ದಲಿತರ ಸಾಗುವಳಿ ಭೂಮಿಯ ಅತಿಕ್ರಮಣ; ಅಂದನೂರಿನಲ್ಲಿ ದಲಿತ ಶೋಷಣೆಯ ಮತ್ತೊಂದು ಮಗ್ಗುಲು

Date:

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಗ್ರಾಮದಲ್ಲಿ ದಲಿತರ ಹಕ್ಕಿನ ಜಮೀನು ವಿವಾದದ ಕೇಂದ್ರವಾಗಿದೆ. ಹಲವು ದಶಕಗಳಿಂದ ಸವಾಲಿನ ನಡುವೆಯೂ ಜೀವನ ನಡೆಸುತ್ತಿರುವ ದಲಿತರ ಸಾಗುವಳಿ ಭೂಮಿಯ ಮೇಲಿನ ಹಕ್ಕಿಗೆ ಈಗ ಮೇಲ್ಜಾತಿಯವರ ಕಣ್ಣು ಬಿದ್ದಿದ್ದು, ಅಕ್ರಮ ಕಟ್ಟಡ ನಿರ್ಮಾಣದ ಮೂಲಕ ಅವರ ಬದುಕಿನ ನೆಲೆಯನ್ನೇ ಕಿತ್ತುಕೊಳ್ಳುವ ಯತ್ನ ಆರಂಭವಾಗಿದೆ.

ದಲಿತರು 50-60 ವರ್ಷಗಳಿಂದ ಆ ಜಮೀನನ್ನು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಮುಖ್ಯ ರಸ್ತೆಯಿಂದ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ಈ ಜಮೀನಿಗೆ ಎರಡು ಮೂರು ವರ್ಷಗಳಿಂದ ಊರಿನ ಮೇಲ್ಜಾತಿಯ ಕೆಲವು ವ್ಯಕ್ತಿಗಳ ಕಣ್ಣು ಬಿದ್ದು ಅನಧಿಕೃತವಾಗಿ ಜಾಗವಶಪಡಿಸಿಕೊಳ್ಳುವ ದುರುದ್ದೇಶದಿಂದ ಮನೆ ಕಟ್ಟುವ ನಿರ್ಮಾಣಕ್ಕೆ ಮುಂದಾಗಿರುವುದು ದಲಿತರ ಶೋಷಣೆಯ ಮತ್ತೊಂದು ಭಾಗವಾಗಿ ಮುಂದುವರೆದಿದೆ. ದಲಿತರ ಸಾಗುವಳಿ ಭೂಮಿಯಲ್ಲಿ ಮೇಲ್ಜಾತಿಯ ಕೆಲವು ವ್ಯಕ್ತಿಗಳು ಅಕ್ರಮವಾಗಿ ಮನೆ ನಿರ್ಮಿಸುತ್ತಿರುವ ಘಟನೆ ಜಿಲ್ಲೆಯಾದ್ಯಂತ ದಲಿತರ ಹಕ್ಕಿನ ಕುರಿತು ಹಲವು ಪ್ರಶ್ನೆಗಳನ್ನೆತ್ತಿದೆ.

1003059319

ಇದು ಕೇವಲ ಭೂಮಿ ಕಬಳಿಕೆ ಅಲ್ಲ, ಸಾಮಾಜಿಕ ಶೋಷಣೆಯ ಹೊಸ ರೂಪವಾಗಿದೆ. ದಲಿತರ ಸಾಗುವಳಿ ಭೂಮಿಯಲ್ಲಿ ಮೇಲ್ಜಾತಿಯವರ ಅಕ್ರಮ ಮನೆ ನಿರ್ಮಾಣದ ಪ್ರಕರಣವು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮುಂದುವರಿಯುತ್ತಿರುವ ಸಾಮಾಜಿಕ ಅಸಮಾನತೆ ಮತ್ತು ಶೋಷಣೆಯ ಚಿತ್ರಣವನ್ನು ತೆರೆದಿಟ್ಟಿದೆ. ನ್ಯಾಯ ಮತ್ತು ಸಮಾನತೆಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎನ್ನುವ ಧ್ವನಿಗಳು ಹೆಚ್ಚಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1003059324
ಕೇಸ್ ಸುರಿಯುತ್ತಿರುವ ಬಲಾಢ್ಯರು

ಸ್ಥಳೀಯರು ಹೇಳುವ ಪ್ರಕಾರ, “ಅಂದನೂರು ಗ್ರಾಮದ ಗೋಮಾಳದ ಸರ್ವೆ ನಂಬರ್ 170ರಲ್ಲಿ 1 ಎಕರೆ 20ಗುಂಟೆ ಜಮೀನನ್ನು ಛಲವಾದಿ (ಆದಿದ್ರಾವಿಡ) ಸಮುದಾಯದ ವಿಜಯಪ್ಪ ತಂದೆ ಸಿದ್ದಪ್ಪ ಎನ್ನುವವರು ಮತ್ತು ಅವರ ಕುಟುಂಬ 60 ವರ್ಷಗಳ ಹಿಂದಿನಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿದೆ.‌ ಈ ಜಾಗವನ್ನು ಊರಿನ ದೇವರ ಕೆಲಸ ಕಾರ್ಯ, ಸೇವೆ ಮಾಡುವ ಛಲವಾದಿ ಸಮುದಾಯದ ದಲಿತರಿಗೆ ಊರಿನ ಹಿರಿಯರೇ ದತ್ತು ರೂಪದಲ್ಲಿ ಕೊಟ್ಟಿದ್ದರು ಎನ್ನುವ ಮಾತು ಕೇಳಿ ಬಂದಿದೆ. ಅದು ಹಂಚಿಕೆ ಮಾಡಲ್ಪಟ್ಟ ಸಾಗುವಳಿ ಜಾಗವಾಗಿದ್ದು, ಆದರೆ ಇತ್ತೀಚಿನ ಎರಡು ವರ್ಷದ ಹಿಂದೆ ಮೇಲ್ಜಾತಿಯ ನಾಲ್ಕೈದು ಜನರ ಗುಂಪು ಆ ಭೂಮಿಯನ್ನು ಕಬಳಿಸಲು ಅಕ್ರಮವಾಗಿ ಮನೆ ನಿರ್ಮಿಸಲು ಪ್ರಾರಂಭಿಸಿ, ಜಮೀನು ಸಾಗುವಳಿಗೆ ಅಡ್ಡಿ ಮಾಡುತ್ತಿದ್ದಾರೆ” ಎಂದು ಸ್ಥಳೀಯರು ತಿಳಿಸಿದ್ದಾರೆ.

1003059320
ಸಾಗುವಳಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿರುವುದು

ಜಮೀನಿನಲ್ಲಿ ದಲಿತ ಕುಟುಂಬ ಅಲ್ಪಮಟ್ಟದ ಕೃಷಿ ಮೂಲಕ ಜೀವನ ಸಾಗಿಸುತ್ತಿದೆ. ಅಲ್ಲದೆ ಈ ಸಂಬಂಧ ದಾಖಲೆ, ಪಹಣಿ, ತಮ್ಮ ಹೆಸರಿಗೆ ಖಾತೆ ಮಾಡಿಕೊಡಲು ಸಾಗುವಳಿ ಕಾಯ್ದೆ ಅಡಿ ಫಾರಂ ನಂ. 57ರ 108 ಸಿ.ಸಿ.ಸಿ ಉಪನಿಯಮ 1 ಮತ್ತು 2 ರ ಅಡಿಯಲ್ಲಿ ದಲಿತ ಸಮುದಾಯದ ವಿಜಯಪ್ಪ ಬಿನ್ ಸಿದ್ದಪ್ಪ ಹೊಳಲ್ಕೆರೆ ತಾಲ್ಲೂಕು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದಾರೆ.‌

“ಐವತ್ತು, ಅರವತ್ತು ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಜಮೀನು ಕಬಳಿಸಲು ಮನೆ ನಿರ್ಮಾಣಕ್ಕೆ ಮುಂದಾಗಿ ದೌರ್ಜನ್ಯ ಎಸಗಿದ್ದಾರೆ. ಇದೇ ಜಮೀನಿನಲ್ಲಿ ನಾವು ಬಹಳಷ್ಟು ವರ್ಷಗಳಿಂದಲೂ ಸಾಗುವಳಿ ಮಾಡುತ್ತಿದ್ದು ನಮ್ಮ ಹಿರಿಯರ ಅಂತ್ಯಕ್ರಿಯೆ ಕೂಡ ಇಲ್ಲಿ ಮಾಡಿದ್ದೇವೆ. ನಾಲ್ಕೈದು ಹಿರಿಯರ ಸಮಾಧಿಗಳಿವೆ.‌ ಅತಿಕ್ರಮಣಕಾರರು ಮೇಲ್ಜಾತಿಯವರು, ಪ್ರಭಾವಿಗಳು ಎನ್ನುವ ಕಾರಣಕ್ಕೆ ಒತ್ತಡದಿಂದ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ.  ಈ ಸಂಬಂಧ ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದೂರು ನೀಡಿದ್ದರೂ, ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ. ಅವರಿಗೆ ಊರಿನಲ್ಲಿ ಮನೆಗಳಿದ್ದರೂ, ಜಾಗ ಕಬಳಿಸುವ ಹುನ್ನಾರದಿಂದ ಈ ರೀತಿ ತೊಂದರೆ ನೀಡುತ್ತಿದ್ದಾರೆ. ಎರಡು ವರ್ಷಗಳಿಂದ ಕಸ ಸುರಿಯುವುದು, ಮನೆ ನಿರ್ಮಾಣಕ್ಕೆ ಮುಂದಾಗುವುದು ಈ ರೀತಿಯ ಕೃತ್ಯಗಳಿಂದ ಜಮೀನು ಉಳುಮೆ ಕಷ್ಟವಾಗುತ್ತಿದೆ” ಎಂದು ಜಮೀನಿನ ಮಾಲೀಕರ ಮಗ ತಿಪ್ಪೇಶ್ ಆರೋಪಿಸಿದರು.‌

1003059323

ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ದಲಿತ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದು, ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ, ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಕೋಲಾರ ಮೂಲದ ಅಂಬೇಡ್ಕರ್ ಸೇವಾ ಸಮಿತಿಯ ದಲಿತ ಮುಖಂಡ ಸಂದೇಶ್ ಸ್ಥಳಕ್ಕೆ ಭೇಟಿ ನೀಡಿ, “ಜಿಲ್ಲಾಧಿಕಾರಿಗಳಿಗೆ ಈ ಕುರಿತು ಈ ಕುಟುಂಬಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಮನವಿ ಸಲ್ಲಿಸಿದ್ದೇವೆ. ಸ್ಥಳೀಯ ಠಾಣೆಯಲ್ಲಿ ದೌರ್ಜನ್ಯದ ವಿರುದ್ಧ ದೂರು ದಾಖಲು ಮಾಡಿಕೊಳ್ಳದೇ ದಲಿತ ಕುಟುಂಬದ ನ್ಯಾಯ ನಿರಾಕರಿಸಲಾಗಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಜಾಗ ಆಕ್ರಮಿಸಿ ಮನೆ ನಿರ್ಮಾಣಕ್ಕೆ ಮುಂದಾದದವರ ಮೇಲೆ ದೌರ್ಜನ್ಯ ಕಾಯಿದೆ ಅಡಿ ದೂರು ದಾಖಲು ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದಾರೆ.

1970-80ರ ದಶಕದಲ್ಲಿ ಸರ್ಕಾರ ಗ್ರಾಮೀಣ ದಲಿತ ಹಾಗೂ ಬಡ ಕುಟುಂಬಗಳಿಗೆ ಬದುಕಿನ ಆಧಾರವಾಗಿ ಕೆಲವು ಎಕರೆ ಭೂಮಿಯನ್ನು ಸಾಗುವಳಿ ರೂಪದಲ್ಲಿ ಹಂಚಿತ್ತು. ಈ ಭೂಮಿಯು ಅವರ ಜೀವನೋಪಾಯದ ಮೂಲವಾಗಿದ್ದು, ಅಲ್ಲಿ ಅನೇಕ ಕುಟುಂಬಗಳು ಸಣ್ಣ ಕೃಷಿ ಮತ್ತು ಕೂಲಿ ಕೆಲಸಗಳಿಂದ ಬದುಕು ಕಟ್ಟಿಕೊಂಡಿವೆ. ಅದು ಕೆಲವರಿಗೆ ಇನ್ನೂ ಖಾತೆ ಪಹಣಿಯಲ್ಲಿ ದಾಖಲಾಗಿಲ್ಲ. ಅನಕ್ಷರತೆಯ ಕಾರಣದಿಂದ ದಲಿತ ಕುಟುಂಬಗಳು ದಾಖಲೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.‌ ಇದರ ಲಾಭ ಪಡೆಯಲು ಹಳ್ಳಿಯ ಮೇಲ್ಜಾತಿಯವರ ಪ್ರಭಾವ ಹೆಚ್ಚಾಗುತ್ತಿದ್ದಂತೆ ಈ ಭೂಮಿಗಳ ಮೇಲೆ ಅವರ ಕಣ್ಣು ಬೀಳುತ್ತಿದ್ದು ಹಲವೆಡೆ ಅಕ್ರಮವಾಗಿ ಅತಿಕ್ರಮಣ, ಹೆದರಿಸಿ, ಆಸೆ ಆಮಿಷ ತೋರಿಸಿ ಭೂಮಿ ಕಬಳಿಕೆ ನಡೆಯುತ್ತಿದೆ ಎನ್ನಲಾಗಿದೆ.

ಸ್ಥಳೀಯ ಯುವಕ  ರಿಜ್ವಾನ್ ಈ ಕುರಿತು ಪ್ರತಿಕ್ರಿಯಿಸಿ, “ಕೆಲ ವರ್ಷಗಳ ಹಿಂದೆ ದಲಿತರ ಸಾಗುವಳಿ ಜಮೀನು ಎದುರಿನ ಖಾಲಿ ಬಿದ್ದಿದ್ದ ಜಮೀನಿಗೆ ಪಂಚಾಯಿತಿಯವರೇ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ್ದರು. ಆಗ ಮೇಲ್ಜಾತಿ ಮತ್ತು ದಲಿತರ ಕುಟುಂಬಗಳು ಸೇರಿದಂತೆ ಬಹಳಷ್ಟು ಜನ ಇಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಆಗ ಅಲ್ಲಿಗೆ ಹೋಗಲು ಮನೆಯಲ್ಲಿ ಕಟ್ಟಿಕೊಳ್ಳಲು ನಿರಾಕರಿಸಿದ್ದ ಕೆಲವು ಕುಟುಂಬಗಳು ಈಗ ದಲಿತರ ಸಾಗುವಳಿಯ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿ ದೌರ್ಜನ್ಯ ಮಾಡುತ್ತಿವೆ. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಎಕರೆ ಜಮೀನು ಮನೆಗಳಿಗೆ ಕಟ್ಟಿಕೊಳ್ಳಲು ಮಿಸಲಾಗಿದ್ದು, ಅದು ರಸ್ತೆಯಿಂದ ಸ್ವಲ್ಪವೇ ದೂರ ಹಿಂಬಾಗಕ್ಕೆ ಇರುವ ಕಾರಣ ಅಲ್ಲಿಗೆ ಹೋಗಲು ನಿರಾಕರಿಸಿ ದಲಿತರ ಜಮೀನಿನಲ್ಲಿ ಅತಿಕ್ರಮಿಸಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

1003059322
ತಮ್ಮ ಹಿರಿಯರ ಅಂತ್ಯಕ್ರಿಯೆ ನೆರವೇರಿಸಿರುವ ಸಮಾಧಿ

ಹೆಸರು ಹೇಳಲಿಚ್ಚಿಸದ ಗ್ರಾಮ ಪಂಚಾಯಿತಿಯ ಸದಸ್ಯರೊಬ್ಬರು “ದಲಿತ ಕುಟುಂಬದ ಸದಸ್ಯರು ದೂರು ನೀಡಿದರೂ, ಕೆಲ ಸ್ಥಳೀಯ ಅಧಿಕಾರಿಗಳು ಕೂಡಾ ಈ ಅಕ್ರಮ ಮನೆ ವಿಷಯದಲ್ಲಿ ಮೌನ ವಹಿಸಿರುವುದು ಜನರಲ್ಲಿ ಸಂಶಯ ಉಂಟುಮಾಡಿದೆ. ಮೇಲ್ಜಾತಿಯವರು ಎನ್ನುವ ಕಾರಣಕ್ಕೆ ಸ್ಥಳೀಯ ಆಡಳಿತವೂ ಮೌನವಾಗಿದೆ. ದಲಿತರ ಸಹಾಯಕ್ಕೆ ಯಾರೂ ನಿಲ್ಲುತ್ತಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

1003059346

ಈ ಕುರಿತು ಹೊಳಲ್ಕೆರೆ ತಹಶೀಲ್ದಾರ್ ವಿಜಯ್ ಕುಮಾರ್ ಅವರು ಪ್ರತಿಕ್ರಿಯಿಸಿ “ನಾನು ಇತ್ತೀಚಿಗೆ ವರ್ಗವಾಗಿ ಬಂದಿದ್ದು, ಈ ಮಾಹಿತಿಯನ್ನು ನಾನು ಗಮನಿಸಬೇಕಿದೆ. ಅರ್ಜಿದಾರರು ಮತ್ತೊಮ್ಮೆ ಬಂದು ಸಂಪರ್ಕಿಸಿ, ಅರ್ಜಿ ಅಥವಾ ಇತರೆ ಮಾಹಿತಿ ಮತ್ತೊಮ್ಮೆ ನಮ್ಮ ಗಮನಕ್ಕೆ ತಂದಲ್ಲಿ ನಾನು ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಶಿವಸಂಚಾರಕ್ಕೆ ಶಾಶ್ವತನಿಧಿ; ನಾಟಕೋತ್ಸವದಲ್ಲಿ ಸಾಣೇಹಳ್ಳಿ ಶ್ರೀಗಳ ಒತ್ತಾಯ

ಇಂತಹ ಅಕ್ರಮ ಭೂಕಬಳಿಕೆಗೆ ಸರ್ಕಾರ, ಕಂದಾಯ ಇಲಾಖೆಗಳು ಕೂಡ ಪರೋಕ್ಷವಾಗಿ ಕಾರಣವಾಗುತ್ತಿವೆ. ರಾಜ್ಯಾದ್ಯಂತ ಸುಮಾರು ವರ್ಷಗಳಿಂದಲೂ 15-20 ಲಕ್ಷಕ್ಕೂ ಹೆಚ್ಚು ಕಂದಾಯ ಭೂಮಿ, ಗೋಮಾಳ ಸಾಗುವಳಿಗೆ ಸಂಬಂಧಿಸಿದಂತೆ ಬಗರ್ ಹುಕುಂ ಅರ್ಜಿಗಳಿದ್ದು ರೈತರ ಹೋರಾಟದ ನಡುವೆಯೂ ಸಾಗುವಳಿ ಮಾಡಿಕೊಂಡಿರುವ ಭೂರಹಿತರಿಗೆ ಹಕ್ಕು ಪತ್ರ ವಿತರಿಸಲು ವಿಫಲವಾಗಿದೆ. ಹತ್ತಾರು ವರ್ಷಗಳಿಂದ ಭೂರಹಿತರಿಗೆ ಭೂಮಿ ಹಂಚಿಕೆಯಾಗಿಲ್ಲ. ಇದು ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಸಂಕಷ್ಟ ತಂದಿಟ್ಟಿದೆ.‌ ಸಾಗುವಳಿ ಭೂಮಿ ಆಯಕಟ್ಟಿನ ಜಾಗದಲ್ಲಿದ್ದರೆ, ದಿನಕಳೆದಂತೆ ಅಲ್ಲಿನ ಪ್ರಭಾವಿಗಳ, ಬಂಡವಾಳಶಾಹಿ, ಮೇಲ್ಜಾತಿಯವರ ಕಣ್ಣು ಬಿದ್ದು ಅನಧಿಕೃತವಾಗಿ, ದೌರ್ಜನ್ಯ , ಆಸೆ ಆಮಿಷ ತೋರಿಸಿ ಜಾಗ ವಶಪಡಿಸಿಕೊಳ್ಳುವ ಕೃತ್ಯಕ್ಕೆ ಅನೇಕ ಬಡವರು, ಭೂರಹಿತರು, ವಿಶೇಷವಾಗಿ ದಲಿತರು ಬಲಿಯಾಗುತ್ತಿದ್ದಾರೆ. ಸಾಗುವಳಿದಾರರನ್ನು ಸಕ್ರಮಗೊಳಿಸುವ ಮೂಲಕ ಹಕ್ಕುಪತ್ರ, ಪಹಣಿ, ಖಾತೆ ದಾಖಲೆಗಳನ್ನು ನೀಡಿದರೆ ಮಾತ್ರ ಇಂಥಹ ದೌರ್ಜನ್ಯ, ಅತಿಕ್ರಮಣ ಪ್ರಕರಣಗಳನ್ನು ತಡೆಯಬಹುದಾಗಿದೆ. ಇನ್ನಾದರೂ ಬಗರ್ ಹುಕುಂ ಸಮಿತಿಗಳು, ಸರ್ಕಾರ, ಕಂದಾಯ ಇಲಾಖೆ ಕ್ರಮ ಕೈಗೊಳ್ಳುವರೇ ನೋಡಬೇಕಿದೆ.‌

WhatsApp Image 2025 11 17 at 5.21.38 PM
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...