ಸರಳತೆ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಬದುಕು ಸಾಧಿಸಿ, ವೃತ್ತಿಯಲ್ಲಿ ಘನತೆ ಮೆರೆದ ಕೆ.ಎಸ್. ಅಶ್ವಥ್ ಅವರು 1955ರಿಂದ 2007ರವರೆಗೆ ಸುಮಾರು 275 ಚಿತ್ರಗಳಲ್ಲಿ ನಟಿಸಿ, ಪಾತ್ರ ಮತ್ತು ಬದುಕಿನಲ್ಲಿ 'ನಮ್ಮವರೇ' ಆಗಿದ್ದರು. ನಮ್ಮ ಸಂಸ್ಕೃತಿಯ ವಕ್ತಾರನಂತಿದ್ದರು. ಈ ಬಾರಿಯ ಚಲನಚಿತ್ರೋತ್ಸವ ಸಂದರ್ಭದಲ್ಲಿ 'ಶತಮಾನೋತ್ಸವ ಸ್ಮರಣೆ'ಗೆ ಭಾಜನರಾಗಿದ್ದಾರೆ...
ಕನ್ನಡ ಚಲನಚಿತ್ರರಂಗ ಕಂಡ ಅತ್ಯಂತ ಸಜ್ಜನಿಕೆಯ ಕಲಾವಿದ ಕೆ.ಎಸ್. ಅಶ್ವಥ್. ತೆರೆಯ ಮೇಲೆ ಸಂಯಮ, ವಿನಯ, ತ್ಯಾಗಶೀಲ ಹಿರಿಯನಾಗಿ ನಟಿಸಿದಂತೆಯೇ ಅಶ್ವಥ್ ಅವರು ಶಾಶ್ವತವಾಗಿ ಹಿರಿಯಣ್ಣನಾಗಿಯೇ ತೆರೆಯಾಚೆಗೂ ಉಳಿದವರು. ಒಬ್ಬ ಕಲಾವಿದನಿಗೆ ಇಮೇಜೊಂದು ಅಂಟಿಕೊಂಡರೆ ಅದರಿಂದ ಹೊರಬರಲು ಏನೇ ಪ್ರಯತ್ನಿಸಿದರೂ ಭಾರತೀಯ ಚಲನಚಿತ್ರ ಸಂದರ್ಭದಲ್ಲಿ ಅಸಾಧ್ಯ ಎನ್ನುವ ನಂಬಿಕೆಗೆ ಅಶ್ವಥ್ ದೊಡ್ಡ ಉದಾಹರಣೆ ಎನಿಸಿದರು. ಅವರು ಕೊನೆಯವರೆಗೂ- ಕೆಲವು ಅಪವಾದಗಳನ್ನು ಹೊರತುಪಡಿಸಿದರೆ- ಸಜ್ಜನ ವ್ಯಕ್ತಿಯ ಹಲವು ರೂಪಗಳಲ್ಲೇ ಕನ್ನಡಿಗರನ್ನು ಸೂರೆಗೊಂಡರು. ತಮಗಂಟಿದ ಇಮೇಜಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಅರಸಿಬಂದ ಪಾತ್ರಗಳಲ್ಲಿ ತನ್ಮಯರಾಗಿ ನಟಿಸಿದ ಅಶ್ವಥ್ ಅವರು ಪೋಷಕ ಪಾತ್ರಗಳಿಗೆ ಹೊಸ ಭಾಷ್ಯ ಬರೆದರು. ತಮಿಳಿನಲ್ಲಿ ಕಲಾವಿದ ಮೇಜರ್ ಸುಂದರ್ ರಾಜನ್, ತೆಲುಗಿನಲ್ಲಿ ಗುಮ್ಮಡಿ ಮತ್ತು ಮಲಯಾಳಂನಲ್ಲಿ ತಿಲಕನ್ ಹೇಗೆ ಆಯಾ ಭಾಷೆಯ ಸಿನೆಮಾಗಳ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ತಮ್ಮದೇ ಸ್ಥಾನವೊಂದನ್ನು ಸ್ಥಾಪಿಸಿಕೊಂಡು ಅಭಿಮಾನಿ ವೃಂದವನ್ನು ಗಳಿಸಿದರೋ; ಹಾಗೆಯೇ ಕನ್ನಡದಲ್ಲಿ ಅಶ್ವಥ್ ಅವರು ಕನ್ನಡ ಚಲನಚಿತ್ರರಂಗದಲ್ಲಿ ಭದ್ರ ಸ್ಥಾನವೊಂದನ್ನು ಗಳಿಸಿಕೊಂಡಿದ್ದರು. ತಾರಾಗಣದಲ್ಲಿ ಅಶ್ವಥ್ ಅವರು ಇದ್ದರೆಂದರೆ ಒಂದು ಪರಿಶುದ್ಧ ಸಂಯಮಪೂರ್ಣ ಅಭಿನಯದ ಚಿತ್ರ ನೋಡುವ ನಿರೀಕ್ಷೆ ಪ್ರೇಕ್ಷಕರಲ್ಲಿರುತ್ತಿತ್ತು. ಬಹುತೇಕ ಸಂದರ್ಭದಲ್ಲಿ ಅವರ ನಿರೀಕ್ಷೆ ಹುಸಿಯಾಗುತ್ತಿರಲಿಲ್ಲ.
ಸರಿ ಸುಮಾರು ರಾಜ್, ಕಲ್ಯಾಣ್, ಉದಯಕುಮಾರ್‌ರವರು ಚಿತ್ರರಂಗ ಪ್ರವೇಶಿಸಿದ ಕಾಲದಲ್ಲೇ ನಾಯಕ ನಟರಾಗಿ ಆಗಮಿಸಿದ ಕೆ.ಎಸ್. ಅಶ್ವಥ್ ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ. ಸರಳತೆ, ಸಜ್ಜನಿಕೆ ಮತ್ತು ಶಿಸ್ತಿಗೆ ಹೆಸರಾದ ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್ ಅವರು ನಾಯಕನಟರಾಗಿ ಹೆಚ್ಚು ಕಾಲ ಉಳಿಯಲಿಲ್ಲ. ಬಹುಬೇಗನೆ ಅವರು ಪೋಷಕ ಪಾತ್ರಗಳಲ್ಲಿ ಭದ್ರವಾದ ನೆಲೆ ಕಂಡುಕೊಂಡರು. ಅಶ್ವಥ್ ಅವರ ಹಿರಿಯರು ಹೊಳೆನರಸೀಪುರ ತಾಲೂಕಿನ ಕರಗದಹಳ್ಳಿಗೆ ಸೇರಿದವರು. ಮೈಸೂರಿನಲ್ಲಿ 25.03.1925ರಲ್ಲಿ ಜನಿಸಿದ ಅಶ್ವಥ್ ಅವರು ಇಂಟರ್‌ಮೀಡಿಯೆಟ್‌ವರೆಗೆ ಶಿಕ್ಷಣ ಪಡೆದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಅವರ ವ್ಯಾಸಂಗಕ್ಕೆ ಸ್ವಾತಂತ್ರ್ಯ ಸಂಗ್ರಾಮ ಅಡ್ಡಬಂತು. ವ್ಯಾಸಂಗ ನಿಲ್ಲಿಸಿದ ನಂತರ ಅವರು ಆಹಾರ ಇಲಾಖೆಯಲ್ಲಿ ಗುಮಾಸ್ತರಾಗಿ, ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಟೆನೋ ಆಗಿ ಉದ್ಯೋಗಿಯಾದರು.

ಆರಂಭದಿಂದಲೂ ಅವರ ಒಲವು ಅಭಿನಯದ ಕಡೆಗಿತ್ತು. ಕಡೆಗೆ, ಆಕಾಶವಾಣಿಯಲ್ಲಿ ಸ್ವಲ್ಪ ಕಾಲ ನಾಟಕ ವಿಭಾಗದಲ್ಲಿದ್ದ ಅವರ ಆತ್ಮೀಯ ಸ್ನೇಹಿತರಾಗಿದ್ದ ಎನ್.ಎಸ್. ವಾಮನರಾಯರು ಅವರಿಗೆ ಅಭಿನಯದಲ್ಲಿ ತರಬೇತಿ ನೀಡಿದರು. ಬಳಿಕ ಅವರು ಹವ್ಯಾಸಿ ರಂಗಭೂಮಿಯಲ್ಲಿ ಎನ್. ಮೂರ್ತಿರಾವ್, ಪರ್ವತವಾಣಿ ಮೊದಲಾದವರ ನಾಟಕಗಳಲ್ಲಿ ಪಾತ್ರ ನಿರ್ವಹಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ರೇಡಿಯೋ ನಾಟಕ ಮತ್ತು ಹವ್ಯಾಸಿ ರಂಗಭೂಮಿಯ ಅನುಭವದಿಂದಲೋ ಏನೋ ಅವರ ಅಭಿನಯ ಅಬ್ಬರವಿಲ್ಲದ ಸಂಯಮಪೂರ್ಣ ಭಾವಾಭಿವ್ಯಕ್ತಿಗೆ ಒಲಿಯಿತೆಂದು ಕಾಣುತ್ತದೆ. ಅದು ಸಿನೆಮಾ ಮಾಧ್ಯಮಕ್ಕೆ ಸೂಕ್ತವಾದ ಅಭಿನಯದ ಮಜಲು. ಆದರೂ ಸರ್ಕಾರಿ ನೌಕರಿ ಮಾಡುತ್ತಾ ಹವ್ಯಾಸಕ್ಕಾಗಿ ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ಅವರು ಚಿತ್ರರಂಗ ಸೇರಿದ್ದು ತೀರಾ ಅನಿರೀಕ್ಷಿತ. ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ಸುಬ್ರಮಣ್ಯಂ ಅವರು ಅಶ್ವಥ್ ಅವರ ಅಭಿನಯವನ್ನು ಮೆಚ್ಚಿ 1955ರಲ್ಲಿ ನಿರ್ಮಾಣವಾದ ‘ಸ್ತ್ರೀರತ್ನ’ ಚಿತ್ರದಲ್ಲಿ ಅವರನ್ನು ನಾಯಕ ಪಾತ್ರದಲ್ಲಿ ಪರಿಚಯಿಸಿದರು. ಅದು ಭಾಗಶಃ ವರ್ಣದಲ್ಲಿದ್ದ ಚಿತ್ರ.
‘ಸ್ತ್ರೀರತ್ನ’ ಚಿತ್ರ ಬಿಡುಗಡೆಯ ನಂತರ ಸರ್ಕಾರಿ ನೌಕರಿ ತೊರೆದು ಅಭಿನಯವನ್ನೇ ವೃತ್ತಿ ಮಾಡಿಕೊಳ್ಳುವ ಬಹುದೊಡ್ಡ ನಿರ್ಧಾರವನ್ನು ಹಿತೈಷಿಗಳ ವಿರೋಧದ ನಡುವೆಯೇ ಅಶ್ವಥ್ ಅವರು ಮಾಡಿದರು. ಆದರೆ ಆ ಕಾಲದಲ್ಲಿ ಈಗಿನಷ್ಟು ಕನ್ನಡ ಚಿತ್ರಗಳೂ ತಯಾರಾಗುತ್ತಿರಲಿಲ್ಲ. ತಯಾರಾದ ಚಿತ್ರಗಳಿಗೆ ಈಗಿರುವಷ್ಟು ದೊಡ್ಡ ಮಾರುಕಟ್ಟೆಯೂ ಇರಲಿಲ್ಲ. ಆದರೂ ಅಭಿನಯವನ್ನೇ ವೃತ್ತಿ ಮಾಡಿಕೊಳ್ಳಲು ಅವರು ಮದರಾಸಿನಲ್ಲಿ ನೆಲೆಸಿದರು. ‘ಸ್ತ್ರೀರತ್ನ’ದ ನಂತರ ‘ಕಚದೇವಯಾನಿ’, ‘ಕೋಕಿಲವಾಣಿ'(1956) ಮತ್ತು ‘ಚಿಂತಾಮಣಿ'(1957) ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದರು. ಅವರ ಮೊದಲ ನಾಲ್ಕು ಚಿತ್ರಗಳಲ್ಲಿ ನಾಯಕಿಯಾಗಿದ್ದವರು ಅದೇ ಅವಧಿಯಲ್ಲಿ ಚಲನಚಿತ್ರರಂಗ ಪ್ರವೇಶಿಸಿದ್ದ ಬಿ. ಸರೋಜಾದೇವಿ. 1958ರಲ್ಲಿ ಬಿಡುಗಡೆಯಾದ ‘ಅಣ್ಣತಂಗಿ’ ಚಿತ್ರದಲ್ಲಿ ಎರಡನೇ ನಾಯಕನಾಗಿ ಅಭಿನಯಿಸಿದ ಅಶ್ವಥ್ ಒಂದು ಡ್ಯೂಯೆಟ್ ಕೂಡ ಹಾಡಿದರು. ಪ್ರಾಯಶಃ ‘ಶಿವಲಿಂಗಸಾಕ್ಷಿ’ ಅವರು ನಾಯಕನಾಗಿ ಅಭಿನಯಿಸಿದ ಕೊನೆಯ ಚಿತ್ರ.
1960ರ ನಂತರ ಅಶ್ವಥ್ ಅವರು ನಿಧಾನವಾಗಿ ಪೋಷಕ ಪಾತ್ರಗಳಿಗೆ ಸರಿದರು. ಇದೊಂದು ಬಗೆಯಲ್ಲಿ ಅವರ ಪ್ರತಿಭೆಯ ಪ್ರಕಾಶನಕ್ಕೆ ಅವಕಾಶ ಮಾಡಿಕೊಟ್ಟಿತೆಂದೇ ಹೇಳಬೇಕು. ಅಲ್ಲಿಂದಾಚೆಗೆ ಅವರು ವಿಭಿನ್ನ ಬಗೆಯ ಪಾತ್ರಗಳಿಗೆ ಜೀವ ತುಂಬುತ್ತಾ ಕನ್ನಡ ಪ್ರೇಕ್ಷಕರಿಗೆ ತೀರಾ ಪರಿಚಿತರಾದರು. ಅಶ್ವಥ್ ಅವರು ಇದ್ದರೆಂದರೆ ಉತ್ತಮ ಅಭಿನಯವಿದೆ ಎಂದೇ ಭಾವಿಸುವಂತಾಯಿತು. ಪಂತುಲು ಅವರ ‘ಗಾಳಿಗೋಪುರ’ ಚಿತ್ರದಿಂದ ಶಾಶ್ವತವಾಗಿ ಪೋಷಕ ಪಾತ್ರಗಳಿಗೆ ಮೀಸಲಾದ ಅಶ್ವಥ್ ಅವರಿಗೆ ಆ ಚಿತ್ರ ಅಪಾರ ಕೀರ್ತಿಯನ್ನು ತಂದುಕೊಟ್ಟಿತು. ಆ ಚಿತ್ರದಲ್ಲಿ ಅವರು ರಾಜ್ ಅವರ ತಂದೆಯ ಪಾತ್ರದಲ್ಲಿ ನಟಿಸಿದರು.

ಆರಂಭದಲ್ಲಿ ಹೆಚ್ಚಾಗಿ ತಯಾರಾಗುತ್ತಿದ್ದ ಭಕ್ತಿ ಪ್ರಧಾನ ಮತ್ತು ಪೌರಾಣಿಕ ಚಿತ್ರಗಳಲ್ಲಿ ಅಶ್ವಥ್ ಅವರು ಹೆಚ್ಚು ಕಡಿಮೆ ‘ನಾರದ’ನ ಪಾತ್ರಕ್ಕೆ ಮೀಸಲಾದರು. (ಮಹಿಷಾಸುರ ಮರ್ದಿನಿ, ಸ್ವರ್ಣಗೌರಿ, ಭಕ್ತಪ್ರಹ್ಲಾದ, ದಶಾವತಾರ, ನಾಗಾರ್ಜುನ ಮುಂತಾದವು). ಸಾಮಾಜಿಕ ಚಿತ್ರಗಳ ಯುಗ ಆರಂಭವಾದ ನಂತರ ಕೌಟುಂಬಿಕ ಚಿತ್ರಗಳೇ ಪ್ರಧಾನವಾಗಿ ತಯಾರಾಗುತ್ತಿದ್ದವು. ಅಂತಹ ಚಿತ್ರಗಳಲ್ಲಿ ತಂದೆ, ಅಣ್ಣ, ಮಲಮಗನಾಗಿ ನೋಯುವ ಪಾತ್ರಗಳು ಅನಿವಾರ್ಯವಾಗಿದ್ದವು. ಆಗ ಅಶ್ವಥ್‌ರವರು ಅಂಥ ಪೋಷಕ ಪಾತ್ರಗಳನ್ನು ನಿರ್ವಹಿಸಲು ಬೇಡಿಕೆಯ ನಟರಾದರು.
ಪಾತ್ರ ಯಾವುದೇ ಇರಲಿ, ಅದನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಅದರ ಅಂತರಂಗವನ್ನು ಶೋಧಿಸಿ ಅಭಿವ್ಯಕ್ತಿಗೊಳಿಸುವ ಕಲೆ ಅಶ್ವಥ್ ಅವರಿಗೆ ದಕ್ಕಿತ್ತು. ಆದುದರಿಂದಲೇ ಕುಟುಂಬದ ಯಜಮಾನ, ಒಲವಿನ ಸೋದರ, ಜವಾಬ್ದಾರಿಯ ತಂದೆ ಮುಂತಾದ ಸಜ್ಜನಿಕೆಯ ಪಾತ್ರಗಳ ಜೊತೆಗೆ ಖಳನಾಯಕ, ಹಾಸ್ಯ ಪಾತ್ರಗಳಲ್ಲೂ ಅವರು ಸಹಜಾಭಿನಯ ನೀಡಿದರು.
ಅಶ್ವಥ್ ಅವರ ಪ್ರತಿಭೆಯ ಅಭಿವ್ಯಕ್ತಿಗೆ ವಿಶಾಲ ಹರಹಿನ ಪಾತ್ರಗಳೇ ಆಗಬೇಕೆಂಬ ಕಟ್ಟುಪಾಡು ಇರಲಿಲ್ಲ. ಸಣ್ಣ ಪಾತ್ರವೂ ಚಿರಕಾಲ ನೆನಪಿನಲ್ಲುಳಿಯುವಂತೆ ಮಾಡಬಲ್ಲ ಮಾಂತ್ರಿಕ ಶಕ್ತಿ ಅವರಿಗಿತ್ತು. ‘ಶುಭ ಮಂಗಳ’ ಚಿತ್ರದ ಗೂರಲು ರೋಗದ ವೈದ್ಯನ ಪಾತ್ರದಲ್ಲಿನ ಅವರ ಅಭಿನಯ ಈ ಮಾತಿಗೆ ಸಾಕ್ಷಿ.
ಇದನ್ನು ಓದಿದ್ದೀರಾ?: ತೆರೆಗೆ ಬಂತು ಎಮರ್ಜೆನ್ಸಿ | ಪ್ರೊಪಗಾಂಡಾ ಸಿನಿಮಾಗಳಿಗೆ ಸುಗ್ಗಿ ಕಾಲ!
ನಮ್ಮ ಪೋಷಕ ಪಾತ್ರಗಳು ಬಹುತೇಕ ಪಾತ್ರ ಪೋಷಣೆಯಿಲ್ಲದೆ ಸೊರಗುವುದೇ ಜಾಸ್ತಿ. ಆದರೆ ನಟರಾದ ಟಿ.ಎನ್. ಬಾಲಕೃಷ್ಣ, ನರಸಿಂಹರಾಜು ಮತ್ತು ಅಶ್ವಥ್ ಅವರ ವಿಷಯದಲ್ಲಿ ಹಾಗಾಗಲಿಲ್ಲ. ಅವರ ಅಭಿನಯ ಪ್ರತಿಭೆಗೆ ತಕ್ಕಂತೆ ಸತ್ವಪೂರ್ಣ ಪಾತ್ರಗಳನ್ನು ನಿರ್ದೇಶಕರು ರೂಪಿಸಿ ಅವರಲ್ಲಿನ ಪ್ರತಿಭಾ ಪ್ರಕಾಶನಕ್ಕೆ ಅನುವು ಮಾಡಿಕೊಟ್ಟರು. ಕನ್ನಡಿಗರ ಪಾಲಿಗೆ ಇದು ಪುಣ್ಯ ವಿಶೇಷವೇ ಸರಿ. ವಿಶೇಷವಾಗಿ ಎರಡನೇ ತಲೆಮಾರಿನ ನಿರ್ದೇಶಕರಾದ ಪುಟ್ಟಣ್ಣ, ಸಿದ್ಧಲಿಂಗಯ್ಯ, ವೈ.ಆರ್. ಸ್ವಾಮಿ, ದೊರೆ ಭಗವಾನ್‌ರವರಿಗೆ ಅಶ್ವಥ್ ಅಚ್ಚುಮೆಚ್ಚಿನವರಾಗಿದ್ದರು.

ಅಶ್ವಥ್ ಅವರು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಶ್ವಥ್‌ರವರು ಅಭಿನಯದ ಚಿರಕಾಲ ನೆನಪಿನಲ್ಲಿ ಉಳಿಯುವ ಪಾತ್ರಗಳು ಹಲವು ಚಿತ್ರಗಳಲ್ಲಿವೆ. ‘ಬೆಳ್ಳಿಮೋಡ’ ಚಿತ್ರದ ಸದಾಶಿವರಾಯರ ಪಾತ್ರ ಅಂಥದೊಂದು. ಹೆಂಡತಿ ಮತ್ತು ಒಬ್ಬಳೇ ಮಗಳಿರುವ ಸುಖದ ಸಂಸಾರದಲ್ಲಿ ತುಂಟತನವನ್ನೇ ಮೈಗೂಡಿಸಿಕೊಂಡ ತಂದೆಯಾಗಿ, ಹೆಂಡತಿ ಸಾಯುವಾಗ ಹಳೆಯ ತುಂಟಲೋಕಕ್ಕೆ ಜಾರುವಾಗಿನ ಸನ್ನಿವೇಶದಲ್ಲಿ ಅವರ ಅಭಿನಯ ಅಮೋಘ ಎನ್ನುವ ಮಟ್ಟದಲ್ಲಿದೆ. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಅಶ್ವಥ್ ಅವರು ಪಾತ್ರದಲ್ಲೇ ಲೀನವಾಗಿದ್ದರು. ಸಂತಾನವಿಲ್ಲದ ಮೇಷ್ಟ್ರು ತನ್ನ ಪ್ರೀತಿಯ ತಂಟೆಕೋರ ವಿದ್ಯಾರ್ಥಿಯೊಬ್ಬನೊಡನೆ ಬೆಳೆಸಿಕೊಳ್ಳುವ ಮಾನವೀಯ ಸಂಬಂಧಗಳು; ಅವುಗಳಿಂದ ಎದುರಾಗುವ ಸಾಮಾಜಿಕ ತೊಡರುಗಳು ಮತ್ತು ಸಾಮಾಜಿಕ ಸಂಬಂಧಗಳ ಸಿಕ್ಕು ಬಿಡಿಸುವ ಯತ್ನದಲ್ಲಿ ದುರಂತ ಕಾಣುವ ಪಾತ್ರವನ್ನು ಅಶ್ವಥ್ ನಿರ್ವಹಿಸಿದ ರೀತಿ ಬೆರಗುಗೊಳಿಸಿತ್ತು. ‘ನಾಗರಹಾವು’ ಚಿತ್ರದ ಯಶಸ್ಸಿಗೆ ಅಶ್ವಥ್‌ರ ಅಭಿನಯವೂ ಸಾಥಿಯಾಗಿತ್ತು.
ಅಂಥ ಮತ್ತೊಂದು ಮಹತ್ವದ ಪಾತ್ರ ‘ಸರ್ವಮಂಗಳ’ದ ಉಬ್ಬು ಹಲ್ಲಿನ ಸುಬ್ಬರಾಯನ ಪಾತ್ರ. ತನಗಿಂತಲೂ ಕಿರಿಯಳಾದ ಸರ್ವಮಂಗಳೆಯನ್ನು ಬಯಸಿ ಮದುವೆಯಾಗಿ ಅವಳನ್ನು ಅಪಾರವಾಗಿ ಪ್ರೀತಿಸುವ ಕುರೂಪಿ ಸುಬ್ಬರಾಯ ಕೊನೆಗೆ ಅವಳಿಗಾಗಿ ಮರುಗುವ, ನಟರಾಜ-ಮಂಗಳೆಯರ ನಡುವಿನ ಸಂಬಂಧ ತಿಳಿದೂ ಪರಿತಪಿಸುವ, ಅಸಹಾಯಕ ವ್ಯಕ್ತಿಯ ಪಾತ್ರವನ್ನು ಅಶ್ವಥ್ ಅವರು ನಿಭಾಯಿಸಿರುವ ರೀತಿಯೇ ಅಚ್ಚರಿ ಮೂಡಿಸುತ್ತದೆ. ಅಶ್ವಥ್‌ರವರ ಸುಂದರ ಮುಖವನ್ನು ಕುರೂಪಿ ಪಾತ್ರಕ್ಕೆ ಸರಿಹೊಂದಿಸಲು ಹೆಣಗಾಡುತ್ತಿರುವಾಗ ಉಬ್ಬುಹಲ್ಲನ್ನು ಸ್ವತ: ಅಶ್ವಥ್‌ರವರೇ ಅಳವಡಿಸಿಕೊಂಡರಂತೆ! ಪಾತ್ರದ ಸರ್ವ ಲಕ್ಷಣವನ್ನು ಅರಿಯಲು ಅಶ್ವಥ್‌ರವರು ಪಡುತ್ತಿದ್ದ ಪ್ರಯತ್ನಕ್ಕೆ ಅದು ಸಾಕ್ಷಿ. ‘ಗೆಜ್ಜೆಪೂಜೆ’ ಚಿತ್ರದಲ್ಲಿ ಸಂಪ್ರದಾಯ ಕುಟುಂಬದ ಯಜಮಾನವಾಗಿಯೂ ಮಾನವೀಯ ಸಂಬಂಧಗಳಿಗೆ ತುಡಿವ ವ್ಯಕ್ತಿಯಾಗಿ ಅಶ್ವಥ್ ನೀಡಿದ ಅಭಿನಯವೂ ಅಷ್ಟೆ ಸಂಯಮಪೂರ್ಣವಾಗಿತ್ತು.
ಅಶ್ವಥ್‌ರವರ ಪ್ರತಿಭೆಯ ಮತ್ತೊಂದು ಮುಖ ಕನ್ನಡಿಗರಿಗೆ ಪರಿಚಯವಾದದ್ದು ‘ಕಸ್ತೂರಿ ನಿವಾಸ’ ಚಿತ್ರದಲ್ಲಿ. ಒಂದೆಡೆ ರಾಜ್, ಮತ್ತೊಂದೆಡೆ ಜಯಂತಿ ಅವರು ಮೇರು ಮಟ್ಟದ ಅಭಿನಯವನ್ನು ಆ ಚಿತ್ರದಲ್ಲಿ ನೀಡಿದ್ದರೆ, ಅಶ್ವಥ್ ಸೇವಕ ರಾಮಯ್ಯನ ಪಾತ್ರದ ಮೂಲಕ ತಮ್ಮ ಸಹಜಾಭಿನಯದಿಂದಲೇ ಅಭಿನಯಕ್ಕೊಂದು ಹೊಸ ಭಾಷ್ಯ ಬರೆದರು. ‘ಕಸ್ತೂರಿ ನಿವಾಸ’ದ ಏಳು-ಬೀಳುಗಳಿಗೆ ಸಾಕ್ಷಿಯಾಗುತ್ತಾ, ತನ್ನ ಯಜಮಾನನ ದುರಂತದ ಹಾದಿಯನ್ನು ಹಿಂಬಾಲಿಸುತ್ತಾ ಸಾಗುವ ರಾಮಯ್ಯನ ಸಂಕೀರ್ಣ ಮನಸ್ಥಿತಿಗೆ ಅಶ್ವಥ್ ಕನ್ನಡಿ ಹಿಡಿದಿದ್ದರು. ಕಡತ ಎತ್ತಿಕೊಂಡು ನಡುಬಗ್ಗಿಸಿ ಯಜಮಾನನನ್ನು ಹಿಂಬಾಲಿಸುತ್ತಾ, ಯಜಮಾನನಿಗೆ ಹಾಲು ನೀಡಿ ಅವನ ಅಂತರಂಗವನ್ನು ಅರಿಯಲು ತಣ್ಣಗೆ ಪ್ರಯತ್ನಿಸುತ್ತಾ ಸಂಯಮಮೂರ್ತಿಯಾದ ರಾಮಯ್ಯ, ಯಜಮಾನನ ಸಾವಿನ ನಂತರ ಅಬ್ಬರಿಸುವ ಪರಿ ನಿಜಕ್ಕೂ ಪಾತ್ರವೊಂದರ ಒಳತೋಟಿಗಳನ್ನು ಸಮರ್ಥವಾಗಿ ಬಿಂಬಿಸುವಷ್ಟು ಸಶಕ್ತವಾಗಿವೆ. ‘ಸರ್ವಮಂಗಳ’ ಚಿತ್ರದ ಕುರೂಪಿ ಸುಬ್ಬರಾಯನ ಪಾತ್ರ ಹಾಗೂ ‘ಉಯ್ಯಾಲೆ’ಯ ಪುಸ್ತಕದ ಹುಳು ಶೇಷಗಿರಿ ಅವರ ಅಪ್ರತಿಮ ಪ್ರತಿಭೆಗೆ ಸಾಕ್ಷಿಯಾದ ಇನ್ನೆರಡು ಪಾತ್ರಗಳು. ಹಾಗೆಯೆ ವಂಶ ಪ್ರತಿಷ್ಠೆಗಾಗಿ ಕೊಲೆ ಮಾಡಿ ಬಳಿಕ ಪಾಪಪ್ರಜ್ಞೆಯಲ್ಲಿ ನೋಯುವ ತಂದೆ ಮತ್ತು ನ್ಯಾಯಾಧೀಶನಾಗಿ ಕ್ರಮವಾಗಿ ‘ಸೀತಾ’ ಮತ್ತು ‘ನ್ಯಾಯವೇ ದೇವರು’ ಚಿತ್ರಗಳಲ್ಲಿ ಅಶ್ವಥ್ ಅವರು ನೀಡಿರುವ ಮನೋಜ್ಞ ಅಭಿನಯ ಮರೆಯುವುದು ಸಾಧ್ಯವೆ?

ಅರವತ್ತು ಎಪ್ಪತ್ತು ಎಂಬತ್ತರ ದಶಕದ ಚಲನಚಿತ್ರಗಳನ್ನು ನೋಡುತ್ತಾ ಬೆಳೆದ ಪ್ರೇಕ್ಷಕರಿಗೆ ಬೇರೆ ಬೇರೆಯ ನಾಯಕ – ನಾಯಕಿಯರ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣಸುತ್ತಿದ್ದ ಮೂವರು ನಟರೆಂದರೆ ಟಿ.ಎನ್. ಬಾಲಕೃಷ್ಣ, ಟಿ.ಆರ್. ನರಸಿಂಹರಾಜು ಮತ್ತು ಕೆ.ಎಸ್. ಅಶ್ವಥ್. ಈ ಮೂವರು ಮಹಾಮಹಿಮ ಕಲಾವಿದರಲ್ಲಿ ನರಸಿಂಹರಾಜು ಅವರ ವೃತ್ತಿಯ ಅವಧಿ ಕಡಿಮೆಯಿತ್ತು, ನಿಜ. ಆದರೆ ಪೋಷಕ ಮತ್ತು ಹಾಸ್ಯಪಾತ್ರಗಳಲ್ಲಿ ವಿಜೃಂಭಿಸುತ್ತಿದ್ದ ಈ ಮೂವರು ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಕಲಾವಿದರ ಅಭಿನಯ ನೈಪುಣ್ಯ ಮತ್ತು ರಂಜನೆಯ ಸೀಮೆಯನ್ನು ವಿಸ್ತರಿಸಿ ಚಿತ್ರವೊಂದರ ಯಶಸ್ಸಿನಲ್ಲಿ ಭಾಗಿಯಾಗುತ್ತಿದ್ದರು. ಅದರಲ್ಲೂ ಅಶ್ವಥ್ ಅವರು ಗಂಭೀರ ಪಾತ್ರಗಳಲ್ಲಿಯೇ ಪ್ರೇಕ್ಷಕರನ್ನು ಹಿಡಿದಿಡುತ್ತಿದ್ದರು. ಮನೆಯ ಹಿರಿಯಣ್ಣನಾಗಿ, ತಂದೆಯಾಗಿ, ನೆರೆಮನೆಯ ಹಿರಿಯ ಸಜ್ಜನನಾಗಿ, ಗುರುವಾಗಿ ಅಥವಾ ಅಜ್ಜನಾಗಿ ತನಗಿಂತ ಕಿರಿಯರ ಶ್ರೇಯೋಭಿವೃದ್ಧಿಯನ್ನು ಬಯಸುವ ವ್ಯಕ್ತಿಯಾಗಿ ಅಶ್ವಥ್ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. ಅವರು ಮಂತ್ರಿಯ ಪಾತ್ರ ಮಾಡುತ್ತಿದ್ದರೇ ಹೊರತು ರಾಜನ ಪಾತ್ರವಲ್ಲ. ಅಕಸ್ಮಾತ್ ರಾಜನ ಪಾತ್ರ ಮಾಡಿದರೂ ಚಿತ್ರದ ನಾಯಕ ಯುವರಾಜನೋ ಅಥವಾ ಇನ್ನೊಂದು ರಾಜ್ಯದ ರಾಜನೋ ಆಗಿರುತ್ತಿದ್ದ. ನಿರ್ದೇಶಕರು ಅಶ್ವಥ್ ಅವರಿಗೆ ಸದಾ ಅಂಥ ಪಾತ್ರವನ್ನೇ ಮೀಸಲಿಡುತ್ತಿದ್ದರು. ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವುದು ಸಹ ಅಶ್ವಥ್ ಅವರ ಅಂಥ ಪಾತ್ರಗಳೇ!
ಅಶ್ವಥ್ ಅವರು ಇಂಥ ಪಾತ್ರಗಳಲ್ಲೇ ಅಭಿನಯಿಸಿರುವುದಕ್ಕೆ ಅಥವಾ ಅಂಥ ಪಾತ್ರಗಳನ್ನೇ ನಿರ್ದೇಶಕರು ಹೆಚ್ಚು ನೀಡಿರುವುದಕ್ಕೆ ಕಾರಣಗಳೇನಿರಬಹುದು? ಉತ್ತರ ಅಷ್ಟು ಸರಳವಲ್ಲ, ನಿಜ. ಆದರೆ ಅವರ ಬಹುತೇಕ ಇಂಥ ಪಾತ್ರಗಳನ್ನು ಮರು ಅವಲೋಕನಕ್ಕೆ ತೆಗೆದುಕೊಂಡಾಗ ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರಕ್ಕೂ ಅವರು ತಂದುಕೊಟ್ಟ ‘ಘನತೆ’ ಕಾರಣವಿರಬಹುದು ಎನಿಸುತ್ತದೆ. ಛಿದ್ರವಾದ ತನ್ನ ಮಗಳ ಸಂಸಾರವನ್ನು ಕಂಡು ಅಸಹಾಯಕನಾಗುವ ತಂದೆಯ ಮನಸ್ಥಿತಿ (ಶರಪಂಜರ); ತಮ್ಮನ ಅನುಚಿತ ವರ್ತನೆಯಿಂದ ಕಂಗೆಟ್ಟ ಅಣ್ಣ (ಕರುಣೆಯೆ ಕುಟುಂಬದ ಕಣ್ಣು); ಹಣದಾಸೆಗೆ ಬಿದ್ದ ಮಗ (ಸಂಧ್ಯಾರಾಗ); ಮಮತೆಯನ್ನು ಧಾರೆಯೆರೆದು ಬೆಳೆಸಿದ ಸಾಕುಮಗ ತೊರೆದುಹೋಗುವ ಸಂದರ್ಭ (ಬಂಗಾರದ ಪಂಜರ); ಅಗಲಿದ ಮಕ್ಕಳನ್ನು ಮತ್ತೆ ಕೂಡಿಕೊಳ್ಳಲು ಯತ್ನಿಸುವ ತಂದೆ(ತಂದೆ ಮಕ್ಕಳು); ಮಗನಿಂದ ತ್ಯಜಿಸಲ್ಪಟ್ಟ ತಂದೆಯ ದೈನ್ಯತೆ(ಮಗ ಮೊಮ್ಮಗ)- ಇಂಥ ಅನೇಕ ಭಾವ ತೀವ್ರತೆಯ ಸನ್ನಿವೇಶಗಳಲ್ಲಿ ಅಶ್ವಥ್ ಅವರು ಪಾತ್ರದ ವ್ಯಕ್ತಿತ್ವವನ್ನು ಕುಗ್ಗಿಸದೆ ಘನತೆಯಿಂದ ನಿರ್ವಹಿಸುವ ರೀತಿಯು ಪ್ರೇಕ್ಷಕರಲ್ಲಿ ಸಹಾನುಭೂತಿಯುಕ್ಕುವಂತೆ ಮಾಡುತ್ತದೆ. ಅಬ್ಬರಿಸದೆ, ನೋವನ್ನು ನುಂಗಿ ಆಸೆಯ ಭವಿಷ್ಯದತ್ತ ಮೊಗಮಾಡುವ ವ್ಯಕ್ತಿತ್ವವೊಂದನ್ನು ಅವರು ತಮ್ಮ ಪಾತ್ರದಲ್ಲಿ ಸೃಷ್ಟಿಸುತ್ತಾರೆ. ಸಂಯಮವೇ ಹಿಮಾಲಯವಾದ ಮುಖಭಾವ, ಕರುಣೆಯನ್ನು ತುಂಬಿಕೊಂಡ ಕಣ್ಣು ಮತ್ತು ಭಾವಪೂರ್ಣ ದೇಹಭಾಷೆಯಿಂದ ಅಶ್ವಥ್ ಅವರು ಪಾತ್ರಕ್ಕೊಂದು ಆರಾಧಿಸುವ ಘನತೆಯನ್ನು ತಂದುಕೊಡುತ್ತಾರೆ.
ಇದನ್ನು ಓದಿದ್ದೀರಾ?: ಎಂಟಿವಿ, ಮನೋರಥಂಗಳ್ ಮತ್ತು ಮಲಯಾಳಂ
ಅಶ್ವಥ್ ಅವರು ಮಧ್ಯಮವರ್ಗದಲ್ಲಿ ನಡೆಯುವ ಕಥನಗಳಲ್ಲಿ ಹಿರಿಯನ ವಿವಿಧ ಅವತಾರಗಳಲ್ಲಿ ಅಥವಾ ಬಡತನದ ಕುಟುಂಬದ ನೊಂದ ಹಿರಿಯನ ಪಾತ್ರಗಳಲ್ಲಿ ಹೆಚ್ಚು ಟೈಪ್‌ಕ್ಯಾಸ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡದ್ದು ನಿಜ. ಆದರೆ ಅಶ್ವಥ್ ಅವರು ನಿರ್ವಹಿಸಿದ ಇಂಥ ಸ್ಟೀರಿಯೋಟೈಪ್ ಪಾತ್ರಗಳ ಹಿನ್ನೆಲೆಗೂ ಒಂದು ಸಾಂಸ್ಕೃತಿಕ ಮಹತ್ವವಿದೆ. ಅದು ಬಡತನ, ಅಡೆತಡೆಗಳ ನಡುವೆಯೂ ವ್ಯಕ್ತಿ ಘನತೆಗೆ ಕುಂದು ಬಾರದಂತೆ ಬದುಕುವ ಹಂಬಲದ ಪಾತ್ರಗಳು. ಬಡತನ ಶಾಪವಲ್ಲ: ನಮ್ಮ ನೈತಿಕ ಸ್ಥೈರ್ಯವನ್ನು ಪರೀಕ್ಷಿಸಲು ಬರುವ ದಾಳಿಗಳು ಎಂದು ಬಗೆದು ಎದುರಿಸುವ ಪಾತ್ರಗಳು. ಅನ್ಯಾಯದ ನಡುವೆಯೂ ಮರ್ಯಾದೆಯಿಂದ ಬಾಳಲು ಯತ್ನಿಸಿ ಸಫಲವಾಗುವ ಪಾತ್ರಗಳು. ಸೀಮಿತ ಸಂಪನ್ಮೂಲ, ಸೀಮಿತ ಶಕ್ತಿಯ ನಡುವೆಯೂ ತಾನು, ತನ್ನನ್ನು ಅವಲಂಬಿಸಿದ ಮತ್ತು ನೆರೆಹೊರೆಯವರನ್ನು ಸಹ ಸಂತಸದಿಂದ ಇರಿಸಬೇಕೆಂಬ ಹಂಬಲದ ಪಾತ್ರಗಳು. ಭಾರತದ ಹಳ್ಳಿ ಪಟ್ಟಣಗಳಲ್ಲಿ ಇಂಥ ಹಂಬಲದ ಕೋಟ್ಯಾನುಕೋಟಿ ಜನರನ್ನು ಪ್ರತಿನಿಧಿಸಿದ ಪಾತ್ರಗಳಿಂದಲೇ ಅಶ್ವಥ್ ಅವರು ಪ್ರೇಕ್ಷಕರ ಭಾವಭಿತ್ತಿಯಲ್ಲಿ ಶಾಶ್ವತವಾಗಿ ನೆಲೆಗೊಂಡು, ಪಾಲಿಗೆ ಮರೆಯಬಾರದ ನಟರಾಗಿ ಉಳಿದಿರುವುದು.
ಪ್ರೇಕ್ಷಕರೊಡನೆ ನೇರವಾಗಿ ಸಂವಾದಕ್ಕಿಳಿಯುವಷ್ಟು ಸಹಜವಾಗಿ ಪಾತ್ರನಿರ್ವಹಿಸುತ್ತಿದ್ದ ಅಶ್ವಥ್‌ರವರ ಪ್ರತಿಭೆಗೆ ಸವಾಲಾಗಬಲ್ಲ ಪಾತ್ರಗಳ ಸೃಷ್ಟಿ ಕೊನೆಕೊನೆಗೆ ಕಡಿಮೆಯಾಗಿ ಹೋಯಿತು. ಪ್ರೇಕ್ಷಕರ ಅಭಿರುಚಿಯಂತೆಯೇ ನಿರ್ದೇಶಕರು ಪೋಷಕ ಪಾತ್ರಗಳನ್ನು ಕಡೆಗಣಿಸಿದರು. ನಾಯಕ-ನಾಯಕಿಯರೇ ವಿಜೃಂಭಿಸತೊಡಗಿದ ನಂತರ ಅಶ್ವಥ್‌ರವರಂಥ ಅಭಿಜಾತ ನಟರು ಬೇಡವಾದರು. ಕೊನೆಗೆ ಚಲನಚಿತ್ರರಂಗದ ವರ್ತನೆಯಿಂದ ಬೇಸತ್ತು ನಾಲ್ಕು ದಶಕಗಳ ಚಿತ್ರರಂಗದ ಕರಳುಬಳ್ಳಿಯನ್ನು 1995ರಲ್ಲಿ ಕತ್ತರಿಸಿಕೊಂಡರು. ಪಾತ್ರ ಮತ್ತು ಬದುಕಿನಲ್ಲಿ ‘ನಮ್ಮವರೇ’ ಆಗಿದ್ದ, ನಮ್ಮ ಸಂಸ್ಕೃತಿಯ ವಕ್ತಾರನಂತಿದ್ದ ಅಶ್ವಥ್‌ರವರ ನಿರ್ಧಾರ ಕನ್ನಡ ಚಿತ್ರರಂಗ ನಮ್ಮತನದಿಂದ ದೂರ ಸರಿದಿದ್ದ ವಿದ್ಯಮಾನಕ್ಕೆ ಸಂಕೇತವೆನಿಸಿತ್ತು.
ಅಶ್ವಥ್ ಅವರು ಚಿತ್ರರಂಗದಂದ ದೂರವಾದರೂ ಅವರ ಆತ್ಮೀಯರಾಗಿದ್ದ ಡಾ. ರಾಜ್ ಅವರ ಒತ್ತಾಯಕ್ಕೆ ಕಟ್ಟುಬಿದ್ದು ಮತ್ತೆ ಅಭಿನಯಿಸಲು ಪ್ರಾರಂಭಿಸಿದರೂ ಹೆಚ್ಚು ದಿನ ಮುಂದುವರೆಸಲಿಲ್ಲ. ಸರಳತೆ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಬದುಕು ಸಾಧಿಸಿ, ವೃತ್ತಿಯಲ್ಲಿ ಘನತೆ ಮೆರೆದ ಅವರು 2007ರಿಂದ ಅಭಿನಯಕ್ಕೆ ಕೊನೆ ಹೇಳಿದರು. 1955ರಿಂದ 2007ರವರೆಗೆ ಸುಮಾರು 275 ಚಿತ್ರಗಳಲ್ಲಿ ನಟಿಸಿದ ಅಶ್ವಥ್ ಅವರ ವೃತ್ತಿಜೀವನದ ಮತ್ತೊಂದು ಮಹತ್ವದ ಸಂಗತಿಯೆಂದರೆ ಮೇರುನಟ ರಾಜ್ ಅವರ ಜೊತೆಯಲ್ಲಿ 94 ಚಿತ್ರಗಳಲ್ಲಿ ತೆರೆಯನ್ನು ಹಂಚಿಕೊಂಡದ್ದು.

ತಮಗಿಂತ ಕಿರಿಯವರಾದ ರಾಜ್ ಅವರ ಅಗಲಿಕೆ ಅವರಿಗೆ ಅಪಾರ ನೋವು ಕೊಟ್ಟಿತ್ತು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ, ಕಲಾವಿದರೊಬ್ಬರ ಜೀವಮಾನ ಸಾಧನೆಯನ್ನು ಗೌರವಿಸಲು ನೀಡುವ ‘ಡಾ. ರಾಜಕುಮಾರ್ ಪ್ರಶಸ್ತಿ’ಯ ಮೊದಲ ಪುರಸ್ಕಾರಕ್ಕೆ (1993-94)ಅಶ್ವಥ್ ಅವರನ್ನೇ ಆರಿಸಿದ್ದು ಔಚಿತ್ಯಪೂರ್ಣವಾಗಿತ್ತು. ಅವರು ಕಲಾರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾಲಯವು 2008ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದ್ದು ಸಹ ಅರ್ಥಪೂರ್ಣವಾಗಿತ್ತು.
ತಮ್ಮ ವಿಶ್ರಾಂತ ಜೀವನವನ್ನು ಮೈಸೂರಿನಲ್ಲಿಯೇ ಕಳೆದ ಅಶ್ವಥ್ ಅವರು 2011ರ ಜನವರಿ ಆದಿಯಲ್ಲಿ ಕಾಶಿಗೆ ತೆರಳಿ ವಾಪಸ್ಸು ಬಂದ ನಂತರ ಅಸ್ವಸ್ಥರಾದರು. ಜನವರಿ 18ರ ಮೂಂಜಾನೆಯಲ್ಲಿ ಅವರು ಕೊನೆಯುಸಿರೆಳೆದರು. ಅಲ್ಲಿಗೆ ಕನ್ನಡ ಚಲನಚಿತ್ರರಂಗದ ಉಜ್ವಲ ಅಧ್ಯಾಯವೊಂದು ತೆರೆಯ ಮರೆಗೆ ಸರಿಯಿತು.

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.




