ವಿಶ್ವಪ್ರಸಿದ್ಧ ಹಂಪಿ ಸಮೀಪದ ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಜೊತೆಗಿದ್ದ ವಿದೇಶಿ ವ್ಯಕ್ತಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಜಿಲ್ಲಾ ನ್ಯಾಯಾಲಯವು ಸೋಮವಾರ ಮಹತ್ವದ ತೀರ್ಪು ನೀಡಿದ್ದು, ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ.
2025ರ ಮಾರ್ಚ್ 5ರಂದು ನಡೆದಿದ್ದ ಈ ಬರ್ಬರ ಕೃತ್ಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಕರಣದ ಪ್ರಮುಖ ಆರೋಪಿಗಳಾದ ಹಂದಿ ಮಲ್ಲೇಶ್, ಚೇತನ್ ಸಾಯಿ ಹಾಗೂ ಸಾಯಿಶರಣ ಅವರು ದೋಷಿಗಳೆಂದು ಸಾಬೀತಾಗಿದ್ದು ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಘಟನೆ ನಡೆದ ದಿನದಿಂದಲೂ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು.
ಅತ್ಯಾಚಾರ ಸಂತ್ರಸ್ತೆ ಇಸ್ರೇಲ್ ಪ್ರಜೆಯಾಗಿದ್ದು, ಕೊಲೆಯಾದ ವ್ಯಕ್ತಿ ಅಮೆರಿಕ ಪ್ರಜೆಯಾಗಿದ್ದ.
ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷಿ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿದ್ದೀರಾ? ಬ್ಯಾಟ್ ಬೀಸಿದ ‘ಫಿನಿಶರ್’ಗೆ ಕ್ಲೀನ್ ಬೌಲ್ಡ್ ಆದ ಸಂಸದೆ
ಆರೋಪಿಗಳು ಪ್ರವಾಸಿಗರಾಗಿದ್ದ ವಿದೇಶಿ ಮಹಿಳೆ ಹಾಗೂ ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಓರ್ವ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದು, ವಿದೇಶಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಕುರಿತು ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯವು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇದೊಂದು ‘ಅಪರೂಪದಲ್ಲಿ ಅಪರೂಪದ’ ಪ್ರಕರಣ ಎಂದು ಪರಿಗಣಿಸಿ, ಮೂವರು ದೋಷಿಗಳಿಗೆ ಗಲ್ಲು ಶಿಕ್ಷೆಯನ್ನು ಪ್ರಕಟಿಸಿದೆ. ತೀರ್ಪು ಪ್ರಕಟವಾಗುತ್ತಿದ್ದಂತೆ ಸಂತ್ರಸ್ತರಿಗೆ ನ್ಯಾಯ ಸಿಕ್ಕಂತಾಗಿದೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.






