ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ...
ಸಾಮಾನ್ಯವಾಗಿ ನಮಗೆ ಏನಾದರೂ ಸಣ್ಣಪುಟ್ಟ ಸಮಸ್ಯೆಗಳು ಉಂಟಾದಾಗ ಅದನ್ನೇ ಬೆಟ್ಟದಷ್ಟೆಂಬಂತೆ ಭಾವಿಸಿ ಧೃತಿಗೆಡುತ್ತೇವೆ. ಮತ್ತೆ ಕೆಲವರು ತಮಗೆ ಎದುರಾದ ಸಮಸ್ಯೆಯನ್ನು ಸಮಚಿತ್ತದಿಂದ ಸ್ವೀಕರಿಸಿ ಅದನ್ನು ಸವಾಲಾಗಿ ಪರಿಗಣಿಸಿ ಮುಂದೆ ಸಾಗುತ್ತಾರೆ. ಈ ಕೊನೆಯ ಸಾಲಿಗೆ ಸೇರಿದವರು ಹಾಸನದ ವಿಜಯಕುಮಾರಿ ಮುರಾರಪ್ಪನವರು. ಜಾಗತೀಕರಣದ ಪ್ರಭಾವದಿಂದ ಮಾನವ ಸಂಬಂಧಗಳ ಬೆಸುಗೆ ಸಡಿಲಗೊಳ್ಳುತ್ತಿರುವ ಈ ದುಸ್ತರ ಕಾಲಘಟ್ಟದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಲು ಬಹಳಷ್ಟು ಮಂದಿ ಹಿಂಜರಿಯುತ್ತಾರೆ. ಇಂತಹವರ ನಡುವೆ ತಮ್ಮ ದೈಹಿಕ ನ್ಯೂನತೆಯನ್ನು ಮೆಟ್ಟಿನಿಂತು ತಮ್ಮ ಬದುಕನ್ನೇ ಸಮಾಜಸೇವೆಗೆ ಮುಡಿಪಾಗಿಟ್ಟಿರುವ ವಿಜಯಕುಮಾರಿ ಅವರದು ಧೀಮಂತ ವ್ಯಕ್ತಿತ್ವ.
ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ
ಹಾಸನದ ಅನಂತಮತಿ ಮತ್ತು ಮುರಾರಪ್ಪ ದಂಪತಿಗಳ ಆರು ಜನ ಮಕ್ಕಳಲ್ಲಿ ಮೂರನೆಯವರಾಗಿ 1949 ಸೆಪ್ಟೆಂಬರ್ 7ರಂದು ಜನಿಸಿದ ವಿಜಯಕುಮಾರಿಯವರು ಒಂದು ವರ್ಷದ ಮಗುವಾಗಿದ್ದಾಗ ಪೋಲಿಯೋ ಮಹಾಮಾರಿಗೆ ಸಿಲುಕಿ ಎರಡು ಕಾಲಿನ ಸ್ವಾಧೀನ ಕಳೆದುಕೊಂಡರು. ಆದರೆ ತಂದೆ ತಾಯಿಯರ ಅನನ್ಯ ಪ್ರೀತಿ ಕಾಳಜಿ ಪ್ರೋತ್ಸಾಹ ಸಹಕಾರದಿಂದ ಆತ್ಮವಿಶ್ವಾಸ ಬೆಳೆಸಿಕೊಂಡು ಬಾಲ್ಯದಿಂದಲೇ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. 1957ರಲ್ಲಿ ಸಂತ ಜೋಸೆಫರ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ ವಿಜಯಕುಮಾರಿಯವರು, 7ನೆಯ ತರಗತಿ ನಂತರ ವಿದ್ಯಾಭ್ಯಾಸ ಮೊಟಕುಗೊಳಿಸಿ ತೋಟಗಾರಿಕೆ, ಕರಕುಶಲ ಕಲೆಯತ್ತ ಆಸಕ್ತಿ ತೋರುತ್ತಾರೆ. ತಾನು ಎಲ್ಲಾ ರೀತಿಯ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆಯಿಂದ ತೋಟಗಾರಿಕೆ, ಕಸೂತಿ, ಅಡುಗೆ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಂಡರು. ಇದಕ್ಕೆ ಅವರ ಕುಟುಂಬದವರ ಮತ್ತು ಕಲಿತ ಶಾಲೆಯಲ್ಲಿನ ಸ್ನೇಹಮಯ ವಾತಾವರಣ ಕಾರಣವೆನ್ನುತ್ತಾರೆ.
ಇದನ್ನು ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ
ಬೆಂಗಳೂರಿಗೆ ಆಗಾಗ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ವಿಜಯಕುಮಾರಿಯವರಿಗೆ ಬೆಂಗಳೂರಿನ ಹೆಸರಾಂತ ವಿಕಲಚೇತನರ ತರಬೇತಿ ಕೇಂದ್ರ ಎಪಿಡಿ ಸಂಸ್ಥೆಯ ಮುಖ್ಯಸ್ಥೆ ಹೇಮಾರವರ ಪರಿಚಯವಾಗುತ್ತದೆ. ಈ ಭೇಟಿ ಅವರ ಬದುಕಿನ ಪಥವನ್ನೇ ಬದಲಾಯಿಸಿತು. ವಿಶೇಷ ಚೇತನರಿಗಾಗಿ ತಾನು ಏನಾದರೂ ಸೇವೆ ಮಾಡಬೇಕೆಂಬ ತುಡಿತ ತೀವ್ರವಾಯಿತು. ಈ ಆಲೋಚನೆ ಅವರ ಜೀವನದ ನಿರ್ದಿಷ್ಟ ಗುರಿಯನ್ನು ನಿರ್ಧರಿಸಿಬಿಟ್ಟಿತ್ತು. ಈ ಸಮಯದಲ್ಲಿಯೇ ಅವರು ಮೊಟಕುಗಳಿಸಿದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾರೆ. ಮುಂದೆ ಎಪಿಡಿ ಸಂಸ್ಥೆಯಲ್ಲಿ ಸ್ವಯಂಸೇವಕಿಯಾಗಿ ಕಾರ್ಯನಿರ್ವಹಿಸಲಾರಂಭಿಸುತ್ತಾರೆ. ಅಂದು ಆರಂಭವಾದ ಇವರ ಸೇವಾ ಪಯಣ ಇಂದಿಗೂ ಅದೇ ಉತ್ಸಾಹ, ಅರ್ಪಣಾ ಮನೋಭಾವದಿಂದ ನಿರಂತರವಾಗಿ ಸಾಗಿರುವುದು ಅಚ್ಚರಿ ಮೂಡಿಸುತ್ತದೆ. ಇಲ್ಲಿ ಕರ್ತವ್ಯ ನಿರ್ವಹಿಸಲಾರಂಭಿಸಿದ ನಂತರದ ದಿನಗಳಲ್ಲಿ ಹಲವಾರು ಸಂಘ ಸಂಸ್ಥೆಗಳೊಂದಿಗೆ ಇವರ ಒಡನಾಟ ಬೆಳೆಯಿತು. ಅಲ್ಲಿನ ವಿಶೇಷ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬುವುದರ ಜೊತೆಗೆ, ಕರಕುಶಲ ವಸ್ತುಗಳ ತಯಾರಿಕಾ ತರಬೇತಿ ನೀಡಿದರು. ಅಲ್ಲದೆ ತೋಟಗಾರಿಕೆಯಲ್ಲೂ ಮಕ್ಕಳು ಆಸಕ್ತಿ ವಹಿಸುವಂತೆ ಮಾಡಿ, ಅವರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದು ಅಂದಿನ ಇವರ ಹೆಗ್ಗಳಿಕೆ.
ಇದನ್ನು ಓದಿದ್ದೀರಾ?: ಹಿರಿಯ ಲೇಖಕಿ, ಪತ್ರಕರ್ತೆ ಪಾರ್ವತಿ ಕೃ.ನ.ಮೂರ್ತಿ
ಆರ್ಥಿಕ ಸಂಕಷ್ಟದಲ್ಲಿರುವ ವಿಶೇಷ ಚೇತನರಿಗೆ ಮತ್ತು ಮಕ್ಕಳಿಗೆ, ಗಾಲಿ ಕುರ್ಚಿ ವಿತರಿಸುವ “ಪ್ರಾವಿಷನ್ ಏಷ್ಯಾ” ಎನ್ನುವ ಸಂಸ್ಥೆಯೊಂದಿಗೆ ಕೈಜೋಡಿಸಿ ಅದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ನೂರಾರು ಗಾಲಿ ಕುರ್ಚಿಗಳನ್ನು ವಿತರಿಸಿ, ಅವರ ಮೊಗದಲ್ಲಿ ಮಂದಹಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿಗೂ ಹಾಸನ ಮತ್ತು ಬೆಂಗಳೂರಿನ ಅರ್ಹ ಫಲಾನುಭವಿಗಳಿಗೆ ಈ ಸೇವೆ ನೀಡುತ್ತಿದ್ದಾರೆ. ಸಮಾಜಸೇವೆ ಮಾತ್ರವಲ್ಲದೆ ಕ್ರೀಡೆ ಮತ್ತು ಖಾದ್ಯ ತಯಾರಿಕೆಯಲ್ಲಿಯೂ ಆಸಕ್ತಿ ಹೊಂದಿರುವ ಇವರು, 1990ರಲ್ಲಿ ಬೆಂಗಳೂರಿನ ಕೃಷಿ ವಿದ್ಯಾಲಯ ಹಾಗೂ ಅಮೆರಿಕದ ಗೋಧಿ ಸಂಸ್ಥೆಗಳು ಏರ್ಪಡಿಸಿದ್ದ ವಿಶೇಷ ಗೋಧಿ ಖಾದ್ಯ ತಯಾರಿಕಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನ್ಯಾಷನಲ್ ವೀಲ್‌ಚೇರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ 25 ಮೀಟರ್ ರೇಸ್ ಹಾಗೂ ಗುಂಡು ಎಸೆತದಲ್ಲಿ ಎರಡನೇ ಸ್ಥಾನ ಪಡೆದಿದ್ದು, ಇವರ ಆತ್ಮವಿಶ್ವಾಸವನ್ನು ಇಮ್ಮಡಿಸಿತು. ವಿಕಲಚೇತನರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವೀಲ್‌ಚೇರ್ ಓಟದಲ್ಲಿ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ. ಗೋಧಿ ಕಡ್ಡಿಯಿಂದ ಸುಂದರ ಕಲಾಕೃತಿಗಳನ್ನು ರಚಿಸುವುದರ ಮೂಲಕ ಅವರೊಳಗಿನ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು ಕೂಡ. ತಮ್ಮ ವೈಕಲ್ಯತೆಗಾಗಿ ಎಂದೂ ಕೊರಗದೆ, ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿರುವ ವಿಜಯಕುಮಾರಿಯವರು ತಮ್ಮ ಆತ್ಮೀಯರಾದ ಲೀಲಾರವರ ಜೊತೆ ಸೇರಿ ಬೆಂಗಳೂರಿನ ಬಳಿಯ ಬಿಡದಿಯಲ್ಲಿ ‘ವಿಜಯಕುಮಾರಿ ಚಾರಿಟಬಲ್ ಟ್ರಸ್ಟ್’ ಆರಂಭಿಸಿ, ನಿರಾಶ್ರಿತರು ಹಾಗೂ ವಿಶೇಷ ಚೇತನರಿಗಾಗಿ ಉಚಿತ ವಸತಿ ನಿಲಯವನ್ನು ನಿರ್ವಹಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಅರ್ಥಶಾಸ್ತ್ರಜ್ಞೆ, ಐರನ್‌ಲೇಡಿ ಸುಶೀಲಾ ಸುಬ್ರಹ್ಮಣ್ಯ
ಸದಾ ಸ್ಫೂರ್ತಿಯ ಚಿಲುಮೆಯಾಗಿ, ನೊಂದವರಿಗೆ ನೆರಳಾಗಿರುವ ವಿಜಯಕುಮಾರಿಯವರು ಹಾಸನ ಮತ್ತು ಬೆಂಗಳೂರಿನಲ್ಲಿ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಸನ ಜಿಲ್ಲಾ ವಿಕಲಚೇತನರ ಸಂಘದ ಗೌರವಾಧ್ಯಕ್ಷೆಯಾಗಿರುವ ಇವರು, ವಿಶ್ವ ಮಾನವ ಒಕ್ಕೂಟ, ಮಿತ್ರ ಜ್ಯೋತಿ ಅಂಧರ ಸಂಸ್ಥೆ, ಅನನ್ಯ ಟ್ರಸ್ಟ್, ಸುಖಿ ಮಹಿಳಾ ಸಂಸ್ಥೆ, ಹಲಸೂರಿನ ಮಾರ್ಗದರ್ಶಿ ಮಹಿಳಾ ನಿಲಯ, ಹಾರ್ಟ್ ಸೋಲ್ ನ್ಯೂ ಹಾರಿಜನ್ ಸೇವಕ್, ಕರ್ನಾಟಕ ಸಾಂಸ್ಕೃತಿಕ ವೇದಿಕೆ, ಫೆಡರೇಶನ್ ಆಫ್ ಸೀನಿಯರ್ ಸಿಟಿಜನ್ ಫೋರಮ್ ಆಫ್ ಕರ್ನಾಟಕ, ಪಾರ್ಶ್ವನಾಥ ಜೈನ ಟ್ರಸ್ಟ್, ಲಯನ್ಸ್ ಸಂಸ್ಥೆ, ಕರ್ನಾಟಕ ಕುಷ್ಟರೋಗ ವಿಕಲಚೇತನರ ಸಂಸ್ಥೆ, ಕರ್ನಾಟಕ ರಾಜ್ಯ ಮಂಗಳೂರು ಅಭಿವೃದ್ಧಿ ಸಂಘದ ಕರ್ನಾಟಕ ರಾಜ್ಯ ಮಂಗಳೂರು ವಿಕಲಚೇತನರ ಅಭಿವೃದ್ಧಿ ಸಂಘ, ಸಾಂತ್ವನ ಟ್ರಸ್ಟ್, ಬಡ ಮಕ್ಕಳಿಗೆ ಆಹಾರ ಪೂರೈಕೆ ಮಾಡುವ Aid & Aling ಸಂಸ್ಥೆ, ಮಾನಸಿಕ ಅಸ್ವಸ್ಥ ಮಕ್ಕಳ ಸೇವೆಯಲ್ಲಿ ತೊಡಗಿರುವ ವಿಕಾಸ್ ಸ್ಕೂಲ್ ಮತ್ತು ಕರ್ಣ ಸಂಸ್ಥೆ… ಹೀಗೆ ಇನ್ನೂ ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲೆ, 3170 ಕ್ಲಬ್ ನಂಬರ್ 109161ರ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಫ್ರೆಂಡ್‌ನ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು ಇವರ ಹೆಗ್ಗಳಿಕೆಯಾಗಿದೆ.

ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಅವುಗಳಲ್ಲಿ ಪ್ರಮುಖವಾದವು ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ, 2016-17ರ ರಾಜ್ಯ ವಿಕಲಚೇತನ ರಾಜ್ಯ ಪ್ರಶಸ್ತಿ, ಐ ಫೀಲ್ ಸಂಸ್ಥೆ ಪ್ರಶಸ್ತಿ, ಫೌಂಡೇಶನ್ ಆಫ್ ಆರ್ಟ್ ಅಂಡ್ ಕಲ್ಚರ್ ಫಾರ್ ದಿ ಡೆಫ್ ಸಂಸ್ಥೆ ಪ್ರಶಸ್ತಿ, ಕಾಳಲಾದೇವಿ ಮಹಿಳಾ ಸಮಾಜ, ಚಕ್ರೇಶ್ವರಿ ಮಹಿಳಾ ಸಮಾಜದ ವತಿಯಿಂದ ಗೌರವ ಪ್ರಶಸ್ತಿ, ಮೈಸೂರು ಜೈನ ಸಮುದಾಯ ವತಿಯಿಂದ ಪದ್ಮಶ್ರೀ ಪ್ರಶಸ್ತಿ, ಬೆಂಗಳೂರಿನ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ… ಹೀಗೆ ನೂರಾರು ಪ್ರಶಸ್ತಿ ಬಿರುದುಗಳು ಇವರ ಸೇವೆಯನ್ನು ಅರಸಿ ಬಂದಿವೆ. ಚೆನ್ನೈನ ಲಯನ್ಸ್ ಸಂಸ್ಥೆ ಇವರ ಸಾಧನೆಯನ್ನು ಗುರುತಿಸಿ, ತನ್ನಲ್ಲಿಗೆ ಬರಮಾಡಿಕೊಂಡು ಅದ್ದೂರಿಯಾಗಿ ಸನ್ಮಾನಿಸಿದ್ದು ಇವರ ಸೇವೆಗೆ ಸಂದ ಹೆಮ್ಮೆಯ ಗರಿಯಾಗಿದೆ. ಸಿರಿ ಕನ್ನಡ ವಾಹಿನಿ- ತನ್ನ ‘ಲೈಫ್ ಓಕೆ’ ಎಂಬ ಕಾರ್ಯಕ್ರಮದಲ್ಲಿ ಇವರ ಸಂಪೂರ್ಣ ಸಂದರ್ಶನ ನಡೆಸಿದೆ. ಇತ್ತೀಚಿಗೆ 18, ಜನವರಿ 2026ರಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಡಿ ಬ್ರಹ್ಮಶ್ರೀ ಪ್ರಶಸ್ತಿ ನೀಡಿ ಇವರನ್ನು ಗೌರವಿಸಲಾಗಿದೆ.
ಇದನ್ನು ಓದಿದ್ದೀರಾ?: ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದೆ- ದಾಕ್ಷಾಯಿಣಿ
ನಮ್ಮಲ್ಲಿನ ನ್ಯೂನತೆಗಾಗಿ ಕೊರಗದೆ ಆತ್ಮಸ್ಥೈರ್ಯದಿಂದ ನಮ್ಮ ಇಚ್ಛೆಯ ಕ್ಷೇತ್ರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಖಂಡಿತ ಯಶಸ್ಸು ದೊರಕುತ್ತದೆ ಎನ್ನುವ ವಿಜಯಕುಮಾರಿಯವರದು, ಮಗುವಿನಂತ ಮುಗ್ಧ ಮನಸ್ಸು. ದೂರದೂರಿನಿಂದ ಬೆಂಗಳೂರಿಗೆ ಕೆಲಸ ಅರಸಿ ಬರುವ ಬಡ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿರುವುದಲ್ಲದೆ, ಅವರಿಗೆ ಮಾರ್ಗದರ್ಶನ ನೀಡಿ ತಮ್ಮ ಪರಿಚಿತರ ಬಳಿ ನೌಕರಿ ಕೊಡಿಸಿರುವ ಅನೇಕ ಉದಾಹರಣೆಗಳೂ ಇವೆ. 77ರ ಇಳಿವಯಸ್ಸಿನಲ್ಲೂ ಕೊಂಚವೂ ಬೇಸರಿಸದೆ ಯಾವುದೇ ಪ್ರಚಾರ ಬಯಸದೆ, ನೆರವು ಕೇಳಿ ಬಂದವರಿಗೆ ಇಲ್ಲವೆನ್ನದೆ ಅವರ ನೋವಿಗೆ ಧ್ವನಿಯಾಗುತ್ತಾರೆ ಮುಗುಳ್ನಗೆಯೊಂದಿಗೆ ಮಾತು ಆರಂಭಿಸಿ ಸಮಸ್ಯೆಯನ್ನು ಆಲಿಸಿ, ತಮ್ಮಿಂದಾದ ನೆರವು ನೀಡುತ್ತಾರೆ. ತಮ್ಮಿಂದ ಸಾಧ್ಯವಾಗದ್ದನ್ನು ದಾನಿಗಳ ಮೂಲಕವಾಗಿಯಾದರೂ ನೆರವು ಒದಗಿಸುತ್ತಾರೆ. ಹಾಗಾಗಿ ಇವರು ಎಲ್ಲರ ನೆಚ್ಚಿನ ‘ವಿಜಯಕ್ಕ’ ಎನಿಸಿದ್ದಾರೆ. ದೈಹಿಕ ಸಾಮರ್ಥ್ಯ ಉಳ್ಳವರು ನಾಚುವಂತೆ ಕಾರ್ಯನಿರ್ವಹಿಸುತ್ತಿರುವ ಇವರ ಉತ್ಸಾಹ, ಆದರ್ಶಮಯ ಬದುಕು ಎಲ್ಲರಿಗೂ ಮಾದರಿ.
-ಕೆ.ಟಿ. ಜಯಶ್ರೀ





