ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಮೆಸಪೊಟೇಮಿಯಾದಲ್ಲಿ (ಈಗಿನ ಇರಾಕ್ ಮತ್ತು ಸಿರಿಯಾ) ರಚಿತವಾದ ಗಿಲ್ಗಮೆಶ್ ಮಹಾಗಾಥೆ, ಜಗತ್ತಿನ ಅತ್ಯಂತ ಪ್ರಾಚೀನ ಮಹಾಕಾವ್ಯವಾಗಿದೆ. ಇದನ್ನು ಕನ್ನಡಕ್ಕೆ ಜೆ.ಬಾಲಕೃಷ್ಣ ಅನುವಾದಿಸಿದ್ದಾರೆ...
‘… ದೇವತೆಗಳು ನನಗೆ ಅಮರತ್ವವನ್ನು ದಯಪಾಲಿಸಿದರು ಹಾಗೂ ಎಲ್ಲ ನದಿಗಳು ಉಗಮಿಸುವ ಈ ಸ್ಥಳಕ್ಕೆ ನಮ್ಮನ್ನು ಕರೆದುತಂದು ಬಿಟ್ಟರು.’
‘ಈಗ ಹೇಳು ಗಿಲ್ಗಮೆಶ್, ಅಮರತ್ವವನ್ನು ದಯಪಾಲಿಸಲು ನಿನಗೆ ಯಾವ ದೇವತೆಗಳು ಆಹ್ವಾನಿಸುತ್ತಾರೆ? ನೀನು ಅರಸುತ್ತಿರುವ ಅಮರತ್ವವನ್ನು ನಿನಗೆ ಒದಗಿಸಲು ನಿನ್ನ ಪರವಾಗಿ ಯಾರು ವಾದಿಸುತ್ತಾರೆ? ಹೋಗಲಿ, ನೀನು ಅಮರತ್ವ ಪಡೆಯಲು ಅದಕ್ಕಾಗಿ ಎಷ್ಟು ಅರ್ಹನೆಂದು ನೋಡೋಣ. ಈಗ ಒಂದು ಪರೀಕ್ಷೆಯನ್ನು ಮಾಡೋಣ. ನೀನು ಆರು ದಿನ ಮತ್ತು ಏಳು ರಾತ್ರಿಗಳು ನಿದ್ದೆ ಮಾಡದೆ ಎಚ್ಚರವಾಗಿರಬೇಕು. ಅದು ನಿನ್ನಿಂದ ಸಾಧ್ಯವೇ?’ ಎಂದು ಉತನಪಿಶ್ತಿಮ್ ಕೇಳಿದ.
‘ಅಷ್ಟೇ ತಾನೇ, ಅದು ನನ್ನಿಂದ ಖಂಡಿತಾ ಸಾಧ್ಯ’ ಎಂದು ಗಿಲ್ಗಮೆಶ್ ಅಲ್ಲೇ ಕೂತ. ಆದರೆ ಕೂತ ತಕ್ಷಣ ತನ್ನ ಕಠೋರದ, ಪ್ರಯಾಸದ ಪ್ರಯಾಣದಿಂದ ಬಳಲಿದ್ದ ಅವನ ಮೇಲೆ ಮಂಜು ಕವಿದಂತೆ ನಿದ್ರೆ ಅವನನ್ನು ಆವರಿಸತೊಡಗಿತು. ಅದನ್ನು ಗಮನಿಸುತ್ತಿದ್ದ ಉತನಪಿಶ್ತಿಮ್ ತನ್ನ ಪತ್ನಿಗೆ ಹೇಳಿದ, ‘ನೋಡಿಲ್ಲಿ, ಈ ಮನುಷ್ಯ ಅಮರತ್ವವJನ್ನು ಬಯಸುತ್ತಾನಂತೆ. ಈಗ ಕೆಲಕ್ಷಣಗಳೂ ಸಹ ನಿದ್ರೆ ಮಾಡದೆ ಎಚ್ಚರವಾಗಿರಲು ಈತನಿಂದ ಸಾಧ್ಯವಾಗುತ್ತಿಲ್ಲ. ಇನ್ನು ಆರು ದಿನ ಮತ್ತು ಏಳು ರಾತ್ರಿಗಳು ನಿದ್ದೆ ಮಾಡದೆ ಹೇಗೆ ಎಚ್ಚರವಾಗಿರುತ್ತಾನೆ? ಅವನನ್ನು ನಿದ್ರೆ ಮಂಜು ಕವಿದಂತೆ ಕವಿದಿದೆ.’
ಉತನಪಿಶ್ತಿಮ್‌ನ ಪತ್ನಿ ಆತನಿಗೆ ಹೇಳಿದಳು, ‘ಗಿಲ್ಗಮೆಶ್‌ನನ್ನು ತಟ್ಟಿ ಎಬ್ಬಿಸು ಆತ ಎಚ್ಚರಾಗಲಿ. ಕಷ್ಟ, ಶ್ರಮದಿಂದ ಆತ ಬಂದ ಹಾದಿಯಲ್ಲಿಯೇ ಈಗ ಶಾಂತಮನಸ್ಸಿನಿಂದ ಹಿಂದಿರುಗುವಂತೆ ಹೇಳು.’
ಉತನಪಿಶ್ತಿಮ್ ತನ್ನ ಪತ್ನಿಗೆ, ‘ಎಲ್ಲ ಮನುಷ್ಯರೂ ಕಪಟಿಗಳು. ಅವನು ನಿನಗೆ ಬೇಕಾದರೂ ಮೋಸ ಮಾಡುತ್ತಾನೆ. ಗಿಲ್ಗಮೆಶ್ ಬೇಕಾದರೆ ಹೇಳುತ್ತಾನೆ ನಾನು ತೂಕಡಿಸಿದ್ದೆ ಅಷ್ಟೆ ನಿದ್ರೆ ಮಾಡಿರಲೇ ಇಲ್ಲವೆಂದು. ಆದುದರಿಂದ ಅವನ ಸುಳ್ಳು ಅವನಿಗೇ ತಿಳಿಯುವಂತೆ ಮಾಡೋಣ. ಪ್ರತಿ ದಿನ ಅವನಿಗಾಗಿ ಒಂದು ರೊಟ್ಟಿ ಬೇಯಿಸು. ಆ ರೊಟ್ಟಿಯನ್ನು ನಿದ್ರಿಸುತ್ತಿರುವ ಗಿಲ್ಗಮೆಶ್‌ನ ತಲೆಯ ಬಳಿ ಇಡು ಹಾಗೂ ಅವನು ನಿದ್ರಿಸುತ್ತಿರುವ ಮನೆಯ ಗೋಡೆಯ ಮೇಲೆ ದಿನಕ್ಕೊಂದರಂತೆ ಗುರುತು ಮಾಡು’ ಎಂದು ಹೇಳಿದ.
ಉತನಪಿಶ್ತಿಮ್‌ನ ಪತ್ನಿ, ಪತಿ ಹೇಳಿದಂತೆ ಮಾಡಿದಳು. ಆಕೆ ದಿನಕ್ಕೊಂದು ರೊಟ್ಟಿಯಂತೆ ಪ್ರತಿ ದಿನ ಬೇಯಿಸಿ ಅದನ್ನು ಎಚ್ಚರವೇ ಇಲ್ಲದಂತೆ ನಿದ್ರಿಸುತ್ತಿದ್ದ ಗಿಲ್ಗಮೆಶ್‌ನ ತಲೆಯ ಬಳಿ ಇರಿಸಿದಳು ಹಾಗೂ ಮನೆಯ ಗೋಡೆಯ ಮೇಲೆ ದಿನಕ್ಕೊಂದರಂತೆ ಗುರುತು ಮಾಡಿದಳು. ಮೊದಲ ರೊಟ್ಟಿ ಒಣಗಿ ಗಟ್ಟಿಯಾಯಿತು. ಎರಡನೇ ರೊಟ್ಟಿ ಒಣಗಿದ ಚರ್ಮದಂತಾಯಿತು. ಮೂರನೇ ರೊಟ್ಟಿ ಅಂಟಂಟಾಯಿತು. ನಾಲ್ಕನೇ ರೊಟ್ಟಿ ಬಿಳಿಚಿಕೊಂಡಿತು. ಐದನೇ ರೊಟ್ಟಿ ಬೂಸ್ಟು ಹಿಡಿಯಿತು. ಆರನೇ ರೊಟ್ಟಿ ತಾಜಾ ಇತ್ತು. ಏಳನೇ ರೊಟ್ಟಿ ಒಲೆಯ ಮೇಲೆ ಇನ್ನೂ ಬೇಯುತ್ತಿದ್ದಾಗಲೇ ಉತನಪಿಶ್ತಿಮ್ ಗಿಲ್ಗಮೆಶ್‌ನನ್ನು ತಟ್ಟಿ ಅಲುಗಾಡಿಸಿದ. ಗಿಲ್ಗಮೆಶ್ ನಿದ್ರೆಯಿಂದ ಎಚ್ಚೆತ್ತ.
ನಿದ್ರೆಯಿಂದ ಎದ್ದವನೇ ಗಿಲ್ಗಮೆಶ್ ಅಲ್ಲಿಯೇ ನಿಂತಿದ್ದ ಉತನಪಿಶ್ತಿಮ್‌ಗೆ, ‘ಈಗಷ್ಟೇ ಕಣ್ಣು ಮುಚ್ಚಿದ್ದೆ, ಆಗಲೇ ನನ್ನ ತೂಕಡಿಕೆಯಿಂದ ನೀನು ತಟ್ಟಿ ಎಬ್ಬಿಸಿದೆಯಲ್ಲಾ’ ಎಂದು ಕೇಳಿದ.
ಉತನಪಿಶ್ತಿಮ್ ಕಣ್ಣುಜ್ಜಿಕೊಳ್ಳುತ್ತಿದ್ದ ಗಿಲ್ಗಮೆಶ್‌ಗೆ, ‘ಏನು ಹೇಳುತ್ತಿದ್ದೀಯ ಗಿಲ್ಗಮೆಶ್, ಅಲ್ಲಿ ನೋಡು ನಿನ್ನ ತಲೆಯ ಬಳಿ ಇರಿಸಿರುವ ರೊಟ್ಟಿಗಳನ್ನು ಎಣಿಸು. ಅಲ್ಲಿರುವ ರೊಟ್ಟಿಗಳ ಸಂಖ್ಯೆ ನಿದ್ರೆ ಮಾಡಿರುವ ದಿನಗಳನ್ನು ಸೂಚಿಸುತ್ತದೆ. ಮೊದಲ ರೊಟ್ಟಿ ನೋಡು, ಒಣಗಿ ಗಟ್ಟಿಯಾಗಿದೆ. ಎರಡನೆಯದು ಒಣಗಿದ ಚರ್ಮದಂತಾಯಿತು. ಮೂರನೇ ರೊಟ್ಟಿ ಅಂಟಂಟಾಗಿದೆ. ನಾಲ್ಕನೇ ರೊಟ್ಟಿ ಬಿಳಿಚಿಕೊಂಡಿದೆ. ಐದನೆಯದಕ್ಕೆ ಬೂಸ್ಟು ಹಿಡಿದಿದೆ. ಆರನೇ ರೊಟ್ಟಿ ನೋಡು ಇನ್ನೂ ತಾಜಾ ಇದೆ. ಏಳನೇ ರೊಟ್ಟಿ ಒಲೆಯ ಮೇಲೆ ಇನ್ನೂ ಬೇಯುತ್ತಿದ್ದಾಗಲೇ ನಿನ್ನನ್ನು ನಿದ್ರೆಯಿಂದ ಎಬ್ಬಿಸಿದೆ’ ಎಂದ.
ಸೋತಂತೆ ಹತಾಶನಾದ ಗಿಲ್ಗಮೆಶ್, ‘ಹಾಗಾದರೆ ನಾನೇನು ಮಾಡಲಿ ಉತನಪಿಶ್ತಿಮ್, ನಾನೆಲ್ಲಿಗೆ ಹೋಗಲಿ? ನನ್ನ ಮಾಂಸಖಂಡಗಳನ್ನೇ ಸಾವು ಹಿಡಿದು ಅಲುಗಾಡಿಸುತ್ತಿದೆ, ಹೆದರಿಸುತ್ತಿದೆ. ನಾನು ಮಲಗುವ ಕೋಣೆಯಲ್ಲೇ ಸಾವು ಅವಿತಿರುವಂತೆ ಭಾಸವಾಗುತ್ತಿದೆ. ನಾನೆಲ್ಲಿ ನೋಡಿದರೂ ನನಗೆ ಸಾವಿನ ಮುಖವೇ ಕಾಣುತ್ತದೆ’ ಎಂದು ಆತಂಕದಿಂದ ಹೇಳಿದ.
ಆಗ ಗಿಲ್ಗಮೆಶ್‌ನನ್ನು ಅಲ್ಲಿಗೆ ಕರೆದುತಂದಿದ್ದ ಉರ್ಶನಬಿಯೆಡೆಗೆ ತಿರುಗಿ ಉತನಪಿಶ್ತಿಮ್ ಹೇಳಿದ, ‘ಉರ್ಶನಬಿ ನಿನಗೆ ಶಾಪವಿರಲಿ. ಯಾವುದೇ ಬಂದರು ನಿನಗೆ ಸುರಕ್ಷಿತ ತಾಣವಾಗದಿರಲಿ. ನೀನು ಸಾಗುವ ಸಾಗರ ನಿನ್ನನ್ನು ದ್ವೇಷಿಸಲಿ. ನೀನು ಇನ್ನೆಂದಿಗೂ ಇಲ್ಲಿಗೆ ಕಾಲಿಡದಂತೆ ನಿನ್ನನ್ನು ಬಹಿಷ್ಕರಿಸುತ್ತಿದ್ದೇನೆ. ಈ ಮನುಷ್ಯನನ್ನು ನೀನು ಇಲ್ಲಿಗೆ ದಾರಿತೋರಿಸಿ ಕರೆದುತಂದಿದ್ದೀಯಾ, ಅವನ ದೇಹ ಹೊಲಸು ನಾರುತ್ತಿದೆ, ಅವನು ತೊಟ್ಟ ಪ್ರಾಣಿಗಳ ಚರ್ಮಗಳು ಅವನ ಸೌಂದರ್ಯ, ಗಾಂಭೀರ್ಯ ಮರೆಮಾಡಿದೆ. ಆತನನ್ನು ಇಲ್ಲಿಂದ ಈಗಲೇ ಅವನು ಸ್ನಾನ ಮಾಡುವಂತಹ ಸ್ಥಳವೊಂದಕ್ಕೆ ಕರೆದೊಯ್ಯಿ. ಅಲ್ಲಿ ಪರಿಶುದ್ಧ ನೀರಿನಲ್ಲಿ ಆತ ತನ್ನ ದೇಹದ ಹೊಲಸನ್ನೆಲ್ಲ ತೊಳೆದುಕೊಂಡು ಸ್ನಾನ ಮಾಡಲಿ. ಆತ ತೊಟ್ಟ ಚರ್ಮವನ್ನೆಲ್ಲಾ ನೀರಿಗೆ ಎಸೆಯಲಿ ಹಾಗೂ ಸಾಗರ ಅದನ್ನು ದೂರ ಕೊಂಡೊಯ್ಯಲಿ. ಆತ ತನ್ನ ದೇಹಕ್ಕೆ ಸುಗಂಧದ್ರವ್ಯಗಳನ್ನು ಪೂಸಿಕೊಳ್ಳಲಿ ಹಾಗೂ ಆತನ ದೇಹದ ಸೌಂದರ್ಯ ಎದ್ದುಕಾಣಲಿ. ಸಿಕ್ಕುಗಟ್ಟಿದ, ಕೆದರಿದ ಆತನ ಕೂದಲು ಹೊಳೆಯುವಂತೆ ಬಾಚಿ ಅದನ್ನು ಕಟ್ಟಿಕೊಳ್ಳಲು ಒಂದು ಪಟ್ಟಿಯನ್ನು ಕೊಡು. ರಾಜನಿಗೆ ಸೂಕ್ತವಾದ ಕುಲೀನ ಹಾಗೂ ರಾಜೋಚಿತವಾದ ವಸ್ತ್ರಗಳನ್ನು ನೀಡು. ಗಿಲ್ಗಮೆಶ್ ತನ್ನ ಮನೆಗೆ, ನಾಡಿಗೆ ಹಿಂದಿರುಗುವವರೆಗೂ ಆತನ ವಸ್ತ್ರಗಳು ಸುಕ್ಕಾಗದಂತೆ, ಆತ ಬಳಲಿದಂತೆ ಕಾಣದಂತೆ, ಅಷ್ಟೇ ಹೊಸದಾಗಿ ಕಾಣುವಂತೆ ನೋಡಿಕೊ.’
ಇದನ್ನು ಓದಿದ್ದೀರಾ?: ಜ.ನಾ. ತೇಜಶ್ರೀ ಅವರ ‘ಜೀವರತಿ’ | ಮನುಷ್ಯ ಮನಸ್ಸಿಗೆ ಬೇಕಾದ ಒಳ್ಳೆಯತನಗಳತ್ತ…
ಉತನಪಿಶ್ತಿಮ್ ಆದೇಶಿಸಿದಂತೆ ದೋಣಿ ನಡೆಸುವ ಉರ್ಶನಬಿ ಅಲ್ಲಿಂದ ಗಿಲ್ಗಮೆಶ್‌ನನ್ನು ಕರೆದೊಯ್ದ. ಮೊದಲಿಗೆ ಸ್ನಾನ ಮಾಡುವ ಸ್ಥಳಕ್ಕೆ ಕರೆದೊಯ್ದ ಹಾಗೂ ಅಲ್ಲಿ ಗಿಲ್ಗಮೆಶ್ ಸ್ನಾನ ಮಾಡಿ, ಸಿಕ್ಕು ಹಿಡಿದು ಕೆದರಿದ್ದ ಕೂದಲನ್ನು ತೊಳೆದು ಸ್ವಚ್ಛಗೊಳಿಸಿ ಬಾಚಿಕೊಂಡ. ಗಿಲ್ಗಮೆಶ್ ತೊಟ್ಟಿದ್ದ ವಾಸನೆ ಹೊಡೆಯುವ ಪ್ರಾಣಿ ಚರ್ಮಗಳನ್ನು ಸಾಗರದಲ್ಲಿ ಕೊಚ್ಚಿಹೋಗಲು ಉರ್ಶನಬಿ ಎಸೆದ. ಗಿಲ್ಗಮೆಶ್ ದೇಹಕ್ಕೆ ಉರ್ಶನಬಿ ಸುಗಂಧದ್ರವ್ಯಗಳನ್ನು ಲೇಪಿಸಿದ. ಗಿಲ್ಗಮೆಶ್‌ನ ದೇಹದ ಸಹಜ ಪ್ರಶಾಂತತೆ ಎದ್ದುತೋರಿತು. ಒಪ್ಪವಾಗಿ ಬಾಚಿದ್ದ ಗಿಲ್ಗಮೆಶ್‌ನ ತಲೆಕೂದಲನ್ನು ಉರ್ಶನಬಿ ಒಂದು ಹೊಸ ಪಟ್ಟಿಯಿಂದ ಕಟ್ಟಿದ ಹಾಗೂ ಕೂದಲು ಸಮೃದ್ಧತೆಯಿಂದ ಹೊಳೆಯಿತು. ತನ್ನ ಮನೆಗೆ, ನಾಡಿಗೆ ಹಿಂದಿರುಗುವವರೆಗೂ ಆತ ತೊಟ್ಟ ವಸ್ತ್ರಗಳು ಸುಕ್ಕಾಗದಂತೆ, ಆತ ಬಳಲಿದಂತೆ ಕಾಣದಂತೆ, ಅಷ್ಟೇ ಹೊಸದಾಗಿ ಕಾಣುವಂತಹ ರಾಜನಿಗೆ ಸೂಕ್ತವಾದ ಕುಲೀನ ಹಾಗೂ ರಾಜೋಚಿತವಾದ ವಸ್ತ್ರಗಳನ್ನು ಗಿಲ್ಗಮೆಶ್ ಧರಿಸಿದ.
ಆ ನಂತರ ಗಿಲ್ಗಮೆಶ್ ಮತ್ತು ಉರ್ಶನಬಿ ಇಬ್ಬರೂ ತಮ್ಮ ದೋಣಿ ಹತ್ತಿದರು, ತಮ್ಮ ಪ್ರಯಾಣ ಆರಂಭಿಸಲು ದೋಣಿಯ ಹಾಯಿಯನ್ನು ತೆರೆದರು. ಅವರನ್ನು ನೋಡುತ್ತ ಉತನಪಿಶ್ತಿಮ್‌ನ ಪತ್ನಿ, ‘ನೋಡಿ, ಗಿಲ್ಗಮೆಶ್ ಇಲ್ಲಿಗೆ ತೀರಾ ನೊಂದಹೃದಯದಿಂದ, ಬಳಲಿ ಅಮರತ್ವವನ್ನು ಅರಸಿ ಬಂದಿದ್ದಾನೆ. ಈಗ ಆತನನ್ನು ಬರಿಗೈಲಿ ಕಳುಹಿಸಬೇಡಿ. ತನ್ನ ನಾಡಿಗೆ ಕೊಂಡೊಯ್ಯಲು ಆತನಿಗೆ ಏನು ಕೊಡುತ್ತೀರಿ?’ ಎಂದು ತನ್ನ ಪತಿಯನ್ನು ಕೇಳಿದಳು.

ಹೊರಟು ನಿಂತಿದ್ದ ಗಿಲ್ಗಮೆಶ್ ಆಕೆಯ ಮಾತನ್ನು ಕೇಳಿ ದೋಣಿ ನಡೆಸುವ ಕೋಲನ್ನು ಊರಿ ದೋಣಿಯನ್ನು ಪುನಃ ದಡಕ್ಕೆ ತಂದ. ಉತನಪಿಶ್ತಿಮ್ ಗಿಲ್ಗಮೆಶ್‌ಗೆ ಹೇಳಿದ, ‘ನೀನು ನೊಂದಹೃದಯದಿಂದ, ಬಳಲಿ, ಬಹಳ ಕಷ್ಟಪಟ್ಟು ಇಲ್ಲಿಗೆ ಬಂದಿದ್ದೀಯಾ. ನೀನು ನಿನ್ನ ನಾಡಿಗೆ ಕೊಂಡೊಯ್ಯಲು ನಾನೇನು ಕೊಡಲಿ? ಬಾ ಇಲ್ಲಿ ಗಿಲ್ಗಮೆಶ್, ನಿನಗೊಂದು ರಹಸ್ಯ ಹೇಳುತ್ತೇನೆ. ದೇವತೆಗಳ ಒಂದು ರಹಸ್ಯವನ್ನು ನಿನಗೆ ತಿಳಿಸುತ್ತೇನೆ. ಅಲ್ಲಿ ಸಾಗರದ ಆಳದಲ್ಲಿ ಒಂದು ಮುಳ್ಳುಪೊದೆಯ ಗಿಡವಿದೆ. ಅದರಲ್ಲೂ ಗುಲಾಬಿಯ ಗಿಡದಂತೆ ಚೂಪಾದ ಮುಳ್ಳುಗಳಿವೆ, ನಿನ್ನನ್ನು ಚುಚ್ಚುತ್ತವೆ. ನೀನು ಹೇಗಾದರೂ ಅದನ್ನು ಪಡೆದುಕೊಂಡರೆ ನಿನಗೆ ಅಮರತ್ವವಲ್ಲದಿದ್ದರೂ ಚಿರಯೌವನ ದೊರಕುತ್ತದೆ.’
ಅದನ್ನು ಕೇಳಿದ ಕೂಡಲೇ ಗಿಲ್ಗಮೆಶ್ ಸಂತೋಷದಿಂದ ಅಷ್ಟಾದರೂ ಸಿಕ್ಕಿತಲ್ಲ ಎಂದು ಭೂಮಿಯಲ್ಲಿ ಸಾಗರದ ಅಧೋಲೋಕ ತಲುಪುವಂತಹ ಆಳ ಕುಳಿಯೊಂದನ್ನು ಕೊರೆದ. ಅಲ್ಲಿ ನೀರಿನಲ್ಲಿ ಮುಳುಗಲು ಸಾಧ್ಯವಾಗಲೆಂದು ತನ್ನ ಎರಡೂ ಕಾಲುಗಳಿಗೆ ತೂಕದ ಕಲ್ಲುಗಳನ್ನು ಕಟ್ಟಿಕೊಂಡು ಸಾಗರದ ತಳ ತಲುಪಿದ. ಅಲ್ಲಿ ಆತನಿಗೆ ಉತನಪಿಶ್ತಿಮ್ ಹೇಳಿದ ಗಿಡ ಕಾಣಿಸಿತು. ಗಿಡವನ್ನು ಕಿತ್ತು ತೆಗೆಯುತ್ತಿದ್ದಂತೆ ಅದರ ಮುಳ್ಳುಗಳು ಚುಚ್ಚಿದವು. ಆದರೂ ಬಿಡದೆ ಅದನ್ನು ಕಿತ್ತುಕೊಂಡು ಕಾಲಿಗೆ ಕಟ್ಟಿಕೊಂಡಿದ್ದ ಕಲ್ಲುಗಳನ್ನು ಬಿಚ್ಚಿದ. ಸಾಗರದ ನೀರು ಆತನನ್ನು ಮೇಲಕ್ಕೆ ಕರೆತಂದು ದಡದ ಮೇಲೆ ಎಸೆಯಿತು.
ದೋಣಿಯನ್ನು ಹತ್ತಿದ ಗಿಲ್ಗಮೆಶ್ ದೋಣಿ ನಡೆಸುವ ಉರ್ಶನಬಿಗೆ, ‘ಈ ಸಸ್ಯವನ್ನು ನೋಡು ಉರ್ಶನಬಿ. ಇದೊಂದು ಸೋಜಿಗದ ಸಸ್ಯ. ಅದು ಮಾನವನಿಗೆ ಅವನ ಯೌವನವನ್ನು ಮರುಕಳಿಸುವಂತೆ ಮಾಡುತ್ತದೆಯಂತೆ. ಇದನ್ನು ನಾನು ನನ್ನ ನಾಡಾದ ಉರುಕ್‌ಗೆ ಕೊಂಡೊಯ್ಯುತ್ತೇನೆ. ಅದನ್ನು ಪರೀಕ್ಷಿಸಲು ಮೊದಲಿಗೆ ಅಲ್ಲಿನ ಹಿರಿಯ ವೃದ್ಧರಿಗೆ ಕೊಡುತ್ತೇನೆ. ಇದರ ಹೆಸರನ್ನು ‘ಅಜ್ಜ ಯುವಕನಾದ’ ಎಂದಿಡೋಣ. ಆ ನಂತರ ನಾನು ಈ ಸಸ್ಯವನ್ನು ತಿಂದು ಪುನಃ ಯೌವನಿಗನಾಗುತ್ತೇನೆ’ ಎಂದು ಸಂತೋಷದಿಂದ ಹೇಳಿದ.
ಗಿಲ್ಗಮೆಶ್ ಮತ್ತು ಉರ್ಶನಬಿ ಇಬ್ಬರೂ ಅಲ್ಲಿಂದ ಹೊರಟು ತಮ್ಮ ಪ್ರಯಾಣ ಆರಂಭಿಸಿದರು. ಅರವತ್ತು ಮೈಲುಗಳ ಪ್ರಯಾಣದ ನಂತರ ರೊಟ್ಟಿ ತಿಂದರು. ತೊಂಭತ್ತು ಮೈಲುಗಳ ಪ್ರಯಾಣದ ನಂತರ ರಾತ್ರಿ ವಿಶ್ರಮಿಸಿದರು. ಅಲ್ಲೇ ದೋಣಿ ನಿಲ್ಲಿಸಿದ ದಡದಲ್ಲಿ ಒಂದು ತಣ್ಣೀರ ಕೊಳವಿತ್ತು. ಸ್ನಾನ ಮಾಡೋಣವೆಂದು ಗಿಲ್ಗಮೆಶ್ ಆ ಕೊಳಕ್ಕೆ ಇಳಿದ. ಅಲ್ಲೇ ಹಾದುಹೋಗುತ್ತಿದ್ದ ಹಾವಿಗೆ ಆ ದಡದಲ್ಲಿ ಇಟ್ಟಿದ್ದ ಸೋಜಿಗ ಸಸ್ಯದ ವಾಸನೆ ಬಡಿಯಿತು. ನಿಶ್ಶಬ್ದವಾಗಿ ಅಲ್ಲಿಗೆ ತೆವಳಿ ಬಂದ ಹಾವು ಆ ಸಸ್ಯವನ್ನು ತಿಂದುಹಾಕಿತು. ಅಲ್ಲಿಂದ ಆ ಹಾವು ತನ್ನ ಪೊರೆ ಕಳಚಿ ಹೊರಟಿತು.
ಇದನ್ನು ಓದಿದ್ದೀರಾ?: ನೊಬೆಲ್ ಪುರಸ್ಕೃತ ಲ್ಯಾಟಿನ್ ಅಮೆರಿಕದ ಅಪ್ರತಿಮ ಬರಹಗಾರ ಯೋಸಾ
ತಾನು ಕಷ್ಟಪಟ್ಟು ತಂದಿದ್ದ ಸಸ್ಯವನ್ನು ಹಾವು ತಿಂದು, ಪೊರೆ ಕಳಚಿ ಹೋದದ್ದನ್ನು ನೋಡಿದ ಗಿಲ್ಗಮೆಶ್ ಅಲ್ಲೇ ಕೂತು ಜೋರಾಗಿ ಅಳತೊಡಗಿದ. ಅಮರತ್ವವಲ್ಲದಿದ್ದರೂ ಯೌವನ ಮರಳಿ ಪಡೆಯುವ ಅವಕಾಶವೂ ತನಗೆ ದಕ್ಕಲಿಲ್ಲವಲ್ಲಾ ಎಂದು ಅತೀವ ದುಃಖವಾಯಿತು ಹಾಗೂ ಕೆನ್ನೆಗಳ ಮೇಲೆ ಕಣ್ಣೀರು ನದಿಯಂತೆ ಹರಿಯಿತು. ದೋಣಿಯನ್ನು ಹತ್ತಿದ ಗಿಲ್ಗಮೆಶ್ ದೋಣಿ ನಡೆಸುವ ಉರ್ಶನಬಿಗೆ, ‘ನಾನು ಯಾವ ಉದ್ದೇಶಕ್ಕಾಗಿ ಇಷ್ಟೆಲ್ಲಾ ಕಷ್ಟಪಡಬೇಕಾಯಿತು ಉರ್ಶನಬಿ? ಯಾವ ಉದ್ದೇಶಕ್ಕಾಗಿ ನಾನು ಈ ರೀತಿ ನನ್ನ ಹೃದಯದ ರಕ್ತವನ್ನು ವ್ಯಯ ಮಾಡಬೇಕಾಯಿತು? ನಾನು ನನಗಾಗಿ ಯಾವ ವರವನ್ನೂ ಪಡೆಯಲಾಗಲಿಲ್ಲ. ಅಯ್ಯೋ, ನನಗೆ ದಕ್ಕಿದ್ದುದನ್ನೂ ಈ ಹಾವು ಲಾಭ ಪಡೆಯಿತಲ್ಲಾ. ನಾನು ಸಾಗರದ ಅಧೋಲೋಕ ತಲುಪುವಂತಹ ಆಳ ಕುಳಿಯೊಂದನ್ನು ಕೊರೆದದರಿಂದ ಈಗ ಅರವತ್ತು ಮೈಲು ಎತ್ತರದ ಅಲೆಗಳು ಈ ಸಾಗರದಲ್ಲಿ ಏಳುತ್ತವೆ… ಅವುಗಳ ನಡುವೆ ನಾನು ಹಿಂದಿರುಗಿ ಆ ಸಸ್ಯ ಪಡೆಯಲು ಪುನಃ ನಾನು ಆ ಸ್ಥಳವನ್ನು ಗುರುತಿಸಬಲ್ಲೆನೆ? ಯಾವುದೂ ಬೇಡ ನಡೆ, ನನಗೂ ಸಾಕಾಗಿದೆ. ದೋಣಿಯನ್ನು ಇಲ್ಲೇ ದಡದಲ್ಲಿ ಬಿಟ್ಟು ನಮ್ಮ ಊರಿಗೆ ಹೋಗೋಣ ನಡೆ’ ಎಂದು ಹೇಳಿ ಇಬ್ಬರೂ ಅಲ್ಲಿಂದ ನಡೆದೇ ಹೊರಟರು.
(ಗಿಲ್ಗಮೆಶ್ ಕೃತಿಯ ಆಯ್ದ ಭಾಗ. ನವಕರ್ನಾಟಕ ಪ್ರಕಾಶನ. ಪ್ರತಿಗಳಿಗಾಗಿ: 93429 71222)





