ಹಾಸನ ಮಣ್ಣಿನ ಹೆಣ್ಣು ಬೇರುಗಳು | ಜಾನಪದ ಕ್ಷೇತ್ರದ ಅನನ್ಯ ಸಾಧಕಿ- ಡಾ. ವೈ.ಸಿ.ಭಾನುಮತಿ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಡಾ.ವೈ.ಸಿ.ಭಾನುಮತಿಯವರು ಸಂಶೋಧನೆ, ಸಂಪಾದನೆ ಹಾಗೂ ಜಾನಪದದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿ ಅಧ್ಯಯನ ಮಾಡುತ್ತಿರುವ ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಹಾಸನ ಜಿಲ್ಲೆಯ ಯಮಸಂಧಿಯವರೆನ್ನುವುದು ನಮಗೆ ಹೆಮ್ಮೆ. ಇವರ ವೃತ್ತಿ ಪುರಾತನ ಸಾಹಿತ್ಯದ ಬಗ್ಗೆ ಸಂಪಾದನೆ ಮಾಡುವುದಾಗಿದ್ದು, ಗ್ರಂಥ ಸಂಪಾದನೆಯಲ್ಲಿ ಮೂಲ ಪಠ್ಯವನ್ನು ಹುಡುಕುವ ಮನೋಧರ್ಮದಂತೆ ಹಾಸನ ಜಿಲ್ಲೆಯ ನಡವಳಿಕೆ ಮತ್ತು ಆಚರಣೆಗಳಲ್ಲಿಯೂ ಮೂಲ ಪಠ್ಯಗಳನ್ನು ಹುಡುಕುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದಾರೆ. ತಾನು ಹುಟ್ಟಿ ಬೆಳೆದ ಪರಿಸರದಲ್ಲಿಯೇ ಜಾನಪದ ಅಧ್ಯಯನ ಮಾಡಿ ಹೊಸತನ್ನೇನಾದರೂ ಕಂಡುಕೊಳ್ಳಬೇಕೆಂಬ ತುಡಿತದಲ್ಲಿ ಹೊರಟವರು ಇವರು. ಕಾರಣ ಇವರು ಹುಟ್ಟಿ ಬೆಳೆದ ಪರಿಸರದಲ್ಲಿ ಜಾನಪದದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯದೆ ಇದ್ದುದು ಮತ್ತು ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಈ ಭಾಗದ ಸಂಸ್ಕೃತಿಯನ್ನು ದಾಖಲಿಸಬೇಕೆಂಬುದು ಇವರ ಆಶಯವಾಗಿತ್ತು.

ಇದನ್ನು ಓದಿದ್ದೀರಾ?: ಅರಳುವ ಮುನ್ನವೇ ಉದುರಿಬಿದ್ದ ಮೊಗ್ಗು- ವಸು ಮಳಲಿ

ಆ ದೃಷ್ಟಿಯಿಂದ ಹಾಸನ ಜಿಲ್ಲೆಯಲ್ಲಿ ಜನಪದ ಗೀತೆಗಳನ್ನು, ಕಥೆಗಳನ್ನು ಸಂಗ್ರಹಿಸಿ ಪ್ರಕಟಿಸಿದ ಮೊದಲ ಮಹಿಳೆಯೂ ಇವರಾಗಿದ್ದಾರೆ. ಜಾನಪದ ಎಲ್ಲಾ ಜ್ಞಾನಗಳಿಗೂ ಮೂಲವಾಗಿರುವುದರಿಂದ ಕನ್ನಡ ಜಾನಪದವನ್ನು ದೇಸೀ ನೆಲೆಯಿಂದಲೇ ಅಧ್ಯಯನ ಮಾಡಬೇಕೆನ್ನುವ ಹಂಬಲ ಹೊಂದಿದವರಿವರು. ಪಾಶ್ಚಾತ್ಯ ಅಧ್ಯಯನದ ಬೆಳಕಿನಲ್ಲಿ ದೇಸೀ ನೆಲೆಯ ಮೂಲಕ ಜಾನಪದವನ್ನು ವೈಜ್ಞಾನಿಕವಾಗಿ, ಶಾಸ್ತ್ರೀಯ ಚೌಕಟ್ಟಿನಲ್ಲಿ ಅಧ್ಯಯನ ಮಾಡಿ, ಜಾನಪದದ ಹೊಸ ಹೊಸ ಬೆಳವಣಿಗೆಯನ್ನು ಸದಾ ಗಮನಿಸುತ್ತಾ ಶ್ರದ್ಧೆಯಿಂದ, ಆಳಕ್ಕಿಳಿದು ಕೆಲಸ ಮಾಡುತ್ತಿದ್ದಾರೆ. ಸ್ತ್ರೀವಾದಿ ಹಿನ್ನೆಲೆಯಲ್ಲಿ ಜನಪದ ಕಥೆಗಳನ್ನು ಅಧ್ಯಯನ ಮಾಡಿ, ಮಹಿಳೆಯನ್ನು ಪುರುಷಕೇಂದ್ರಿತ ಸಮಾಜ ನಡೆಸಿಕೊಂಡ ರೀತಿ, ಸಂಪ್ರದಾಯದ ಸಂಕೋಲೆಯೊಳಗೂ ಆಕೆ ತಲೆಯೆತ್ತಿ ನಿಲ್ಲಲು ಮಾಡಿದ ಪ್ರಯತ್ನಗಳು, ಅವಳ ಜಾಣ್ಮೆ ಮುಂತಾದವುಗಳನ್ನು ಕಥೆಯ ಉದಾಹರಣೆಯ ಮೂಲಕ ಚರ್ಚಿಸಿ, ಜನಪದ ಕಥೆಗಳಲ್ಲಿ ಚಿತ್ರಿತವಾಗಿರುವ ಹೆಣ್ಣು ಕೆಲವೆಡೆ ಶಿಷ್ಟ ಸಂಸ್ಕೃತಿಯಲ್ಲಿ ಕಂಡು ಬರುವ ವಿಶಿಷ್ಟ, ದಿಟ್ಟ ಹೆಣ್ಣಿಗಿಂತ ಭಿನ್ನವಾಗಿಲ್ಲ ಎಂಬುದನ್ನು ಅನನ್ಯವಾಗಿ ಕಟ್ಟಿಕೊಡುತ್ತಾ ಬಂದಿರುವುದು ಇವರ ವಿಶೇಷತೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಭಾನುಮತಿ ಮತ್ತು ಜಾನಪದ

ಇವರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಯಮಸಂಧಿ ಗ್ರಾಮದಲ್ಲಿ 14 ಜನವರಿ 1953ರಲ್ಲಿ ಜನಿಸಿದರು. ತಂದೆ ವೈ.ಬಿ.ಚನ್ನೇಗೌಡ, ತಾಯಿ ಎಚ್.ಎಸ್.ಜಯಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಸ್ವಂತ ಊರಿನಲ್ಲಾಯ್ತು. ಪ್ರೌಢಶಾಲಾ ವಿದ್ಯಾಭ್ಯಾಸ ಬೇಲೂರಿನಲ್ಲಿ ನಡೆಯಿತು. ಹಾಸನದಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ನಂತರ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು, ಮಂಗಳೂರಿನ ಕೊಣಾಜೆಯ ಮಂಗಳ ಗಂಗೋತ್ರಿಯಲ್ಲಿ ಕನ್ನಡ ಎಂಎ ಅಧ್ಯಯನ ಮಾಡಿದರು. ”ಕನ್ನಡದಲ್ಲಿ ವರ್ಧಮಾನ ಚರಿತೆಗಳು; ತೌಲನಿಕ ಅಧ್ಯಯನ” ಎಂಬ ಪ್ರೌಢ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಆ.ನೆ.ಉಪಾಧ್ಯೆ ಅವರ ಹೆಸರಿನ ಚಿನ್ನದ ಪದಕದೊಂದಿಗೆ ಪಿಎಚ್‌.ಡಿ ಪದವಿಯನ್ನು ಪಡೆದಿದ್ದಾರೆ. ನಂತರ ಮೈಸೂರು ವಿಶ್ವವಿದ್ಯಾಲಯದ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥ ಸಂಪಾದನ ವಿಭಾಗದಲ್ಲಿ ಮೊದಲ ದರ್ಜೆಯ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದರು. ಭಾನುಮತಿಯವರ ಪತಿ ರಾಮಣ್ಣ ಶಿವಮೊಗ್ಗದವರಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿರುವ ”ಜಾನಪದ ವಸ್ತು ಸಂಗ್ರಹಾಲಯ”ದಲ್ಲಿ ಕ್ಯುರೇಟರ್ ಆಗಿ ಕೆಲಸ ಮಾಡಿ, ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸದ್ಯ ಇಬ್ಬರೂ ಈಗ ಮೈಸೂರಿನಲ್ಲಿ ನಿವೃತ್ತಿಯ ಜೀವನ ನಡೆಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಕಾಯಕ ಯೋಗಿನಿ ಕಾಂಚನಮಾಲಾ

ಇವರು ವಿಜ್ಞಾನದ ವಿದ್ಯಾರ್ಥಿಯಾಗಿದ್ದರಿಂದ ಅಪಾರ ಶಿಸ್ತು ಬಯಸುವ ಸಂಶೋಧನೆ, ಶಾಸ್ತ್ರ ವಿಚಾರಗಳಿಗೆ ಮೊದಲ ಆದ್ಯತೆ ನೀಡಿದರು. ಭಾನುಮತಿಯವರು ಮೂಲತಃ ಗ್ರಂಥ ಸಂಪಾದನೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಜಾನಪದ ಕ್ಷೇತ್ರಕ್ಕೆ ಕಾಲಿಟ್ಟರು. ಜನಪದ ಕಥೆಗಳನ್ನು ಸಂಗ್ರಹಿಸುವುದರ ಮೂಲಕ ಜಾನಪದ ಕ್ಷೇತ್ರಕ್ಕೆ ಹೊಸ ಭರವಸೆಯಾದರು. ಈ ಕಾರಣದಿಂದಲೇ ಜಾನಪದವನ್ನು ವೈಜ್ಞಾನಿಕವಾಗಿ, ಶಾಸ್ತ್ರೀಯವಾಗಿ ಅಧ್ಯಯನ ಮಾಡಲು ಪ್ರೇರಣೆ ದೊರಕಿದಂತಾಯಿತು. ಇದರ ಜೊತೆಯಲ್ಲಿ ಜನಪದ ಸಾಹಿತ್ಯ ಸಂಗ್ರಹವೂ ಕೂಡ ಅವಿರತವಾಗಿ ನಡೆದುಕೊಂಡು ಬಂದಿತು. ಈ ಪರಿಶ್ರಮದ ಕ್ಷೇತ್ರಗಳಲ್ಲಿ ಇವರ ಸಾಧನೆ ಅದ್ವಿತೀಯವಾದುದು. ತಮ್ಮ ಬದುಕಿನುದ್ದಕ್ಕೂ ಅವರು ಈ ಕ್ಷೇತ್ರಗಳಲ್ಲಿ ಹಗಲಿರುಳೂ ಅತ್ಯಂತ ಶ್ರಮವಹಿಸಿ ತೊಡಗಿಕೊಂಡು, ಮಹಿಳೆ ಎಂಬ ಯಾವುದೇ ರಿಯಾಯಿತಿಯನ್ನೂ ಬೇಡದೇ ಶ್ರದ್ಧೆಯಿಂದ ಕೆಲಸ ಮಾಡುತ್ತಲೇ ಘನವಾದುದನ್ನು ಸಾಧಿಸಿದ್ದಾರೆ.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಇವರು ಹಳಗನ್ನಡ ಗ್ರಂಥ ಸಂಪಾದನೆ, ಸಂಶೋಧನೆ, ಜಾನಪದ ಸೇರಿದಂತೆ ಈ ತನಕ 65ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಜಾನಪದ ಕೃತಿಗಳೆಂದರೆ- ಇಬ್ಬೀಡಿನ ಜನಪದ ಕತೆಗಳು, ಮಲೆನಾಡು ಶೈವ ಒಕ್ಕಲಿಗರು: ಜಾನಪದೀಯ ಅಧ್ಯಯನ, ಬತ್ತೀಸ ಪುತ್ತಳಿ ಕತೆ, ಜಾನಪದ ಭಿತ್ತಿ, ಜಾನಪದ ಆಂತರ್ಯ, ಜನಪದ ಅಡುಗೆ, ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಜಾನಪದೀಯ ಅಂಶಗಳು, ಮಕ್ಕಳ ಹಾಡುಗಳು ಮತ್ತು ದೇವರ ಹಾಡುಗಳು, ಹಾಗೂ ಪುಟ್ಟ ಮಲ್ಲಿಗೆ ಹಿಡಿ ತುಂಬ… ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಹಲವಾರು ಜಾನಪದ ಲೇಖನಗಳು ವಿವಿಧ ಕೃತಿಗಳಲ್ಲಿ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ತಂಬೂರಿ ಸಂಪ್ರದಾಯದ ಕೆಲವು ಕಾವ್ಯಗಳನ್ನು ಸಹ ಇವರು ಸಂಗ್ರಹಿಸಿದ್ದಾರೆ.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಭಾನುಮತಿಯವರು ಅನೇಕ ಹಳಗನ್ನಡ ಕೃತಿ ಸಂಪಾದನೆಗಳನ್ನು ಸಹ ಮಾಡಿದ್ದು- ವಿಜಯಕುಮಾರಿ ಚರಿತೆ, ಷಟ್ಸ್‌ಸ್ಥಲ ತಿಲಕ, ಪುರಾತನರ ಚರಿತೆ, ಏಕೋ ರಾಮೇಶ್ವರ ಪುರಾಣ, ಕನ್ನಡ ಶ್ರಾವಕಾಚಾರ ಗ್ರಂಥಗಳು, ಸೌಂದರ್ಯ ಕಾವ್ಯ, ಮಡಿವಾಳೇಶ್ವರ ಕಾವ್ಯ, ಬಸವ ಮಹತ್ವದ ಸಾಂಗತ್ಯ, ಅರಸರ ಚರಿತೆಗಳು, ಸಹ್ಯಾದ್ರಿ ಖಂಡ, ಮಡಿವಾಳೇಶ್ವರರ ಲಘು ಕೃತಿಗಳು… ಅದರಲ್ಲಿ ಮುಖ್ಯವಾದವು. ಇವರು ರಚಿಸಿದ ನಾಟಕ ಚಂದ್ರಹಾಸನ ಕಥೆ. ಇದಲ್ಲದೇ ಇವರು ಅನೇಕ ಸ್ವತಂತ್ರ ಕೃತಿಗಳನ್ನು ಸಹ ರಚಿಸಿದ್ದು ಅವುಗಳಲ್ಲಿ ಮುಖ್ಯವಾದುವೆಂದರೆ- ಆಲಿ ನುಂಗಿದ ನೋಟ, ಗ್ರಂಥ ಸಂಪಾದನೆಯ ಕೆಲವು ಅಧ್ಯಯನಗಳು, ಗ್ರಂಥ ಸಂಪಾದನೆ ವಿವಕ್ಷೆ, ಗ್ರಂಥ ಸಂಪಾದನೆ ಎಳೆಗಳು, ಸಮಾಗತ… ಜೊತೆಗೆ ಅವರು ವಿಕ್ರಮಾದಿತ್ಯನ ಸಿಂಹಾಸನ ಎಂಬ ಶಿಶು ಸಾಹಿತ್ಯ ಕೃತಿಯನ್ನೂ ರಚಿಸಿದ್ದಾರೆ.

ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಇವರಿಗೆ ಹಲವಾರು ಪ್ರಶಸ್ತಿ, ಗೌರವಗಳು ದೊರಕಿದ್ದು, ಅವುಗಳಲ್ಲಿ ಮುಖ್ಯವಾದವುಗಳೆಂದರೆ- ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ- ಜಾನಪದ ತಜ್ಞ ಪ್ರಶಸ್ತಿ, 2025ರಲ್ಲಿ ಕರ್ನಾಟಕ ಸರ್ಕಾರದ- ಅತ್ತಿಮಬ್ಬೆ ಪ್ರಶಸ್ತಿ, ಪುತ್ತೂರಿನ ಶಂಕರ ಸಂಶೋಧನಾ ಕೇಂದ್ರ ನೀಡಿರುವ ‘ಸಂಶೋಧಕಿ’ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ, ಶಂಭಾ ಜೋಷಿ ಸಂಶೋಧನಾ ಪ್ರಶಸ್ತಿ, ಬಿ.ಎಸ್.ಸಣ್ಣಯ್ಯ ಪ್ರಶಸ್ತಿ, ಧಾರವಾಡದ-ಉತ್ತರ ಕರ್ನಾಟಕ ಲೇಖಕಿಯರ ಸಂಘ ನೀಡುವ-ಜೀವಮಾನ ಸಾಧನೆ ಪ್ರಶಸ್ತಿ, 1984ರಲ್ಲಿ ವರ್ಷದ ಶ್ರೇಷ್ಠ ಸಂಪಾದನೆಗಾಗಿ ‘ಸಹ್ಯಾದ್ರಿ ಖಂಡ’ ಪ್ರಶಸ್ತಿ, 1989ರಲ್ಲಿ ‘ಬತ್ತೀಸ ಪುತ್ತಳ ಕಥೆ’ಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿ.ಎಂ.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ಸಂಶೋಧನಾ ಪ್ರಶಸ್ತಿ, 1989ರಲ್ಲಿ ‘ಇಬ್ಬೀಡಿನ ಜನಪದ ಕತೆಗಳು’ ಕೃತಿಗೆ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ವರ್ಷದ ಶ್ರೇಷ್ಠ ಗದ್ಯ ಕೃತಿ ಬಹುಮಾನ, ಗುಂಡ್ಮಿ ಚಂದ್ರಶೇಖರ ಐತಾಳ- ಜಾನಪದ ಪ್ರಶಸ್ತಿ, ಮಲೆನಾಡು ಶೈವ ಒಕ್ಕಲಿಗರು ಜಾನಪದೀಯ ಅಧ್ಯಯನ ಕೃತಿಗೆ 1989ರಲ್ಲಿ ಮೈಸೂರು ವಿಶ್ವವಿದ್ಯಾಲಯದ ತೀ.ನಂ.ಶ್ರೀ. ಸಂಶೋಧನಾ ಪ್ರಶಸ್ತಿ ಹಾಗೂ 1994ರಲ್ಲಿ ‘ಗ್ರಂಥ ಸಂಪಾದನೆ ಕೆಲವು ಅಧ್ಯಯನ’ ಕೃತಿಗೆ ಪ್ರಶಸ್ತಿ, ಇದಲ್ಲದೇ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಹ.ಕ.ರಾಜೇಗೌಡ ಗ್ರಂಥ ಸಂಪಾದನ ಪ್ರಶಸ್ತಿ, ಫ.ಗು.ಹಳಕಟ್ಟಿ ಸಂಶೋಧನ ಪ್ರಶಸ್ತಿ… ಮುಂತಾದುವು ದೊರಕಿವೆ. ಹಲ್ಮಿಡಿಯಲ್ಲಿ ನಡೆದ ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಹ ಇವರು ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೂಡ ಕಾರ್ಯನಿರ್ವಹಿಸಿದ್ದರು.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಒಟ್ಟಾರೆಯಾಗಿ ಡಾ.ವೈ.ಸಿ.ಭಾನುಮತಿಯವರ ಕೃತಿಗಳು ಹಾಗೂ ಲೇಖನಗಳನ್ನು ನೋಡಿದರೆ- ಜನಪದ ಸಂಸ್ಕೃತಿ, ಉಪಸಂಸ್ಕೃತಿಗಳ ಅಧ್ಯಯನಕ್ಕೆ ಉಪಯುಕ್ತ ಮಾಹಿತಿಗಳನ್ನು ಇವು ಒದಗಿಸುತ್ತವೆ. ಒಂದು ಪ್ರಾದೇಶಿಕ ಹಿನ್ನೆಲೆಯಲ್ಲಿ ಇವರ ಅಧ್ಯಯನ ಸಾಗಿದ್ದು, ಚಾರಿತ್ರಿಕ ಹಿನ್ನೆಲೆಯ ಪರಿಣಾಮ ಅಲ್ಲಿಯ ಜನರ ಮೇಲೆ ಹೇಗೆ ಆಗಿದೆ, ಭೌಗೋಳಿಕವಾಗಿ ಅಲ್ಲಿರುವ ಜನಗಳು ಹೇಗೆ ವಿಭಿನ್ನವಾಗಿದ್ದಾರೆ, ಸಾಂಸ್ಕೃತಿಕ ಪ್ರಕ್ರಿಯೆ ಹೇಗೆ ಪಲ್ಲಟವಾಗಿದೆ ಮುಂತಾದ ವಿಚಾರಗಳನ್ನು ತಿಳಿಯಲು ಸಹಾಯಕವಾಗಿವೆ. ಬಹಳ ಮುಖ್ಯವಾಗಿ ಅವರ ಈ ಎಲ್ಲಾ ಅಧ್ಯಯನಗಳಲ್ಲೂ ಸ್ತ್ರೀ ಕೇಂದ್ರಿತ ಪ್ರಜ್ಞೆ, ಎಚ್ಚರದಲ್ಲಿ ಕೆಲಸ ಮಾಡುತ್ತಿದ್ದು, ಮಹಿಳೆಯರ ಕುರಿತಾದ ವಿಶೇಷ ಒಳನೋಟಗಳನ್ನು ತಪ್ಪದೇ ತಮ್ಮ ಸಂಶೋಧನೆಗಳಲ್ಲಿ, ಸಂಪಾದನೆಗಳಲ್ಲಿ ನೀಡುತ್ತಾ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಮಹಿಳೆಯಾಗಿ ಅವರು ಹಲವು ಮೊದಲುಗಳನ್ನು ಸಾಧಿಸಿದ್ದಾರೆ. ಒಬ್ಬ ವ್ಯಕ್ತಿಯಾಗಿ, ಮಹಿಳೆಯಾಗಿ-  ಕಠಿಣ ಪರಿಶ್ರಮವನ್ನೂ, ಸಮಯವನ್ನೂ ಮತ್ತು ಸಹನೆಯನ್ನೂ ಬೇಡುವ ಈ ಕ್ಷೇತ್ರವನ್ನು ಆಯ್ದುಕೊಂಡು ಅಪರೂಪದ ಸಾಧನೆಯನ್ನು ಮಾಡಿದ ವೈ.ಸಿ.ಭಾನುಮತಿಯವರಿಗೆ ಹಾಸನದ ಮಣ್ಣಿನ ಪರವಾಗಿ ಈ ಮೂಲಕ ಹಾರ್ದಿಕ ಅಭಿನಂದನೆಗಳು.

-ಡಾ.ಹಂಪನಹಳ್ಳಿ ತಿಮ್ಮೇಗೌಡ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...