ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ...
70ರ ದಶಕದಲ್ಲಿ ಹುಡುಗಿಯರು ಎಂಜಿನಿಯರಿಂಗ್- ಅದರಲ್ಲೂ ಗಂಡುಮಕ್ಕಳ ಕ್ಷೇತ್ರ ಎಂದು ಪರಿಗಣಿಸಲಾಗುತ್ತಿದ್ದ ಎಲೆಕ್ಟ್ರಿಕಲ್ ವಿಭಾಗದಲ್ಲಿ ಓದುವುದು ವಿಶೇಷ ಮತ್ತು ಅಪರೂಪವಾಗಿತ್ತು. ಅಂತಹ ವಿಭಾಗದಲ್ಲಿ ಪದವಿಯಷ್ಟೇ ಅಲ್ಲ ಎಂಟೆಕ್ ಮತ್ತು ಪಿಎಚ್.ಡಿ ಮಾಡಿ ಸಾಧನೆ ಮಾಡಿದ ಶ್ಯಾಮಲಾ ಚಿಕ್ಕಮೇನಹಳ್ಳಿ ಅವರು, ಹಾಸನದ ಹೆಮ್ಮೆಯ ಪುತ್ರಿ. ತಂದೆ ಅನಂತ ಸುಬ್ಬರಾಯರು ಶಾಲಾ ಶಿಕ್ಷಕರು. ತಾಯಿ ಸರೋಜಮ್ಮ. ಏಳು ಮಂದಿ ಸಹೋದರ ಸಹೋದರಿಯರಿಂದ ಕೂಡಿದ ದೊಡ್ಡ ಕುಟುಂಬದಲ್ಲಿ ಬೆಳೆದವರಿವರು. ಹಾಸನದಲ್ಲಿ ಶಾಲಾ ಶಿಕ್ಷಣ ಪಡೆದು, ಎವಿಕೆ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಸಂಸ್ಕೃತ ಮತ್ತು ಗಣಿತ ಅವರ ನೆಚ್ಚಿನ ವಿಷಯಗಳಾಗಿದ್ದವು. ಆಗಲೇ ಎವಿಕೆ ಕಾಲೇಜಿನಲ್ಲಿ ಭೌತಶಾಸ್ತ್ರದ ಉಪನ್ಯಾಸಕರಾಗಿದ್ದ ನಾಗರತ್ನ ಎಚ್.ಎಂ. ಉನ್ನತ ವ್ಯಾಸಂಗಕ್ಕೆ ಅಮೆರಿಕಾಗೆ ಹೋದರು ಎಂಬ ಸುದ್ದಿ ಶ್ಯಾಮಲಾ ಅವರ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ತಾವೂ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂಬ ಕನಸು ಗರಿಗೆದರಿತು. ಅವರೆ ರತ್ನಾ ನಾಯಕ್ ಆಗಿ ಅಮೆರಿಕಾದ ವೇನ್‌ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಹೋದ್ಯೋಗಿಯಾಗಿ ಭೇಟಿಯಾದಾಗ, ಆಶ್ಚರ್ಯ ಮತ್ತು ಸಂತೋಷ ಆಗಿದ್ದನ್ನು ನೆನಪಿಸಿಕೊಳ್ಳುತ್ತಾರೆ ಶ್ಯಾಮಲಾ. ತಮ್ಮ ಸೀಮಿತ ಹಣಕಾಸಿನ ಲಭ್ಯತೆ ನಡುವೆ, ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಿದ ಪೋಷಕರ ಬೆಂಬಲದಿಂದ ಅವರು ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು.
ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ
ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಿದ್ದರಿಂದ ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ದೊರೆತು, ಬಿಇ ಪದವಿ ಪಡೆದರು. ಇವರು ಪ್ರತೀ ವರ್ಷ ತಪ್ಪದೇ ರ‍್ಯಾಂಕ್ ಪಡೆಯುತ್ತಲೇ ಹೋದರು. ಜೊತೆಯಲ್ಲೆ ತಮ್ಮಿಷ್ಟದ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಾ, ಸೀನಿಯರ್ ಪರೀಕ್ಷೆ ಪಾಸು ಮಾಡಿದರು. ಕಾಲೇಜು ದಿನಗಳಲ್ಲಿ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, ಬೆಂಗಳೂರಿನ ಆಕಾಶವಾಣಿಯಲ್ಲೂ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.
ನಂತರದಲ್ಲಿ ಶ್ಯಾಮಲಾ ಅವರ ವೃತ್ತಿ ಬೆಂಗಳೂರಿನ ಕಿರ್ಲೋಸ್ಕರ್ ಎಲೆಕ್ಟ್ರಿಕ್ಸ್‌ನಲ್ಲಿ ಪ್ರಾರಂಭವಾಯಿತು. ಕಬ್ಬಿಣದ ಕಡಲೆ ಎಂದೇ ಕರೆಯಲಾಗುತ್ತಿದ್ದ ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಖರಗ್‌ಪುರದ ಐಐಟಿಯಲ್ಲಿ ಎಂಟೆಕ್ ಓದಿ ಶೈಕ್ಷಣಿಕ ಸಾಧನೆಯ ಮತ್ತೊಂದು ಮಜಲನ್ನು ನಿರಾತಂಕವಾಗಿ ದಾಟಿದ ಮಹಿಳೆ ಎನಿಸಿಕೊಂಡರು. ನಂತರ ಮೈಸೂರಿನ ಕಿರ್ಲೋಸ್ಕರ್ ಕಂಪನಿಗೆ ಮರಳಿದರು. ಅಲ್ಲಿಂದ ಎಲ್‌ಆರ್‌ಡಿಇನಲ್ಲಿ ವಿಜ್ಞಾನಿಯಗಿ ಸ್ವಲ್ಪ ಕಾಲ ಕಾರ್ಯನಿರ್ವಹಿಸಿದರು. ಮುಂದೆ ಕಲಿಕೆಯ ತುಡಿತ ಅವರನ್ನು ಉನ್ನತ ವ್ಯಾಸಂಗಕ್ಕೆಂದು ಅಮೆರಿಕಾಗೆ ಕರೆದೊಯ್ದಿತು! 1995ರಲ್ಲಿ ಕೆಂಟಕಿ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪವರ್ ಎಲೆಕ್ಟ್ರಾನಿಕ್ಸ್‌ನಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿ ಪಡೆದರು. ಆ ಪ್ರಸಿದ್ಧ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದು ನಿಜಕ್ಕೂ ಹೆಗ್ಗಳಿಕೆ! ಇಲ್ಲಿ ಸಂಶೋಧನೆ, ಬೋಧನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರು.
ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ
ವೃತ್ತಿ ಜೀವನದ ಮುಂದುವರೆದ ಭಾಗವಾಗಿ ಡಿಟ್ರಾಯಿಟ್‌ನ ವೇನ್‌ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಸೇರಿಕೊಂಡರು. ನ್ಯಾಷನಲ್ ಸೈನ್ಸ್ ಫೌಂಡೇಶನ್ ಮತ್ತು ಮಿಶಿಗನ್ ವಿಶ್ವವಿದ್ಯಾಲಯಗಳಿಂದ ಅನುದಾನ ಪಡೆದು, ಹಲವು ಸಂಶೋಧನಾ ಕಾರ್ಯಗಳನ್ನೂ ಕೈಗೊಂಡರು. ಶೈಕ್ಷಣಿಕ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸಿಕೊಂಡು ಕ್ರೈಸ್ಲರ್ ಆಟೋಮೇಟಿವ್‌ನಲ್ಲಿ ಬೋಧಕರಾಗಿಯೂ ಸೇವೆ ಸಲ್ಲಿಸಿದರು. ಈ ನಡುವೆ ಅಸ್ಸಾಮಿನ ಚಂದನ್ ಕೆ ದಾಸ್ ಅವರನ್ನು ಅಂತರ್ಜಾತಿಯ ಪ್ರೇಮ ವಿವಾಹವಾಗಿದ್ದೂ ಆ ಕಾಲಕ್ಕೆ ಕ್ರಾಂತಿಯೇ ಆಗಿತ್ತು! ನಂತರ ಅರಿಜೋನಾಗೆ ಸ್ಥಳಾಂತರಗೊಂಡು ಇಂಟೆಲ್ ಕಂಪನಿಗೆ ಸೇರಿಕೊಂಡರು. ಅಲ್ಲಿ 2015ರವರೆಗೆ ಕೆಲಸ ಮಾಡಿ ಮೈಕ್ರೋಪ್ರೋಸೆಸರ್‌ಗಳ ಪರಿಣಾಮಕಾರಿ ವಿದ್ಯುತ್ ಪೂರೈಕೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ, ಯಶಸ್ವಿಯಾಗಿ ಐದು ಪೇಟೆಂಟ್‌ಗಳನ್ನು ಪಡೆದದ್ದು ಹೆಮ್ಮೆಯ ವಿಚಾರ. ಇದರೊಂದಿಗೇ ಅನೇಕ ಸಂಶೋಧನಾ ಪ್ರಬಂಧಗಳನ್ನು ಅವರು ಪ್ರಕಟಿಸಿದರು. ಜೊತೆಗೆ ಕಿರಿಯ ಎಂಜಿನಿಯರ್‌ಗಳಿಗೆ ಎಲ್ಲ ಹಂತಗಳಲ್ಲೂ ಮಾರ್ಗದರ್ಶನ ಕೂಡ ಮಾಡಿದರು.

ಅತ್ಯಂತ ಬದ್ದತೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ಹೆಣ್ಣಾಗಲಿ, ಗಂಡಾಗಲಿ ಅವಕಾಶಗಳು ತಾವಾಗೆ ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಉದಾಹರಣೆಯಾಗಿ- 2015ರಲ್ಲಿ ಪ್ರಸಿದ್ಧ ಅರಿಜೋನಾ ವಿಶ್ವವಿದ್ಯಾಲಯದಿಂದ ಇವರಿಗೆ ಆಹ್ವಾನ ದೊರಕಿ, ಪೂರ್ಣಾವಧಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅಲ್ಲಿ ತಮ್ಮ 7 ವರ್ಷಗಳ ಬೋಧನಾ ಅವಧಿಯಲ್ಲಿ ವಿದ್ಯಾರ್ಥಿ ಪ್ರಿಯ ಪ್ರಾಧ್ಯಾಪಕರಾಗಿ ಪ್ರಸಿದ್ಧಿ ಪಡೆದರು. ನಂತರ 2022ರಲ್ಲಿ ಮತ್ತೆ ಇಂಟೆಲ್ ಕಂಪನಿಗೆ ಸೇರ್ಪಡೆಗೊಂಡು, ಪ್ರಸ್ತುತ ಈಗಲೂ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ
ಇಷ್ಟೆಲ್ಲಾ ಶೈಕ್ಷಣಿಕ ಸಾಧನೆ ಜೊತೆಗೆ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಕ್ಷೇತ್ರಕ್ಕೂ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಫಿನೀಕ್ಸ್‌ನಲ್ಲಿ ʼವಂದನಾʼ ಎಂಬ ಸಂಸ್ಥೆ ಸ್ಥಾಪಿಸಿ, ಎಲ್ಲಾ ವಯೋಮಾನದವರಿಗೆ ಉಚಿತ ಸಂಗೀತ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ ಸಮುದಾಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇದರೊಂದಿಗೆ ಪತಿಯೊಡಗೂಡಿ 2011ರಲ್ಲಿ ಅಸ್ಸಾಮಿನ ಗೋಲಾಪುರದಲ್ಲಿ ʼಚಂದನ ಶ್ಯಾಮಲಾ ಲೈಬ್ರರಿʼ ಎಂಬ ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿ, ಅರಿಜೋನಾ ಮತ್ತು ಭಾರತದ ಗ್ರಾಮೀಣ ಮಕ್ಕಳಿಗೆ ಉಚಿತ ಶೈಕ್ಷಣಿಕ ಮಾರ್ಗದರ್ಶನ ಮತ್ತು ಫಸ್ಟ್ ಲೇಗೊಲೀಗ್ ತಂಡಗಳಿಗೆ ತರಬೇತಿ ನೀಡುತ್ತಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಅದರಲ್ಲೂ ಆರೋಗ್ಯದ ಸಮಸ್ಯೆಗಳಿರುವ ಮಕ್ಕಳೊಂದಿಗೆ ಹೆಚ್ಚಿನ ಒಡನಾಟ ಹೊಂದಿರುವ ಶ್ಯಾಮಲಾ- ಅವರಿಗೆ ಸಮರ್ಪಕ ಮಾರ್ಗದರ್ಶನ ನೀಡುವ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಹಿರಿಯ ಲೇಖಕಿ, ಪತ್ರಕರ್ತೆ ಪಾರ್ವತಿ ಕೃ.ನ.ಮೂರ್ತಿ
ಬೋಧನೆ, ಸಂಶೋಧನೆ, ಮಾರ್ಗದರ್ಶನ, ತರಬೇತಿ, ಸಂಗೀತ ಮತ್ತು ಸಮಾಜ ಸೇವೆಗಳಲ್ಲಿ ಬದುಕಿನುದ್ದಕ್ಕೂ ಅವಿರತ ತೊಡಗಿಕೊಂಡು, ತಮ್ಮ 64ನೆಯ ವಯಸ್ಸಿನಲ್ಲಿ ಅಮೆರಿಕಾದ ಅರಿಜೋನಾದಲ್ಲಿ ನೆಲೆಸಿ ಸಂತೃಪ್ತಿಯ ಜೀವನ ನಡೆಸುತ್ತಿರುವ ಶ್ಯಾಮಲಾ- ಹಾಸನದಂತಹ ಪುಟ್ಟ ಊರಿನಲ್ಲಿ ಬೆಳೆದು ಅಮೆರಿಕಾದಂತಹ ಬೃಹತ್ ರಾಷ್ಟ್ರದಲ್ಲಿ ಶೈಕ್ಷಣಿಕ ಮತ್ತು ಔದ್ಯೋಗಿಕ ಸಾಧನೆ ಮಾಡಿರುವುದು ಹಾಸನ ಜಿಲ್ಲೆಗೆ ಹೆಮ್ಮೆಯ ಸಂಗತಿ. ತಮ್ಮ 97 ಮತ್ತು 90 ವರ್ಷಗಳ ಇಳಿವಯಸ್ಸಿನಲ್ಲೂ ಬೆಂಗಳೂರಿನಲ್ಲಿ ಸ್ವತಂತ್ರವಾಗಿ ಬದುಕುತ್ತಿರುವ ತಂದೆ ತಾಯಿಯರು- ತಮ್ಮೆಲ್ಲಾ ಸಾಧನೆಗಳ ಹಿಂದೆ ಬೆಂಬಲವಾಗಿರುವುದನ್ನು ಶ್ಯಾಮಲಾ ಅವರು ಕೃತಜ್ಞತೆಯಿಂದ ನೆನೆಯುತ್ತಾರೆ. ಉನ್ನತ ಶಿಕ್ಷಣ, ಉದ್ಯೋಗ ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಸಮನ್ವಯ ಸಾಧ್ಯವಾಗದೇ ಮಿಡುಕುತ್ತಿರುವ ಈಗಿನ ಯುವತಿಯರಿಗೆ- ʼನಮಗೆ ಎಲ್ಲವನ್ನು ನಿಭಾಯಿಸುವ ಶಕ್ತಿಯಿದೆʼ ಎಂದು ತೋರಿಸಿಕೊಡುವ ಮಾದರಿಯಾಗಿದ್ದಾರೆ ಶ್ಯಾಮಲಾ ಚಿಕ್ಕಮೇನಹಳ್ಳಿ.
-ಡಾ.ಎಚ್.ಎಂ. ಹೇಮಲತಾ





