ಎನ್.ಟಿ.ಆರ್ ಅವರ ವೃತ್ತಿ ಬದುಕಿಗೆ ದೊಡ್ಡ ಅಸ್ತಿಭಾರವನ್ನು ಹಾಕಿದ 'ಪಾತಾಳ ಭೈರವಿ' ಚಿತ್ರದ ಚಿತ್ರೀಕರಣದ ವೇಳೆ ನಡೆದ ಎರಡು ಎಕ್ಸ್ಟ್ರಾ ಇಡ್ಲಿಯ ಪ್ರಸಂಗ ಮತ್ತು ಚಿತ್ರ ಗೆದ್ದು ಎನ್.ಟಿ.ಆರ್ ಸೂಪರ್ ಸ್ಟಾರ್ ಆದ ಸೋಜಿಗದ ಸುತ್ತ...
1951ರ ಜೂನ್ ತಿಂಗಳ ಒಂದು ದಿನ ಅಂದಿನ ಕೇಂದ್ರ ಗೃಹಮಂತ್ರಿ ಚಕ್ರವರ್ತಿ ರಾಜಗೋಪಾಲಚಾರಿ ಅವರು ಪ್ರಯಾಣಿಸುತ್ತಿದ್ದ ಮದ್ರಾಸ್ ಮೇಲ್ ಗುಂತಕಲ್ ಜಂಕ್ಷನ್‌ನಲ್ಲಿ ನಿಂತಿತು. ಅವರಿಗಾಗಿ ಕಾಯುತ್ತಿದ್ದ ಜನರು ರಾಜಾಜಿ ಅವರು ರೈಲಿನಿಂದ ಇಳಿದ ತಕ್ಷಣ ಸುತ್ತುವರೆದು, ಹಾರ ಹಾಕಿ ಜೈಕಾರ ಕೂಗಿದರು. ಅದೇ ವೇಳೆ ಇನ್ನೊಂದು ರೈಲು ಬಂದು ಪಕ್ಕದ ಪ್ಲಾಟ್‌ಫಾರಂನಲ್ಲಿ ನಿಂತಿತು. ರಾಜಾಜಿಯವರಿದ್ದ ಪ್ಲಾಟ್‌ಫಾರಂನಲ್ಲಿ ನಿಂತಿದ್ದ ಜನರೆಲ್ಲ ಆ ರೈಲಿನ ಕಡೆ ಓಡತೊಡಗಿದರು. ಕ್ಷಣಾರ್ಧದಲ್ಲಿ ಬದಲಾದ ದೃಶ್ಯ ಕಂಡು ರಾಜಾಜಿ ಚಕಿತರಾದರು. ಜನರ ಜೊತೆಯಲ್ಲಿ ಅವಸರವಾಗಿ ಓಡುತ್ತಿದ್ದ ರೈಲಿನ ಗಾರ್ಡನ್ನು ಹತ್ತಿರ ಕರೆದ ರಾಜಾಜಿಯವರು ಕಾರಣ ವಿಚಾರಿಸಿದರು. ಬಳ್ಳಾರಿಯಲ್ಲಿ ನಿಗದಿಯಾಗಿರುವ ‘ಪಾತಾಳ ಭೈರವಿ’ ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಿರುವ ಆ ಚಿತ್ರ ನಿರ್ಮಾಣ ತಂಡದ ಸದಸ್ಯರ ದರ್ಶನಕ್ಕಾಗಿ ಜನರು ಮುಗಿಬಿದ್ದಿದ್ದಾರೆಂದು ಆ ಗಾರ್ಡ್ ಹೇಳಿದ. ಮತ್ತಷ್ಟು ಆಶ್ಚರ್ಯದಿಂದ ಅಲ್ಲಿ ಯರ‍್ಯಾರಿದ್ದಾರೆ ಎಂದು ವಿಚಾರಿಸಿದರು. ಗಾರ್ಡ್ ಅವಸರದಿಂದ ಕಲಾವಿದರಾದ ಎನ್.ಟಿ ರಾಮರಾವ್, ಎಸ್.ವಿ ರಂಗಾ ರಾವ್, ನಿರ್ದೇಶಕರಾದ ಕೆ.ವಿ ರೆಡ್ಡಿ, ನಿರ್ಮಾಪಕರಾದ ನಾಗಿ ರೆಡ್ಡಿ, ಚಕ್ರಪಾಣಿ ಮತ್ತಿತರರ ಹೆಸರು ಹೇಳಿ ‘ಬಳ್ಳಾರಿ ಕಡೆ ರೈಲು ಹೊರಡುತ್ತಿದೆ, ಅಪ್ಪಣೆಯಾದರೆ ನಾನೂ ನೋಡಿ ಬರುತ್ತೇನೆ’ ಎಂದು ಅವರ ಸಮ್ಮತಿಗೂ ಕಾಯದೆ ಫೇರಿ ಕಿತ್ತ. ಚಿತ್ರ ಮತ್ತು ಚಿತ್ರ ಲೋಕದ ಸ್ಟಾರ್‌ಗಳು ಜನರ ಮೇಲೆ ಬೀರಿರುವ ಪ್ರಭಾವ ಕಂಡು ರಾಜಾಜಿಯವರಿಗೆ ಆಶ್ಚರ್ಯವಾಯ್ತು ಎಂದು ‘ದಿ ಹಿಂದೂ’ ಪತ್ರಿಕೆ ಈ ಘಟನೆಯನ್ನು ವಿವರವಾಗಿ ದಾಖಲಿಸಿದೆ.
ಇದನ್ನು ಓದಿದ್ದೀರಾ?: NDTV | ಪ್ರಣಯ್-ರಾಧಿಕಾ ರಾಯ್‌ಗೆ ಜಯ, ಐಟಿಗೆ ದಂಡ; ಏನಿದು ಪ್ರಕರಣ?
‘ಪಾತಾಳ ಭೈರವಿ’ -ತೆಲುಗು ಚಿತ್ರರಂಗದ ದಿಕ್ಕನ್ನು ಅನೇಕ ದಶಕಗಳ ಕಾಲ ನಿರ್ದೇಶಿಸಿದ ಚಿತ್ರ. ಅದು ಮೊದಲ ಬಾರಿಗೆ ರಜತ ಮಹೋತ್ಸವ ಮತ್ತು ಸತತ 200 ದಿನಗಳ ಕಾಲ ಪ್ರದರ್ಶನ ಕಂಡು ತೆಲುಗು ಚಿತ್ರರಂಗದ ಯಶಸ್ಸಿನ ದಾಖಲೆಯ ಸಂಪುಟವನ್ನು ಆರಂಭಿಸಿದ ಚಿತ್ರ. ತೆಲುಗು ಚಿತ್ರರಂಗವು ಜಾನಪದ ವಸ್ತುಗಳ ಚಿತ್ರಗಳ ನಿರ್ಮಾಣದಲ್ಲಿ ಅಗ್ರ ಪಂಕ್ತಿಯನ್ನು ಪಡೆಯಲು ನಾಂದಿ ಹಾಡಿದ ಚಿತ್ರ. ಆ ಚಿತ್ರದ ನಿರ್ಮಾಣದ ಹಿನ್ನೆಲೆಗೆ ಕೆಲವು ವಿಶಿಷ್ಟ ಸಂಗತಿಗಳಿವೆ.

ಹೆಸರಾಂತ ವಿಜಯಾ ಪ್ರೊಡಕ್ಷನ್ಸ್ ಸಂಸ್ಥೆಯು ಮೊದಲು ನಿರ್ಮಿಸಿದ ‘ಸಾವುಕಾರು'(1950) ತೆಲುಗು ಚಿತ್ರವು ವಿಮರ್ಶಕರ ಮನಗೆದ್ದರೂ ಹೀನಾಯ ಸೋಲು ಕಂಡಿತ್ತು. ಕಂಗಾಲದ ನಿರ್ಮಾಪಕದ್ವಯರಾದ ಬಿ. ನಾಗಿ ರೆಡ್ಡಿ ಮತ್ತು ಎ. ಚಕ್ರಪಾಣಿ ಅವರು ಗಂಭೀರ ಸಾಮಾಜಿಕ ವಸ್ತುಗಳ ಬದಲಿಗೆ ರಂಜನಾ ಪ್ರಧಾನವಾದ ರಮ್ಯ ಜಾನಪದ ವಸ್ತುವನ್ನು ಆಧರಿಸಿ ಚಿತ್ರ ನಿರ್ಮಿಸುವ ನಿರ್ಧಾರ ತಾಳಿದರು. ಅವರ ಇಚ್ಛೆಯಂತೆ ಅಲ್ಲಾವುದ್ದೀನ್ ಮಾದರಿಯ ಕಥೆಗಳಲ್ಲಿ ಸಾಮಾನ್ಯ ಯುವಕನ ಸಾಹಸ ಮತ್ತು ಮಾಟ ಮಂತ್ರವಿರುವ ಸೋಜಿಗ ಸೃಷ್ಟಿಸುವ ಎಳೆಗಳ ಜೊತೆಗೆ ಮಧುರಾ ಸುಬ್ಬಣ್ಣ ದೀಕ್ಷಿತಲು ಅವರ ‘ಕಾಸಿ ಮಜಿಲು ಕಥಲು’ ಜಾನಪದ ಕತೆಗಳ ಗುಚ್ಚದಲ್ಲಿ ಬರುವ ಪಾತ್ರಗಳ ವಿವರಗಳನ್ನು ಸೇರಿಸಿ ಆ ಕಾಲದ ಚಿತ್ರಕಥಾ ಬ್ರಹ್ಮರೆನಿಸಿದ ಪಿಂಗಳಿ ನಾಗೇಂದ್ರ ರಾವ್ ಮತ್ತು ಕೆ. ಕಾಮೇಶ್ವರರಾವ್ ಅವರು ಚಿತ್ರಕಥೆಯನ್ನು ಸಿದ್ಧಪಡಿಸಿದರು. ಆಗಿನ್ನೂ ಚಿತ್ರರಂಗದಲ್ಲಿ ಬೇರೂರಲು ಪ್ರಯತ್ನಿಸುತ್ತಿದ್ದ ಎನ್.ಟಿ ರಾಮಾರಾವ್ ಅವರು ನಾಯಕನಾಗಿ ನಟಿಸಿದ್ದ ಮೂರೂ ಚಿತ್ರಗಳು ಅಮೋಘ ಯಶಸ್ಸು ಕಂಡಿರಲಿಲ್ಲ. ದೊಡ್ಡ ಸೋಲು ಕಂಡ ‘ಸಾವುಕಾರು’ ಚಿತ್ರದಲ್ಲೂ ಅವರೇ ನಾಯಕರಾಗಿದ್ದರು. ಆ ವೇಳೆಗೆ ಬಾಲರಾಜು, ಕೀಲುಗರ‍್ರಂ, ರಕ್ಷಾರೇಖಾ, ಸ್ವಪ್ನಸುಂದರಿಯಂಥ ಯಶಸ್ವೀ ಜಾನಪದ ಚಿತ್ರಗಳಲ್ಲಿ ನಾಯಕರಾಗಿ ವಿಜೃಂಭಿಸಿದ್ದ ಅಕ್ಕಿನೇನಿ ನಾಗೇಶ್ವರರಾವ್ ಅವರನ್ನು ಈ ಚಿತ್ರದ ನಾಯಕಪಾತ್ರಕ್ಕೆ ಆರಿಸುವ ಇಂಗಿತವನ್ನು ನಿರ್ದೇಶಕ ಕೆ.ವಿ ರೆಡ್ಡಿ ಅವರು ವ್ಯಕ್ತಪಡಿಸಿದರು. ಆದರೆ ತಮ್ಮ ಸಂಸ್ಥೆಯ ಮೂರು ಚಿತ್ರಗಳಲ್ಲಿ ನಟಿಸಲು ಎನ್.ಟಿ.ಆರ್ ಅವರ ಜೊತೆ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿಯಲು ಇಚ್ಛಿಸದ ನಿರ್ಮಾಪಕರು ಸೋತಿರುವ ನಟನ ಮೇಲೆಯೇ ಪಣಕಟ್ಟಲು ನಿರ್ಧರಿಸಿದರು. ಕೆ.ವಿ ರೆಡ್ಡಿ ಅವರು ಒಲ್ಲದ ಮನಸ್ಸಿನಿಂದ ಸಮ್ಮತಿಸಿದರು. ಎನ್.ಟಿ.ಆರ್ ಎದುರು ಪ್ರತಿನಾಯಕ ನೇಪಾಳಿ ಮಾಂತ್ರಿಕನ ಪಾತ್ರಕ್ಕೆ ಇನ್ನೂ ಅಷ್ಟೇನೂ ಜನಪ್ರಿಯತೆ ಕಾಣದ ಕಲಾವಿದ ಎಸ್.ವಿ ರಂಗಾ ರಾವ್ ಅವರನ್ನು ಆಯ್ಕೆ ಮಾಡಿದ್ದರು.
ಆಗಿನ್ನೂ 27 ವರ್ಷದ ಎನ್.ಟಿ.ಆರ್ ದೈಹಿಕವಾಗಿ ಎತ್ತರದವರಾದರೂ, ಆಜಾನುಬಾಹು ಎಸ್.ವಿ ರಂಗಾ ರಾವ್ ಅವರ ಎದುರು ಸೊರಗಿದ ವ್ಯಕ್ತಿಯಂತೆ ಕಾಣುತ್ತಿದ್ದರು. ಪಾತ್ರದಲ್ಲಿ ಸಹಜತೆ ತರಲು, ಮುಖ್ಯವಾಗಿ ರಂಗಾರಾವ್ ಎದುರು ಪೇಲವವಾಗಿ ಕಾಣದಂತಿರಲು ಕೆ.ವಿ ರೆಡ್ಡಿ ಅವರು ನಾಯಕನಟನನ್ನು ಕಠಿಣ ದೇಹದಂಡನೆಗೆ ಒಳಪಡಿಸಿದರು. ಪ್ರತಿದಿನ ಅವರ ವ್ಯಾಯಾಮದ ದಿನಚರಿ ಬೆಳಗ್ಗೆ ನಾಲ್ಕು ಗಂಟೆಗೆ ಸ್ಟುಡಿಯೋನಲ್ಲಿದ್ದ ಜಿಮ್ನಾಸಿಯಂನಲ್ಲಿ ಆರಂಭವಾಗುತ್ತಿತ್ತು. ದೈಹಿಕ ಕಸರತ್ತಿನ ನಂತರ ದೊಣ್ಣೆವರಸೆ, ಕತ್ತಿ ವರಸೆಯ ತರಬೇತಿ. ಕ್ಯಾಂಟೀನ್‌ನಲ್ಲಿ ತಿಂಡಿ ಕೊಡುವ ವೇಳೆಗೆ ಬಸವಳಿದಿರುತ್ತಿದ್ದರು. ಕೊಡುತ್ತಿದ್ದ ಮಿತ ಆಹಾರ ಅವರ ಬಸವಳಿದ ದೇಹಕ್ಕೆ ಸಾಲುತ್ತಿರಲಿಲ್ಲ. ಕೇಳಲು ಸಂಕೋಚ. ಆದರೂ ಒಮ್ಮೆ ಧೈರ್ಯದಿಂದ ನಿರ್ಮಾಪಕ ನಾಗಿರೆಡ್ಡಿ ಅವರ ಮುಂದೆ ನಿಂತರು. ಬೆಳಗ್ಗೆ ನಾಲ್ಕು ಗಂಟೆ ಕಾಲ ಸತತ ಕಸರತ್ತು ಮಾಡುವುದರಿಂದ ಆಗುತ್ತಿರುವ ಆಯಾಸ ಮತ್ತು ಆಹಾರದ ಕೊರತೆಯನ್ನು ಹೇಳಿಕೊಂಡ ಎನ್.ಟಿ.ಆರ್ ಅವರು ತಮಗೆ ಕೊಡುವ ತಿಂಡಿಯ ಜೊತೆಗೆ ‘ಎರಡು ಎಕ್ಸ್ಟ್ರಾ ಇಡ್ಲಿ’ಗೆ ಬೇಡಿಕೆ ಇಟ್ಟರು. ಈಗ ನಾಚಿಕೆ ಪಡುವ ಸರದಿ ನಿರ್ಮಾಪಕರದು. ತಕ್ಷಣವೇ ಕ್ಯಾಂಟೀನ್ ಮೇಲ್ವಿಚಾರಕನನ್ನು ಕರೆದು ಇನ್ನು ಮುಂದೆ ನಾಯಕ ನಟರಿಗೆ ಸಾಕೆನಿಸುವಷ್ಟು ಮತ್ತು ಅವರು ಇಚ್ಛಿಸಿದ ಪೌಷ್ಟಿಕ ಆಹಾರ ಒದಗಿಸಲು ಆದೇಶಿಸಿದರು. ಆಹಾರ ಲಭ್ಯತೆ ಮತ್ತು ಸತತ ಕಸರತ್ತಿನಿಂದ ಎನ್.ಟಿ.ಆರ್ ಅವರ ದೇಹ ಹುರಿಗಟ್ಟಿತು. ರಂಗಾ ರಾವ್ ಅವರ ಜೊತೆ ಸರಿಸಾಟಿಯಾಗಿ ಮುಷ್ಠಿಕಾಳಗ, ಕತ್ತಿವರಸೆ ಮುಂತಾದ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡು ಕೆ.ವಿ ರೆಡ್ಡಿ ಅವರ ಆತಂಕವನ್ನು ನಿವಾರಿಸಿದರು.

ಚಿತ್ರದ ಕಥೆಯು ಯಾವುದೇ ಮಾದರಿ ಜಾನಪದ ಕಥೆಯಂತೆಯೇ ಇದೆ. ಉಜ್ಜಯಿನಿ ರಾಜ್ಯದ ಹಳ್ಳಿಯೊಂದರ ಸಾಮಾನ್ಯ ಕುಟುಂಬದ ಕುಪಿತ ಯುವಕ ತೋಟರಾಮುಡು, ರಾಜಕುಮಾರಿಯನ್ನು ಗೆಲ್ಲಲು ಸವಾಲೊಂದನ್ನು ಸ್ವೀಕರಿಸಿ ದುಷ್ಟ ಮಾಂತ್ರಿಕನ ಸಹವಾಸ ಮಾಡುವುದು; ಅವನಿಂದ ಕಲಿತ ವಿದ್ಯೆಯನ್ನೇ ಬಳಸಿ ಅವನ ಉದ್ದೇಶವನ್ನು ವಿಫಲಗೊಳಿಸಿ ಮಂತ್ರಶಕ್ತಿ ಗಳಿಸುವುದು; ಮತ್ತೆ ಮಾಂತ್ರಿಕನಿಂದ ಎದುರಾಗುವ ಅಡೆತಡೆಗಳನ್ನು ಸಾಹಸದಿಂದ ನಿವಾರಿಸಿ ಸುಖಾಂತ್ಯ ಕಾಣುವುದು. ಈ ಕತೆಯ ನಡುವೆ ಪ್ರಣಯದ ದೃಶ್ಯಗಳು, ಅಪಹರಣದ ಆತಂಕ, ಮಧುರ ಹಾಡುಗಳು, ಚುರುಕು ಮಾತುಗಳು, ಮೈ ನವಿರೇಳಿಸುವ ಮಾಟ ಮಂತ್ರದ ದೃಶ್ಯಗಳು, ಕತ್ತಿ, ದೊಣ್ಣೆ ವರಸೆ, ಮುಷ್ಠಿಕಾಳಗದ ದೃಶ್ಯಗಳ ರಂಜನೆಯ ಸರಕು ಇಡುಕಿರಿದಿತ್ತು. ಮುಖ್ಯವಾಗಿ ಆ ಕಾಲಕ್ಕೆ ದೃಶ್ಯ ವೈಭವವನ್ನೇ ನಿರ್ಮಿಸಿದ್ದ ಪಾತಾಳಲೋಕದ ಭವ್ಯವಾದ ಸೆಟ್‌ಗಳು, ಆಕಾಶದಲ್ಲಿ ತೇಲುವ ಅರಮನೆ, ಮಾರ್ಕಸ್ ಬಾರ್ಟ್ಲೀ ಅವರ ಸೊಗಸಾದ ಛಾಯಾಗ್ರಹಣದಲ್ಲಿ ಮಾಯಾಜಾಲವನ್ನೇ ಸೃಷ್ಟಿಯಾಗಿ ಪ್ರೇಕ್ಷಕರಿಗೆ ರೋಮಾಂಚನ ಗಳಿಗೆಗಳ ರಸದೌತಣದ ಅನುಭವ ನೀಡಿದ್ದವು.
ಇದನ್ನು ಓದಿದ್ದೀರಾ?: ಬಾಡಿ ಶೇಮಿಂಗ್ : ʼಡಿಂಪಲ್ ಕ್ವೀನ್ʼ ರಚಿತಾ ರಾಮ್ ನೀಡಿದ ಎಚ್ಚರಿಕೆ ಏನು ಗೊತ್ತೇ?
ಏಕ ಕಾಲಕ್ಕೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಾದ ಚಿತ್ರ ಪೂರ್ಣಗೊಳ್ಳಲು ಒಂದು ವರ್ಷ ಹಿಡಿಯಿತು. 1951ರ ಮಾರ್ಚ್ 15ರಂದು ಬಿಡುಗಡೆಯಾದ ಪಾತಾಳ ಭೈರವಿ ಚಿತ್ರಕ್ಕೆ ಆರಂಭದಲ್ಲಿ ಪ್ರೇಕ್ಷಕರಿಂದ ವ್ಯಕ್ತವಾದದ್ದು ನೀರಸ ಪ್ರತಿಕ್ರಿಯೆ. ಆದರೆ ಮೂರನೇ ವಾರದಿಂದ ಪ್ರೇಕ್ಷಕರ ವರ್ತನೆ ಸಂಪೂರ್ಣ ತದ್ವಿರುದ್ಧವಾಗಿತ್ತು. ಎನ್.ಟಿ.ಆರ್ ಅವರ ಸಾಹಸ, ರಂಗಾ ರಾವ್ ಅವರ ಜಬರ್‌ದಸ್ತ್ ಅಭಿನಯ, ತಾಂತ್ರಿಕ ಮಾಂತ್ರಿಕತೆ ಪ್ರೇಕ್ಷಕರನ್ನು ಸೆಳೆದವು. ಒಂದು ಥಿಯೇಟರ್‌ನಲ್ಲಿ ಸತತ 200 ದಿನ ಮತ್ತು 15 ಕೇಂದ್ರಗಳಲ್ಲಿ ಬೆಳ್ಳಿ ಹಬ್ಬ ಹಾಗೂ 34 ಕೇಂದ್ರಗಳಲ್ಲಿ ನೂರು ದಿನಗಳ ಪ್ರದರ್ಶನ ಕಂಡು ತೆಲುಗು ಚಿತ್ರರಂಗದಲ್ಲಿ ದಾಖಲೆ ಸೃಷ್ಟಿಸಿತು. ಎನ್.ಟಿ.ಆರ್ ಅವರ ವೃತ್ತಿ ಬದುಕಿಗೆ ದೊಡ್ಡ ಅಸ್ತಿಭಾರವನ್ನು ಚಿತ್ರ ಹಾಕಿತು. ತಮಿಳು ಆವೃತ್ತಿಯೂ ಸಹ ಸೂಪರ್ ಹಿಟ್ ಎನಿಸಿ ಹಲವು ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸಿ ಎನ್.ಟಿ.ಆರ್ ತಮಿಳು ಪ್ರೇಕ್ಷಕರಿಗೂ ಪ್ರಿಯರೆನಿಸಿದರು. ಆ ದಶಕದಲ್ಲಿ ಹದಿನಾಲ್ಕು ತಮಿಳು ಚಿತ್ರಗಳಲ್ಲಿ ನಟಿಸಿದ್ದರು.

ಸಾಮಾನ್ಯ ಯುವಕನೊಬ್ಬ ರಾಜಕುಮಾರಿಯ ಮನಗೆಲ್ಲುವ, ಖಳರನ್ನು ಸದೆಬಡಿದು ಪ್ರಜಾರಕ್ಷಣೆಗೆ ಧಾವಿಸುವ ಸಂಗತಿಗಳು ಎನ್.ಟಿ.ಆರ್ ಅವರ ರೊಮ್ಯಾಂಟಿಕ್ ಮತ್ತು ಸಾಹಸಿಯ ಇಮೇಜು ಸೃಷ್ಟಿಯಾಗಲು ಬೀಜ ನೆಟ್ಟಿತು. ಜಾನಪದ ಲೋಕದ ಮಾಯಾಜಾಲವನ್ನು ಸೃಷ್ಟಿಸಲು ಮಾರ್ಕಸ್ ಬಾರ್ಟ್ಲೀ ಅವರು ಮಾಡಿದ ಪ್ರಯೋಗ ಪ್ರೇಕ್ಷಕರ ಮನಗೆದ್ದಿತು, ಮುಂದೆ ಅವರ ಕೈ ಚಳಕ ‘ಮಾಯಾ ಬಜಾರ್’ ಚಿತ್ರದಲ್ಲಿ ಶಿಖರ ಮುಟ್ಟಿತು. ಅಂತೂ ‘ಪಾತಾಳ ಭೈರವಿ’ ತೆಲುಗು ಚಿತ್ರರಂಗದಲ್ಲಿ ಜಾನಪದ ವಸ್ತುವಿನ ಕಥಾ ಪರಂಪರೆಯು ಹೊರಳುದಾರಿ ಹಿಡಿಯುವಂತೆ ಮಾಡಿತು.
ಎಲ್ಲಾ ‘ಎರಡು ಎಕ್ಸ್ಟ್ರಾ ಇಡ್ಲಿ’ಗಳ ಮಹಿಮೆ!

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.




