂತರ, ಚಿತ್ರವು ಪರಸ್ಪರ ಸಂಬಂಧವಿಲ್ಲವೆನಿಸುವ ವಿವಿಧ ತಂತುಗಳು ಮತ್ತು ಪಾತ್ರಗಳ ಮೂಲಕ ನಮ್ಮ ಗಮನವನ್ನು ಸೆಳೆಯುತ್ತದೆ. ಆದರೆ ಅವೆಲ್ಲವೂ ನಿಧಾನವಾಗಿ ಪರಸ್ಪರ ಹೆಣೆದುಕೊಳ್ಳುತ್ತ ಒಂದೇ ಸೂತ್ರದಡಿ ಸೇರುತ್ತವೆ. ಪಾತ್ರಗಳ ಉದ್ದೇಶಗಳ ಬಗ್ಗೆ ನಿರಂತರವಾಗಿ ಪ್ರಶ್ನೆ ಹುಟ್ಟಿಸುವ ಜೊತೆಗೆ, ನಮ್ಮ ಅಂದಾಜನ್ನೂ ತಲೆಕೆಳಗಾಗಿಸುತ್ತದೆ.
ಚಿತ್ರವು ಒಂದು ನಿಟ್ಟಿನಲ್ಲಿ ಅಪರೂಪದ ತಳಿಗಳನ್ನು ಬೆಳೆಸಲು ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧರಾಗಿರುವ ನಾಯಿ ಸಾಕಣೆಕಾರರ ಲೋಕವನ್ನು ತೆರೆದಿಡುತ್ತದೆ. ಹಾಗೆಯೇ ಧೈರ್ಯ-ಸ್ಥೈರ್ಯದ ವಯೋವೃದ್ಧ ಮಲೇಷಿಯನ್ ಮಹಿಳೆಯನ್ನು ಹಾಗೂ ನಂಬಿಕಸ್ತ ಸಹಾಯಕನಿಂದ ಕೂಡಿದ ಜಗತ್ತನ್ನೂ ಪರಿಚಯಿಸುತ್ತದೆ. ಅದಕ್ಕೆ ಕಾರಣ, ನಿರಂತರವಾಗಿ ರೂಪಾಂತರಗೊಳ್ಳುವ ಚಿತ್ರಕಥೆ.
ಕತೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿರುವ ಬಾಹುಲ್ ರಮೇಶ್, ಸ್ವತಃ ಸಿನಿಮಾಟೋಗ್ರಾಫರ್ ಕೂಡ ಆಗಿರುವುದರಿಂದ, ಅವರ ತಲೆಯಲ್ಲಿ, ಹೃದಯದಲ್ಲಿ, ಕಣ್ಣುಗಳಲ್ಲಿ ಇರುವುದು, ನಮ್ಮ ಕಣ್ಮುಂದೆ ಕಾಣುತ್ತದೆ. ಅದಕ್ಕೆ ಮುಜೀಬ್ ಮಜೀದ್‌ರ ಸೂರೆಗೊಳ್ಳುವ ಸಂಗೀತ ಸಂಯೋಜನೆ ಮತ್ತು ಸೂರಜ್‌ರ ಸಂಕಲನ ಸಾಥ್ ನೀಡಿ, ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ. ಸಂದೀಪ್ ಪ್ರದೀಪ್, ನರೇನ್, ಸೌರಭ್ ಸಚ್‌ದೇವ್, ಬಿಯಾನಾ ಮೊಮಿನ್, ಬಿನು ಪಪ್ಪು ಜೀವಂತ ಪಾತ್ರಗಳಾಗಿ ಜೀವಿಸಿದ್ದಾರೆ. ಇವರೆಲ್ಲರ ಬುದ್ಧಿ-ಶ್ರಮ ಒಟ್ಟಾಗಿಸಿ ದುಡಿಸಿಕೊಂಡಿರುವ ನಿರ್ದೇಶಕ ದಿನಜಿತ್ ಅಯ್ಯಥನ್- ಹಿಂಸೆ, ರಕ್ತಪಾತ, ಕ್ರೌರ್ಯಗಳಿಲ್ಲದ; ಸಸ್ಪೆನ್ಸ್ ಥ್ರಿಲ್ಲರ್ ಜಾನರ್‍ನಲ್ಲಿಯೇ ವಿಶಿಷ್ಟವಾದ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಇದನ್ನು ಓದಿದ್ದೀರಾ?: ʼಹೋಂಬೌಂಡ್ʼ – ಮೌನವಾಗಿ ಮಣ್ಣುಗೂಡಿದ ಕನಸುಗಳು!
ಚಿತ್ರದಲ್ಲಿ ‘ಸಮ್‌ಟೈಮ್ಸ್ ರಿಸ್ಟ್ರಿಕ್ಷನ್ ಅಂಡ್ ಪ್ರೊಟೆಕ್ಷನ್ ದೇ ಬೋತ್ ಲುಕ್ ಸೇಮ್’ ಎನ್ನುವ ಮಾತೊಂದಿದೆ. ಅದನ್ನು ಚಿತ್ರತಂಡ ಬಳಸಿಕೊಂಡಿರುವ ಬಗೆ ಬೆರಗುಟ್ಟಿಸುತ್ತದೆ. ಕಂಡದ್ದನ್ನು ಅನುಮಾನಿಸುವಂತೆ ಮಾಡುತ್ತದೆ. ಮನುಷ್ಯ ಮತ್ತು ಪ್ರಾಣಿ ಸಂಬಂಧವನ್ನು, ಮನುಷ್ಯನನ್ನು ಪ್ರಾಣಿಯಂತೆ ಪಳಗಿಸುವುದನ್ನು, ಮನುಷ್ಯ ಮೃಗವಾಗುವುದನ್ನು, ಪ್ರಾಣಿ ಪ್ರಾಣಿಯಾಗಿಯೇ ಉಳಿಯುವುದನ್ನು- ನಮಗೇ ಗೊತ್ತಿಲ್ಲದಂತೆ ನಮ್ಮೆದೆಗೆ ದಾಟಿಸುತ್ತದೆ. ಚಿತ್ರ ಮುಗಿದ ನಂತರವೂ ಕಾಡುತ್ತದೆ.

ಲೇಖಕ, ಪತ್ರಕರ್ತ




