ಮಹದಾಯಿ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನಿರಾಕರಣೆ ವಿಚಾರವಾಗಿ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸದೆದುರು ಮಹದಾಯಿ ಹೋರಾಟಗಾರ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಲ್ಹಾದ್ ಜೋಶಿಯವರು ಮನೆಯಿಂದ ಹೊರ ಬರುತ್ತಿದ್ದಂತೆಯೇ ರೈತ ಮುಖಂಡ ಸುಭಾಷ ಚಂದ್ರ ಪಾಟೀಲ ಮತ್ತಿತರ ರೈತರು ಕಿಡಿಕಾರಿದರು.ಗೋವಾ ರಾಜ್ಯಕ್ಕೆ ವಿದ್ಯುತ್ ಯೋಜನೆಗೆ ಅನುಮತಿ ನೀಡಲಾಗಿದೆ. ಆದರೆ ಕರ್ನಾಟಕದ ಮಹದಾಯಿಗೆ ಅನುಮತಿ ನಿರಾಕರಿಸಲಾಗಿದೆ. ಕಾರಣ ಯೋಜನೆಗೆ ಅನುಮತಿ ಕೊಡುವ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕೆಂದು ರೈತರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ| ವಿನೇಶ್ ಫೋಗಟ್ ಪಕ್ಷ ರಾಜಕಾರಣ ಮಾಡಿದರೆ ಆಕೆ ಎತ್ತಿದ ಪ್ರಶ್ನೆಗಳು ಸುಳ್ಳಾಗವು
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಬಿಜೆಪಿ ಹಾಗೂ ಎನ್‌ಡಿಎ ಮಹದಾಯಿ ಯೋಜನೆ ಜಾರಿಗೆ ಆರಂಭದಿಂದಲೂ ಪ್ರಯತ್ನ ಮಾಡುತ್ತಿದೆ. ಈವರೆಗೆ ಏನೇ ಪ್ರಗತಿ ಆಗಿದ್ದರೂ ಅದು ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿದ್ದು, ಮುಂದೆಯೂ ಈ ಯೋಜನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡಲಿದ್ದೇವೆ ಎಂದು ಅಭಯ ನೀಡಿದರು.
“ಜುಲೈ 31ಕ್ಕೆ ನಡೆದ ವನ್ಯ ಜೀವಿ ಮಂಡಳಿ ಸಭೆಯ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಅಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಯೋಜನೆ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದವರು ಪ್ರತಿಕ್ರಿಯೆ ಕೊಡಬೇಕಿತ್ತು. ಅವರು ಕೊಟ್ಟಿಲ್ಲ. ಯೋಜನೆಗೆ ಅರಣ್ಯ ಭೂಮಿ ಕೊಡಬೇಕೆಂಬ ಪ್ರಸ್ತಾವನೆ ಇರುವುದರಿಂದ ಹಾಗೂ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ವಿಷಯವನ್ನು ವನ್ಯ ಜೀವಿ ಮಂಡಳಿಯವರು ಮುಂದೂಡಿದ್ದಾರೆ. ಆದರೆ, ಇದು ತಿರಸ್ಕೃತಗೊಂಡಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.





