ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲ ಕಡೆ ಪೊಲೀಸರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೋಟಾರು ವಾಹನ ಕಾಯ್ದೆ ಕಲಂ 129(ಎ) ಮತ್ತು (ಬಿ) ಅಡಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದ್ವಿಚಕ್ರ ವಾಹನ ಸಂಚಾರದ ವೇಳೆ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಬುಧವಾರ ಸಂಚಾರ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದ ನಾನಾ ಘಟಕಗಳಲ್ಲಿ ಅಪಘಾತ ಘಟನೆಗಳು ವರದಿಯಾಗುತ್ತಿವೆ. ಅದರಲ್ಲಿಯೂ ಹೆಲ್ಮೆಟ್ ಇಲ್ಲದೇ ಅಧಿಕಾರಿ ಮತ್ತು ಸಿಬ್ಬಂದಿ ರಸ್ತೆ ಅಪಘಾತದಲ್ಲಿ ಕೆಲವರಿಗೆ ಗಾಯಗಳಾದರೆ ಇನ್ನೂ ಕೆಲವರು ಮೃತಪಟ್ಟಿದ್ದಾರೆ. ಹೀಗಾಗಿ, ಮತ್ತೆ ಈ ರೀತಿಯ ಅಪಘಾತಗಳು ಮರು ಕಳುಹಿಸದಂತೆ ಕ್ರಮಕೈಗೊಂಡಿದ್ದು, ರಾಜ್ಯಾದ್ಯಂತ ಎಲ್ಲ ಪೊಲೀಸ್ ಸಿಬ್ಬಂದಿಗೆ ಕಡ್ಡಾಯ ಹೆಲ್ಮೆಟ್ ಆದೇಶ ಹೊರಡಿಸಲಾಗಿದೆ.
ಅಪಘಾತದಿಂದ ಆಗುವ ಸಾವು–ನೋವುಗಳನ್ನು ತಪ್ಪಿಸಲು ಇನ್ನು ಮುಂದೆ ರಾಜ್ಯಾದ್ಯಂತ ಎಲ್ಲ ಘಟಕಗಳಲ್ಲಿ (ಬೆಂಗಳೂರು ನಗರ ಒಳಗೊಂಡಂತೆ) ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕಲಂ 129(ಎ) (ಬಿ) ರಲ್ಲಿ ನಮೂದಿಸಿರುವಂತೆ ಕಡ್ಡಾಯವಾಗಿ ಸುರಕ್ಷಿತ ಹೆಲ್ಮೆಟ್ ಅನ್ನು ಧರಿಸಬೇಕು. ಹೆಲ್ಮೆಟ್ ಭದ್ರವಾಗಿ ಕಟ್ಟಿಕೊಳ್ಳಬೇಕು ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಆಂಧ್ರ ಪ್ರದೇಶ | 1.4 ಲಕ್ಷ ಮನೆಗಳ ಬಾಗಿಲಿಗೆ ಉಚಿತ ಔಷಧಿ ವಿತರಣೆ
ಅಲ್ಲದೇ, ತಮ್ಮ ವ್ಯಾಪ್ತಿಯ ಪೊಲೀಸರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ನೋಡಿಕೊಳ್ಳುವ ಬಗ್ಗೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಬೇಕು ಎಂದು ತಿಳಿಸಿದೆ.




