ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ತಾವು ಸಿದ್ಧಪಡಿಸಿದ ಭಾಷಣ ಓದಿರುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ನಡೆದ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಾವು ಸಿದ್ಧಪಡಿಸಿದ ಎರಡು ಸಾಲುಗಳ ಭಾಷಣ ಓದಿ ಹೊರನಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
“ನೂತನ ಸರ್ಕಾರ ರಚನೆಯಾದಾಗ ಹಾಗೂ ವಿಶೇಷ ಅಧಿವೇಶನಗಳ ಸಂದರ್ಭಗಳಲ್ಲಿ ಜಂಟಿ ಸದನವನ್ನು ಉದ್ದೇಶಿಸಿ ಸಚಿವ ಸಂಪುಟ ಸಿದ್ದಪಡಿಸಿದ ಭಾಷಣ ಮಾಡಬೇಕಿರುವುದು ಸಂವಿಧಾನದ ನಿಯಮ ಹಾಗೂ ರಾಜ್ಯಪಾಲರ ಕರ್ತವ್ಯ. ಸಂವಿಧಾನದ 176 ಹಾಗೂ 163ನೇ ವಿಧಿಗಳು ಈ ಬಗ್ಗೆ ಸ್ಪಷ್ಟವಾಗಿ ಹೇಳುತ್ತವೆ. ರಾಜ್ಯಪಾಲರು ತಾವೇ ತಯಾರಿಸಿದ ಭಾಷಣಗಳನ್ನು ಓದುವಂತಿಲ್ಲ” ಎಂದು ಸಿಎಂ ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರು ಕೇಂದ್ರದ ಕೈಗೊಂಬೆಯಲ್ಲ- ಆಯಾ ರಾಜ್ಯದ ಜನಾದೇಶ ಧಿಕ್ಕರಿಸುವ ನಡೆ ಸಂವಿಧಾನಬಾಹಿರ
“ಸರ್ಕಾರದ ಸಚಿವ ಸಂಪುಟ ಏನು ಸಿದ್ಧಪಡಿಸುತ್ತದೆಯೋ ಆ ಭಾಷಣವನ್ನು ಓದಲೇಬೇಕು. ಇದು ನೂತನ ವರ್ಷದ ಮೊದಲನೇ ಜಂಟಿ ಅಧಿವೇಶನ. ಸರ್ಕಾರ ವಿಶೇಷ ಅಧಿವೇಶನ ಕೂಡ ಕರೆಯಲಾಗಿದೆ. ಮನರೇಗ ಯೋಜನೆಯನ್ನು ರದ್ದು ಮಾಡಿ ವಿ ಬಿ ರಾಮ್ ಜಿ ಎಂದು ಬದಲಿಸಲಾಗಿದೆ. ಇದಕ್ಕೆ ನಮ್ಮ ಸರ್ಕಾರದ ತೀವ್ರ ವಿರೋಧವಿದೆ. ಈ ಯೋಜನೆಯಲ್ಲಿ ಮಹಾತ್ಮ ಗಾಂಧಿ ಹೆಸರು ತೆಗೆದು ಹಾಕಲಾಗಿದೆ. ಈ ಬಗ್ಗೆ ಹೋರಾಟ ನಡೆಸುವ ಸಲುವಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ” ಎಂದು ಹೇಳಿದರು.
“20 ವರ್ಷಗಳ ಹಿಂದೆ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ರಾಜ್ಯ ನಿರ್ದೇಶಿಕ ತತ್ವಗಳ ಅಡಿಯಲ್ಲಿ ಕೆಲಸದ ಹಕ್ಕು, ಶಿಕ್ಷಣದ ಹಕ್ಕು, ಮಾಹಿತಿಯ ಹಕ್ಕು, ಜೀವಿಸುವ ಹಕ್ಕುಗಳಡಿ ಮನರೇಗ ಕಾಯ್ದೆಯನ್ನು ಜಾರಿಗೊಳಿಸಿದ್ದರು. ಹಳ್ಳಿಗಾಡಿನಲ್ಲಿರುವ ಬಡ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಕಾಲ ಉದ್ಯೋಗವನ್ನು ನೀಡಬೇಕೆನ್ನುವುದು ಇದರ ಉದ್ದೇಶವಾಗಿತ್ತು” ಎಂದು ಸಿಎಂ ವಿವರಿಸಿದರು.
“ದಲಿತರು, ಕಾರ್ಮಿಕರು, ಸಣ್ಣ ರೈತರು, ಬಡವರು ಮನರೇಗ ಯೋಜನೆಯಡಿ ಉದ್ಯೋಗ ನೀಡಲಾಗುತ್ತದೆ. ಶೇ. 53 ಮಹಿಳೆಯರು, ಶೇ.28 ದಲಿತರು ಈ ಯೋಜನೆಯಡಿ ಉದ್ಯೋಗ ಪಡೆದಿದ್ದರು. ಸ್ಥಳೀಯ ಗ್ರಾಮ ಪಂಚಾಯಿತಿ ಮನರೇಗ ಉದ್ಯೋಗದ ಕ್ರಿಯಾ ಯೋಜನೆಯನ್ನು ನಿರ್ಧರಿಸುತ್ತಿದ್ದವು. ಆದರೆ ಈಗ ಮಹತ್ವಾಕಾಂಕ್ಷಿ ಯೋಜನೆಯನ್ನು ರದ್ದು ಮಾಡಲಾಗಿದೆ. ಈಗ ಜಾರಿಗೊಳಿಸಲಾಗಿರುವ ವಿಬಿ ರಾಮ್‌ಜಿ ಕಾಯ್ದೆ ಅನ್ವಯ ಕೇಂದ್ರವೇ ಉದ್ಯೋಗ ಎಲ್ಲಿ ನೀಡಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಕೇಂದ್ರದ ನೂತನ ಕಾಯ್ದೆಯಿಂದ ಬಹುತೇಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ”ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.





