ಹಾಸನ ಮಣ್ಣಿನ ಹೆಣ್ಣು ಬೇರುಗಳು | ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಕರ್ನಾಟಕದಲ್ಲಿ ಕನ್ನಡಿಗರ ರಾಜ ಮನೆತನಗಳ ಆಳ್ವಿಕೆ ಬನವಾಸಿಯ ಕದಂಬರಿಂದ ಪ್ರಾರಂಭವಾಯಿತೆನ್ನಬಹುದು. ನಂತರದಲ್ಲಿ ಬಾದಾಮಿ ಚಾಲುಕ್ಯರು, ಗಂಗರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು ಹಾಗೂ ಮೈಸೂರಿನ ಒಡೆಯರು- ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತದ ಹಲವು ಭೂಪ್ರದೇಶಗಳನ್ನು ಆಳಿದ್ದಾರೆ. ಅವರು ಬರೆಸಿದ ಸಾವಿರ ಸಾವಿರ ಸಂಖ್ಯೆಯ ಶಾಸನಗಳು ನಾಡಿನಾದ್ಯಂತ ಉಳಿದುಕೊಂಡು ಬಂದಿದೆ. ಹಾಸನ ಜಿಲ್ಲೆಯೊಂದರಲ್ಲೆ ಅರಸರು, ದಂಡನಾಯಕರು, ದಾನಿಗಳು, ಶ್ರೀಸಾಮಾನ್ಯರು ಬರೆಸಿದ 2273 ಶಾಸನಗಳು ಪತ್ತೆಯಾಗಿವೆ.

ಹಾಸನ ಜಿಲ್ಲೆಯಲ್ಲಿ ಪತ್ತೆಯಾಗಿರುವ ನೂರಾರು ಶಾಸನಗಳಲ್ಲಿ ರಾಜಮಾತೆಯರು, ಅರಸು ಪತ್ನಿಯರು, ದಂಡನಾಯಕರು ಹಾಗೂ ಮಂತ್ರಿಗಳ ಪತ್ನಿಯರು, ದಾನಶೀಲ ಮಾನಿನಿಯರು, ಮಾನ ರಕ್ಷಿಸಿದ ಸ್ತ್ರೀಯರ ಹೆಸರುಗಳು ಉಲ್ಲೇಖಗೊಂಡಿವೆ. ಹಾಗೆ ಶಾಸನಗಳಲ್ಲಿ ಉಲ್ಲೇಖಗೊಂಡಿರುವ ಮಾನಿನಿಯರು ಸಾಮಾನ್ಯ ಸ್ತ್ರೀಯರಲ್ಲ, ಅವರೆಲ್ಲರೂ ಸಾಧಕರು. ಅವರು ಗುಡಿ ಗೋಪುರ ಕಟ್ಟಿಸಿದ್ದಾರೆ, ಕೆರೆಕಟ್ಟೆ ನಿರ್ಮಿಸಿದ್ದಾರೆ, ದೇಗುಲಗಳಿಗೆ ಧರ್ಮಗುರುಗಳಿಗೆ ದಾನ-ದತ್ತಿ ನೀಡಿದ್ದಾರೆ, ಕದನದಲ್ಲಿ ಮಡಿದ ವೀರಕಲಿಗಳಿಗಾಗಿ ವೀರಗಲ್ಲನ್ನು ಎತ್ತಿಸಿದ್ದಾರೆ. ರಾಜ್ಯದ ಪ್ರಾಂತ್ಯಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹಾಸನ ಜಿಲ್ಲೆಯ ಶಾಸನ ಸಂಪುಟಗಳಲ್ಲಿ ಉಲ್ಲೇಖಗೊಂಡಿರುವ ಐತಿಹಾಸಿಕ ಮಹಿಳೆಯರ ಸೇವೆ ಸಾಧನೆಗಳನ್ನು ಸ್ಮರಿಸುವ ಸಣ್ಣ ಪ್ರಯತ್ನ ಈ ಲೇಖನದ ಉದ್ದೇಶವಾಗಿದೆ.

ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಿಮಗೆ ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಕೆಳದಿ ವೀರಮ್ಮಾಜಿ ಗೊತ್ತು, ಚೋಳ ಮಹಾದೇವಿ ಹೆಸರನ್ನು ಕೇಳಿದ್ದೀರಾ? ಆಕೆ ಹೊಯ್ಸಳ ದೊರೆ ಎರಡನೇ ವೀರ ಬಲ್ಲಾಳನ ಹಿರಿಯ ಪತ್ನಿ. ಅವಳು ಇಂದಿನ ಹಾಸನ ಜಿಲ್ಲೆಯ ಕೆಂಬಾಳು ನಾಡನ್ನು ಆಳುತ್ತಿದ್ದಳು. ಚೋಳ ಮಹಾದೇವಿಯನ್ನು ಬೇವೂರಿನ ಕುಹಕಿಯೊಬ್ಬ ನಿಂದಿಸಿದ ವಿಚಾರ ರಾಣಿಯ ಕಿವಿಗೆ ಬಿತ್ತು. ಆಕೆ ಬೇವೂರಿನ ಕುಹಕಿಯನ್ನು ಶಿಕ್ಷಿಸಿ, ದನಕರುಗಳನ್ನು ಹಿಡಿದು ತರಲು ತನ್ನ ನೆಚ್ಚಿನ ಬಂಟರನ್ನು ಕಳಿಸಿದಳು. ರಾಣಿಯ ಸೈನಿಕರು ಬೇವೂರಿನ ಕೆಲವರನ್ನು ಹಾಗೂ ತುರುಗಳನ್ನು ಹಿಡಿದು ತರುವಾಗ್ಗೆ ಅಲ್ಲಿನ ಜನರು ರಾಣಿಯ ಬಂಟರ ತುಕಡಿಯ ಮೇಲೆ ದಾಳಿ ಮಾಡಿದರು. ದಾಳಿಯಲ್ಲಿ ರಾಣಿಯ ನೆಚ್ಚಿನ ಬಂಟ ಕೇತಮಲ್ಲ ತುರುಗಾಳಗದಲ್ಲಿ ಅಸುನೀಗಿದ. ನೆಚ್ಚಿನ ಬಂಟನ ಮರಣದಿಂದ ನೊಂದ ಮಾತೃ ಹೃದಯದ ರಾಣಿ (ಹೆಗ್ಗಡೆಯಂ ಕರೆದು ಯಮ್ಮ ಮಕ್ಕಳ ನಾವು ನೋಯಿಸಿದೆವು-ಕೆಂಬಾಳು ಶಾಸನ/ಚ.ಪ.205) ತನ್ನ ಇಬ್ಬರು ಸಹಾಯಕರಾದ ರಾಯಣ್ಣ ಹೆಗ್ಗಡೆ ಮತ್ತು ನಾಚಣ್ಣ ಹೆಗ್ಗಡೆಯನ್ನು ಕಳುಹಿಸಿ ಸತ್ತವನ ಕುಟುಂಬಕ್ಕೆ ಸಾಂತ್ವನ ಹೇಳಿಸಿದಳಂತೆ. ಮರಣ ಹೊಂದಿದ ಕೇತಮಲ್ಲನ ಮಗ ನರಸಿಂಹ ನಾಯಕನಿಗೆ ಜೀವನೋಪಾಯಕ್ಕಾಗಿ ಭೂಮಿಯನ್ನು ಉಂಬಳಿಯಾಗಿ ಕೊಟ್ಟಳಂತೆ; ಉಂಬಳಿ ಕೊಡುವಾಗ್ಗೆ ಕೆಂಬಾಳಿನ ಸಮಸ್ತ ಅರವತ್ತು ಕುಟುಂಬಗಳು ಹಾಜರಿದ್ದವಂತೆ; ಮರಣ ಹೊಂದಿದ ವೀರನ ನೆನಪಿಗಾಗಿ ವೀರಗಲ್ಲನ್ನು ಎತ್ತಿಸಿದ್ದಳಂತೆ.

ತುರುಗಾಳಗ ಮತ್ತು ಗಡಿ ಕಾಳಗದಲ್ಲಿ ಹೋರಾಡಿ ಮರಣ ಹೊಂದಿದ ವೀರರಿಗಾಗಿ ವೀರಗಲ್ಲನ್ನು ನಿಲ್ಲಿಸಿದ ಪ್ರಕರಣಗಳು ಹಾಸನ ಜಿಲ್ಲೆಯಲ್ಲಿ ಸಾಕಷ್ಟಿವೆ. ಬಹುಪಾಲು ಪ್ರಕರಣಗಳಲ್ಲಿ ವೀರಗಲ್ಲುಗಳನ್ನು ಎತ್ತಿಸಿ ಸಂಪ್ರೋಕ್ಷಣಾ ವಿಧಿಗಳನ್ನು ಪೂರೈಸಿರುವವರು ಮರಣ ಹೊಂದಿದ ವೀರನ ತಂದೆ ತಾಯಿಯೋ, ಸೋದರರೋ ಆಗಿರುತ್ತಾರೆ. ಆದರೆ ರಾಣಿ ಚೋಳ ಮಹಾದೇವಿಯಂತೆ ಒಬ್ಬ ಸಾಮಾನ್ಯ ಸೈನಿಕನಿಗಾಗಿ ವೀರಗಲ್ಲು ಪ್ರತಿಷ್ಠಾಪಿಸಿರುವುದು ಇತಿಹಾಸದಲ್ಲಿ ಅತಿ ವಿರಳ ಪ್ರಕರಣವೆನ್ನಬಹುದು.

ಇದನ್ನು ಓದಿದ್ದೀರಾ?: ಜಾನಪದ ಕ್ಷೇತ್ರದ ಅನನ್ಯ ಸಾಧಕಿ- ಡಾ. ವೈ.ಸಿ.ಭಾನುಮತಿ

ಹಾಸನ ಜಿಲ್ಲೆಯಲ್ಲಿ ಅರಸರು, ದಂಡ ನಾಯಕರು, ಮಂತ್ರಿಗಳ ಅಂಕಿತದಲ್ಲಿ ನೂರಾರು ಗ್ರಾಮಗಳಿವೆ. ರಾಷ್ಟ್ರಕೂಟ ದೊರೆ ಧ್ರುವನ ಹೆಸರಿನಲ್ಲಿ ದೋರಸಮುದ್ರ, ರಾಜಭ್ರಷ್ಟನಾದ ರಾಷ್ಟ್ರಕೂಟರ ಕೊನೆಯ ದೊರೆ ನಾಲ್ಕನೆ ಇಂದ್ರನ ಹೆಸರಿನಲ್ಲಿ ಇಂದ್ರನಹಳ್ಳಿ, ವಿಜಯನಗರದ ದೊರೆ ಎರಡನೇ ಬುಕ್ಕನ ಹೆಸರಿನಲ್ಲಿ ಬೂಕ, ಬೂಕನ ಬೆಟ್ಟ, ಗಂಗ ದೊರೆ, ದಡಿಗನ ಅಂಕಿತದಲ್ಲಿ ದಿಡಗ ಮತ್ತು ದಡಗ ಗ್ರಾಮಗಳು, ಹೊಯ್ಸಳ ದಂಡನಾಯಕ ಸೋಮನಾಥನ ಹೆಸರಿನಲ್ಲಿ ಸೋಮನಾಥನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮಗಳು, ಮತ್ತೊಬ್ಬ ಹೊಯ್ಸಳ ದಂಡನಾಯಕ ಪೆರುಮಾಳ್ ಹೆಸರಿನಲ್ಲಿ ಪಿರುಮನಹಳ್ಳಿ, ಮಂತ್ರಿ ಹುಳ್ಳನ ಹೆಸರಿನಲ್ಲಿ ಹುಳ್ಳಾವಳ್ಳಿ ಮತ್ತು ಹುಳ್ಳೇನಹಳ್ಳಿ ಗ್ರಾಮಗಳು, ಹೊಯ್ಸಳ ದೊರೆ ಬಿಟ್ಟಿದೇವ ಮತ್ತು ಬಲ್ಲಾಳನ ಹೆಸರಿನಲ್ಲಿ ಬಿಟ್ರವಳ್ಳಿ, ಬಿಟ್ಟಗೊಂಡನಹಳ್ಳಿ, ಬಲ್ಲಾವಳ್ಳಿ ಹೀಗೆ ನೂರಾರು ಗ್ರಾಮಗಳು ಹಾಸನ ಜಿಲ್ಲೆಯಲ್ಲಿವೆ. ಅಂತೆಯೆ ರಾಜಮಾತೆಯರು, ರಾಣಿಯರು, ದಂಡನಾಯಕರ ಪತ್ನಿಯರನ್ನು ಸ್ಮರಿಸುವ ಗ್ರಾಮಗಳು ಹಾಸನ ಜಿಲ್ಲೆಯಲ್ಲಿ ಸಾಕಷ್ಟಿವೆ.

ಹೊಯ್ಸಳ ಎರಡನೇ ಬಲ್ಲಾಳನ ಮಂತ್ರಿ ಮಾಚಿರಾಯ/ಮಾಚಯ್ಯನ ಪತ್ನಿ ಸಾತವ್ವೆ ಯಾನೆ ಸಾಂತಲ ದೇವಿ ಅನೇಕ ಜನೋಪಕಾರಿ ಕೆಲಸಗಳನ್ನು ಮಾಡಿದವಳು. ಅವಳು ಚಂದಿಮಯ್ಯ ಮತ್ತು ಚಾಮಲೆಯ ಮಗಳು. ಅವಳ ಹೆಸರಿನಲ್ಲಿ ಹಾಸನ ಜಿಲ್ಲೆಯಲ್ಲಿ ಸಾತೇನಹಳ್ಳಿ ಹೆಸರಿನ ಮೂರು ಹಳ್ಳಿಗಳಿವೆ, ನೆರೆಯ ಜಿಲ್ಲೆಯಲ್ಲಿಯೂ ಸಾತವ್ವೆಯನ್ನು ಸ್ಮರಿಸುವ ಬೆಟ್ಟದ ಸಾತೇನಳ್ಳಿ ಗ್ರಾಮವಿದೆ. ಸಾತವ್ವೆ ಚನ್ನರಾಯಪಟ್ಟಣದಲ್ಲಿ ಬೃಹತ್ತಾದ ಕೆರೆಯನ್ನು 1181ರಲ್ಲಿ ಕಟ್ಟಿಸಿ ಅದನ್ನು ಶಾಂತಿಸಮುದ್ರ ಎಂದು ಕರೆದಳು. ಚಿರಾತು ಮಕ್ಕಳಿಗಾಗಿ ಅವಳ ಸೇವೆ ಚಿರಾಯುವಾದುದು. ಸಾತವ್ವೆ ಚನ್ನರಾಯಪಟ್ಟಣದಲ್ಲಿ ತನ್ನ ಹೆಸರಿನಲ್ಲಿಯೇ ಸಾತೇಶ್ವರ ದೇಗುಲವನ್ನು ಕಟ್ಟಿಸಿದಳು. ಶಾಂತೇಶ್ವರ ದೇಗುಲವೆಂದು ಇಂದು ಕರೆಸಿಕೊಳ್ಳುವ ಸ್ಮಾರಕ ಇಂದಿಗೂ ಸುಸ್ಥಿತಿಯಲ್ಲಿದೆ. ಕಿ.ಶ.1095ರ ಹಳೇ ಬೇಲೂರಿನ ಶಾಸನ, ಅರಸರು ತಮ್ಮ ಮಾತೆಯರಿಗೆ ಸಲ್ಲಿಸುತ್ತಿದ್ದ ಗೌರವವನ್ನು ತಿಳಿಸುತ್ತದೆ. ಜಯಸಿಂಹ ನೃಪ ತನ್ನ ತಾಯಿ ಅರಸಿಯಬ್ಬೆ ನೆನಪಿಗಾಗಿ ಕಂಬಾರಹಳ್ಳಿಗೆ ಅರಸಿಯಪುರ ಎಂದು ನಾಮಕರಣ ಮಾಡಿದ್ದನ್ನು ತಿಳಿಸುತ್ತದೆ. ಹೊಯ್ಸಳರ ದಂಡನಾಯಕ ಪೆರುಮಾಳ್ ತನ್ನ ತಾಯಿ ಮಂಚಿಯಕ್ಕ 1280ರಲ್ಲಿ ಮರಣ ಹೊಂದಲು ಅವಳಿಗಾಗಿ ನರಸಿಪುರದಲ್ಲಿ ಬೃಂದಾವನವನ್ನು ನಿರ್ಮಿಸಿದ. ಮಂಚಿಯಕ್ಕ ಹೆಸರಿನಲ್ಲಿ ಮಂಚೇನಹಳ್ಳಿ ಹೆಸರಿನ ಗ್ರಾಮಗಳು ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿವೆ.

ಇದನ್ನು ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…

ಹೊಯ್ಸಳ ಅರಸರಿಗಾಗಿ ಪ್ರಾಣಾರ್ಪಣೆ ಮಾಡಿಕೊಳ್ಳುವ ಪಡೆ ಹೊಯ್ಸಳರ ಸೈನ್ಯದಲ್ಲಿತ್ತು. ಅವರಿಗೆ ಗರುಡರು ಎಂಬ ಹೆಸರಿತ್ತು. ಗರುಡರು ರಾಜರು ಮರಣ ಹೊಂದಿದಾಗ ತಾವೂ ಪ್ರಾಣಾರ್ಪಣೆ ಮಾಡಿಕೊಳ್ಳುತ್ತಿದ್ದರು. ಆದರೆ ರಾಣಿಯರಿಗಾಗಿ ಪ್ರಾಣಾರ್ಪಣೆ ಮಾಡಿಕೊಳ್ಳುವ ಭಂಟರು ಇತಿಹಾಸದಲ್ಲಿ ವಿರಳಾತಿ ವಿರಳ. ಹೊಯ್ಸಳ ದೊರೆ ನರಸಿಂಹನ ರಾಣಿ ಬಮ್ಮಲದೇವಿ ಮರಣ ಹೊಂದಿದಾಗ ಸಿರಿವೊಳಲ ಚಾಗಗವುಡನು ಸುರಲೋಕ ಪ್ರಾಪ್ತನಾದನೆಂದು ಹಾಸನ ಜಿಲ್ಲೆಯ ಶಾಸನವೊಂದು ತಿಳಿಸುತ್ತದೆ. ಬಮ್ಮಲದೇವಿಯ ಸ್ಮರಣೆಗಾಗಿ ಬಮ್ಮಡಿಹಳ್ಳಿ, ಬಮ್ಮೇನಹಳ್ಳಿ ಹೆಸರಿನ ಗ್ರಾಮಗಳು ಹಾಸನ ಜಿಲ್ಲೆಯಲ್ಲಿ ಸಾಕಷ್ಟಿವೆ.

ವಿಷ್ಣುವರ್ಧನನ ಪಟ್ಟದರಸಿ ಶಾಂತಲೆಯ ಹೆಸರನ್ನು ಕೇಳದ ಕನ್ನಡಿಗರು ವಿರಳವೆನ್ನಬಹುದು. ಶಾಂತಲೆ ಜನಿಸಿದ್ದು ಇಂದಿನ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾಮೆಯಲ್ಲಿ. ಅವಳ ತಂದೆ ಮಾರಸಿಂಗಮಯ್ಯ, ತಾಯಿ ಮಾಚಿಕಬ್ಬೆ. ಶಾಂತಲೆ ನೃತ್ಯ-ಸಂಗೀತದಲ್ಲಿ ಪರಿಶ್ರಮ ಹೊಂದಿದ್ದಳು. ಅವಳು ಬೇಲೂರಿನ ಚನ್ನಕೇಶವ ದೇಗುಲದ ಸುಕನಾಶಿಯ ಮುಂದಿರುವ ನವರಂಗದ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಳೆಂಬುದು ಪ್ರತೀತಿ. ಬೇಲೂರಿನ ಚನ್ನಕೇಶವ ದೇಗುಲದಲ್ಲಿರುವ ಮದನಿಕ ವಿಗ್ರಹಗಳ ಕೆತ್ತನೆಗೆ ಶಾಂತಲೆಯ ನಾಟ್ಯಭಂಗಿ ಮತ್ತು ಅಂಗಸೌಷ್ಟವವೇ ಮಾದರಿಯಾಗಿತ್ತು ಎಂಬುದು ವಿದ್ವಾಂಸರ ಅಭಿಪ್ರಾಯ. ಹೊಯ್ಸಳರ ಕಾಲದಲ್ಲಿ ಕುಟುಂಬದ ಸದಸ್ಯರು ತಮಗೆ ಬೇಕಾದ ಮತ-ಧರ್ಮ ಪಾಲಿಸಬಹುದೆಂಬುದಕ್ಕೆ ಶಾಂತಲೆ ಉತ್ತಮ ಉದಾಹರಣೆ. ಶಾಂತಲೆಯ ತಂದೆ ಮಾರಸಿಂಗಯ್ಯ ಶೈವಮತದ ಅನುಯಾಯಿ. ಶಾಂತಲೆಯ ಪತಿ ದೊರೆ ವಿಷ್ಣುವರ್ಧನ ವೈಷ್ಣವ ಮತದ ಅನುಯಾಯಿಯಾಗಿದ್ದ. ಆದರೆ ಶಾಂತಲೆ ಜೈನ ಮತಾಚಾರಗಳನ್ನು ಅನುಸರಿಸುತ್ತಿದ್ದಳು. ವಿಷ್ಣುವರ್ಧನ ತನ್ನ ಮಗಳು ಪದ್ಮಳ ರೋಗವನ್ನು ರಾಮಾನುಜನರು ಗುಣಪಡಿಸಿದ ಒಂದೇ ಕಾರಣಕ್ಕಾಗಿ, ಜೈನಮತದಿಂದ ವೈಷ್ಣವ ಮತಕ್ಕೆ ಮತಾಂತರಗೊಂಡ. ಅವನು ವೈಷ್ಣವ ಮತಕ್ಕೆ ಮತಾಂತರಗೊಳ್ಳಲು ಮಗಳು ಪದ್ಮ ಕಾರಣಳೆಂಬುದು ಪ್ರತೀತಿ. ಅವನು ವೈಷ್ಣವನಾದ ನೆನಪಿಗಾಗಿ ಬೇಲೂರು, ಮೇಲುಕೋಟೆ, ತಲಕಾಡು, ಹರದನಹಳ್ಳಿ ಮತ್ತು ಗದಗದಲ್ಲಿ ಐದು ವೈಷ್ಣವ ದೇಗುಲಗಳನ್ನು ನಿರ್ಮಿಸಿದ.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ದಾನಶೀಲೆಯಾದ ಶಾಂತಲೆ ಹೊಯ್ಸಳ-ವಾಸ್ತುಶಿಲ್ಪಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾಳೆ. ಶಾಂತಲೆಯ ಗುರು ಪ್ರಭಾಚಂದ್ರ ಸಿದ್ಧಾಂತ. ಅವಳು ತನ್ನ ಗುರುವಿಗಾಗಿ ಮೊಟ್ಟನವಿಲೆ ಗ್ರಾಮವನ್ನು ಉಂಬಳಿಯಾಗಿ ನೀಡಿದ್ದಳು. ಶಾಂತಿಗ್ರಾಮ ಶಾಸನ-220, ಶಾಂತಲೆ ಬ್ರಾಹ್ಮಣರಿಗಾಗಿ ಹಾರುವನಹಳ್ಳಿ ಮತ್ತು ಕರಡಿ(ಇಂದಿನ ಕರಡೆ) ಗ್ರಾಮಗಳನ್ನು ದತ್ತಿ ನೀಡಿದುದಾಗಿ ತಿಳಿಸುತ್ತದೆ. ಧರ್ಮ ಸಹಿಷ್ಣುವಾದ ಶಾಂತಲೆ ಬೇಲೂರಿನ ಚನ್ನಕೇಶವ ದೇಗುಲದ ಪ್ರಾಕಾರದಲ್ಲಿ ಕಪ್ಪೆ ‘ಚನ್ನಿಗರಾಯ ಗುಡಿ’ಯನ್ನು ಕಟ್ಟಿಸಿದಳು. ಶಾಂತಲೆಗೆ ಸವತಿ ಗಂಧವಾರಣ ಎಂಬ ಬಿರುದಿತ್ತು. ಅವಳು 1123ರಲ್ಲಿ ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದ ಮೇಲೆ ಸವತಿ ಗಂಧವಾರಣ ಹೆಸರಿನ ಬಸದಿಯನ್ನು ನಿರ್ಮಿಸಿದಳು. ರೈತರ ಅನುಕೂಲಕ್ಕಾಗಿ ಬೇಲೂರಿನಲ್ಲಿ ಸಂತೆಯನ್ನು ಪ್ರಾರಂಭಿಸಿದಳು. ಶಾಂತಲೆ 1131ರಲ್ಲಿ ಶಿವಗಂಗೆಯಲ್ಲಿ ಸಲ್ಲೇಖನ ವ್ರತ ಅನುಸರಿಸಿ ಮರಣ ಹೊಂದಿದಳು. ಅರಸ ವಿಷ್ಣುವರ್ಧನ ಪತ್ನಿ ನೆನಪಿಗಾಗಿ ಶಿವಲಿಂಗೆಯಲ್ಲಿ ಶಾಂತಲೇಶ್ವರ ದೇಗುಲವನ್ನು ಕಟ್ಟಿಸಿದ್ದಾನೆ. ಪರಮತ ಸಹಿಷ್ಣುತೆಗೆ ಮತ್ತೊಂದು ಉದಾಹರಣೆ ಎರಡನೇ ವೀರಬಲ್ಲಾಳನ ಮಂತ್ರಿ ಚಂದ್ರಮೌಳಿ ಮತ್ತು ಆತನ ಪತ್ನಿ ಆಚಿಯಕ್ಕ. ಚಂದ್ರಮೌಳಿ ಶೈವನಾದರೆ, ಆಚಿಯಕ್ಕ ಜೈನ ಧರ್ಮದ ಅನುಯಾಯಿ. ಅವಳು 1181ರಲ್ಲಿ ಶ್ರವಣಬೆಳಗೊಳದಲ್ಲಿ ಅಕ್ಕನ ಬಸದಿಯನ್ನು ಕಟ್ಟಿಸಿದಳು.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಶ್ರವಣಬೆಳಗೊಳ ದಕ್ಷಿಣ ಕರ್ನಾಟಕದ ವಾಸ್ತುಶಿಲ್ಪದ ತೊಟ್ಟಿಲು, ಅದು ಕ್ರಿ.ಪೂ.ದಲ್ಲಿಯೇ ದಕ್ಷಿಣ ಭಾರತದ ಏಕೈಕ ಸಾಂಸ್ಕೃತಿಕ ಕೇಂದ್ರವಾಗಿತ್ತು. ಗಿಡ ಗುಚ್ಚಿಗಳಿಂದ ಕಾಡು ಪ್ರಾಣಿಗಳಿಂದ ತುಂಬಿದ್ದ ಪ್ರಾಚೀನ ಕಟವಪ್ರ ತಪೋಭೂಮಿ(ಪ್ರಾಚೀನ ಹೆಸರು) ಶ್ರವಣಬೆಳಗೊಳವಾಗಿ ಅಭಿವೃದ್ಧಿಯಾಗುವಲ್ಲಿ ಗಂಗರಸರ, ಗಂಗ ಮನೆತನದ ನಾರಿಯರ ಪರಿಶ್ರಮ ತುಂಬಾ ಇದೆ. ಗಂಗ ದೊರೆ ನಾಲ್ಕನೇ ರಾಜಮಲ್ಲನ ಮಂತ್ರಿ ಚಾವುಂಡರಾಯ ತನ್ನ ತಾಯಿ ಕಾಳಲಾದೇವಿಯ ಅಭೀಷ್ಟೆ ನೆರವೇರಿಸಲು ಏಕಶಿಲೆಯ 58.8 ಅಡಿ ಎತ್ತರದ ಸುಂದರ ಗೊಮ್ಮಟಮೂರ್ತಿಯನ್ನು ಕೆತ್ತಿಸಿದ. ಶ್ರವಣಬೆಳಗೊಳದ ಚಿಕ್ಕ ಬೆಟ್ಟದ ಬಹುಪಾಲು ಸ್ಮಾರಕಗಳು ಗಂಗ ಮನೆತನದ ಅರಸರಿಂದ, ಅವರ ಕುಟುಂಬದಿಂದ ನಿರ್ಮಾಣಗೊಂಡವು. ವಿಷ್ಣುವರ್ಧನನ ಮಹಾದಂಡನಾಯಕನಾದ ಗಂಗರಾಜ, ಗಂಗವಂಶದ ಕುಡಿ. ಅವನಿಲ್ಲದಿದ್ದರೆ ವಿಷ್ಣುವರ್ಧನ, ಚೋಳರು ಮತ್ತು ಕಲ್ಯಾಣಿ ಚಾಲುಕ್ಯರ ಸಾಮಂತತೆಯನ್ನು ಕಳಚಿಕೊಳ್ಳಲು ಸಾಧ್ಯವೇ ಇರಲಿಲ್ಲ. ವಿಷ್ಣುವರ್ಧನ ಸ್ವತಂತ್ರ ಅರಸನಾದುದು ಗಂಗರಾಜನಿಂದ. ತಲಕಾಡಿನಿಂದ ಚೋಳರ ಪ್ರತಿನಿಧಿ ಆದಿಯಮ ಮತ್ತು ಆದಿಗೈಮನ್ ಎಂಬ ದಂಡನಾಯಕರನ್ನು 1114ರಲ್ಲಿ ಸೋಲಿಸಿ ನೀಲಗಿರಿಯವರೆಗೆ ಬೆನ್ನಟ್ಟಿದ್ದ ಅವನು. ತಲಕಾಡು ಗೆದ್ದ ನಂತರ ಗಂಗರಾಜ ಶ್ರವಣಬೆಳಗೊಳದ ಪ್ರಗತಿಗೆ ಗಮನಹರಿಸಿದ. ಹೊಯ್ಸಳ ರಾಜ್ಯ ವಿಸ್ತರಣೆಗೆ ಗಂಗರಾಜ ಕಾರಣನಾದ್ದರಿಂದ ವಿಷ್ಣುವರ್ಧನ ಗಂಗರಾಜ ಕೇಳಿದ್ದೆಲ್ಲವನ್ನೂ ಅಸ್ತು ಎನ್ನುತ್ತಿದ್ದ. ಶ್ರವಣಬೆಳಗೊಳದ ಪ್ರಗತಿಯಲ್ಲಿ ಗಂಗರಾಜನ ತಾಯಿ, ಅತ್ತಿಗೆ, ನಾದಿನಿ, ಪತ್ನಿ ಸೋದರರು ಸೋದರನ ಮಕ್ಕಳು, ಗಂಗರಾಜನ ಮಗ ಎಲ್ಲರೂ ಕಾರಣರಾಗಿದ್ದಾರೆ.

ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

ನೀರಿಲ್ಲದಿದ್ದರೆ ಊರೆಲ್ಲಿ ಬೆಳೆಯಲು ಸಾಧ್ಯ; ಗಂಗರಾಜನ ಅತ್ತಿಗೆ ಜಕ್ಕಿಮಬ್ಬೆ ಶ್ರವಣಬೆಳಗೊಳದಲ್ಲಿ ಹನ್ನೆರಡನೇ ಶತಮಾನದ ಆದಿಭಾಗದಲ್ಲೇ ಕಟ್ಟೆಯೊಂದನ್ನು ನಿರ್ಮಿಸಿದಳು. ಅದು ಇಂದು ‘ಜಕ್ಕಿ ಕಟ್ಟೆ’ಯೆಂದೇ ಜನಜನಿತ. ಜಕ್ಕಿಮಬ್ಬೆ ಶ್ರವಣಬೆಳಗೊಳ ಗ್ರಾಮಕ್ಕೆ ಅಸ್ತಿಭಾರ ಹಾಕಿದವಳು. ತದ ನಂತರದಲ್ಲಿ ಹೊಯ್ಸಳರ ಬಂಡಾರಿ ಹುಳ್ಳ ದೊಡ್ಡಬೆಟ್ಟದ ಬುಡದಲ್ಲಿ ಬಂಡಾರಿ ಬಸ್ತಿ ಹಾಗೂ ಜನ ವಸತಿಗಾಗಿ ಎರಡು ಮನೆಗಳನ್ನು ಮೊದಲ ಬಾರಿಗೆ ನಿರ್ಮಿಸಿದ. ಜಕ್ಕಿಮಬ್ಬೆ ಶ್ರವಣಬೆಳಗೊಳದಿಂದ ಮೂರು ಮೈಲಿ ದೂರದ ಸಾಣೆಹಳ್ಳಿಯಲ್ಲಿ 1120ರಲ್ಲಿ ಬಸದಿಯೊಂದನ್ನು ಕಟ್ಟಿಸಿದ್ದಳು. ಅದೀಗ ಶಿಥಿಲವಾಗಿದೆ. ಜಕ್ಕಿಮಬ್ಬೆಯ ನೆನಪಿಗಾಗಿ ಜಕ್ಕನಹಳ್ಳಿ ಎಂಬ ಗ್ರಾಮಗಳು ಹಾಸನ ಜಿಲ್ಲೆಯಲ್ಲಿವೆ. ಶ್ರವಣಬೆಳಗೊಳದ ಅಧಿದೇವತೆ ಕೂಡ ಜಕ್ಕಮ್ಮ. ಜಕ್ಕಮ್ಮನಿಗಾಗಿ ಶ್ರವಣಬೆಳಗೊಳದಲ್ಲಿ ಗುಡಿಯೂ ಇದೆ.

ಗಂಗರಾಜನ ತಾಯಿ ಪೋಚಿಕಬ್ಬೆ. ಜೈನ ಮತೀಯಳಾದ ಅವಳು 1118ರಲ್ಲಿ ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿ ಕತ್ತಲೆ ಬಸದಿಯನ್ನು ನಿರ್ಮಿಸಿದಳು. ಲಕ್ಷ್ಮಿಮತಿ, ಗಂಗರಾಜನ ಪತ್ನಿ, ಅವಳು 1117ರಲ್ಲಿ ಎರಡು ಕಟ್ಟೆ ಬಸದಿಯನ್ನು, 1118ರಲ್ಲಿ ಶಾಸನ ಬಸದಿಯನ್ನೂ ನಿರ್ಮಿಸಿದಳು. ಶ್ರವಣಬೆಳಗೊಳದಲ್ಲಿ ಮಾಂಗಾಯಿ ಬಸದಿ ಎಂಬ ಸ್ಮಾರಕವಿದೆ. ರಾಜ ನರ್ತಕಿ ಮಾಂಗಾಯಿ, ಬಸದಿಯೊಂದನ್ನು ನಿರ್ಮಿಸುವ ಮೂಲಕ ಇತಿಹಾಸ ಪುಟಗಳಲ್ಲಿ ಚಿರಸ್ಥಾಯಿಯಾಗಿದ್ದಾಳೆ. ಶ್ರವಣಬೆಳಗೊಳದಲ್ಲಿ ಶ್ರಮಣರು, ಶ್ರಾವಕರು, ಶ್ರಾವಕಿಯರು, ಕಂತಿಯರು, ಅರಸರು, ದಂಡನಾಯಕರು, ಆಡಳಿತಾಧಿಕಾರಿಗಳು, ಶ್ರೀಸಾಮಾನ್ಯರು ಸೇರಿದಂತೆ 106 ಮಂದಿ ಸಲ್ಲೇಖನ ವ್ರತದಿಂದ ಮರಣ ಹೊಂದಿದ್ದಾರೆ. ಹಾಗೆ ಮರಣ ಹೊಂದಿದವರಲ್ಲಿ ರಾಜ ಪರಿವಾರ ಮತ್ತು ಆಡಳಿತ ಪರಿವಾರದ ಸ್ತ್ರೀಯರೂ ಸಹ ಇದ್ದಾರೆ. ಶಾಂತಲೆಯ ತಾಯಿ ಮಾಚಿಕಬ್ಬೆ ಶ್ರವಣಬೆಳಗೊಳದಲ್ಲಿ ಸಲ್ಲೇಖನ ವ್ರತದಿಂದ ಮರಣ ಹೊಂದಿದಾಗ ಶಾಂತಲೆಯು ತನ್ನ ತಾಯಿಗಾಗಿ ನಿಷಧಿ ಮಂಟಪ ಕಟ್ಟಿಸಿದ್ದಾಳೆ. ಗಂಗರಾಜನ ತಾಯಿ ಪೋಚಿಕಬ್ಬೆಯ ಸ್ಮರಣಾರ್ಥ ಶ್ರವಣಬೆಳಗೊಳದಲ್ಲಿ ನಿಷಧಿ ಮಂಟಪವಿದೆ. ಗಂಗರಾಜ ತನ್ನ ಪತ್ನಿ ಲಕ್ಷ್ಮಿಮತಿ ಮತ್ತು ನಾದಿನಿ ದೇಮತಿಗಾಗಿ ಚಿಕ್ಕ ಬೆಟ್ಟದಲ್ಲಿ ನಿಷಧಿ ಮಂಟಪಗಳನ್ನು ಎತ್ತಿಸಿದ್ದಾನೆ. ಇವೆಲ್ಲವು ಪುರುಷರು ಮಹಿಳೆಗೆ ತೋರುವ ಗೌರವಗಳಾಗಿವೆ.

ಇದನ್ನು ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ 

ಹಾಸನ ಜಿಲ್ಲೆಯ ವನಿತೆಯರು ಮಹಿಳಾ ಸಮಾನತೆಗಾಗಿ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲು ವನಿತಾ ಹೋರಾಟ ಸಂಘವನ್ನು ಇತ್ತೀಚೆಗೆ ಸ್ಥಾಪಿಸಿಕೊಂಡಿರುವುದು ಸಂತೋಷದ ವಿಷಯ. ಇತ್ತೀಚೆಗೆ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಊರ್ಧ್ವಮುಖವಾಗುತ್ತಿವೆ. ಮಠದಯ್ಯಗಳು, ಗುಡಿ ಪಾರುಪತ್ಯೆಗಾರರು, ಆಡಳಿತಗಾರರು… ಮಹಿಳಾ ದೌರ್ಜನ್ಯ ಕಂಡರೂ ಕಾಣದಂತೆ ವರ್ತಿಸುತ್ತಿರುವುದು ನಮ್ಮೆಲ್ಲರ ದೌರ್ಭಾಗ್ಯ. ಇತ್ತೀಚೆಗೆ ಪಂಚಾಂಗ ಪಂಡಿತ ಪಟಿಂಗನೊಬ್ಬ ಮಹಿಳಾ ಸ್ವಾಮ್ಯಕ್ಕಾಗಿ ಕಗ್ಗೊಲೆ ಮಾಡಿ ಕಂಬಿ ಹಿಂದಿದ್ದಾನೆ. ಯುಗಾಂತರಗಳಲ್ಲಿ ಮಹಿಳಾ ದೌರ್ಜನ್ಯ ಸರ್ವೇಸಾಮಾನ್ಯವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹಾಸನ ಜಿಲ್ಲೆಯ ಶಾಸನಗಳಲ್ಲೂ ದಾಖಲಾಗಿವೆ. ಹಾರನಹಳ್ಳಿಯ ಶಾಸನವೊಂದು ಹೊಯ್ಸಳ ನರಸಿಂಹನ ಕಾಲದಲ್ಲಿ ಮಹಿಳೆಯ ಸಾಮ್ಯಕ್ಕಾಗಿ ತೊಂಡನೂರಿನ ಸೈನಿಕ ಕ್ಯಾಂಪಿನಲ್ಲಿ ರಾಜಕನೆಂಬುವನು ಬಿಟ್ಟಯ್ಯನ ಪ್ರೇಯಸಿಯನ್ನು ಕೊಂದು ಹೋರಾಟದಲ್ಲಿ ಮರಣಹೊಂದಿದ ಪ್ರಕರಣವನ್ನು ಉಲ್ಲೇಖಿಸುತ್ತದೆ. ಮಹಿಳೆಯರ ಮಾನ ರಕ್ಷಣೆಗಾಗಿ ಹಾಸನ ಜಿಲ್ಲೆಯಲ್ಲಿ ನಡೆದ ಹೋರಾಟವನ್ನು ಭರ್ತೂರಿನ ಹತ್ತನೇ ಶತಮಾನದ ಶಾಸನ ತಿಳಿಸುತ್ತದೆ. ಮಹಾರಾಜ ಗಾವುಂಡನೆಂಬುವನು ಭರ್ತೂರಿನ ಹೆಂಗಸರ ಉಡಿಗೆ ಕೈ ಹಾಕಿದಾಗ, ಮಾನ ರಕ್ಷಣೆಗಾಗಿ ಭರ್ತೂರಿನ ಜನರು ದೊಡ್ಡ ಹೋರಾಟವನ್ನೆ ಮಾಡಿದ್ದಾರೆ. ಹೋರಾಟದಲ್ಲಿ ನಿಭಲ್ಕ ಎಂಬುವವನೂ ಸೇರಿದಂತೆ ಊರಿನ ಹದಿನೈದು ಮಂದಿ ಮರಣ ಹೊಂದಿರುವುದು ಹಾಸನ ಜಿಲ್ಲೆಯ ಐತಿಹಾಸಿಕ ಯುಗಾಂತರ ದಾಖಲೆಯೂ ಹೌದು… ಹಾಸನ ಜಿಲ್ಲೆಯ ಮಾನಿನಿಯರ ಹೋರಾಟ ಸಂಘಟನೆಗೆ ಶುಭ ಕೋರುತ್ತೇನೆ. ಹಾಗೆಯೆ ಮಾನ ರಕ್ಷಣೆಗಾಗಿ ಪ್ರಾಣ ರಕ್ಷಣೆಗಾಗಿ ಭರ್ತೂರಿನ ಪ್ರಜೆಗಳಂತೆ ಮಾನಿನಿಯರಲ್ಲಿ ಕಿಚ್ಚಿರಲೆಂಬುದು ನನ್ನ ಆಶಯ.

-ಮೇಟಿಕೆರೆ ಹಿರಿಯಣ್ಣ, ಜಿರಾತುದಾರ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...