ಹಾಸನ ಮಣ್ಣಿನ ಹೆಣ್ಣು ಬೇರುಗಳು | ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಸಮಾಜದ ಸ್ವಾಸ್ಥ್ಯಕ್ಕಾಗಿ ಮಳೆ, ಚಳಿ, ಗಾಳಿ, ಬಿಸಿಲು, ಮುಟ್ಟು, ಗರ್ಭಿಣಿ, ಬಾಣಂತಿ… ಯಾವ ಪರಿಸ್ಥಿತಿಯನ್ನೂ ಲೆಕ್ಕಿಸದೆ ಅನೈರ್ಮಲ್ಯವನ್ನು ಸ್ವಚ್ಛಗೊಳಿಸುವ ಕೆಲಸವನ್ನು ತಮ್ಮ ಜೀವವನ್ನೇ ಪಣಕ್ಕಿಟ್ಟು ಮಾಡುವವರು ನಮ್ಮ ನಡುವೆಯೇ ಇರುವ ಪೌರಕಾರ್ಮಿಕ ಮಹಿಳೆಯರು. ಬಹುಶಃ ಇಂತಹದೊಂದು ಪ್ರಪಂಚವನ್ನು ನೋಡಿರುವ ನಾಗರಿಕರು ಕಡಿಮೆ. ಅಂತಹದೊಂದು ಜಗತ್ತಿನಲ್ಲಿ ಬದುಕು ಸಾಗಿಸುತ್ತಾರೆ ಇವರು.

ಒಂದು ದಿನ ಅವರು ವಾಸಿಸುವ ಬಡಾವಣೆಗೆೆ ಹೋಗಿದ್ದೆ. ಅಬ್ಬಾ! ಎದೆ ಝಲ್ ಎಂದಿತು. ಒಂದು ನಿಮಿಷ ಮೌನಕ್ಕೆ ಜಾರಿದೆ. ಕಣ್ಣುಗಳಲ್ಲಿ ನನಗೆ ಅರಿವಿಲ್ಲದೆ ನೀರು ಧುಮ್ಮಿಕ್ಕಿತು. ಕೊಳೆಗೇರಿಯಲ್ಲಿ ನಾಲ್ಕು ಗೋಡೆಯ ನಡುವಿನ ಪುಟ್ಟ ಕೋಣೆಯೇ ಅವರ ಮನೆ. ಆ ಮನೆಯ ತುಂಬಾ ಮಕ್ಕಳು. ಅದರಲ್ಲೇ ಅಡುಗೆ, ನಿದ್ರೆ, ಸ್ನಾನ ಎಲ್ಲವೂ. ಕೊರೊನಾ ವೈರಸ್‌ನಂತಹ ಯಾವುದೇ ಮಹಾಮಾರಿ ಬಂದರು ಸರಿ, ಅನ್ನ ಕೊಟ್ಟಿರುವ ವೃತ್ತಿ ನಿಲ್ಲಿಸಲು ಆದೀತೇ? ಬೀದಿ ಕಸ ಗುಡಿಸದೇ ಜೀವನ ನಡೆದೀತೇ? ಹೀಗೆಂದೇ ಜನ ನಿದ್ರೆಯಿಂದ ಎಚ್ಚರಗೊಳ್ಳುವ ಮುನ್ನವೇ ಎಲ್ಲರ ಮನೆಗಳ ಮುಂದಿನ ಬೀದಿಯನ್ನು ಗುಡಿಸುತ್ತಾರೆ. ಮನೆಯವರು ಬಾಗಿಲು ತೆರೆದಾಗ ಆಕಸ್ಮಿಕವಾಗಿ ಪೌರಕಾರ್ಮಿಕ ಮಹಿಳೆ ಎದುರು ಕಂಡರವರಿಗೆ ‘ಗುಡ್ ಮಾರ್ನಿಂಗ್’ ಖಂಡಿತ ಹೇಳುವುದಿಲ್ಲ. ಮಾತನಾಡಿಸುವುದಿಲ್ಲ, ಕತ್ತೆತ್ತಿ ನೋಡುವುದೂ ಇಲ್ಲ. ಆದರೆ ಕೆಲವರು ವೇದಿಕೆಯ ಮೇಲೆ ಮೈಕ್ ಮುಂದೆ ನಿಂತಾಗ- ಪೌರಕಾರ್ಮಿಕ ಮಹಿಳೆಯರನ್ನು ಇಂದ್ರ-ಚಂದ್ರರಿಗೆ ಹೋಲಿಸುತ್ತಾರೆ! ‘ನಮ್ಮನ್ನು ಹೀಗೇಕೆ ನಡೆಸಿಕೊಳ್ಳುತ್ತೀರಾ’ ಎಂದು ಪ್ರಶ್ನೆ ಮಾಡದೆ, ಇಡೀ ಸಮಾಜವನ್ನು, ಪರಿಸರವನ್ನು ಸ್ವಚ್ಛವಾಗಿಡುವ ಸಲುವಾಗಿ, ರೋಗದಿಂದ ಮುಕ್ತಿಗೊಳಿಸುವ ಸಲುವಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕ ಮಹಿಳೆಯರ ಕಾಯಕ ಕಂಡು ಮನಸ್ಸು ತಲ್ಲಣಿಸುತ್ತದೆ.

ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅದೊಂದು ಸಾರ್ವಜನಿಕ ಶೌಚಾಲಯ, ಅಲ್ಲೊಬ್ಬ ಪೌರಕಾರ್ಮಿಕ ಮಹಿಳೆ. ಆಕೆ ಮಾಸಿದ ಸೀರೆಯುಟ್ಟು ಬಾಯಿಯಲ್ಲಿ ಎಲೆ ಅಡಿಕೆ ತಂಬಾಕು ತುಂಬಿಕೊಂಡು ಸುಕ್ಕುಗಟ್ಟಿದ ಮುಖ ಹೊತ್ತು ಕುಳಿತಿದ್ದಳು. ಅವಳ ಪೂರ್ವಾಪರ ವಿಚಾರಿಸಿದೆ. ಆಕೆ ದೀನಸ್ವರದಲ್ಲಿ ಹೇಳಿದ್ದು ಹೀಗೆ- ‘ನಂಗೆ ಗಂಡ ಇಲ್ಲ ಕಣವ್ವ. ಸತ್ತು ಮೂರು ತಿಂಗಳಾಯ್ತು. ಅವರು ಇಲ್ಲೇ ಪೌರಕಾರ್ಮಿಕರಾಗಿದ್ರು. ಕಾಯಿಲೆಯಿಂದ ತೀರಿಕೊಂಡರು. ಅವರು ಹೋದ ಮೇಲೆ ನಂಗೆ ಕೆಲ್ಸ ಕೊಟ್ಟವರೇ. ಆರು ತಿಂಗಳ ಹೆಣ್ಣು ಮಗು ಐತೆ. ಮನೇಲಿ ಮಲಗಿಸಿ ಬಂದಿನಿ. ನಾನು ಈ ಕೆಲ್ಸ ಮಾಡ್ತಿರೋದು ಬದುಕಿಗಾಗಿ’ ಎಂದು ಹೇಳುವಾಗಲೇ ಕಣ್ಣೀರು ಧುಮುಕಿತು.

ಹಾಸನದ ನಿರ್ಮಲನಗರದ ಜಯಮ್ಮ ಹೇಳುತ್ತಾರೆ- ‘ಸಮಾಜದಿಂದ ಬಹಿಷ್ಕೃತರಂತಿರುವ ನಾವುಗಳು, ನಮ್ಮ ತಂದೆ, ತಾಯಿ ಕೂಡ ಪೌರಕಾರ್ಮಿಕರು. ನಾವು ಬೀದಿ ಗುಡಿಸುವವರ ಮಕ್ಕಳು ಎಂದು ಹೇಳಿಕೊಳ್ಳಲು ಮಕ್ಕಳಿಗೂ ನಾಚಿಕೆ. ಹಲವು ಅವಮಾನಕರ ಪ್ರಸಂಗಗಳನ್ನು ನಿತ್ಯವೂ ಎದುರಿಸುತ್ತೇವೆ. ನನ್ನ ಮಕ್ಕಳು ಓದುವ ಸ್ಕೂಲಿನ ಎದುರೇ ನಾವು ಕಸ ಗುಡಿಸುತ್ತಿದ್ದೆವು. ನಮ್ಮ ಮಕ್ಕಳು ನಮ್ಮ ಕಣ್ಣ ಮುಂದೆ ಇದ್ದರೂ ಮಾತನಾಡಿಸುತ್ತಿರಲಿಲ್ಲ. ನಮಗೂ ಹೆದರಿಕೆ, ಎಲ್ಲಿ ಅವರ ಗೆಳೆಯರ ಎದುರು ಮಾತನಾಡಿಸಿದರೆ ‘ಇವಳು ನನ್ನಮ್ಮ’ ಎಂದು ಹೇಳುತ್ತಾರೋ? ಎಲ್ಲಿ ಮಕ್ಕಳ ಮರ್ಯಾದೆ ಹೋಗುತ್ತದೋ ಎಂಬ ಆತಂಕ. ಇಂತಹ ನೂರಾರು ಮುಜುಗರದ ಪ್ರಸಂಗಗಳನ್ನು ಎದುರಿಸಿದ್ದೇವೆ.’

ಇದನ್ನು ಓದಿದ್ದೀರಾ?: ಜಾನಪದ ಕ್ಷೇತ್ರದ ಅನನ್ಯ ಸಾಧಕಿ- ಡಾ. ವೈ.ಸಿ.ಭಾನುಮತಿ

ಪೌರ ಕಾರ್ಮಿಕರಾದ ಕಾಮಾಕ್ಷಿಯವರು- ‘ನನ್ನ ಗಂಡ ಪೌರಕಾರ್ಮಿಕರಾಗಿದ್ದರು. ಅವರು ತೀರಿಕೊಂಡ ಮೇಲೆ ನನಗೆ ಅವರ ಕೆಲಸ ಸಿಕ್ಕಿತು. ನಾನು ಖಾಯಂ ನೌಕರಳು. ನನ್ನ ಮಕ್ಕಳನ್ನು ಓದಿಸಲು ನನ್ನ ಕುಟುಂಬ ನಿರ್ವಹಣೆಗಾಗಿ ನನಗೆ ಈ ಕೆಲಸ ಅನಿವಾರ್ಯವಾಗಿದೆ. ಆದರೆ ಇರುವ ಒಬ್ಬ ಮಗ ಮುಂದೆ ಈ ಕೆಲಸವನ್ನು ಮಾಡಬಾರದು ಎಂದು ಡಿಗ್ರಿ ಓದಿಸುತ್ತಿದ್ದೇನೆ. ಪದವಿ ಮಾಡಿದರೆ ಎಲ್ಲಾದರೂ ಕೆಲ್ಸ ಗಿಟ್ಟಿಸಿಕೊಂಡು ಅವನು ಎಲ್ಲರಂತೆ ಒಳ್ಳೆಯ ಜೀವನ ಮಾಡಲಿ ಎನ್ನೋದು ನನ್ನ ಕನಸು. ನನಗೆ ಈಗ ಬರುತ್ತಿರುವ ಸಂಬಳದಲ್ಲಿ ಮಗನ ವಿದ್ಯಾಭ್ಯಾಸ, ಮನೆ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸಲು ಸಾಕಾಗುತ್ತಿದೆ. ತಲೆಗೊಂದು ಸೂರು ಸರ್ಕಾರ ಮಾಡಿಕೊಟ್ಟರೆ ನಮಗೆ ಅಷ್ಟೇ ಸಾಕು. ಹಿಂದಿನ ನಮ್ಮ ಪೌರಕಾರ್ಮಿಕರು ಪಡುತ್ತಿದ್ದ ಕಷ್ಟ ಈಗ ಇಲ್ಲ. ಹೋರಾಟಗಾರರ ಹೋರಾಟದ ಫಲವಾಗಿ ಈಗ ಸ್ವಲ್ಪ ನಮ್ಮ ಬದುಕು ಸುಧಾರಣೆಯಾಗುತ್ತಿದೆ. ತಿಂಗಳಿಗೆ ಸರಿಯಾಗಿ ಸಂಬಳವಾಗುತ್ತೆ. ಆರೋಗ್ಯ ತಪಾಸಣೆಯನ್ನು ಮಾಡಿಸುತ್ತಾರೆ. ಪೌರಕಾರ್ಮಿಕರ ಸೇವೆ ಇದೆ ನೋಡಿ, ಇದು ನಿಜವಾದ ಸಮಾಜ ಸೇವೆ, ಜನಸೇವೆ. ನಾವು ಕೂಡ ಸೈನಿಕರಂತೆ ಅಲ್ವಾ? ನಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಾ ಸಮಾಜದ ಆರೋಗ್ಯ ಕಾಪಾಡುತ್ತಿದ್ದರೂ ಈ ಜನ ನಮ್ಮನ್ನು ಯಾಕೆ ಹೀಗೆ ನೋಡ್ತಾರೆ?’ ಎಂದು ಬೇಸರ ವ್ಯಕ್ತಪಡಿಸಿದರು. 

ಊರು ಕಸ ಬಾಚಿ ರೊಸಿ ಹೋಗಿರುವ ಭಾಗ್ಯಮ್ಮ- ‘ಒಬ್ಬೊಬ್ಬರು ನಾವು ಕುಡಿಯಲು ನೀರು ಕೇಳಿದರೆ ಲೋಟದಲ್ಲಿ ನೀರು ಕೊಡಲ್ಲ, ಕೆಲವರಂತೂ ನೀರೇ ಇಲ್ಲ ಅನ್ನುತ್ತಾರೆ. ಬೆಳಗ್ಗೆ ಮನೆಯಿಂದ ಬಂದಿರುತ್ತೇವೆ. ನೀರು ಕೇಳಿದರೆ ಕೊಡದಿದ್ದಾಗ ಮನಸ್ಸಿಗೆ ಬೇಸರವಾಗುತ್ತೆ. ಈಗ ನಾವೇ ಮನೆಯಿಂದ ಬಾಟಲಿಯಲ್ಲಿ ನೀರು ಕೂಡ ಹೊತ್ತುಕೊಂಡು ಹೋಗ್ತೀವಿ. ಜನ ನಿದ್ರೆಯಿಂದ ಎಚ್ಚರಗೊಳ್ಳುವ ಮುನ್ನವೇ ಎಲ್ಲರ ಮನೆ ಮುಂದಿನ ಬೀದಿ ಗುಡಿಸುತ್ತೇವೆ. ಆದರೂ ಅವರಿಗೆ ಮಾನವೀಯತೆ ಮನುಷ್ಯತ್ವ ಇಲ್ಲ. ಅವರ ಮನಸ್ಸೇ ಸ್ವಚ್ಛವಾಗಿಲ್ಲ! ಅವರ ಮನೆ ಮುಂದಲ ಬೀದಿ ಸ್ವಚ್ಛ ಮಾಡುವ ನಮ್ಮನ್ನು ಸ್ವಚ್ಛತಾ ಕಾರ್ಮಿಕರೆಂದು ಅಸಹ್ಯಪಡುತ್ತಾರೆ. ಹಸಿ ಕಸ, ಒಣ ಕಸ ವಿಭಾಗಿಸಿ ಹಾಕಿ ಎಂದು ಪ್ರತಿದಿನ ಬಾಯಿಬಡಿದುಕೊಳ್ಳುತ್ತೇವೆ. ಕೆಲವು ಜನರು ಎಷ್ಟು ಸೋಮಾರಿಗಳು ಎಂದರೆ ಎಲ್ಲವನ್ನೂ ಒಂದಕ್ಕೆ ತುಂಬಿ ಹಾಕುತ್ತಾರೆ. ಬಾಟಲಿ, ಹಸಿಮಾಂಸ, ಡೈಪರ್, ಸ್ಯಾನಿಟರಿ ಪ್ಯಾಡ್… ನಾವು ನೋಡದ ಅಸಹ್ಯಗಳಿಲ್ಲ. ದೊಡ್ಡಜನ ಇರೋ ಬಡಾವಣೆಗಳ ಕಸ ಗುಡಿಸುವಾಗಲಂತೂ ನಮ್ಮ ಪಾಡು ಬೇಡಾ. ಮನುಷ್ಯರನ್ನು ಪ್ರೀತಿಸದಿದ್ದರೂ ಸರಿ, ಥರಾವರಿ ಸಾಕು ನಾಯಿಗಳನ್ನು ವಾಯುವಿಹಾರಕ್ಕೆಂದು ಕರೆದುಕೊಂಡು ಬಂದು ಬೀದಿಗಳಲ್ಲೇ ಮಲವಿಸರ್ಜನೆ ಮಾಡಿಸಿರುತ್ತಾರೆ. ನಾವು ಅದನ್ನು ನಿತ್ಯ ಎತ್ತಿ ಎತ್ತಿ ಸಾಕಾಗಿ ಹೋಗಿದೆ.’

ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

‘ನಮ್ಮ ಮಕ್ಕಳು ಮಾತ್ರ ಪೌರ ಕಾರ್ಮಿಕರಾಗಬಾರದು. ಅದಕ್ಕೆ ಮಕ್ಕಳನ್ನು ಚೆನ್ನಾಗಿ ಓದಿಸಿದ್ದೇವೆ. ಪದವಿ, ಎಂಜಿನಿಯರಿಂಗ್, ಪತ್ರಿಕೋದ್ಯಮ, ನರ್ಸಿಂಗ್, ಕಾನೂನು ಪದವಿ… ಹೀಗೆ ಓದಿದ್ದಾರೆ ನಮ್ಮ ಮಕ್ಕಳು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅನುರಾಧ, ಮಂಗಳಮ್ಮ.

ಇದೆಲ್ಲಾ ನೋಡಿ, ಕೇಳಿ ನನಗೆ ನೆನಪಾಗಿದ್ದು ಸ್ವಾಮಿ ವಿವೇಕಾನಂದರು ಹೇಳಿದ ಮಾತು- ”ರೈತರು, ಚಮ್ಮಾರರು, ಪೌರಕಾರ್ಮಿಕರು ಮತ್ತು ಇದೇ ರೀತಿಯ ಭಾರತದ ಕೆಳವರ್ಗಗಳ ಜನರು ನಿಮಗಿಂತ ಹೆಚ್ಚು ಕೆಲಸ ಮಾಡುವ ಸಾಮರ್ಥ್ಯವುಳ್ಳವರು ಮತ್ತು ಸ್ವಾವಲಂಬಿಗಳು. ಅವರು ಸಾವಿರಾರು ವರ್ಷಗಳಿಂದ ದೂರುಗಳನ್ನೇನೂ ಮಾಡದೆ ಮೌನವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.” ರಾಷ್ಟ್ರಕವಿ ಕುವೆಂಪು ಅವರು, ಇವರ ಸಂಕಷ್ಟದ ಬಗ್ಗೆ ಜನರಿಗೆ ಎಚ್ಚರ ಮೂಡಿಸಲು ‘ಜಲಗಾರ’ ನಾಟಕವನ್ನೇ ಬರೆದರು.

ಸಮಾಜದಲ್ಲಿ ಪೌರಕಾರ್ಮಿಕ ಮಹಿಳೆಯರು ನಿರಂತರ ಶ್ರಮಿಸುತ್ತಿದ್ದಾರೆ. ಒಂದು ದಿನ ಇವರ‍್ಯಾರೂ ಕೆಲಸ ಮಾಡದಿದ್ದರೆ, ಬೀದಿಗಿಳಿಯದಿದ್ದರೆ, ನಾವ್ಯಾರೂ ರಸ್ತೆಗಳಲ್ಲಿ ಓಡಾಡಲು ಸಾಧ್ಯವೇ ಇಲ್ಲ! ತಮ್ಮ ಸುರಕ್ಷತೆಯನ್ನೂ ಬದಿಗಿಟ್ಟು ಸೇವೆ ಸಲ್ಲಿಸುತ್ತಿರುವ ಮಹಿಳೆಯರು ನಿಜವಾಗಿಯೂ ಸಾಮಾಜಿಕ ವೈದ್ಯರು. ಇವರಿಗೆ ಯಾವುದೇ ರೀತಿಯ ರಜೆ ಎಂಬುದಿಲ್ಲ. ಬೆಳಗ್ಗೆ 5-6 ಗಂಟೆಗೇ ಕೆಲಸಕ್ಕೆ ಹಾಜರಾಗುವ ಇವರಿಗೆ ಹಲವು ಬಾರಿ ಕುಡಿಯಲು ನೀರು, ಬಳಸಲು ಶೌಚಾಲಯ, ಬಟ್ಟೆ ಬದಲಿಸಲು ಒಂದು ಪುಟ್ಟ ಕೊಠಡಿ ಸಹ ಸಮರ್ಪಕವಾಗಿರುವುದಿಲ್ಲ. ಈ ಪೌರಕಾರ್ಮಿಕ ಮಹಿಳೆಯರಿಗೆ- ಮಹಿಳೆಯರ ಹಕ್ಕು, ಮಾನವ ಹಕ್ಕುಗಳು ಯಾವುದೂ ಅನ್ವಯವಾಗುವುದಿಲ್ಲವೆ? ಈ ಆಧುನಿಕ, ವೈಜ್ಞಾನಿಕ, ಕೃತಕ ಬುದ್ಧಿಮತ್ತೆಯ ಯುಗದಲ್ಲಿಯೂ ಇಡೀ ಸಮಾಜವೇ ಇವರನ್ನು ದೂರ ಇಟ್ಟಿದೆ. ಸಮಾಜದ ಜನ ಇವರನ್ನು ಮನುಷ್ಯರು ಎಂದೇ ಪರಿಗಣಿಸದಿರುವುದು ನೋವಿನ ಸಂಗತಿ.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಹಾಸನ ಜಿಲ್ಲೆಯಲ್ಲಿ ಪ್ರಸ್ತುತ ಸಾವಿರಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 226 ಮಂದಿ ಮಹಿಳಾ ಪೌರಕಾರ್ಮಿಕರು. ಹಾಸನ-55, ಚನ್ನರಾಯಪಟ್ಟಣ-30, ಅರಕಲಗೂಡು-19, ಸಕಲೇಶಪುರ-28, ಆಲೂರು-12, ಬೇಲೂರು-24, ಅರಸೀಕೆರೆ-32, ಹೊಳೆನರಸೀಪುರ-26 ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮಹಿಳೆಯರು ಪುರುಷರೊಟ್ಟಿಗೆಯೇ ಸೇರಿ ಸೌಹಾರ್ದತೆಯಿಂದ ಪುರುಷರಿಗೆ ಸರಿಸಮಾನವಾಗಿ ಎಲ್ಲ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ಪೌರಕಾರ್ಮಿಕರದೇ ಆದ ಯಾವುದೇ ಪ್ರತ್ಯೇಕ ಸಂಘಟನೆ ಇಲ್ಲ. ಅವರಿಗೆ ಏನೇ ಸಮಸ್ಯೆ, ತೊಂದರೆಗಳಾದರೂ ಜಿಲ್ಲಾ ಪೌರ ಕಾರ್ಮಿಕರ ಸಂಘಟನೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದು, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ. ಆದರೂ ರಾಜ್ಯದಲ್ಲಿ ಸೇವಾನಿರತ ಮಹಿಳಾ ಪೌರಕಾರ್ಮಿಕರ ಮೇಲೆ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ ನಡೆಯುತ್ತಿವೆ. ಜಿಲ್ಲೆಯಲ್ಲೂ ಅಂತಹ ಪ್ರಕರಣಗಳಾಗಿ ಅಲ್ಲಲ್ಲೇ ತಣ್ಣಗಾಗಿವೆ, ಸದ್ದಡಗಿವೆ, ಬಗೆಹರಿದಿವೆ.

ಈ ಎಲ್ಲಾ ಗಮನಿಸಿದಾಗ ಅನ್ನಿಸಿದ್ದು ಸಮಸ್ಯೆ ಪೌರಕಾರ್ಮಿಕ ವೃತ್ತಿಯದ್ದಲ್ಲ; ನಾಗರಿಕ, ಆಧುನಿಕ ಎಂದು ಹೇಳಿಕೊಳ್ಳುವ ಮನಸ್ಥಿತಿಯದ್ದು! ಈ ಹೆಣ್ಣುಮಕ್ಕಳಿಗೂ- ನಾನು ಈ ಕೆಲಸ ಮಾಡುತ್ತೇನೆ ಎಂದು ಹೇಳಿಕೊಳ್ಳಲು ನಾಚಿಕೆ, ಸಂಕೋಚ. ಏಕೆಂದರೆ ಆ ವೃತ್ತಿಗೆ ಸಮಾಜದಲ್ಲಿ ಗೌರವ ಕೊಡುವವರು ತೀರಾ ಕಡಿಮೆ. ವೃತ್ತಿ ಘನತೆಯನ್ನು ಗೌರವಿಸದ ಸಮಾಜಕ್ಕೆ ಅದನ್ನು ಕಲಿಸುವುದು ಹೇಗೆಂಬುದೇ ದೊಡ್ಡ ಸವಾಲು. ಪೌರ ಕಾರ್ಮಿಕ ಸೇವೆಯಲ್ಲಿ ನಿರತರಾಗಿರುವ ಮಹಿಳೆಯರಿಗೆ ಪ್ರಸ್ತುತ ತುರ್ತು ಅಗತ್ಯವಿರುವುದೆಂದರೆ-

• ಹೆಚ್ಚಿನವರು ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರದು ಮತ್ತು ಖಾಯಂ ನೌಕರರ ಕೆಲಸ ಒಂದೇ ಆಗಿದ್ದರೂ ವೇತನ ಮತ್ತು ಸೌಲಭ್ಯಗಳಲ್ಲಿ ತಾರತಮ್ಯವಿದೆ. ಹೀಗಾಗಿ ಗುತ್ತಿಗೆದಾರರಡಿ ಕೆಲಸ ಮಾಡುವುದು ತಪ್ಪಬೇಕಿದೆ. ಸರ್ಕಾರವೇ ಇವರನ್ನು ಖಾಯಂ ಕೆಲಸಕ್ಕೆ ತೆಗೆದುಕೊಳ್ಳಬೇಕಿದೆ.

• ಗಾಜು, ವೈದ್ಯಕೀಯ ತ್ಯಾಜ್ಯಗಳಂತಹ ಅಪಾಯಕಾರಿ ಕಸವನ್ನು ಕೆಲ ಬಾರಿ ಬರಿಗೈಯಲ್ಲಿ ನಿರ್ವಹಿಸಬೇಕಾಗುತ್ತದೆ. ಇದು ಅಪಾಯಕಾರಿಯೂ, ಆರೋಗ್ಯ ಸಮಸ್ಯೆಗೆ ಕಾರಣವೂ ಆಗುತ್ತದೆ. ಇದಕ್ಕೆ ತಕ್ಕ ಸೌಲಭ್ಯವನ್ನು ತುರ್ತಾಗಿ ನೀಡಬೇಕು.

• ಮಹಿಳಾ ಪೌರಕಾರ್ಮಿಕರ ಮೇಲೆ ಹಲ್ಲೆ, ಜಾತಿನಿಂದನೆ, ಲೈಂಗಿಕ ಕಿರುಕುಳದ ಪ್ರಕರಣಗಳು ಅಲ್ಲಿಲ್ಲಿ ನಡೆಯುತ್ತಿವೆ. ಇದಕ್ಕಾಗಿ ಪೊಲೀಸರ ನೇತೃತ್ವದಲ್ಲಿ ದೌರ್ಜನ್ಯ ತಡೆಗಟ್ಟಲು ಪ್ರತ್ಯೇಕ ಸಮಿತಿ ನೇಮಿಸಿ ಸೂಕ್ತ ಕ್ರಮ ಜರುಗಿಸಬೇಕು

• ಶೌಚಾಲಯ, ಕುಡಿಯುವ ನೀರು, ಭದ್ರತೆ, ರಕ್ಷಣಾತ್ಮಕ ಸಾಮಗ್ರಿಗಳಂತಹ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ತಕ್ಷಣ ಕ್ರಮವಹಿಸಬೇಕು.

• ಪೌರಕಾರ್ಮಿಕರ ಮಕ್ಕಳು ನೆಮ್ಮದಿಯಾಗಿ, ಬಯಸಿದಷ್ಟು ಶಿಕ್ಷಣ ಪಡೆಯಲು ವಸತಿನಿಲಯಗಳಲ್ಲಿ ದಾಖಲಾತಿಗೆ ಆದ್ಯತೆ ನೀಡಬೇಕು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸೂಕ್ತ ಉಚಿತ ತರಬೇತಿ ಕೊಡಬೇಕು.

• ಮನೆಗಳಿಲ್ಲದವರಿಗೆ- ವಸತಿ ಸೌಲಭ್ಯ, ಮೂಲಸೌಕರ್ಯ ತುರ್ತಾಗಿ ಒದಗಿಸಬೇಕು.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಇವುಗಳ ಮಧ್ಯೆಯೂ ಹಾಸನದಲ್ಲಿ ಅಂತಾರಾಷ್ಟ್ರೀಯ ಚಿತ್ರಕಲಾವಿದರಾದ ಕೆ.ಟಿ.ಶಿವಪ್ರಸಾದ್, ಸಾಮಾಜಿಕ ಹೋರಾಟಗಾರರಾದ ಆರ್.ಪಿ.ವೆಂಕಟೇಶಮೂರ್ತಿ, ದಲಿತ ಹೋರಾಟಗಾರರಾದ ಚಂದ್ರಪ್ರಸಾದ್ ತ್ಯಾಗಿ, ಜಯರಾಂ, ಕೃಷ್ಣದಾಸ್, ಮರಿಜೋಸೆಫ್, ನಾಗರಾಜ್ ಹೆತ್ತೂರು… ಇನ್ನೂ ಮುಂತಾದ ಸಾಮಾಜಿಕ ಕಾಳಜಿಯುಳ್ಳವರ ಹೋರಾಟದ ಮೂಲಕ, ಮೊದಲ ಹಂತದ ಪೌರಕಾರ್ಮಿಕರಿಗೆ ಮತ್ತವರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲೆಗೊಂದು ಸೂರು ಲಭ್ಯವಾಗಿದೆ. ಇನ್ನೂ ಉಳಿಕೆಯವರಿಗೆ ತಕ್ಷಣವೇ ಮನೆಗಳು ದೊರಕಬೇಕು. ಹೀಗೆ ಪೌರಕಾರ್ಮಿಕರಿಗೆ ಹಕ್ಕುಗಳನ್ನು ಕೊಡಿಸಲು, ಸ್ವಾಭಿಮಾನದ ಬದುಕನ್ನು ಕಟ್ಟಿ ಕೊಡಲು ಅವಿರತ ಶ್ರಮಿಸಿರುವವರಿಗೆ, ಈಗಲೂ ಶ್ರಮಿಸುತ್ತಿರುವವರಿಗೆ ನನ್ನದೊಂದು ಸಲಾಂ.

ಪೌರಕಾರ್ಮಿಕ ಮಹಿಳೆಯರಿಗೆ ಅವಶ್ಯಕವಾದ ವ್ಯವಸ್ಥೆಯನ್ನು ಕಲ್ಪಿಸಿದರೆ, ಅವರು ಸಮಾಜದಿಂದ ದೂರ ಉಳಿಯದಂತೆ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ. ಅಲ್ಲದೆ ಈ ಸಮುದಾಯದ ಮಹಿಳೆಯರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತದೆ. ಪೌರಕಾರ್ಮಿಕ ಮಹಿಳೆಯರು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ತಮ್ಮ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವವರು. ಇವರು ಸಮಾಜವನ್ನು ತಾಯ್ತನದಿಂದ ಕಾಣುತ್ತಿರುವುದರಿಂದಲೇ ನಾವು ನೆಮ್ಮದಿಯಾಗಿ ಬದುಕಲು ಸಾಧ್ಯವಾಗಿದೆ. ಅಂತಹ ತಾಯಂದಿರಿಗೆಲ್ಲಾ ಗೌರವದ ಕೃತಜ್ಞತೆ.

-ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...