ಹಾಸನ ಮಣ್ಣಿನ ಹೆಣ್ಣು ಬೇರುಗಳು | ಹಗರೆಯ ಮೂವರು ಮೌಖಿಕ ಕಥೆಗಾರ್ತಿಯರು…

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಹಗರೆ ಎಂಬ ಊರಿನಲ್ಲಿ ಅಂದು- ಕಥೆ ಹೇಳುತ್ತಿದ್ದವರ ಮತ್ತು ಸೋಬಾನೆ ಹಾಡುತ್ತಿದ್ದವರ ದಂಡೇ ಇತ್ತು. ಅವರಲ್ಲಿ ಬಹಳ ಸುಂದರವಾಗಿ, ಆಕರ್ಷಕವಾಗಿ ಕಥೆ ಹೇಳುವ ಬೋರಕ್ಕನ ಹೆಣ ಹೊತ್ತುಕೊಂಡು ನಡೆಯುತ್ತಿದ್ದಾಗ- ನನಗೆ ಹಗರೆಯ ಹೈಕಳಿಗೆ ಆಕೆ ಸುಶ್ರಾವ್ಯವಾಗಿ ಹೇಳುತ್ತಿದ್ದ ರಾಜ-ರಾಣಿಯರ ಕಥೆ ನೆನಪಿನಂಗಳದಲ್ಲಿ ಸುರಿಯಹತ್ತಿತು.

ಸುಮಾರು 35-40 ವರ್ಷಗಳ ಹಿಂದೆ ಹಗರೆಯ ಮಕ್ಕಳ ಮತ್ತು ಹೆಂಗಸರ ಅಚ್ಚುಮೆಚ್ಚಿನ ಕಥೆಗಾರ್ತಿಯರು ಮೂರು ಜನ. ಬೋರಕ್ಕ, ಭಾಗ್ಯಮ್ಮ ಮತ್ತು ಬಳೆ ಗೌರಕ್ಕ. ಕನ್ನಡ ಸಾಹಿತ್ಯ ಲೋಕದ ತ್ರಿವಳಿ ಲಂಕೇಶ್, ತೇಜಸ್ವಿ ಹಾಗೂ ಅನಂತಮೂರ್ತಿಯವರ ತರಹ; ಈ ಮೂವರು ಕಥೆಗಾರ್ತಿಯರು(ಸ್ಟೋರಿಟೆಲ್ಲರ್‍ಸ್) ಒಬ್ಬರಿಗಿಂತೊಬ್ಬರು ಪ್ರಚಂಡ ಕಥೆಗಾರ್ತಿಯರು. ಮಾತ್ರವಲ್ಲ ಅಕ್ಷರ ಬರೆಯಲು ಓದಲು ಬರದಿದ್ದರೂ, ಯಾವ ಸಾಹಿತ್ಯದ ಲಯಕ್ಕೂ ಸಾಟಿ ಇಲ್ಲದಂತೆ ಕತೆಗಳನ್ನು ಸಮಕಾಲಿಕವಾಗಿ ಸೃಷ್ಟಿ ಮಾಡಿಕೊಂಡು ಮಾಲೆ ರೀತಿ ಪೋಣಿಸುವ ಕಲೆಗಾರಿಕೆಯನ್ನು ಸಾಧಿಸಿಕೊಂಡಿದ್ದವರು. ಜೊತೆಗೆ ಈ ಮೂವರೂ ಅದ್ಭುತ ಹಾಡುಗಾರ್ತಿಯರು ಕೂಡ. ಊರೊಳಗೆ ನಡೆಯುವ ಶುಭ ಸಮಾರಂಭಗಳಲ್ಲಿ ಈ ಮೂವರು ಇರದಿದ್ದರೆ ಆ ಸಮಾರಂಭ ಕಳೆಗುಂದುತ್ತಿತ್ತು. ಅಂದು ಸೋಬಾನೆ ಹಾಡಿಲ್ಲದಿದ್ದರೆ ಆ ಸಮಾರಂಭಗಳು ಸಮಾರೋಪ ಹೊಂದುತ್ತಿರಲಿಲ್ಲ. ಬೋರಕ್ಕನ್ನೋ, ಭಾಗ್ಯಕ್ಕನ್ನೋ, ಗೌರಕ್ಕನ್ನೋ ಕರಿರೋ ಎನ್ನುತ್ತಿದ್ದರು. ಈಗ ಈ ಮೂವರೂ ಇಹಲೋಕ ತ್ಯಜಿಸಿ ನೆಲದ ಸಾಂಸ್ಕೃತಿಕ ಲೋಕದಲ್ಲಿ ಮೂರು ವ್ಯವಕಲನ ಸಂಖ್ಯೆ ಹೆಚ್ಚಿಸಿ ಹೋಗಿದ್ದಾರೆ.

ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೋರಕ್ಕ: ಮೌನದೊಳಗಿನ ಕಥಾ ಜಾದೂಗಾರ್ತಿ
ಉದ್ದ ದೇಹದ, ಸಪೂರ ಆಕೃತಿಯ, ಬಿಳಿ ಬಣ್ಣದ, ಸ್ವಲ್ಪ ಉಬ್ಬಿದ ಹಲ್ಲಿನ, ಸಾಧು ಸ್ವಭಾವದ ಬೋರಮ್ಮನ ಹಲ್ಲಿನ ಬಣ್ಣ- ಎಲೆ ಅಡಿಕೆ ಜೊತೆಗೆ ಹೊಗೆಸೊಪ್ಪಿನ ಆಲಿಂಗನದಿಂದ ಸ್ವಲ್ಪ ಕಪ್ಪಾಗಿಯೇ ಇದ್ದವು. ಒಂದು ಕಣ್ಣು ಬಿಳುಚಿಕೊಂಡು ಕಾಣಿಸುತ್ತಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಸೌದೆ ಆಯಲು ಹೋಗಿ ಚುಚ್ಚಿಕೊಂಡು ದೃಷ್ಟಿ ಕಳೆದುಕೊಂಡಿತ್ತಂತೆ. ಬೋರಕ್ಕ ಕೇವಲ ಕಥೆಗಾರ್ತಿಯಲ್ಲ, ಅವರು ಕಲ್ಪನಾ ಲೋಕದ ಜಾದೂಗಾರ್ತಿ. ಬಾಹ್ಯದ ಒಂದು ಕಣ್ಣಿನ ದೃಷ್ಟಿ ಮಸುಕಾಗಿದ್ದರೂ, ಅವರ ಅಂತರ್ ದೃಷ್ಟಿ ಮಾತ್ರ ಅತ್ಯಂತ ತೀಕ್ಷ್ಣವಾಗಿತ್ತು. ಅವರು ಕಥೆ ಹೇಳಲು ಕುಳಿತರೆ ಸಾಕು, ಹಗರೆಯ ಮಕ್ಕಳು, ಹೆಂಗಸರು ಅವರ ಮನೆಯ ಜಗುಲಿಯ ಮೇಲೆ ತಮ್ಮನ್ನು ತಾವು ಮರೆತು ಪ್ರತಿಮೆಯಂತೆ ಮಂತ್ರಮುಗ್ಧರಾಗುತ್ತಿದ್ದರು. ಅವರ ದೇಹ ಭಾಷೆ ಮತ್ತು ಧ್ವನಿಯ ಏರಿಳಿತಗಳು, ನಡುನಡುವೆ ಸುಶ್ರಾವ್ಯವಾಗಿ ಹಾಡುಗಳ ಸಾಲುಗಳನ್ನು ಠಂಕಿಸಿ ಪ್ರಸ್ತುತಪಡಿಸುವ ಪರಿ ಒಬ್ಬ ನುರಿತ ಅಭಿನೇತ್ರಿ ಅಥವಾ ಜಗದ್ಗುರುವನ್ನು ನೆನಪಿಸುತ್ತಿದ್ದವು.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಊರ ದನ ಕಾಯುವ ‘ಪೆಸಾರಿ’ ರಜೆ ಪಡೆದ ದಿನ ನಮಗೆಲ್ಲಾ ಖುಷಿ; ಆ ದಿನ ಬೋರಕ್ಕ ದನ ಮೇಯಿಸಲು ನಮ್ಮ ಜೊತೆ ಬರುತ್ತಾರೆ ಎಂದು. ಹಾಗೂ ಬೇಸಗೆ ರಜೆಗಳಲ್ಲಿ ಪೆಸಾರಿ ದನ ಮೇಯಿಸುತ್ತಿರಲಿಲ್ಲ. ನಾವುಗಳೇ ಬಹಳ ಆಸಕ್ತಿಯಿಂದ ದನ ಕಾಯುವ ಕೆಲಸ ಆಯ್ದುಕೊಳ್ಳುತ್ತಿದ್ದೆವು. ಕಾರಣ; ಬೋರಕ್ಕನಿಂದ ಕಥೆ ಹೇಳಿಸಿ ಕೇಳಲು. ರಾಜ-ರಾಣಿಯರ ಕಥೆಗಳು- ಆ ಕಥೆಗಳು ಫ್ಯಾಂಟಸಿಯಿಂದ ಕೂಡಿದ ಕಾರಣ ಬಹಳ ಆಪ್ಯಾಯಮಾನವಾಗುತ್ತಿತ್ತು- ಕುವೆಂಪುರವರ ಬೊಮ್ಮನಹಳ್ಳಿಯ ಕಿಂದರಿಜೋಗಿ ತರಹ.

ಬೆಳಗ್ಗೆ ಕಥೆ ಹೇಳಲು ಪ್ರಾರಂಬಿಸಿದರೆ ಸಂಜೆ ವೇಳೆಗೆ ಕಾಲು ಭಾಗದ ಕಥೆ ಮಾತ್ರ ಆಗಿರುತ್ತಿತ್ತು. ಮರು ದಿನಕ್ಕೆ ಆ ಕಥೆ ಸೀರಿಯಲ್ ತರ ಮೀಸಲಿರುತ್ತಿತ್ತು. ಊಹಿಸಿ ಆ ಕಥೆಯೊಳಗೆ ಬೋರಮ್ಮ ಎಂತಹ ಮಾಂತ್ರಿಕತೆ ತುಂಬಿರುತ್ತಿದ್ದರು ಎಂದು. ಎಷ್ಟೋ ಬಾರಿ ಕಥೆ ಕೇಳುತ್ತಾ ಕೇಳುತ್ತಾ ದನಗಳು ಕಳೆದು ಹೋಗಿರುತ್ತಿದ್ದವು! ಸರತಿಯಂತೆ ನಾವುಗಳು ದನಗಳನ್ನು ತಿರುವುತ್ತಿದ್ದೆವು.(ತಿರುವುದು ಅಂದರೆ ಮೇಯಿಸುವ ವ್ಯಾಪ್ತಿಯೊಳಗೆ ನಮ್ಮಗಳ ಕಣ್ಣಿಗೆ ಕಾಣುವ ಹಾಗೆ ದನಗಳನ್ನು ಕಾಯ್ದುಕೊಳ್ಳುವುದು). ನಮ್ಮೂರ ಕಾಡಿನೊಳಗೆ ಅವು ತಮ್ಮ ಮೇವು ಹುಡುಕಿಕೊಂಡು ಹೋಗುತ್ತಿದ್ದವು. ಬೋರಕ್ಕನಿಗೆ ಹೇಳುತ್ತಿದ್ದೆವು- ‘ಈ ದನಗಳೂ ಕೂಡ ನಿಮ್ಮ ಕಥೆ ಕೇಳುವಂತಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲೇ ಸುತ್ಲೂ ಸುತ್ಕಂಡಿರವು, ಈ ತಿರುಗಿಸೋ ಕಷ್ಟವೇ ಇರುತ್ತಿರಲಿಲ್ಲ ಅಲ್ವೆ!?’ ಎಂದು. ‘ಕಲಿಕಾಲ ಕನಪ್ಪ, ಮೂಕಪ್ರಾಣಿಗಳು ಸುತ್ತಾಡ್ಕಂಡೇ ಮೇಯದು ಹೋಗು ತಿರುವಿ ಬಾ’ ಅನ್ನುತ್ತಿದ್ದರು. ಆಗ ಕಥೆಗೆ ಒಂದು ಬ್ರೇಕ್.

ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಬೋರಕ್ಕನ ಪಾಲಿಗೆ ಕಥೆ ಎಂದರೆ ಕೇವಲ ಮನರಂಜನೆಯಲ್ಲ, ಅದು ಬದುಕನ್ನು ಅರ್ಥಮಾಡಿಕೊಳ್ಳುವ ಒಂದು ದಿವ್ಯ ಸಾಧನವಾಗಿತ್ತು. ಜಾತಿಯ ಅಹಮನ್ನು ಮೀರಿ ಎಲ್ಲಾ ಜಾತಿಯ ಮಕ್ಕಳನ್ನು ತನ್ನ ಮಡಿಲಲ್ಲಿಟ್ಟು ಸಲಹಿದ ಮಹಾತಾಯಿ ಬೋರಕ್ಕನಿಗೊಂದು ಪ್ರಣಾಮ.

ಬಳೆ ಗೌರಮ್ಮ: ನಗು ಮತ್ತು ಸ್ವಾಭಿಮಾನದ ಸಂಗಮ
ನಮ್ಮ ಮನೆಯ ಬಳಿಯೇ ವಾಸವಾಗಿದ್ದ ‘ಗೌರಮ್ಮ’ ದುಂಡು ಮುಖ, ಹಣೆಯ ತುಂಬ ರೂಪಾಯಗಲದ ಕುಂಕುಮ ಬೊಟ್ಟು ಅದಕ್ಕೊಪ್ಪುವ ಮುತ್ತು ಪೋಣಿಸಿದಂತಹ ದಾಳಿಂಬೆಯಂತಹ ದಂತಪಂಕ್ತಿ. ಎಲೆಅಡಿಕೆಯ ಬಣ್ಣದಿಂದ ಕೆಂಪುಗೊಂಡು ನಡುವೆ ಬಿಳಿ ಎದ್ದು ಕಾಣುತ್ತಿತು. ಸ್ವಲ್ಪ ಮಜಬೂತಾದ ದೇಹ, ಯಾವಾಗಲೂ ಸದಾ ನಗುಮೊಗದಿಂದಲೇ ಎಲ್ಲರನ್ನು ಮಾತನಾಡಿಸುತ್ತಿದ್ದುದು. ಬಡತನವನ್ನು ಬಳೆಕಟ್ಟಿನ ಜೊತೆಯೇ ಹೆಗಲಲೊತ್ತು ಗಂಡನ ಜೊತೆ ಕಟ್ಟಿಕೊಂಡು ಊರೂರು ತಿರುಗಿ, ಬಳೆ ಮಾರಿ- ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳನ್ನು ಸಾಕಲು ಮತ್ತು ಓದಿಸಲು ಬಹಳ ಹೆಣಗುತ್ತಿದ್ದ ಜೀವ.

ಇದನ್ನು ಓದಿದ್ದೀರಾ?: ಕಾಯಕ ಯೋಗಿನಿ ಕಾಂಚನಮಾಲಾ

ಇಂದಿರಾ ಗಾಂಧಿಯ ಗರೀಭಿ ಹಠಾವೋ ಯೋಜನೆ ಮೂಲಕ ಸಿಕ್ಕ ಜನತಾ ಮನೆಯನ್ನು ಸಿಂಗಾರ ಮಾಡಿಕೊಂಡು ಅರಮನೆಯಂತೆ ಅಲಂಕರಿಸಿ ಜೀವಿಸುತ್ತಿದ್ದ ಸ್ವಾಭಿಮಾನಿ ಜೀವ. ಗಂಡು ದಿಕ್ಕಿದ್ದರೂ ಮನೆಗೆಲ್ಲಾ ತಾನೇ ಒಡತಿ. ಹಗರೆಯಲ್ಲಿ ಐದಾರು ಬಳೆ ಕುಟುಂಬಗಳಿದ್ದರೂ ಗೌರಮ್ಮರಿಗೇನೆ ಡಿಮಾಂಡ್! ಕಾರಣ ಆಕೆ ಕೇವಲ ಬಳೆಮಾರುವ-ತೊಡಿಸುವ ಗೌರಮ್ಮ ಅಲ್ಲ. ಮದುವೆ, ಒಸಗೆಯಂತಹ ಕಾರ್ಯಕ್ರಮದಲ್ಲಿ ಇವರ ಸೋಬಾನೆ ಪದಕಟ್ಟಿ ಹಾಡುವ ಮೌಖಿಕ ವಿದ್ವತ್ತು ಜನರನ್ನು ಆಕರ್ಷಿಸಿತ್ತು. ಹಾಗೇ ಬಳೆ ತೊಡಿಸುತ್ತಲೇ ಮುಖಗಂಟಿಕ್ಕದೆ ಹೆಣ್ಣುಡುಗಿಯರಿಗೆ ತಮಾಷೆ ಮಾಡಿಕೊಂಡು- ‘ಹೆಣ್ಮಕ್ಕಳು ಸುಮ್ನೆ ತಲೆ ತಗ್ಗಿಸಿಕೊಂಡು ಹೇಳಿದ್ದೆಲ್ಲಾ ಒಪ್ಕೊಂಡು ಬಳೆ ತೊಟ್ಕೊಂಡು ಮೂಗು ಬಸವಿ ತರ ಗೋಣಾಡಿಸಿಕೊಂಡಿರಬಾರದು. ಬಳೆ ಸದ್ದು ಮಾಡಕ್ಕೆ ಬಳಸಿಕೊಳ್ಳಬೇಕು, ಒಂದಿಷ್ಟು ಎದೆ ಉಬ್ಬಿಸಿ ಮಾತಾಡೋದು ಕಲೀರಿ. ಇಂದ್ರಮ್ಮನ ತರ ಬಾಳ್ಬೇಕು ಅದಕ್ಕೆ ಇಸ್ಕೂಲಿಗೆ ಹೋಗಿ ಕಲೀರಿ’ ಎಂದು ಹುರಿದುಂಬಿಸೋರು. ತನ್ನ ಎರಡು ಹೆಣ್ಣುಮಕ್ಕಳು ಶಾಲೆಗೆ ಹೋಗಿ ಕಲಿಯದೇ ಇರುವುದರ ಕುರಿತು ಬೇಸರವಿದ್ದರೂ ‘ಸ್ವಾವಲಂಬಿಯಾಗಿ ಬದುಕಲು ಕೈಕಸುಬು ಕಲಿ’ ಎಂದು ಬಳೆ ತೊಡಿಸುವ ಮತ್ತು ದರಕಾಸ್ತು ಭೂಮಿಯಲ್ಲಿ ಸಿಕ್ಕ ಎರಡೆಕರೆ ಜಮೀನಿನಲ್ಲಿ ಉಳುಮೆ ಮಾಡುವುದನ್ನು ಕಲಿಸಿದ್ದರು.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಗೌರಕ್ಕ ನಮ್ಮಮ್ಮನ ಒಳ್ಳೆಯ ಸ್ನೇಹಿತೆ; ನನ್ನಮ್ಮನಿಗೂ ಕಥೆ ಕೇಳುವುದು, ನಾಟಕ ನೋಡುವುದು ಮಹದಾಸೆ. ನನ್ನ ಬಳಿಯಿಂದ ಕಥೆ ಪುಸ್ತಕಗಳನ್ನು ಅದರಲ್ಲೂ ರಾಮಾಯಣ-ಮಹಾಭಾರತ ಕಥಾನಕಗಳನ್ನು ಓದಿಸಿಕೊಳ್ಳುವುದು ಬಹಳ ಆಸಕ್ತಿಯ ಕೆಲಸ. ತುಳುವಿನಲ್ಲಿ ಗೌರಕ್ಕ- ಬಲೇ, ವನಸಾಂಡ, ಕುಲ್ಲುಲೆ ಕಥೆ ಚೆಲ್ಪೆರಾ… ಎನ್ನುತ್ತಾ ಇಬ್ಬರೂ ಹೊರಜಗಲಿ ಮೇಲೆ ಕುಳಿತು ಮಾತನಾಡುತ್ತಾ ಪರಸ್ಪರ ಕನ್ನಡ ಸಾಂಸ್ಕೃತಿಕ ಲೋಕದ ಜನಪದ ಕಲೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು.

WhatsApp Image 2026 02 14 at 10.33.37
ಬೋರಕ್ಕ, ಬಳೆ ಗೌರಕ್ಕ, ಭಾಗ್ಯಕ್ಕ

ನಮ್ಮ ಮನೆಯಲ್ಲಿ ಒಮ್ಮೊಮ್ಮೆ ಉಳಿಯುತ್ತಿದ್ದ ಗೌರಕ್ಕ ಬೆಳಗಾಗುವವರೆಗೂ ಕಥೆ ಹೇಳುತ್ತಿದ್ದರು. ಕಥೆಗೆ ಅಲ್ಲಲ್ಲಿ ಉಪಕಥೆ, ಶಬ್ಧಗಳ ಏರಿಳಿತ, ಸಹಜವಾಗಿ ಕಥೆ ಕೇಳುತ್ತಾ ಕೆಲಪಾತ್ರಗಳ ಪರ ನಮ್ಮಗಳ ನಿಲುವು ಪಕ್ಷಪಾತಿತನ ಮಾಡುತ್ತಿದ್ದವು. ಕಥೆ ಹೇಳುವವರೂ ಕೂಡ ಖುಷಿ ಸೀನ್ ಬಂದಾಗ ದನಿಯಲ್ಲಿ ನಗುವಿನ ಅಲೆ ತೇಲುತಿತ್ತು. ದುಃಖಕರ ಸನ್ನಿವೇಶ ಎದುರಾದಾಗ ಅವರ ಕಣ್ಣಾಲಿ ತೇಲಿ ದನಿ ನಡುಗುತ್ತಿತ್ತು. ನಮ್ಮಗಳದೂ ಕೂಡ ಮುಂದೇನಾಯಿತು ಎಂದು ಕೇಳುವ ಹಂತಕ್ಕೆ ಕುತೂಹಲ ಹುಟ್ಟಿಸಿ ದನಿ ಬದಲಿಸುತ್ತಾ ಕಥೆ ಹೇಳುತ್ತಿದ್ದ ಅವರು, ನಮ್ಮಗಳ ನಿದ್ದೆಯನ್ನು ಮೀರಿ ಕಥಾ ಹರಿಕಾರ್ಥಳಾಗಿದ್ದ ಈ ಊರಿನ ಪ್ರಖರ ಕಥೆಗಾರ್ತಿ.

ಇದನ್ನು ಓದಿದ್ದೀರಾ?: ಮೈಸೂರು ಸಾಂಪ್ರದಾಯಿಕ ಕಲೆಗೆ ಮೆರುಗು ತಂದ- ಪ್ರಭಾ ಮಲ್ಲೇಶ್

ಬಳೆ ಮಾರುತ್ತಲೇ ಬದುಕಿನ ಕಥೆಗಳನ್ನು ಪೋಣಿಸಿದವರು ಗೌರಮ್ಮ. ಅವರದು ಹರಿಕಥೆಗಾರರ ಶೈಲಿ; ಸದಾ ನಗುಮುಖದ ಅವರ ಮಾತಿನಲ್ಲೇ ಕಥೆಯ ಹರಿವಿತ್ತು. ಕಥೆಯ ಸುಖದ ಸನ್ನಿವೇಶಗಳಲ್ಲಿ ಅವರ ಧ್ವನಿಯಲ್ಲಿ ನಗುವಿನ ಅಲೆಗಳಿದ್ದರೆ, ದುಃಖದ ಪ್ರಸಂಗಗಳಲ್ಲಿ ಅದೇ ಧ್ವನಿ ನಡುಗುತ್ತಾ ಕೇಳುಗರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿತ್ತು. ವಿಶೇಷವೆಂದರೆ- ಗೌರಮ್ಮನ ಕಥೆಗಳಲ್ಲಿ ಹೆಣ್ಣು ಪಾತ್ರಗಳು ಎಂದಿಗೂ ಅಬಲೆಯರಾಗಿರಲಿಲ್ಲ. ಅವರ ಕಥೆಯ ನಾಯಕಿಯರು ಧೈರ್ಯ, ತ್ಯಾಗ ಮತ್ತು ಬುದ್ಧಿವಂತಿಕೆಯ ಸಾಕಾರಮೂರ್ತಿಗಳಾಗಿದ್ದರು. ಅರಿವಿಲ್ಲದೆಯೇ ಸ್ತ್ರೀ ಸ್ವಾಭಿಮಾನದ ಬೀಜಗಳನ್ನು ಬಿತ್ತಿದ ನಮ್ಮೂರಿನ ಮೊದಲ ಸ್ತ್ರೀವಾದಿ ಕಥೆಗಾರ್ತಿ ಇವರು.

ಪರ್ಫೆಕ್ಟ್ ಭಾಗಕ್ಕ: ಪ್ರಶ್ನೆಗಳ ಮೂಲಕ ಚಿಂತನೆಗೆ ಹಚ್ಚಿದ ಸಾಧಕಿ
ಬಹುಶಃ ಭಾಗ್ಯಮ್ಮ ಭಾಗಕ್ಕ ಆಗಿರಬೇಕು. ಭಾಗಮ್ಮ ನಮ್ಮಮ್ಮನ ಆತ್ಮೀಯ ಗೆಣೆಕಾರ್ತಿಯರಲ್ಲಿ ಒಬ್ಬರು. ನಮ್ಮ ಮನೆಗೆ ಹೆಚ್ಚಿನ ಸಂಪರ್ಕ ನಮ್ಮೀರ್ವರ ಮನೆಗೂ ಒಡನಾಟ ಇದ್ದಿದ್ದರಿಂದ ಇವರ ಕಥಾ ಹೇಳುವಿಕೆ ಮತ್ತು ಸೋಬಾನೆ ನುಡಿಸುವ ಪರಿ ಪರಿಚಯವಾಯಿತು. ಮಾತ್ರವಲ್ಲ ಮಂತ್ರಮುಗ್ಧತೆಯನ್ನು ಕೂಡ ಉಂಟುಮಾಡುತಿತ್ತು. ಬೆಳ್ಳಗೆ, ಸ್ವಲ್ಪ ಕುಳ್ಳಗಿದ್ದ ಬಹಳ ಹಠಗಾತಿ. ಯಾವುದೋ ವಿಷಯಕ್ಕೆ ಗಂಡನೊಡನೆ ಮನಸ್ತಾಪ ಬಂದು ಒಟ್ಟಿಗಿದ್ದರೂ, ಗಂಡನ ಸೇವೆಯನ್ನೂ ಮಾಡುತ್ತಾ- ಆತ ಸಾಯುವವರೆಗೂ, ತನ್ನ ಗಂಡನ ಕೂಡ ಮಾತನಾಡದ ದಿಟ್ಟಗಾತಿ.

ಈ ಲೇಖನ ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಭಾಗಮ್ಮನ ಕಥಾ ಶೈಲಿಯೇ ವಿಭಿನ್ನ. ಅವರು ಕಥೆಯನ್ನು ಕೇವಲ ಹೇಳುತ್ತಿರಲಿಲ್ಲ, ಕೇಳುಗರನ್ನು ಆ ಕಥೆಯ ಪಾತ್ರಗಳನ್ನಾಗಿ ಮಾಡುತ್ತಿದ್ದರು. ಕಥೆ ಹೇಳುತ್ತಾ ನಮ್ಮಲ್ಲಿ ಪ್ರಶ್ನೆಗಳನ್ನು ಕೇಳುತ್ತಾ, ವೀರರಾಜನಿಗೆ ಪರೀಕ್ಷೆಗೆ ಒಡ್ಡುವ ಪ್ರಶ್ನೆಗಳನ್ನು ಕಥೆ ಕೇಳುತ್ತಿದ್ದವರಿಗೂ, ಕೇಳುತ್ತ ಒಗಟು ಬಿಡಿಸುತ್ತಾ ಸಾಗುತ್ತಿದ್ದರು. ಇವರು ಹೇಳುತ್ತಿದ್ದ ಕಥೆಗಳಲ್ಲಿ ಗಾದೆಗಳು ಮತ್ತು ಒಗಟುಗಳು ಹೇರಳವಾಗಿರುತ್ತಿದ್ದವು. ಗಿಳಿಯಲ್ಲಿ ಅವಿತು ಕುಳಿತ ದುಷ್ಟ ರಾಜನ ಪ್ರಾಣ ತರಲು ಗಾದೆ ಬಿಡಿಸುವ, ಒಗಟು ಒಡಚುವ ದುಸ್ಸಾಹಸ ಮಾಡಬೇಕಿತ್ತು. ವಿಕ್ರಮ-ಬೇತಾಳನ ಕಥೆ ತರಹ.

ಕಥೆ ಹೇಳುತ್ತಲೇ ”ಆ ಜಾಗದಲ್ಲಿ ನೀನಿದ್ದರೆ ಏನು ಮಾಡುತ್ತಿದ್ದೆ?” ಎಂದು ಪ್ರಶ್ನಿಸುತ್ತಾ ಮಕ್ಕಳಲ್ಲಿ ತಾರ್ಕಿಕ ಚಿಂತನೆಯ ದಾರಿಯನ್ನು ತೆರೆದವರು ಇವರು. ಒಗಟು, ಗಾದೆ ಮತ್ತು ನೀತಿಪಾಠಗಳ ಮೂಲಕ ಬದುಕಿನ ಸಂಕೀರ್ಣತೆಯನ್ನು ಅತಿ ಸರಳವಾಗಿ ವಿವರಿಸುತ್ತಿದ್ದ ಇವರ ಕಥೆಗಳು ಕೇವಲ ಕಿವಿಗಲ್ಲ, ಮೆದುಳಿಗೆ ಕೆಲಸ ಕೊಡುತ್ತಿದ್ದವು. ಆ ಮೂಲಕ ಸಮಾಜದ ನೈತಿಕ ಶಿಕ್ಷಣದ ಜವಾಬ್ದಾರಿಯನ್ನು ಈ ತಾಯಿ ಮೌನವಾಗಿ ನಿರ್ವಹಿಸಿ ಕಾಲಗರ್ಭ ಸೇರಿದರು.

ಇದನ್ನು ಓದಿದ್ದೀರಾ?: ಶಿಕ್ಷಣ, ಶಿಸ್ತು, ಸಮಯ ಪ್ರಜ್ಞೆಯ ಹನುಮಮ್ಮ

ಕಥೆ ಹೇಳುವ ಕನ್ನಡ ಸಾಂಸ್ಕೃತಿಕ ಲೋಕದ ಅದ್ಭುತ ಕಲೆ:
ಕನ್ನಡದ ನೆಲದಲ್ಲಿ ಕಥೆ ಹೇಳುವುದು ಕೇವಲ ಮನರಂಜನೆಯ ಕ್ರಿಯೆಯಲ್ಲ; ಅದು ಒಂದು ಅದ್ಭುತ ಜನಪದ ಕಲೆ. ಈ ಕಲೆಗೆ ಸ್ಪಷ್ಟವಾದ ಕಲಾತ್ಮಕ ಹಾಗೂ ಅಧ್ಯಯನಾತ್ಮಕ ಚೌಕಟ್ಟನ್ನು ನಮ್ಮ ಜನಪದ ವಿದ್ವಾಂಸರು ಒದಗಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಕಲೆ ಜೀವಂತವಾಗಿರಬೇಕೆಂದರೆ, ಅದಕ್ಕೆ ಗಂಭೀರವಾದ ಗಮನ ಹಾಗೂ ಸಂರಕ್ಷಣೆ ಅಗತ್ಯವಾಗಿ ಆಗಬೇಕಿದೆ. ಈಗಾಗಲೆ ಇಂದಿನ ಪೀಳಿಗೆಗೆ ನೀತಿ ತುಂಬಿದ ಕಥೆ ಹೇಳುವ ಅಜ್ಜಿಯಂದಿರು ಈಗ ಬಹಳ ಎಂದರೆ ಬಹಳ ಕಡಿಮೆಯೇ. ನನಗೆ ಇವನ್ನೆಲ್ಲಾ ದಾಖಲಿಸಬೇಕು ಎನ್ನುವ ಪ್ರಜ್ಞೆ ಬೆಳೆಯುವ ವೇಳೆಗೆ ಕಥೆಗಾರ್ತಿಯರ ಸಿಂಹಪಾಲು ಶಿವನ ಪಾದ ಸೇರಿಕೊಂಡಿದ್ದಾರೆ.

ಒಮ್ಮೆ ಹಾಸನದ ನೆಲದ ವಾಸನೆಯಲ್ಲಿ ಸಾವಿರಾರು ಕಥೆಗಾರರು/ಕಥೆಗಾರ್ತಿಯರು, ಶತಾವಧಾನಿಗಳು/ಸಹಸ್ರಾವಧಾನಿಗಳು, ಕೀಲುಕುದುರೆ ನೃತ್ಯಗಾರರು, ವೀರಗಾಸೆ-ಕೋಲಾಟಗಾರರು, ಕಥಾ ಕಾಲಕ್ಷೇಪಕಾರರು ಸುಮಾರು ಮೂವತ್ತೈದು ವರ್ಷಗಳ ಹಿಂದೆ ತಮ್ಮ ಸಾಂಸ್ಕೃತಿಕ ಸುಗಂಧವನ್ನು ಹರಡಿದ್ದರು. ಸಿನಿಮಾ ಟಿವಿ ಭೂತಕ್ಕೆ ಸಿಕ್ಕಿ ಇವೆಲ್ಲಾ ಈಗ ಇತಿಹಾಸವಾಗಿವೆ. ಅದರ ಪಳೆಯುಳಿಕೆಗಳು ಒಂದೊಂದು ಕೆಲ ಹಳ್ಳಿಗಳಲ್ಲಿ ಮೂಕರೋದನ ಮಾಡುತ್ತಿವೆ.

”ಒಲೆ ಮುಂದೆ ಕುತುಕೊಂಡು ಪಟ ಪಟ ಸಿಡಿಗೊಂಡು ಬೆಳ್ಳಗಿನ ಗೆಣೆಕಾರನ್ ನೆನಕೊಂತಕುಂತೀಯಲ್ಲೆ ಆಲ ಉಕ್ಕಿದ ನೆನಪೇಳೆ” ಎನ್ನುವ ನೆಲದ ಪಿಸುಮಾತುಗಳ ಸಾಂಸ್ಕೃತಿಕ ಸೊಗಡಿಗೆ ಹೊಸ ಸಾಂಸ್ಕೃತಿಕ ಸಂವಹನ ನೀಡುವ ಕಲೆಗಾರಿಕೆ ಬೆಳೆಯಬೇಕಾಗಿದೆ. ಕೇರಳದ ಎ.ಆರ್.ರೆಹಮಾನ್‌ನಂತೆ, ಪಂಜಾಬಿನ ದಲೇರ್ ಮೆಹಂದಿಯಂತೆ, ತೆಲಂಗಾಣದ ಗದ್ದರ್‌ನಂತೆ- ನಮ್ಮ ಜನಪದ ಕಥೆಗಾರ್ತಿಯರ ಪರಂಪರೆಯೂ ಹೊಸ ಉಸಿರಿಗಾಗಿ ಕಾಯುತ್ತಿದೆ.

-ಅಹಮದ್ ಹಗರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...