ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನದ ನಾಲ್ಕನೇ ದಿನವಾದ ಇಂದು ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು ಮತ್ತು ಆನ್‌ಲೈನ್ ಗ್ಯಾಂಬ್ಲಿಂಗ್ ಚಟುವಟಿಕೆಗಳ ಮೇಲೆ ಚರ್ಚೆ ನಡೆದಿದೆ.
ಅಧಿವೇಶನದಲ್ಲಿ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ನಿಧನರಾದ ಬಗ್ಗೆ ಸಂತಾಪ ಸೂಚಿಸಿದ ನಂತರ ಮುಖ್ಯ ಚರ್ಚೆಗಳು ಆರಂಭವಾದವು. ಅಕ್ರಮ ಚಟುವಟಿಕೆಗಳ ಹಿಂದೆ ಎಲ್ಲ ರಾಜಕೀಯ ಪಕ್ಷಗಳ ಪ್ರಭಾವಿಗಳೂ ಇದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸದನದಲ್ಲಿ ತಿಳಿಸಿದರು.
ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಅವರು ಅಕ್ರಮ ಮರಳು ಗಣಿಗಾರಿಕೆ ಮತ್ತು ಜೂಜು ಚಟುವಟಿಕೆಗಳ ಬಗ್ಗೆ ಪ್ರಶ್ನೆ ಎತ್ತಿದ್ದರು. ಇದಕ್ಕೆ ಉತ್ತರಿಸಿದ ಗೃಹ ಸಚಿವರು, “ಈ ಅಕ್ರಮಗಳಲ್ಲಿ ಎಲ್ಲ ಪಕ್ಷಗಳ ದೊಡ್ಡ ನಾಯಕರೂ ಶಾಮೀಲಾಗಿದ್ದಾರೆ. ಯಾವುದೇ ಪಕ್ಷಕ್ಕೆ ಇದು ಸೀಮಿತವಲ್ಲ. ಪ್ರಭಾವಿಗಳ ರಕ್ಷಣೆಯಲ್ಲಿ ಈ ಚಟುವಟಿಕೆಗಳು ನಡೆಯುತ್ತಿವೆ” ಎಂದು ಆರೋಪಿಸಿದರು. ಆದರೆ ಯಾರ ಹೆಸರುಗಳನ್ನು ಬಹಿರಂಗಪಡಿಸಲಿಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯ ಪೊಲೀಸ್ ವ್ಯವಸ್ಥೆ ಕೆಡಲು ಕಾರಣರಾರು?
ಇದಕ್ಕೆ ತೀವ್ರ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್, “ಯಾರು ಆ ದೊಡ್ಡವರು? ಹೆಸರುಗಳನ್ನು ಹೇಳಿ. ಯಾವುದೇ ಮುಲಾಜಿಲ್ಲದೇ ಕ್ರಮ ತೆಗೆದುಕೊ ತೆಗೆದುಕೊಳ್ಳಿ” ಎಂದು ಆಗ್ರಹ ವ್ಯಕ್ತಪಡಿಸಿದರು. ಇದರಿಂದ ಸದನದಲ್ಲಿ ಗದ್ದಲ ಉಂಟಾಗಿ, ಸ್ಪೀಕರ್ ಮಧ್ಯಪ್ರವೇಶಿಸಿ ಶಾಂತಿ ಕಾಪಾಡಬೇಕಾಯಿತು.
ಗೃಹ ಸಚಿವರು ಮತ್ತೆ ಸ್ಪಷ್ಟನೆ ನೀಡಿ, “ನಮಗೆ ಯಾವುದೇ ಮುಲಾಜಿಲ್ಲ. ಎಲ್ಲ ಶಾಸಕರೊಂದಿಗೆ ಸಭೆ ಕರೆದು ಮಾಹಿತಿ ಸಂಗ್ರಹಿಸಿ, ತಕ್ಷಣ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.





