ಮಾಹಿತಿ ಹಕ್ಕು ಕಾಯಿದೆಯಡಿ ಪ್ರಶ್ನೆ ಕೇಳುವ ನಾಗರಿಕರನ್ನು ‘ಕಪ್ಪು ಪಟ್ಟಿ’ಗೆ ಸೇರಿಸುತ್ತಿರುವ ಕರ್ನಾಟಕ ಮಾಹಿತಿ ಆಯೋಗದ ವಿಲಕ್ಷಣ ಮತ್ತು ಕಾನೂನು ಬಾಹಿರವಾಗಿದ್ದು, ಇಂತಹ ನಡವಳಿಕೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾಹಿತಿ ನೀಡಬೇಕಾದ ಆಯೋಗವೇ ನಾಗರಿಕರ ಹಕ್ಕನ್ನು ಹತ್ತಿಕ್ಕಲು ಮುಂದಾಗಿದೆ ಎಂಬ ಆರೋಪಗಳು ವ್ಯಕ್ತವಾಗಿವೆ.
ಇತ್ತೀಚೆಗೆ ಕರ್ನಾಟಕ ಮಾಹಿತಿ ಆಯೋಗವು ನೀಡಿರುವ ಹಿಂಬರಹವೊಂದು(ಸಂಖ್ಯೆ: ಕಮಾಆ/605/ಮಾ.ಮಾ.ಹಿ/2025) ಸ್ವತಃ ಆಯೋಗದ ಮಿತಿಗಳನ್ನು ಬಯಲು ಮಾಡಿದೆ. ದ್ವಿತೀಯ ಮೇಲ್ಮನವಿ ಸಲ್ಲಿಸಿದ ನಂತರ ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಥವಾ ಒಂದು ಅರ್ಜಿಗೆ ₹1,000 ದಂಡ ವಿಧಿಸಲು ಮಾಹಿತಿ ಹಕ್ಕು ಕಾಯಿದೆ 2005ರ ಯಾವುದೇ ಕಲಂ ಅಥವಾ ಸೆಕ್ಷನ್‌ನಲ್ಲಿ ಅವಕಾಶವಿಲ್ಲ ಎಂದು ಆಯೋಗವೇ ಒಪ್ಪಿಕೊಂಡಿದೆ.
ಹೀಗಿದ್ದರೂ ಕೂಡಾ, ರಾಜ್ಯದ ಹಲವು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಿರುವುದು ಆಯೋಗದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಮಾಹಿತಿ ಕೇಳುವವರ ಮೇಲೆ ನಿರ್ಬಂಧ ಹೇರಲು ಹೊರಟಿದ್ದ ಅಧಿಕಾರಿಗಳಿಗೆ ಒರಿಸ್ಸಾ ಉಚ್ಛ ನ್ಯಾಯಾಲಯವು (WP (C) 29216/2025) ತಕ್ಕ ಪಾಠ ಕಲಿಸಿದೆ. ವರ್ಷಕ್ಕೆ ಕೇವಲ 12 ಅರ್ಜಿ ಸಲ್ಲಿಸಬೇಕು ಎಂಬ ಆಯೋಗದ ಆದೇಶವನ್ನು ನ್ಯಾಯಾಲಯವು ವಜಾಗೊಳಿಸಿದೆ.
ನಾಗರಿಕರಿಗೆ ಮಾಹಿತಿ ಕೇಳುವ ಹವ್ಯಾಸವಿದ್ದರೂ ಕೂಡ, ಅವರ ಹಕ್ಕನ್ನು ಕಸಿದುಕೊಳ್ಳುವುದು ಕಾನೂನು ಬಾಹಿರವೆಂದು ನ್ಯಾಯಾಲಯ ಗುಡುಗಿದೆ. ಕರ್ನಾಟಕದ ಅಧಿಕಾರಿಗಳು ಇದೇ ಒರಿಸ್ಸಾ ಆಯೋಗದ ಹಳೆಯ ಆದೇಶವನ್ನು ಮುಂದಿಟ್ಟುಕೊಂಡು ಸಾವಿರಾರು ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು ಈಗ ಕಾನೂನು ಸಂಕಷ್ಟಕ್ಕೆ ದಾರಿ ಮಾಡಿಕೊಟ್ಟಿದೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನದ ಮಧ್ಯ ಕರ್ನಾಟಕ ಪ್ರಾಂತ್ಯದ ಅಧ್ಯಕ್ಷ ಸಿ ಪಿ ತಿಪ್ಪೇಸ್ವಾಮಿ ಈ ಕುರಿತು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಿಗೆ ಪತ್ರ ಬರೆದು ತೀವ್ರವಾಗಿ ಖಂಡಿಸಿದ್ದು, “ಒರಿಸ್ಸಾ ಉಚ್ಛ ನ್ಯಾಯಾಲಯದ ತೀರ್ಪು ನಾಗರಿಕರ ಹಕ್ಕನ್ನು ಎತ್ತಿ ಹಿಡಿದಿದೆ. ಕರ್ನಾಟಕದಲ್ಲಿ ಮಾಹಿತಿ ಅಧಿಕಾರಿಗಳು ಮನಬಂದಂತೆ ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಿರುವುದು ಕಾನೂನಿನ ಉಲ್ಲಂಘನೆ. ಕೂಡಲೇ ಇಂತಹ ಎಲ್ಲ ಕಾನೂನು ಬಾಹಿರ ‘ಕಪ್ಪು ಪಟ್ಟಿ’ಗಳನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಪಾಪನಾಶ ದೇವಸ್ಥಾನ ಪೂಜೆಗೆ ತೆರಳಿದ ಬಿಜೆಪಿ ಮುಖಂಡರು; ಅವಕಾಶ ನೀಡದ ಪೊಲೀಸರು
ಮಾಹಿತಿ ಕೇಳುವುದು ನಾಗರಿಕರ ಸಾಂವಿಧಾನಿಕ ಹಕ್ಕು. ಅದನ್ನು ಹತ್ತಿಕ್ಕಲು ಕಪ್ಪು ಪಟ್ಟಿಯಂತಹ ಬೆದರಿಕೆ ತಂತ್ರಗಳನ್ನು ಬಳಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕಿದೆ. ಇಲ್ಲದಿದ್ದರೆ ಆರ್‌ಟಿಐ ಕಾಯಿದೆಯ ಮೂಲ ಆಶಯವೇ ಮಣ್ಣುಪಾಲಾಗಲಿದೆ.
ವರದಿ : ಜಗದೀಶ್ ನಗರಕೆರೆ





