ಶಿಡ್ಲಘಟ್ಟ ಪೌರಾಯುಕ್ತೆ ಜಿ.ಅಮೃತಾ ಗೌಡ ಹಾಗೂ ಸ್ಥಳೀಯ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್ ಗೌಡ (46) ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಸಚಿವ ಜಮೀರ್ ಆಹ್ಮದ್ ಖಾನ್ ಅವರು ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರದ ಬ್ಯಾನರ್ ಮತ್ತು ಕಟೌಟ್ ಗಳನ್ನು ತೆರವುಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದು ಕೋರಿ ಕಾಂಗ್ರೆಸ್ ಮುಖಂಡ ಬಿ.ವಿ. ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.
“ಅಧಿಕೃತವಾಗಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ಅಧಿಕಾರಿಯೊಬ್ಬರ, ಅದರಲ್ಲೂ ಮಹಿಳೆಗೆ ಧಮಕಿ ಹಾಕಿ ಅವರ ಕರ್ತವ್ಯ ತಡೆಯೊಡ್ಡಿ ಭೀತಿ ಸೃಷ್ಟಿಸಿರುವ ರಾಜೀವ್ ಗೌಡ ಮೇಲ್ನೋಟಕ್ಕೆ ಅಪರಾಧಿಕ ಕೃತ್ಯ ಎಸಗಿರುವುದು ತೋರಿಸುತ್ತದೆ” ಎಂದು ಹೇಳಿದೆ.
ಇದನ್ನು ಓದಿ : ಶಿಡ್ಲಘಟ್ಟ | ವಿದ್ಯುತ್ ಕಡಿತಗೊಳಿಸಿ ಕೇಂದ್ರದ ವಿರುದ್ಧ ಮುಸಲ್ಮಾನರ ಆಕ್ರೋಶ
“ಸರ್ಕಾರಿ ಅಧಿಕಾರಿ ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ, ಯಾರೊಬ್ಬರು ಅವರನ್ನು ಬೆದರಿಸಲು ಅಥವಾ ನಿಂದಿಸಲು ಸಾಧ್ಯವೇ ಇಲ್ಲ. ಅಮೃತಾ ಗೌಡ ಅವರು ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಆದರೆ, ರಾಜೀವ್ ಗೌಡ ದೂರವಾಣಿ ಮೂಲಕ ಅಮೃತಾ ಜೊತೆ ನಡೆಸಿರುವ ಸಂಭಾಷಣೆ ಗಮನಿಸಿದರೆ, ಈತ ಮಹಿಳೆ ಮತ್ತು ಸಾರ್ವಜನಿಕ ಸೇವಕರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿರುವುದು ಸುಲಭವಾಗಿ ತಿಳಿಯುತ್ತದೆ” ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಸಗಿದೆ.
“ರಾಜೀವ್ ಗೌಡ ಬಳಸಿರುವ ಪದಗಳು ಮತ್ತು ಅವರ ಸ್ವಭಾವ, ಭಾರತೀಯ ನ್ಯಾಯ ಸಂಹಿತಾ-2023ರ ಕಲಂ79 ಮತ್ತು ಭಾರತೀಯ ದಂಡ ಸಂಹಿತೆಯ-1860ರ ಕಲಂ 509ರ ಅಪರಾಧಿಕ ದಂಡನೆಗಳ ವ್ಯಾಪ್ತಿಯಲ್ಲಿನ ತನಿಖೆಗೆ ಅನುಗುಣವಾಗಿದೆ. ಘಟನೆ ದಂಡದ ಪರಿಣಾಮವನ್ನು ಎದುರಿಸಲು ಯೋಗ್ಯವಾಗಿದೆ” ಎಂದು ಹೇಳಿದೆ.
ಏನಿದು ಪ್ರಕರಣ?
ಸಾರ್ವಜನಿಕರ ದೂರಿನ ಮೇರೆಗೆ ‘ಕಲ್ಟ್’ ಚಲನಚಿತ್ರದ ಬ್ಯಾನರ್ ಮತ್ತು ಕಟೌಟ್ ತೆಗೆಸಿದ್ದಕ್ಕೆ ರಾಜೀವ್ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪೌರಾಯುಕ್ತ ಅಮೃತಾ ಅವರು 2026ರ ಜನವರಿ 14ರಂದು ಶಿಡ್ಲಘಟ್ಟ ನಗರ ಠಾಣೆಗೆ ದೂರು ನೀಡಿದ್ದರು.
ಅಮೃತಾ ಅವರ ಜೊತೆ ದೂರವಾಣಿಯಲ್ಲಿ ಮಾತನಾಡುವಾಗ ಜೆಡಿಎಸ್ ಶಾಸಕರಾದ ಬಿ.ಎನ್. ರವಿಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜೆಡಿಎಸ್ ಶಿಡ್ಲಘಟ್ಟ ತಾಲೂಕು ಉಪಾಧ್ಯಕ್ಷ ಎನ್.ಸಿ. ಶ್ರೀನಿವಾಸ್ ಗೌಡ ಸಹ ದೂರು ನೀಡಿದ್ದರು. ಈ ಎರಡೂ ದೂರುಗಳ ಆಧಾರದಲ್ಲಿ ರಾಜೀವ್ ಗೌಡ ಅವರ ವಿರುದ್ಧ ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು.
ಇದನ್ನು ಓದಿ : ಶಿಡ್ಲಘಟ್ಟ | ಪೌರಾಯುಕ್ತೆಗೆ ಬೆದರಿಕೆ: ಕಾಂಗ್ರೆಸ್ ಮುಖಂಡನ ಬಂಧನಕ್ಕೆ ಪೌರಕಾರ್ಮಿಕರ ಆಗ್ರಹ
ಇದರಿಂದ, ಎಫ್‌ಐಆರ್ ರದ್ದು ಕೋರಿ ರಾಜೀವ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಗಳವಾರ (ಜನವರಿ 20) ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಹಿಳೆ ಎಂದರೆ ಗೌರವವೇ ಇಲ್ಲವೇ? ನಾಲಿಗೆ ಶುದ್ಧವಿರಬೇಕು. ನಾಲಿಗೆಯೇ ಎಲ್ಲವನ್ನೂ ಯಾವಾಗಲೂ ನಾಶ ಮಾಡಿದೆ. ಈಗ ನೀವು ಕ್ಷಮೆ ಕೋರಿದರೂ ಬಿರುಕು ಹಾಗೆ ಉಳಿಯಲಿದೆ ಎನ್ನುವುದು ನಿಮ್ಮ ಗಮನಕ್ಕೆ ಇರಬೇಕು ಎಂದು ರಾಜೀವ್ ಗೌಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ಅರ್ಜಿ ಕುರಿತ ತೀರ್ಪನ್ನು ಕಾಯ್ದಿರಿಸಿತ್ತು.





