ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಕ್ರಮಗಳು ಮತ್ತು ನೀತಿಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ. ಶತಮಾನಗಳ ಹೋರಾಟದಿಂದ ಗಳಿಸಿದ ಕಾರ್ಮಿಕ ಹಕ್ಕುಗಳನ್ನು ಕಾನೂನು ತಿದ್ದುಪಡಿಗಳ ಮೂಲಕ ನಾಶಪಡಿಸಲಾಗುತ್ತಿದೆ. ಸಚಿವಾಲಯವನ್ನೇ ದುರ್ಬಲಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಕಾರ್ಮಿಕರನ್ನು ರಕ್ಷಿಸುವ ಬದಲು, ಕಾರ್ಮಿಕ ಇಲಾಖೆಯು ಉದ್ಯೋಗದಾತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕೆ ಹೇಮಲತಾ ಆರೋಪಿಸಿದರು.
ಹಾಸನ ನಗರದ ಡಾ. ಅಂಬೇಡ್ಕರ್ ಭವನದಲ್ಲಿ 13, 14, 15 ಒಟ್ಟು ಮೂರು ದಿನಗಳ ಕಾಲ ಸಿಐಟಿಯು ವತಿಯಿಂದ 16ನೇ ರಾಜ್ಯ ಸಮ್ಮೇಳನ ನಡೆಯುತ್ತಿದ್ದು, ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಸಿಐಟಿಯು ಹೋರಾಟಗಳನ್ನು ಮುನ್ನಡೆಸಲು ಮೂರು ತಂತ್ರಗಳನ್ನು ಅಳವಡಿಸಿಕೊಂಡಿದ್ದು, ಸ್ವತಂತ್ರವಾದ ಕಾರ್ಯಾಚರಣೆಯ ಮೂಲಕ ದುಡಿಯುವ ವರ್ಗಗಳ ಹಿತವನ್ನು ರಕ್ಷಣೆ ಮಾಡುವುದು ಸಿಐಟಿಯು ಉದ್ದೇಶವಾಗಿದೆ” ಎಂದು ತಿಳಿಸಿದರು.
“ಜಂಟಿ ಹೋರಾಟಗಳನ್ನು ಕಟ್ಟುವುದರ ಮೂಲಕ ಈ ಹೋರಾಟಗಳನ್ನು ತಾರ್ಕಿಕವಾದ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದು, ಜಂಟಿ ಹೋರಾಟಗಳು ಸ್ವತಂತ್ರ ಕಾರ್ಮಿಕರ ಹೋರಾಟಗಳ ಜತೆಗೆ ರೈತ ಕಾರ್ಮಿಕರ ಹೋರಾಟಗಳನ್ನು ಬಲಪಡಿಸುವಂತಹ ಅಂಶಗಳನ್ನು ಜಾರಿ ಮಾಡುವ ಅಂಶಗಲನ್ನು ಕಳೆದ ಅಖಿಲ ಭಾರತ ಸಿಐಟಿಯು ಸಮ್ಮೇಳನದಲ್ಲಿ ನಿರ್ಧರಿಸಲಾಗಿತ್ತು. ಇಂತಹ ಅಂಶಗಳನ್ನು ಜಾರಿಗೊಳಿಸಬೇಕಾದರೆ ಸಂಘಟನಾತ್ಮಕವಾಗಿ ಗಟ್ಟಿಯಾಗಬೇಕಾಗಿರುವುದು ಅವಶ್ಯಕವಾಗಿದೆ” ಎಂದು ಹೇಳಿದರು.
“ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಶ್ರಮಶಕ್ತಿ’ ಯೋಜನೆಯು ಸಾಂವಿಧಾನಿಕ ಹಕ್ಕುಗಳನ್ನು ನಾಶಮಾಡುವ ಮನುಸ್ಮೃತಿ ಆಧಾರಿತ ನೀತಿಗಳನ್ನು ಜಾರಿಗೆ ತರುವ ಪಿತೂರಿಯಾಗಿದೆ. ಈ ನೀತಿಯು ಮಹಿಳೆಯರು ಮತ್ತು ದಮನಿತರ ಶೋಷಣೆಯನ್ನು ತೀವ್ರಗೊಳಿಸುತ್ತವೆ. ಇದು ಆರ್‌ಎಸ್‌ಎಸ್ ನೀತಿಗಳನ್ನು ಹೇರುವ ಪ್ರಯತ್ನವಾಗಿದೆ” ಎಂದು ದೂರಿದರು.
“ಕೇಂದ್ರ ಸರ್ಕಾರವು ಕಳೆದ ಹನ್ನೊಂದು ವರ್ಷಗಳಿಂದ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಪ್ರಾಮಾಣಿಕ ಸಮಾಲೋಚನೆಗಳನ್ನು ನಡೆಸಿಲ್ಲ ಅಥವಾ ಕಾರ್ಮಿಕ ಹಕ್ಕುಗಳ ಕುರಿತು ಕಾರ್ಮಿಕ ಸಂಘಟನೆಗಳ ಸಮ್ಮೇಳನವನ್ನು ನಡೆಸಿಲ್ಲ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾಡುವ ಮಾಲೀಕರ ವಿರುದ್ಧ ಕ್ರಿಮಿನಲ್ ಅಪರಾಧವೆಂದು ಪರಿಗಣಿಸದೆ, ಕೇವಲ ದಂಡಕ್ಕೆ ಸೀಮಿತಗೊಳಿಸುವ ನೀತಿಯನ್ನು ಜಾರಿಗೆ ತರಲಾಗಿದೆ” ಎಂದು ತಿಳಿಸಿದರು.
“ಕಾರ್ಮಿಕರು ಹೋರಾಟಕ್ಕೆ ಕರೆ ನೀಡಿದಾಗ, ಅವರನ್ನು ಗೃಹಬಂಧನದಲ್ಲಿ ಇರಿಸುವ ಮೂಲಕ ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಾಶಪಡಿಸಲಾಗುತ್ತಿದೆ. ಇದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರವಲ್ಲದೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿಯೂ ನಡೆಯುತ್ತಿದೆ” ಎಂದು ಹೇಳಿದರು.
“ನಿರುದ್ಯೋಗ, ಉದ್ಯೋಗದ ಕೊರತೆ, ಸಾಮಾಜಿಕ ಅಭದ್ರತೆ ಕಾರ್ಮಿಕರನ್ನು ಆತಂಕಕ್ಕೆ ದೂಡಿದೆ. ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು ಇದಕ್ಕೆ ಕಾರಣವಾಗಿದ್ದು, ಶೋಷಣೆಗೆ ಒಳಗಾಗುತ್ತಿರುವ ಕಾರ್ಮಿಕರ ಮೇಲೆ ಹೊರೆಯನ್ನು ವರ್ಗಾಯಿಸಲಾಗುತ್ತಿದೆ. ವಿಶ್ವದ ದುಡಿಯುವಜನರು ಶೋಷಣೆಯ ವಿರುದ್ಧ ಪ್ರತಿಭಟಿಸಲು ಎದ್ದಾಗ, ವಿವಿಧ ಪ್ರತಿತಂತ್ರಗಳ ಮೂಲಕ ಹೋರಾಟವನ್ನು ವಿಭಜಿಸಲು ಮತ್ತು ದಾರಿತಪ್ಪಿಸುವಂತಹ ಪ್ರಯತ್ನಗಳು ನಡೆಯುತ್ತಿವೆ” ಎಂದು ಅವರು ದೂರಿದರು.
“ಕಾರ್ಮಿಕರು ಕಲೆಕ್ಟಿವ್ ಬಾರ್ಗ್ಯಾನಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದನ್ನು ತೆಗೆದಿರುವ ಸರ್ಕಾರ, ಕಾರ್ಮಿಕ ನೀತಿಗಳನ್ನು ಉಲ್ಲಂಘಿಸುವ ಮಾಲೀಕರ ಪರವಾಗಿ ಕಾನೂನುಗಳನ್ನು ಜಾರಿಗೆ ತಂದಿದೆ. ಮಾಲೀಕರು ಯಾವುದೇ ಅಪರಾಧಗಳನ್ನು ಮಾಡಿಲ್ಲ ಎನ್ನುವಂತಹ ಎಕ್ಷಂಷನ್‌ಗಳನ್ನು ಕೊಡುತ್ತಿದ್ದಾರೆ” ಎಂದರು.
“ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಅಧಿಕಾರದಲ್ಲಿರುವ ಜಿಡಿಪಿ, ಬಿಜೆಪಿ ಸರ್ಕಾರಗಳು ಕಾರ್ಮಿಕರು ಹಾಗೂ ಕಾರ್ಮಿಕ ಮುಖಂಡರುಗಳನ್ನು ಬಂದಿಸಿ ಜೈಲಿಗಟ್ಟುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಇವರನ್ನೇ ಕ್ರಮಿನಲ್‌ಗಳಂತೆ ತೋರಿಸುತ್ತಿದ್ದಾರೆ. ಪ್ರಸ್ತುತದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹೋರಾಟ ಮಾಡುತ್ತಿರುವಂತಹ ಅಂಗನವಾಡಿ ನೌಕರರನ್ನು ತಮ್ಮ ಮನೆಗಳಲ್ಲಿಯೇ ಗೃಹಬಂಧನದಲ್ಲಿ ಇರಿಸುವಂತಹ ಪ್ರಯತ್ನವನ್ನು ಮಾಡುತ್ತಿತ್ತು. ಈ ಮೂಲಕ ಸರ್ಕಾರ ತಮ್ಮ ಹಕ್ಕುಗಳಿಗಾಗಿ ಸಂವಿಧಾನಬದ್ಧ ಹೋರಾಟಗಳನ್ನು ನಡೆಸುತ್ತಿರುವವರ ವಿರುದ್ಧ ಸಂವಿಧಾನ ಮೌಲ್ಯಗಳನ್ನು ಹತ್ತಿಕ್ಕಿ ಕಾರ್ಮಿಕ ವರ್ಗದ ಮೇಲೆ ನಿರಂತರವಾಗಿ ದಾಳಿ ನಡೆಸುವಂತಹ ಕೆಲಸವನ್ನು ಮಾಡುತ್ತಿದೆ” ಎಂದು ದೂರಿದರು.
“ನಮ್ಮ ದೇಶದಲ್ಲಿ ಆರ್‌ಎಸ್‌ಎಸ್ ಯಾವ ರೀತಿಯ ತಂತ್ರಗಳನ್ನು ಮಾಡುತ್ತಿದೆ. ಆರ್‌ಎಸ್‌ಎಸ್ ನೇತೃತ್ವ ವಹಿಸುವಂತಹ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಯಾವ ರೀತಿಯಲ್ಲಿ ವಿಘಟನೆ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದನ್ನು ಕಾಣಬಹುದು. ವಿಶೇಷವಾಗಿ ಇಂದು ಮುಸ್ಲಿಂ ಜನಸಂಖ್ಯೆ ಜಾಸ್ತಿಯಾಗಿದೆ ಎಂಬುದನ್ನು ತೋರಿಸುವುದಕ್ಕಾಗಿಯೇ, ಒಂದು ಜನಸಂಘ ಆಯೋಗವನ್ನು ಮಾಡುವ ಮೂಲಕ ಜನರನ್ನು ವಿಘಟಿಸುವ ಕೆಲಸವನ್ನು ಮಾಡುತ್ತಿರುವುದು ಕಂಡುಬರುತ್ತಿದೆ” ಎಂದರು.
“ಅಸ್ಸಾಂನ ಉಪಮುಖ್ಯಮಂತ್ರಿ ಲವ್ ಜಿಹಾದ್ ಮೂಲಕ ಬೇರೆ ಬೇರೆ ಮುಸಲ್ಮಾನರ ಮೇಲೆ ದಾಳಿ ನಡೆಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ಹಿಂದಿನ ಅಖಿಲ ಭಾರತ ಸಿಐಟಿಯು ಸಮ್ಮೇಳನ ಏನು ಹೇಳುತ್ತದೆಂದರೆ ಕಾರ್ಮಿಕ ವರ್ಗದ ಮೇಲೆ ನಡೆಯುತ್ತಿರುವ ದಾಳಿಗಳ ವಿರುದ್ಧ ನಮ್ಮ ಹೋರಾಟವನ್ನು ನಡೆಸುವುದರ ಜತೆಗೆ ಜನರ ವಿಘಟನೆ ಮಾಡುತ್ತಿರುವಂತಹ ಶಕ್ತಿಗಳ ವಿರುದ್ಧ ಹಾಗೂ ವಿಘಟಿತ ನೀತಿಗಳ ವಿರುದ್ಧವೂ ದೊಡ್ಡ ಮಟ್ಟದ ಹೋರಾಟಗಳನ್ನು ಮುನ್ನಡೆಸಬೇಕು ಎಂಬುದನ್ನು ನಾವು ತೀರ್ಮಾನಿಸಿದ್ದೇವೆ” ಎಂದು ಹೇಳಿದರು.
“ಹಿಂದುತ್ವ ಮತ್ತು ಬೇರೆ ಬೇರೆ ಹೆಸರಿನಲ್ಲಿ ಆದಿವಾಸಿಗಳ ಮೇಲೆ, ದಲಿತರ ಮೇಲೆ ಮುಸ್ಲಿಮರ ಮೇಲೆ, ಮಹಿಳೆಯರ ಮೇಲೆ ನಡೆಸುತ್ತಿರುವ ದಾಳಿಗಳನ್ನು ಪ್ರಶ್ನಿಸಿ ಹಿಂದಿನ ಅಖಿಲ ಭಾರತ ಸಮ್ಮೇಳನದಲ್ಲಿ ಚರ್ಚೆ ಮಾಡಿ, ನಾವು ಕಾರ್ಮಿಕ ವರ್ಗವನ್ನು ಒಂದಾಗಿ ಇಡಬೇಕು ಎನ್ನುವುದಾದರೆ ಆದಿವಾಸಿಗಳ ಪ್ರಶ್ನೆಗಳ ಆಧಾರದಲ್ಲಿ ಕೆಲಸ ಮಾಡಬೇಕು. ಅಲ್ಲದೆ ಕಾಲೋನಿಗಳಲ್ಲಿರುವ ಕಾರ್ಮಿಕರ ಸಮಿತಿಗಳನ್ನು ನಿರ್ಮಿಸಿ, ವಿಘಟಿಸುವ ಶಕ್ತಿಗಳ ವಿರುದ್ಧ ನಾವು ಮಧ್ಯ ಪ್ರವೇಶ ಮಾಡಿ, ಅಲ್ಲಿ ಮಹಿಳೆಯರು, ಆದಿವಾಸಿಗಳ ನಡುವೆ ಕೆಲಸ ಮಾಡಬೇಕು ಎಂಬ ತೀರ್ಮಾನವನ್ನು ಕೈಗೊಂಡಿತ್ತು” ಎಂದು ತಿಳಿಸಿದರು.
“ಈ ಅವಧಿಯಲ್ಲಿ ಧನಾತ್ಮಕ ಬೆಳವಣಿಗೆಗಳು ನಡೆದಿರುವುದನ್ನೂ ಕೂಡ ಕಾಣಬಹುದು. ವಿಶೇಷವಾಗಿ ರೈತ ಕಾರ್ಮಿಕರ ನಡುವೆ ನಡೆದಿರುವ ಒಂದು ಐಕ್ಯತೆಯನ್ನು ನೋಡುತ್ತಿದ್ದೇವೆ. ಇಲ್ಲಿಯೂ ಕೂಡ ದೇವನಹಳ್ಳಿ ರೈತರ ಹೋರಾಟ, ಬೆಳಗಾವಿಯ ಕಬ್ಬುಬೆಳೆಗಾರರ ಹೋರಾಟವನ್ನು ನೋಡಿದ್ದೇವೆ. ಇವೆಲ್ಲವೂ ಐಕ್ಯತೆಯನ್ನು ಎತ್ತಿಹಿಡಿಯುವಂತಹ ಹೋರಾಟಗಳಾಗಿವೆ. ಅಲ್ಲದೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ವಿಶೇಷವಾಗಿ ಗುಜರಾತಿನ ಅಂಗನವಾಡಿ ನೌಕರರ ಹೋರಾಟವನ್ನು ನೋಡಬಹುದು. ಅಲ್ಲಿ ಸಿಐಟಿಯು ಒಂದು ಸಣ್ಣ ಶಕ್ತಿ. ಅಂಗನವಾಡಿ ನೌಕರರ ಸಂಘಟನೆ ದೊಡ್ಡಮಟ್ಟದಲ್ಲಿಲ್ಲ. ಆದರೆ ಹೋರಾಟದ ಮೂಲಕ ಅಲ್ಲಿ ಗ್ರಾಚ್ಯುಟಿ ಮೊತ್ತ ಮತ್ತು ಕನಿಷ್ಟ ವೇತನವನ್ನು ಕೋರ್ಟ್ ಮೂಲಕ ಪಡೆದುಕೊಳ್ಳಲು ಸಾಧ್ಯವಾಗಿದೆ. ಹಾಗೆಯೇ ಕನಿಷ್ಟ ವೇತನ ಇನ್ನೂ ಜಾರಿಯಾಗಿಲ್ಲ ಎನ್ನುವ ಪ್ರಶ್ನೆಯಿದೆ” ಎಂದು ಹೇಳಿದರು.
“ಗುಜಾರಾತ್ ಎಂಬುದು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ. ಕೇಂದ್ರದಲ್ಲಿ ಪ್ರಧಾನಿಗಳಿರುವಂತಹ ರಾಜ್ಯದಲ್ಲಿ ಸಿಐಟಿಯು ಎಂಬುದು ಅವರಿಗೆ ದೊಡ್ಡ ಸವಾಲಾಗಿದೆ. ಇಂಥ ರಾಜ್ಯದಲ್ಲಿ ಹೇಗೆ ಕಾರ್ಮಿಕ ಚಳವಳಿಗಳು ನಡೆಯುತ್ತಿವೆ ಎಂಬುದನ್ನು ಅವರಿಂದ ಸಹಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲಿರುವಂತಹ ಜೆಕೆ ಪೇಪರ್ ಮಿಲ್ ವರ್ಕರ್ಸ್ ಯೂನಿಯನ್ ಮೂಲಕ ಸತತ 31 ದಿನಗಳ ನಿರಂತರ ಹೋರಾಟವನ್ನು ನಡೆಸಿ ಒಂದು ಒಳ್ಳೆಯ ಅಗ್ರಿಮೆಂಟ್‌ಗಳನ್ನು, ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ” ಎಂದರು.
“ಹರಿಯಾಣದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಆಶಾಕಾರ್ಯಕರ್ತೆಯರು ಮತ್ತು ತಮಿಳುನಾಡಿನ ಸ್ಯಾಮ್‌ಸಂಗ್ ನೌಕರರು ಬೃಹತ್ ಹೋರಾಟ ನಡೆಸಿರುವುದನ್ನು ಕಾಣಬಹುದು. ಹೀಗೆ ದೇಶಾದ್ಯಂತ ಹಲವು ಬೃಹತ್ ಕಾರ್ಮಿಕ ಹೋರಾಟಗಳು ನಡೆಯುತ್ತಿವೆ. ಇಂತಹ ಹೋರಾಟಗಳ ಪರಿಣಾಮವಾಗಿ 2020ರಿಂದ ಕೇಂದ್ರ ಸರ್ಕಾರ ಕಾರ್ಮಿಕರ ಕಾನೂನುಗಳನ್ನು ಜಾರಿಗೆ ತರುವಂತಹ ಕೆಲಸಗಳನ್ನು ನಡೆಸುತ್ತಿದೆ. ಆದರೆ ಇನ್ನೂ ಕೂಡ ಜಾರಿ ಪ್ರಕ್ರಿಯೆ ಆರಂಭವಾಗಿಲ್ಲ. ಇಂತಹ ನೀತಿಗಳ ವಿರುದ್ಧ ಹೋರಾಟ ಮಾಡುವಂತಹ ದೊಡ್ಡ ಸವಾಲು ಒಂದುಕಡೆಯಿದೆ. ಹಾಗಾಗಿ ಹೋರಾಟಗಳ ಜತೆಗೆ ಕಾರ್ಮಿಕ ವರ್ಗಗಳ ಪ್ರಜ್ಞೆಯನ್ನು ಹೆಚ್ಚಿಸುವಂತಹ ಅಗತ್ಯವಿದೆ. ಸರ್ಕಾರ ಜಾರಿಗೆ ತರುವ ಕಾರ್ಮಿಕ ಕಾನೂನುಗಳ ಒಳ ರಾಜಕೀಯವನ್ನು ಕಾರ್ಮಿಕ ವರ್ಗಕ್ಕೆ ಅರ್ಥ ಮಾಡಿಸುವ ಕೆಲಸವನ್ನು ಸಿಐಟಿಯು ಮಾಡುತ್ತಿದೆ. ಯಾಕಂದರೆ ಸರ್ಕಾರಗಳು ಬೇರೆ ಬೇರೆಯಾಗಿದ್ದರೂ ಕೂಡ ಜಾರಿ ಮಾಡುವಂತಹ ನೀತಿಗಳು ಬಂಡವಾಳಿಗರ ಪರವಾಗಿಯೇ ಇರುತ್ತವೆ. ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದೆ, ಕೇರಳದ ಎಂಡಪಂಥೀಯ ಸರ್ಕಾರವನ್ನು ಹೊರತುಪಡಿಸಿ ಎಲ್ಲ ಸರ್ಕಾರಗಳೂ ಕೂಡ ಲೇಬರ್ ಕೋಡ್‌ಗಳನ್ನು ಜಾರಿ ಮಾಡುತ್ತಿವೆ. ಅದು ಕೆಲಸದ ವೇಳೆ ಹೆಚ್ಚಿಸುವುದು, ಶಾಪ್ಸ್ ಅಂಡ್ ಕಮರ್ಷಿಯಲ್ ಎಸ್ಟಾಬ್ಲಿಷ್‌ಮೆಂಟ್ ಹಾಗೂ ಕಾನೂನು ತಿದ್ದಿಪಡಿಗಳ ಮೂಲಕ ಬೇರೆ ಬೇರೆ ಕಾನೂನು ದಾಳಿಗಳನ್ನು ನಡೆಸುವಂತಹ ಪ್ರಯತ್ನ ನಡೆಯುತ್ತಿದೆ. ಆ ನಿಟ್ಟಿನಲ್ಲಿ ನಾವುಗಳು ಕಾರ್ಮಿಕ ವರ್ಗಗಳ ನಡುವೆ ಈ ಅರಿವನ್ನು ಮೂಡಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಎಲ್ಲಿ ದ್ವಂದ್ವ ವಾದ ಇರುವುದಿಲ್ಲವೋ ಅಲ್ಲಿ ಪ್ರಗತಿ ಸಾಧ್ಯವಿಲ್ಲ: ಟಿಯುಸಿಸಿ ಜಿ ಆರ್ ಶಿವಶಂಕರ್
“ಯಾವುದೇ ಧರ್ಮ, ಜಾತಿಗೆ ಸೇರಿದ ಕಾರ್ಮಿಕರಿರಬಹುದು, ಆ ಎಲ್ಲ ಕಾರ್ಮಿಕರೂ ಇವತ್ತು ತಮ್ಮ ಬೇಡಿಕೆಗಳಿಗಾಗಿ ಮಾತ್ರ ನಡೆಸುವ ಹೋರಾಟವಲ್ಲ, ವರ್ಗ ಪ್ರಜ್ಞೆಯನ್ನು ಹೆಚ್ಚಿಸುವಂತಹ ಒಂದು ಹೋರಾಟವನ್ನು ನಡೆಸಬೇಕು. ಹಾಗಾಗಿ ಇಂತಹ ಅವಕಾಶಗಳನ್ನು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಬೇಕಾಗುತ್ತದೆ. ಕರ್ನಾಟಕದಲ್ಲಿಯೂ ಕೂಡ ದೊಡ್ಡ ಮಟ್ಟದ ಹೋರಾಟಗಳನ್ನು ಮಾಡಿದ್ದೀರಿ. ಕಳೆದ ಅಖಿಲ ಭಾರತ ಸಮ್ಮೇಳನ ಏನು ಕರೆ ಕೊಟ್ಟಿತ್ತು ಆ ಅಂಶಗಳನ್ನು ಹೇಗೆ ಜಾರಿ ಮಾಡಿದ್ದೀರಿ ಎಂಬುದನ್ನು ಇಲ್ಲಿ ವಿಮರ್ಶೆಗೊಳಪಡಿಸಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಹೇಗೆ ಮತ್ತಷ್ಟು ಕಾರ್ಮಿಕ ಚಳುವಳಿಗಳನ್ನು ಬಲಪಡಿಸಬಹುದು, ಸಂವಿಧಾನದ ಉದ್ದೇಶಪೂರ್ವಕವಾಗಿ ನಡೆಸುತ್ತಿರುವಂತಹ ಸಿಐಟಿಯು ಹೋರಾಟಗಳು ಈ ಶೋಷಣೆ ಮುಕ್ತ ವ್ಯವಸ್ತೆಯನ್ನು ತರಲು ಹೇಗೆ ಗಟ್ಟಿಯಾಗಿ ಕಾರ್ಮಿಕ ಚಳವಳಿಯನ್ನು ಕಟ್ಟಬೇಕು ಎಂಬುದಕ್ಕೆ ಮುಂದಾಗುತ್ತೀರಿ ಎಂಬುದನ್ನು ಕಂಡುಕೊಳ್ಳಬಹುದು” ಎಂದು ಹೇಳಿ 16ನೇ ರಾಜ್ಯ ಸಮ್ಮೇಳನಕ್ಕೆ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭಕ್ಕೂ ಮೊದಲು, ಘೋಷಣೆಗಳ ನಡುವೆ, ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಧ್ವಜಾರೋಹಣ ಮಾಡಿದರು. ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಎನ್.ಐ. ಉಮೇಥಾ, ರಾಜ್ಯ ಉಪಾಧ್ಯಕ್ಷ ಕೆ.ಎನ್. ಉಮೇಶ್, ಸ್ವಾಗತ ಸಮಿತಿ ಅಧ್ಯಕ್ಷೆ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ ಮತ್ತು ಇತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಜ್ಯದ ಕಾರ್ಮಿಕ ಪ್ರತಿನಿಧಿಗಳು ಇದ್ದರು.





