ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
”ಪೊರೆಯೆನ್ನ ಪ್ರಭುವೇ ಶ್ರೀ ಗುರುವೆಂಬ ವರಕಲ್ಪ ತರುವೇ”- ಶ್ರೀಮತಿ ಸಾವಿತ್ರಮ್ಮ ಹಾಡುವ ಪ್ರಾರ್ಥನಾ ತತ್ವಪದವಿದು. ಇವರನ್ನು ‘ಭಜನೆ ಸಾವಿತ್ರಮ್ಮ’ ಎಂದು ಗುರುತಿಸುತ್ತಾರೆ. ಭಜನೆ ಹಾಡುಗಳೆಂದರೆ ಅವರಿಗೆ ಪಂಚಪ್ರಾಣ. ಭಜನೆ ಹಾಡುಗಳು ಕೂಡ ತತ್ವಪದಗಳೆ. ಜನ ಸಮೂಹವನ್ನು ಮಂತ್ರಮುಗ್ಧಗೊಳಿಸಿ ಪಾರಲೌಕಿಕ ಅನುಭವದ ಸ್ತರಕ್ಕೆ ಕೊಂಡೊಯ್ಯುವ ಅದಮ್ಯ ಶಕ್ತಿಯ ಸ್ವರೂಪವೇ ತತ್ವಪದಗಳು. ಹಾಗೆಯೇ ಭಜನೆ ಪದಗಳು ಕೂಡ. ‘ಭಜನೆ’ ಸಂಸ್ಕೃತದ ‘ಭಜ್’ ಧಾತುವಿನಿಂದ ಉತ್ಪತ್ತಿಯಾದ ಪದ. ಭಜನೆ ಎಂದರೆ ಭಗವಂತನನ್ನು ಆರಾಧಿಸುವುದು, ಸ್ತುತಿಸುವುದು ಎಂದು ಅರ್ಥ. ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸುವ ಒಂದು ಜನಪದ ಕಲೆಯೇ ಭಜನೆ.
ಸಾವಿತ್ರಮ್ಮನವರದ್ದು ಬಹಳ ವಿಶಿಷ್ಟವಾದ ವ್ಯಕ್ತಿತ್ವ, ಬದುಕಿನಲ್ಲಿ- ಆರ್ಥಿಕವಾಗಿ ಸ್ಥಿತಿವಂತರೇನಲ್ಲ. ಆದರೆ ಭಕ್ತಿಯಲ್ಲಿ ಆಗರ್ಭ ಶ್ರೀಮಂತರು. ವೃತ್ತಿಯಿಂದ ಕೃಷಿಕರು, ಪ್ರವೃತ್ತಿಯಿಂದ ಭಜನಾ ಕಲಾವಿದರು. ಇಡೀ ಬದುಕನ್ನು ಗುರುಭಕ್ತಿಗಾಗಿ, ಭಜನೆ ಹಾಡುಗಳಿಗಾಗಿ, ತತ್ವಪದ ತತ್ವಜ್ಞಾನದ ತುರಿಯಾನುಭೂತಿಗಾಗಿ ತನ್ನನ್ನು ತಾನು ಅರ್ಪಿಸಿಕೊಂಡಿರುವ ಸಾಧಕ ಮಹಿಳೆ ಇವರು.
ಇದನ್ನು ಓದಿದ್ದೀರಾ?: ಮೈಸೂರು ಸಾಂಪ್ರದಾಯಿಕ ಕಲೆಗೆ ಮೆರುಗು ತಂದ- ಪ್ರಭಾ ಮಲ್ಲೇಶ್
ಸಾವಿತ್ರಮ್ಮನವರ ಜನ್ಮಸ್ಥಳ- ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಗಂಗೂರು. ತಂದೆ ಶಿವೇಗೌಡ, ತಾಯಿ ಮಂಜಮ್ಮ. ಇಬ್ಬರೂ ದಿವಂಗತರಾಗಿದ್ದಾರೆ. ಇವರ ಎರಡನೇ ಮಗಳೇ ಸಾವಿತ್ರಮ್ಮ. ಶಾಲೆಗೆ ಹೋಗಲಿಲ್ಲ, ಅಕ್ಷರ ಕಲಿಯಲಿಲ್ಲ. ಆದರೂ ಗುರುವಿನ ಪ್ರಭಾವಕ್ಕೆ ಒಳಗಾದ ಚೇತನ, ಇವರ ನೆನಪಿನ ಶಕ್ತಿ ಅಗಾಧ. ಊರೂರು ಸುತ್ತುತ್ತಾ ನೂರಾರು ತತ್ವಪದಗಳನ್ನು ಹಾಡುತ್ತಾರೆ. ಇಡೀ ರಾತ್ರಿ ಭಜನೆ ಕಾರ್ಯಕ್ರಮ ನಡೆಸುತ್ತಾರೆ. ಇದೆಲ್ಲ ನಿಮಗೆ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ”ನಮ್ಮ ಊರಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಒಬ್ಬರು ಮೇಷ್ಟ್ರಿದ್ದರು. ಅವರು ದಾಸರ ಕೀರ್ತನೆಗಳನ್ನು, ಕೈವಲ್ಯದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಬಾಲ್ಯದಲ್ಲೇ ಆ ಹಾಡುಗಳ ಆಕರ್ಷಣೆಗೆ ಒಳಗಾದೆ. ನಾನೂ ಕೂಡ ಹಾಡುಗಾರಳಾಗಬೇಕೆಂದು ನಿರ್ಧರಿಸಿದೆ. ಹಾಗೆಯೇ ನಮ್ಮ ಮನೆಯ ಪಕ್ಕದಲ್ಲಿ ಒಬ್ಬರು ಜಂಗಮರಿದ್ದರು. ಅವರು ದೇವಿ ಮಹಾತ್ಮೆಯನ್ನು ತುಂಬಾ ಚೆನ್ನಾಗಿ ವ್ಯಾಖ್ಯಾನ ಮಾಡುತ್ತಿದ್ದರು. ಅವರು ಹೇಳುತ್ತಿದ್ದ ದೇವಿಯ ಕಥೆಗಳು ನನ್ನನ್ನು ದೈವಭಕ್ತಿಯ ಕಡೆ ಪರಿವರ್ತಿಸಿದವು. ಅಧ್ಯಾತ್ಮದ ಕಡೆ ನನ್ನ ಮನಸ್ಸು ತುಡಿಯತೊಡಗಿತು. ಆಗ ನನಗೆ ಸುಮಾರು 17 ವರ್ಷ ವಯಸ್ಸು. ನನ್ನ ತಂದೆ ನನಗೆ ಮದುವೆ ಮಾಡುವ ಧಾವಂತದಲ್ಲಿ ಇದ್ದರು. ನನ್ನ ತಂದೆಗೆ ಹೇಳಿದೆ ‘ನನಗೆ ಮದುವೆ ಇಷ್ಟವಿಲ್ಲ, ಸಂಸಾರದ ಬಂಧನದೊಳಗೆ ಬಂಧಿಯಾಗಲು ಬಯಸುವುದಿಲ್ಲ. ನಾನು ಬ್ರಹ್ಮಚಾರಿಣಿಯಾಗಿ ಇರುತ್ತೇನೆ. ಸದಾ ಗುರುವಿನ ಧ್ಯಾನದಲ್ಲಿ ನಿರತಳಾಗಿ ದೈವ ಕೃಪೆಗೆ ಪಾತ್ರಳಾಗಿ, ಆ ಮೂಲಕ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡು ಎಂದು ನನ್ನ ಅಂತರಾತ್ಮ ತಿಳಿಸಿದೆ. ನನ್ನನ್ನು ಬಲವಂತ ಮಾಡಬೇಡಿ ಮುಕ್ತಳಾಗಿ ಇರಲು ಬಿಡಿ’ ಎಂದು ಕೇಳಿಕೊಂಡೆ. ಆದರೆ ಅವರು ನನ್ನ ಬ್ರಹ್ಮಚರ್ಯವನ್ನು ಒಪ್ಪಲಿಲ್ಲ. ಬಲವಂತವಾಗಿ ಮದುವೆ ಮಾಡಿದರು. ಆದರೆ ನನ್ನ ಮನಸ್ಸು ಅಧ್ಯಾತ್ಮದ ಯಾವುದೋ ಒಂದು ದಿವ್ಯ ಬೆಳಕಿನ ಕಡೆ ತುಡಿಯುತ್ತಿತ್ತು.”
”ನಾನು ಸಂಸಾರದೊಳಗೆ ಹೆಚ್ಚು ಕಾಲ ಇರಲಿಲ್ಲ. ಪತಿಗೆ ನನ್ನ ಮನದಿಂಗಿತ ಹೇಳಿ, ಬೇರೆ ಮದುವೆಯಾಗಬೇಕೆಂದು ಮನವಿ ಮಾಡಿ, ಬಂಧನದಿಂದ ಮುಕ್ತಳಾದೆ. ಗುರುವನ್ನು ಕಾಣುವ ತವಕದಿಂದ ಹುಚ್ಚಳಂತೆ ಅಲೆದಾಡಿದೆ. ಗುರುವೇ ದಿಕ್ಕೆಟ್ಟ ನನ್ನ ಮನಸ್ಸಿಗೆ ಬೆಳಕಿನ ದಾರಿ ತೋರು ಎಂದು ಕೂಗಿ ಪ್ರಾರ್ಥಿಸಿದೆ. ಒಬ್ಬ ಒಳ್ಳೆಯ ಗುರು ಕೃಪೆ ಲಭ್ಯವಾಯಿತು. ಸಜ್ಜನರ ಸಹವಾಸದಿಂದ, ಸತ್ಸಂಗದಿಂದ, ಶರಣರ ಸಂಗದಿಂದ ನಾನು ಸಾಕ್ಷಾತ್ ಶರಣೆಯಾದೆ.”
ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ
”ನನ್ನದು ಆಡಂಬರದ ಬದುಕಲ್ಲ. ಉಡುಗೆ ತೊಡುಗೆಯ ವ್ಯಾಮೋಹವಿಲ್ಲ. ಸರಳವಾದ ಬದುಕು. ಕಾಯಕಶೀಲ ಬದುಕು. ತಂದೆ ಕೊಟ್ಟ ಆಸ್ತಿಯೇ ನನ್ನ ಬದುಕಿಗೆ ಆಧಾರ. ಪರಿಶ್ರಮದಿಂದ ಕೃಷಿ ಕಾಯಕ ಮಾಡ್ತೀನಿ. ಮತ್ತೊಬ್ಬರ ಮೇಲೆ ಅವಲಂಬಿಸಿಲ್ಲ. ಅಕ್ಕನ ಮಗನನ್ನು ಸಾಕಿಕೊಂಡಿದ್ದೀನಿ. ಸ್ವತಂತ್ರವಾದ ಬದುಕು ನನ್ನದು. ತಾಳ ತಂಬೂರಿಯೇ ನನ್ನ ಆಸ್ತಿ. ಸಂಗಡಿಗ ಹಾಡುಗಾರರೇ ನನ್ನ ಹಿತೈಷಿಗಳು. ನಮ್ಮದು ಸಮೂಹ ಗಾನ ಕಾರ್ಯಕ್ರಮ. ನಾನೇ ಪ್ರಧಾನ ಗಾಯಕಳು, ದಂಬಡಿ ನುಡಿಸ್ತೀನಿ, ತಾಳ ಹಾಕ್ತಿನಿ, ಹಾರ್ಮೋನಿಯಂ ನುಡಿಸುವ ಕಲೆಯನ್ನು ಕಲಿತಿದ್ದೀನಿ. ನನ್ನ ಜೀವನವೇ ಸಂಗೀತಮಯ” ಎಂದು ತನ್ನ ಬದುಕಿನ ವಿವರಗಳನ್ನು ಬಿಚ್ಚಿಟ್ಟರು ಈಗ ಸುಮಾರು 61ರ ವಯೋಮಾನದ ಸಾವಿತ್ರಮ್ಮ.
ಶರಣರ ವಚನಗಳನ್ನೂ ಹಾಡ್ತೀರ ಎಂದು ಪ್ರಶ್ನಿಸಿದಾಗ ”ತುಂಬಾ ವಚನಗಳನ್ನು ಹಾಡ್ತೀನಿ. ಅದರಲ್ಲೂ ಬಸವಣ್ಣನವರ ವಚನಗಳು ನನಗೆ ಪ್ರಿಯವಾದವು. ವಚನಗಳನ್ನು ಕೀರ್ತನೆಗಳನ್ನು ಹಾಡಿದಂತೆ, ತತ್ವಪದಗಳನ್ನು ಹಾಡಿದಂತೆ ಹಾಡುವುದಿಲ್ಲ. ಅವುಗಳನ್ನು ಹಾಡುವ ಕ್ರಮವೇ ಬೇರೆ. ಅವು ಗದ್ಯ ಪ್ರಧಾನವಾದ ಹಾಡುಗಳು. ಸಮಾಜಮುಖಿ ಹಾಡುಗಳು. ಅವುಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಹಾಡಬೇಕು. ಹಳೇಬೀಡು ಹತ್ತಿರದ ಪುಷ್ಪಗಿರಿ ಮಠದಲ್ಲಿನ ಹುಣ್ಣಿಮೆ ಕಾರ್ಯಕ್ರಮದಲ್ಲಿ 25 ವರ್ಷದಿಂದ ಹಾಡುತ್ತಿದ್ದೇನೆ. ಮಠದ ಗುರುಗಳಿಗೆ ನನ್ನ ಕಂಡರೆ ಅಭಿಮಾನ. ಅವರ ಎಲ್ಲಾ ಭಕ್ತಿಪ್ರಧಾನ ಕಾರ್ಯಕ್ರಮಗಳಲ್ಲಿ ನನ್ನನ್ನೂ ಕರೆಸುತ್ತಾರೆ. ಹಾಗೆಯೇ ಮೈಸೂರಿನ ಸುತ್ತೂರು ಮಠದ ಜಾತ್ರೆಯಲ್ಲಿ ಒಂದು ವಾರಗಳ ಕಾಲ ಕಾರ್ಯಕ್ರಮ ಕೊಟ್ಟಿದ್ದೇನೆ. ನನ್ನ ಕಲೆಯನ್ನು ಮೆಚ್ಚಿದ ಸುತ್ತೂರು ಸ್ವಾಮಿಗಳು ಪ್ರಶಸ್ತಿ, ಪಲಕ ನೀಡಿ ಅತ್ಯಂತ ಅಭಿಮಾನದಿಂದ ಗೌರವಿಸಿದ್ದಾರೆ. ಹಾಗೆಯೇ ನಿಟ್ಟೂರು ಹತ್ತಿರದ ಬೂದೇಶ್ವರ ಸ್ವಾಮಿ ಸನ್ನಿಧಿಯಲ್ಲಿಯೂ ಭಜನೆ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತಾ ಬರುತ್ತಿದ್ದೇವೆ. ನನಗೆ ಬೂದೇಶ್ವರನೇ ಗುರು. ಆತನೇ ನನ್ನ ಬದುಕಿಗೆ ಬೆಳಕು. ಸದಾ ಆತನ ಸ್ಮರಣೆಯಲ್ಲಿಯೇ ಬದುಕಿನ ಬುತ್ತಿಯನ್ನು ತುಂಬಿಕೊಳ್ಳುತ್ತಿದ್ದೇನೆ.”
ಇದನ್ನು ಓದಿದ್ದೀರಾ?: ಕಾಯಕ ಯೋಗಿನಿ ಕಾಂಚನಮಾಲಾ
”ನೀವು ಒಮ್ಮೆ ಬಂದು ನನ್ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಆಗ ಈ ಸಾವಿತ್ರಮ್ಮನ ಆಧ್ಯಾತ್ಮಿಕ ಸಂಪತ್ತು, ಜನಪದ ಸಾಹಿತ್ಯ ಸಂಪತ್ತು ಪರಿಚಯವಾಗುತ್ತದೆ” ಎಂದು ಹೇಳಿದ ಸಾವಿತ್ರಮ್ಮ ”ತವರೂರು ಹಾದೀಲಿ ಕಲ್ಲುಂಟು, ಮುಳ್ಳುಂಟು, ನಾನ್ಯಂಗೆ ಬರಲಿ ಬಿಸಿಲಲ್ಲಿ. ಅಣ್ಣ ಬರಲಿಲ್ಲ ವಿಧಿಯೇ, ನನ್ನ ಕರೀಲಿಲ್ಲ” ಎಂಬ ಒಂದು ಜನಪದ ಗೀತೆಯನ್ನು ಗಟ್ಟಿ ಧ್ವನಿಯಲ್ಲಿ ಹಾಡಿ ತನ್ನೊಳಗಿನ ತಾದಾತ್ಮ್ಯದ ಮಧುರ ಭಕ್ತಿಯ ಮಹತ್ವವನ್ನು ಹೊರಹಾಕಿದರು.
ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ
ಸಾವಿತ್ರಮ್ಮ ಕಲಾವಿದರು ಮಾತ್ರವಲ್ಲ. ಕ್ರೀಡಾಪಟುವೂ ಹೌದು! ಜಿಲ್ಲಾಮಟ್ಟದ ಹಿರಿಯರ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ತಮ್ಮ ಕಾರ್ಯಕ್ರಮಗಳು ನಡೆದಾಗ ಬಂದ ಹಣವನ್ನು ಪಕ್ಕವಾದ್ಯದವರಿಗೆಲ್ಲ ಸಮನಾಗಿ ಹಂಚಿ ಧನ್ಯರಾಗುತ್ತಾರೆ. ಇಂತಹ ಕಲಾವಿದೆಯ ವಿವರ- ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಾಗಲಿ, ಜಾನಪದ ಅಕಾಡೆಮಿಯಲ್ಲಾಗಲಿ ದಾಖಲಾಗಿಲ್ಲ ಎಂಬುದು ನೋವಿನ ಸಂಗತಿ. ಸೋಜಿಗದ ಸಂಗತಿ ಎಂದರೆ, ಇವನ್ನೆಲ್ಲಾ ಹೇಗೆ ದಾಖಲಿಸಬೇಕು, ಯಾವ ಅನುಕೂಲ ಎಲ್ಲಿಂದ ಪಡೆಯಬೇಕು ಎಂಬುದೊಂದೂ ಗೊತ್ತಿಲ್ಲದ ಮುಗ್ಧೆ! ಅವರ ಸಾತ್ವಿಕ ಜ್ಞಾನಕ್ಕೆ, ಭಕ್ತಿಗೆ, ವಿರಕ್ತಿಗೆ ಗೌರವಪೂರ್ವಕ ನಮನಗಳು.
-ತಿರುಪತಿಹಳ್ಳಿ ಶಿವಶಂಕರಪ್ಪ





