ಮಕ್ಕೆಜೋಳ ಬೆಳೆಯ ಇಳುವರಿ ಕುಸಿದಿರುವ ಜತೆಗೆ ಬೆಲೆಯಲ್ಲಿಯೂ ರೈತರು ನಷ್ಟಕ್ಕೀಡಾಗುತ್ತಿರುವುದರಿಂದ ಕೃಷಿ ಇಲಾಖೆ ಮತ್ತು ಸರ್ಕಾರ ರೈತರ ನೆರವಿಗೆ ನಿಲ್ಲುವ ಮೂಲಕ ನಿರಂತರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಮೇಲೆತ್ತುವ ಕಾರ್ಯ ಮಾಡಬೇಕಾಗಿದೆ.
ಹೆಚ್ಚು ಮೆಕ್ಕೆಜೋಳ ಬೆಳೆಯುವ ದಾವಣಗೆರೆ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹಲವೆಡೆ ಮೆಕ್ಕೆಜೋಳ ಬೆಳೆದಿದ್ದ ರೈತರು ಈ ಬಾರಿ ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿದ್ದರು. ಉತ್ತಮ ಆದಾಯ ಬರುತ್ತದೆ, ಸಾಲ-ಸೋಲ ತೀರಿಸಿಕೊಂಡು ನೆಮ್ಮಂದಿಯಿಂದಿರಬಹುದು ಎಂಬ ನಿರೀಕ್ಷೆಯ ಕನಸು ಇಟ್ಟುಕೊಂಡಿದ್ದರು. ಆದರೆ ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ಈ ಬಾರಿಯೂ ಮೆಕ್ಕೆಜೋಳ ಬೆಳೆದಿದ್ದ ರೈತರು ಇಳುವರಿ ಕುಸಿತದಿಂದ ನಷ್ಟ ಅನುಭವಿಸುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಅದರಲ್ಲೂ ಅಲ್ಪಸ್ವಲ್ಪ ಬಂದಿದ್ದ ಬೆಳೆಯೂ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ನೆಲಕ್ಕೆ ಬಿದ್ದು ಮೊಳಕೆಯೊಡೆದು ಹಾಳಾಗುವ ಪರಿಸ್ಥಿತಿಗೆ ತಲುಪಿದೆ. ಇದೀಗ ಆರ್ಥಿಕವಾಗಿ ನೆಲಕಚ್ಚಿರುವ ರೈತರನ್ನು ಮೇಲೆತ್ತುವವರು ಯಾರು ಎನ್ನುವ ಆತಂಕ ಶುರುವಾಗಿದೆ.
ಈ ವರ್ಷಾರಂಭದಲ್ಲಿ ಮಳೆ ಉತ್ತಮ ಆರಂಭ ಕಂಡಿದ್ದು, ಇದರಿಂದಾಗಿ ಬೇಸಾಯದ ಚಟುವಟಿಕೆಗಳೂ ಕೂಡ ಉತ್ತಮವಾಗಿ ಪ್ರಾರಂಭಗೊಂಡಿದ್ದವು. ಸಕಾಲದಲ್ಲಿ ಉತ್ತಮ ಬಿತ್ತನೆಯೂ ಸಾಧ್ಯವಾಗಿತ್ತು. ತದನಂತರ ಏರ್ಪಟ್ಟಿದ್ದ ಬಿತ್ತನೆಬೀಜ, ಗೊಬ್ಬರ ಮತ್ತು ರಸಗೊಬ್ಬರ ಅಭಾವದ ನಡುವೆಯೂ ಉತ್ತಮ ಮಳೆ ಮತ್ತು ಉಳುಮೆಯಿಂದ ಬೆಳೆಗಳು ಹುಲಸಾಗಿ ಬೆಳೆದಿದ್ದವು. ಈ ಹಿನ್ನೆಲೆಯಲ್ಲಿ ರೈತರು ಉತ್ತಮ ಇಳುವರಿಯ ನಿರೀಕ್ಷೆ ಇಟ್ಟುಕೊಂಡಿದ್ದರು. ಅಲ್ಲದೆ ಆರ್ಥಿಕವಾಗಿ ಈ ಬಾರಿ ಅಲ್ಪಸ್ವಲ್ಪ ಲಾಭಗಳಿಸುವ ಚಿಂತನೆಯಲ್ಲಿದ್ದರು.
ಯಾವಾಗ ಯೂರಿಯಾ ರಸಗೊಬ್ಬರದ ಪೂರೈಕೆಯಿಲ್ಲದೇ ಅಭಾವ ಸೃಷ್ಟಿಯಾಗಿತ್ತೋ, ಆಗಿನಿಂದಲೇ ರೈತರ ಅದೃಷ್ಟ ಕೈ ಕೊಟ್ಟಿತ್ತು. ಹೇಗೋ ಕಾಡಿ ಬೇಡಿ ಕಷ್ಟಪಟ್ಟು ಗೊಬ್ಬರ ತಂದು ಹಾಕಿದ ನಂತರ ಬೆಳೆ ಹುಲುಸಾಗಿ ಬೆಳೆದು ಸೂಲಂಗಿಯೊಡೆದು ಹಸಿರಿನಿಂದ ಕಳೆಗಟ್ಟಿತ್ತು. ತೆನೆಗಟ್ಟುವ ಸಮಯದಲ್ಲಿ ಸರಿಸುಮಾರು 20ರಿಂದ 30 ದಿನಗಳ ಕಾಲ ಮಳೆ ಕಾಣದಂತೆ ಮಾಯವಾಗಿದ್ದರಿಂದ ಸಮರ್ಪಕ ನೀರಿನ ಪೂರೈಕೆ ಇಲ್ಲದೆ ತೆನೆ ಕಾಳುಗಟ್ಟುವ ಪ್ರಕ್ರಿಯೆ ಮೆಕ್ಕೆಜೋಳ ಬೆಳೆಯಲ್ಲಿ ಕುಂಠಿತವಾಗಿದೆ. ಬೆಳೆ ಹುಲುಸಾಗಿ ಬೆಳೆದಿದ್ದರೂ ತೆನೆಗಳು ಸರಿಯಾಗಿ ಕಾಳುಗಟ್ಟದೇ ಸಣ್ಣಗೆ ಬೆಳೆದಿವೆ. ತೆನೆಯ ಆರಂಭದಿಂದ
ತುದಿಯವರೆಗೂ ಕಾಳುಗಟ್ಟಿಲ್ಲ. ತೆನೆಗಳ ತೂಕ ಕಡಿಮೆಯಾಗಿದ್ದು ಇಳುವರಿ ಕುಂಠಿತವಾಗಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಅತಿಹೆಚ್ಚು ಮೆಕ್ಕೆಜೋಳ ಆಶ್ರಿತ ಪ್ರದೇಶ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ನಂತರದಲ್ಲಿವೆ. ಜಗಳೂರು ತಾಲೂಕಿನ 43ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ.
ಕಲ್ಲೇದೇವರಪುರ, ಹಿರೇಮಲ್ಲನಹೊಳೆ, ಅಣಬೂರು, ಹನುಮಂತಾಪುರ, ಕಾನನಕಟ್ಟೆ, ಮುಷ್ಟೂರು, ಸೊಕ್ಕೆ, ಭರಮಸಮುದ್ರ, ಹೊಸಕೆರೆ, ಕೆಚ್ಚೇನಳ್ಳಿ, ಭಾಗದ ಗ್ರಾಮಗಳಲ್ಲಿ ಬೆಳೆದಿರುವ ಮೆಕ್ಕೆಜೋಳ ಬೆಳೆಯಲ್ಲಿ ಶೇ.40ಕ್ಕೂ ಅಧಿಕವಾಗಿ ಸಣ್ಣ ಮತ್ತು ಜೊಳ್ಳು ಕಾಳುಗಳೇ ತುಂಬಿವೆ.
“ಬೆಳೆ ಹುಲುಸಾಗಿ ಬೆಳೆದಿದ್ದರೂ ಸಕಾಲಿಕ ಮಳೆ ಇಲ್ಲದೆ ಕಾಳು ಸಂಪೂರ್ಣ ತೆನೆಗಟ್ಟಿಲ್ಲ. ತೆನೆಯ ಅರ್ಧಭಾಗದಲ್ಲಿ ಮಾತ್ರ ಕಾಳುಗಟ್ಟಿದ್ದು, ಅವೂ ಕೂಡ ಸಣ್ಣದಾಗಿವೆ, ಬೆಂಡಾಗಿ ಹೋಗಿವೆ. ಈ ಭಾಗದ ರೈತರು ಸದಾ ಬರದ ಸ್ಥಿತಿ ಅನುಭವಿಸುತ್ತಿದ್ದಾರೆ. ಜಗಳೂರು ತಾಲೂಕಿನ ದಾವಣಗೆರೆ ದಿಕ್ಕಿನಲ್ಲಿ ಮಳೆಯಾಗುತ್ತದೆ. ಆದರೆ ಆಂಧ್ರದ ಕಡೆಗೆ ದಿಕ್ಕಿನಲ್ಲಿರುವ ಕಲ್ಲೇದೇವರಪುರ, ಹಿರೇಮಲ್ಲನಹೊಳೆ, ಅಣಬೂರು ಸೇರಿ ಆ ಭಾಗದ ಇತರೆಡೆಗಳಲ್ಲಿ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಬೆಳೆ ಬಂದಿಲ್ಲ. ಒಂದು ದಿಕ್ಕಿನಲ್ಲಿ ಆದ ಮಳೆಯ ಲೆಕ್ಕಾಚಾರವನ್ನು ಇಡೀ ತಾಲೂಕಿಗೆ ಅಂದಾಜು ಮಾಡಿ ನಮಗೆ ಕನಿಷ್ಠ ಪರಿಹಾರ ಕೂಡ ಸಿಗದಂತೆ ವಂಚಿಸುತ್ತಿದ್ದಾರೆ” ಎಂದು ಹುಚ್ಚವ್ವನಹಳ್ಳಿಯ ರೈತ ಬಸವರಾಜಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಬೇರೆ ಹೋಬಳಿ ಮತ್ತು ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಬೆಳೆ ಸ್ವಲ್ಪ ಉತ್ತಮವಾಗಿರುವುದಾಗಿ ಕಂಡುಬಂದರೂ ಇಳುವರಿಯ ವಿಷಯದಲ್ಲಿ ಹೆಚ್ಚುಕಡಿಮೆ ಇದೇ ಪರಿಸ್ಥಿತಿ ಇದೆ. ಇದರಿಂದಾಗಿ ರೈತರು ಇಟ್ಟುಕೊಂಡಿದ್ದ ಲಾಭದ ನಿರೀಕ್ಷೆ ಬಹುತೇಕ ಹುಸಿಯಾಗಿದೆ.
ಬಿತ್ತನೆಬೀಜ, ರಸಗೊಬ್ಬರ, ಕೃಷಿ ಕೂಲಿ ಆಳುಗಳು ಸೇರಿದಂತೆ ಕೃಷಿ ಒಳಸುರಿಗಳ ಬೆಲೆ ದುಪ್ಪಟ್ಟಾದರೂ ಇಳುವರಿ ಇಲ್ಲದೇ, ಮಾರುಕಟ್ಟೆ ಬೆಲೆ ಏರಿಳಿತವಾಗುತ್ತಿರುವುದು ರೈತರಿಗೆ ಸಂಕಷ್ಟ ತಂದಿದೆ. ಬಿತ್ತನೆಬೀಜ, ರಸಗೊಬ್ಬರದ ಬೆಲೆ ಗಗನಕ್ಕೇರುತ್ತಿದೆ. ಐದಾರು ವರ್ಷಗಳ ಹಿಂದೆ ಐದು ಕೆಜಿಗೆ ₹500ರಿಂದ ₹800ರಷ್ಟಿದ್ದ ಉತ್ತಮ ಬಿತ್ತನೆಬೀಜದ ಬೆಲೆ ಇಂದು ನಾಲ್ಕು ಕೆಜಿಗೆ ₹1500-₹2000ದಷ್ಟಾಗಿದೆ. ಒಟ್ಟಾರೆ ಎಕರೆಗೆ 20ರಿಂದ 30 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಉತ್ಪನ್ನದಿಂದ ಮಾತ್ರ ರೈತನಿಗೆ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹೊಳಲ್ಕೆರೆ, ಚಿತ್ರದುರ್ಗ ತಾಲೂಕುಗಳಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದು, ಇಲ್ಲೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಮೆಕ್ಕೆಜೋಳ ಬೆಳೆದು ನಿಂತು ತೆನೆಕಟ್ಟುವ ವೇಳೆ ಗೌರಿಗಣೇಶ ಹಬ್ಬದ ಸಮಯದಲ್ಲಿ ಕೈಕೊಟ್ಟ ಮಳೆಯಿಂದಾಗಿ ಇಳುವರಿ ಕುಂಠಿತವಾಗಿದೆ. ಇದರೊಂದಿಗೆ ರೈತನಿಗೆ ಆರ್ಥಿಕ ಸಂಕಷ್ಟವೂ ಎದುರಾಗಿದೆ.
“ಎಕರೆಗೆ 15-20 ಕ್ವಿಂಟಲ್ ಇಳುವರಿ ನೀಡುತ್ತಿದ್ದ ಮೆಕ್ಕೆಜೋಳ ಮಳೆ ಕೈಕೊಟ್ಟಿದ್ದರಿಂದ ಎಕರೆಗೆ ಸರಾಸರಿ 10 ಕ್ವಿಂಟಲ್‌ಗೆ ಇಳಿಕೆಯಾಗಿದೆ. ಇದರಿಂದಾಗಿ ಎಕರೆಗೆ ಕನಿಷ್ಠ 10-15 ಸಾವಿರ ರೂಪಾಯಿ ನಷ್ಟ ಉಂಟಾಗಿದೆ. ಬೆಲೆಯೂ ಸಾಮಾನ್ಯವಾಗಿದ್ದು, ಖರ್ಚು ಸರಿದೂಗಿವುದೂ ಕೂಡ ಸಾಧ್ಯವಾಗುತ್ತಿಲ್ಲ. ದೀಪಾವಳಿ ನಂತರ ಕೊಯ್ಲು ಆರಂಭವಾಗಬೇಕಿತ್ತು. ಆದರೆ ಈಗ ಸುರಿಯುತ್ತಿರುವ ಮಳೆಯಿಂದಾಗಿ, ಬೆಳೆದು ನಿಂತಿರುವ ಅಳಿದುಳಿದ ಮೆಕ್ಕೆಜೋಳದ ದಂಟುಗಳು ಕರಗುತ್ತಿದ್ದು, ಅಲ್ಲಲ್ಲಿ ನೆಲಕ್ಕೆ ಬೀಳುತ್ತಿವೆ. ಇದೇ ರೀತಿ ವಾತಾವರಣ ಮುಂದುವರೆದಲ್ಲಿ ನೆಲಕ್ಕೆ ಬಿದ್ದ ಮೆಕ್ಕೆಜೋಳ ಅಲ್ಲೇ ಮೊಳಕೆ ಬರಲಿದೆ. ಇದರಿಂದಾಗಿ ಅಳಿದುಳಿದ ಬೆಳೆ ಕೂಡ ರೈತನಿಗೆ ದಕ್ಕದಂತೆ ಮಣ್ಣು ಪಾಲಾಗಲಿದೆ” ಎಂದು ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿಯ ಯುವ ರೈತ ರವಿಕುಮಾರ್ ಆತಂಕ ವ್ಯಕ್ತಪಡಿಸಿದರು.

“ಬೆಳೆವಿಮೆ ಕಂತು ಕಟ್ಟಿದ್ದು, ನಷ್ಟದಲ್ಲಿರುವ ರೈತರಿಗೆ ಈ ಬಾರಿಯಾದರೂ ವಿಮೆ ಸೇರಿದಂತೆ ಸರ್ಕಾರ ಸೂಕ್ತ ಪರಿಹಾರ ನೀಡಲಿ” ಎಂದು ಮನವಿ ಮಾಡಿದರು.
ಇದನ್ನೂ ಓದಿದ್ದೀರಾ? ಹಾವೇರಿ | ಬಡವರ ಹಸಿವು ನೀಗಿಸುವಲ್ಲಿ ಇಂದಿರಾ ಕ್ಯಾಂಟೀನ್ ವಿಫಲ: ಇಲ್ಲದಾಯಿತೇ ಉದ್ಘಾಟನೆ ಭಾಗ್ಯ?
ಮೆಕ್ಕೆಜೋಳ ಖರೀದಿಯ ಬೆಲೆಯಲ್ಲಿಯೂ ರೈತರಿಗೆ ಸಂಕಷ್ಟ ಎದುರಾಗಿದೆ. ಸರ್ಕಾರ ₹2400 ಬೆಂಬಲ ಬೆಲೆ ನಿಗದಿಪಡಿಸಿದರೂ, ಮಾರುಕಟ್ಟೆಯಲ್ಲಿ ₹1500-₹1800ರವರೆಗೆ ಖರೀದಿಯಾಗುತ್ತಿದೆ. ಇದರಿಂದಾಗಿ ಕೆರಳಿದ ರೈತಸಂಘದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಕ್ಕೆಜೋಳ ಬೆಳೆಯ ಇಳುವರಿ ಕುಸಿದಿರುವ ಜತೆಗೆ ಬೆಲೆಯಲ್ಲಿಯೂ ರೈತರು ನಷ್ಟಕ್ಕೀಡಾಗುತ್ತಿರುವುದರಿಂದ ಕೃಷಿ ಇಲಾಖೆ ಮತ್ತು ಸರ್ಕಾರ ರೈತರ ನೆರವಿಗೆ ನಿಲ್ಲುವ ಮೂಲಕ ನಿರಂತರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಮೇಲೆತ್ತುವ ಕಾರ್ಯ ಮಾಡಬೇಕಾಗಿದೆ.





