ನಗರದಲ್ಲಿ ಸಾಮಾನ್ಯವಾಗಿ ಬಡವರು, ಮಧ್ಯಮ ವರ್ಗದವರು, ಶ್ರೀಮಂತರು, ನಿರ್ಗತಿಕರು, ಸೂರಿಲ್ಲದೆ ದಿನದೂಡುವವರು, ಪ್ರತಿದಿನದ ಅನ್ನಕ್ಕಾಗಿ ಪರದಾಡುವವರು ಸೇರಿದಂತೆ ಎಲ್ಲರ ಬದುಕು ನಡೆಯುತ್ತಿರುತ್ತದೆ. ಬದುಕೆಂಬುದು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ ಎನುವುದಕ್ಕೆ ಜಗತ್ತಿನ ಮಹಾನಗರಗಳಲ್ಲಿರುವ ಜನರೇ ಸಾಕ್ಷಿ. ಇದಕ್ಕೆ ಪುಷ್ಟಿ ಕೊಡುವಂತೆ ನಮ್ಮ ರಾಜಧಾನಿ ಬೆಂಗಳೂರು ಉತ್ತಮ ಉದಾಹರಣೆ.
ಬೆಂಗಳೂರಿನಲ್ಲಿ ಜನಸಂಖ್ಯೆ ಈಗಾಗಲೇ ಕೋಟಿ ದಾಟಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ, ವಿದೇಶಗಳಿಂದಲೂ ದುಡಿಮೆಗಾಗಿ, ಬದುಕು ಕಟ್ಟಿಕೊಳ್ಳುವುದಕ್ಕಾಗಿ ಜನರು ವಲಸೆ ಬಂದಿದ್ದಾರೆ. ಬಹುತೇಕರು ಬೆಂಗಳೂರಿನಲ್ಲಿ ನೆಲೆಸಿದ್ದರೆ, ಕೆಲವೇ ಮಂದಿ ಮಾತ್ರ ಊರಿನ ಕಡೆ ಮುಖ ಮಾಡಿದ್ದಾರೆ. ಈ ರೀತಿ ಬರುವ ಜನರಲ್ಲಿ ಎಲ್ಲಾ ವರ್ಗದವರು ಇದ್ದಾರೆ. ಆದರೆ, ಅವರೆಲ್ಲರಿಗೂ ಮನೆ ಕಟ್ಟಿಕೊಳ್ಳುವ ಅಥವಾ ಕೊಂಡುಕೊಳ್ಳುವ ಶಕ್ತಿಇರುವುದಿಲ್ಲ.
ಇತ್ತೀಚೆಗೆ (ಡಿ.20) ಬೆಂಗಳೂರು ನಗರದ ಕೋಗಿಲು ಬಡಾವಣೆಯಲ್ಲಿ ಸುಮಾರು 20-25 ವರ್ಷಗಳಿಂದ ವಾಸವಿದ್ದ 160ಕ್ಕೂ ಹೆಚ್ಚು ಮನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು ಏಕಾಏಕಿ ಬುಲ್ಡೋಜರ್‌ಗಳ ಮೂಲಕ ಮನೆಗಳನ್ನು ನೆಲಸಮಗೊಳಿದ್ದಾರೆ. ಅಲ್ಲಿದ್ದವರೆಲ್ಲರೂ ನಿರ್ಗತಿಕರು ಹಾಗೂ ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿರುವವರು. ಈ ದೈತ್ಯ ಯಂತ್ರಗಳಿಗೆ ಹಾಗೂ ಸರ್ಕಾರದ ತೀರ್ಮಾನಕ್ಕೆ ಬೀದಿಗೆ ಬಿದ್ದ ಜನರು ಇಂದಿಗೂ ಬೀದಿಯಲ್ಲಿಯೇ ಬದುಕು ಕಳೆಯುತ್ತಿದ್ದಾರೆ.
ಇದನ್ನು ಓದಿ : ಈ ದಿನ ಸಂಪಾದಕೀಯ | ಕಾಯ್ದೆ-ಕಾನೂನುಗಳು ಬಡವರ ವಿರುದ್ಧವೇ ಅಥವಾ ಪ್ರಭಾವಿಗಳ ಪರವೇ?
ಕೋಗಿಲು ಬಡಾವಣೆಯಲ್ಲಿರುವ ಫಕೀರ್ ಕಾಲೋನಿ ಹಾಗೂ ವಸೀಂ ಲೇಔಟ್‌ನಲ್ಲಿ ಆಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆಂದು ಆರೋಪಿಸಿ ತೆರವು ಕಾರ್ಯಚರಣೆ ನಡೆಸಿತ್ತು. ಕೇರಳ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ ನಂತರ ಇದಕ್ಕೆ ರಾಜಕೀಯ ವೇದಿಕೆ ಸಿಕ್ಕಿತು. ನಂತರ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ತಕ್ಷಣವೇ ಪುನರ್ವಸತಿ ಕಲ್ಪಿಸುವಂತೆ ರಾಜ್ಯಸರ್ಕಾರಕ್ಕೆ ಒತ್ತಾಯ ಮಾಡಿದರು.
ರಾಜಕೀಯ ಕಾರಣಕ್ಕಾಗಿ ಎಚ್ಚೆತ್ತ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ, ಸಂತ್ರಸ್ತರಿಗೆ ತಾತ್ಕಲಿಕ ನೆರವು ನೀಡಿ ಪುನರ್ವಸತಿ ಕಲ್ಪಿಸಲು ಮುಂದಾಯಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಸತಿ ಸಚಿವ ಜಮೀರ್ ಆಹ್ಮದ್ ಸ್ಥಳಕ್ಕೆ ಧಾವಿಸಿ ಸಂತ್ರಸ್ತರ ಪರಿಸ್ಥಿತಿಯನ್ನು ಆಲಿಸಿದ ನಂತರ, ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, 160 ಕುಟುಂಬಗಳಿಂದ 26 ಕುಟುಂಬಗಳನ್ನು ಅರ್ಹರೆಂದು ಪರಿಗಣಿಸಿ ಬೈಯಪ್ಪನಹಳ್ಳಿಯಲ್ಲಿರುವ ಬಿಡಿಎ ಮನೆಗಳನ್ನು ಕೊಡಲಾಗುವುದು ಎಂದು ಘೋಷಿಸಲಾಯಿತು. ಈ ಕುರಿತು ವಸತಿ ಸಚಿವರು ಮಾಧ್ಯಮ ಹೇಳಿಕೆಯನ್ನೂ ನೀಡಿದರು.
ಆದರೆ, ಇಲ್ಲಿಯ ತನಕ ಯಾವುದೇ ಮನೆ ಸಿಕ್ಕಿಲ್ಲ. ಬೀದಿಯಲ್ಲಿ ಇದ್ದ ಜನರು, ಇಂದು ಸರಿಯಾದ ಶೌಚಾಲಯವಿಲ್ಲದೆ, ತಿನ್ನಲು ಅನ್ನವಿಲ್ಲದೆ, ಕೊರೆಯುವ ಚಳಿಯಲ್ಲಿ ಟಾರ್ಪಲ್ ಕಟ್ಟಿಕೊಂಡು ಅದೇ ಜಾಗದಲ್ಲಿ ಬದುಕನ್ನು ದೂಡುವಂತಾಗಿದೆ. ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡವರಲ್ಲಿ ಬಹುತೇಕರು ಫಕೀರ್ ದರ್ವೇಶಿ ಸಮುದಾಯಕ್ಕೆ ಸೇರಿದವರು. ಈ ಸಮುದಾಯ ಇಸ್ಲಾಂ ಮತದೊಂದಿಗೆ ಇದ್ದರೂ ತನ್ನ ಸಾಂಸ್ಕೃತಿಕ ಅನನ್ಯತೆಯಿಂದಾಗಿ ಎಲ್ಲಾ ಮುಸ್ಲಿಂಮರಂತೆ ಇಲ್ಲ. ದರ್ವೇಸಿ, ದರ್ವೇಸು, ಫಕೀರ್ ಎಂದು ಕರೆಯುವ ಸಮುದಾಯದ ಜನರು ಸೂಫಿ ತಾತ್ವಿಕ ಪರಂಪರೆಗೆ ಸೇರಿದ್ದು. ದಾನ ಇಲ್ಲವೇ ಭಿಕ್ಷೆ ಬೇಡಿ ಬದುಕನ್ನು ಸಾಗಿಸುವ ಸಮುದಾಯ. ಮೊದಲೆಲ್ಲ ಹಳ್ಳಿಗಳಿಗೆ ಭಿಕ್ಷೆ ಬೇಡಲು ಹೋಗುತ್ತಿದ್ದರು. ಈಗ ಹಳ್ಳಿಗಳ ಜನರೇ ನಗರಗಳತ್ತ ವಲಸೆ ಬರುತ್ತಿರುವುದರಿಂದ, ಫಕೀರ್ ಸಮುದಾಯದ ಜನರು ಕೂಡ ನಗರಗಳ, ಟ್ರಾಫಿಕ್ನಲ್ಲಿ ವಾಹನ ಸವಾರರ ಬಳಿ, ಬೀದಿ ಬದಿಯ ಅಂಗಡಿಗಳಿಗೆ ಹೋಗಿ ದೂಪವನ್ನು ಹಾಕಿ ಭಿಕ್ಷೆ ಕೇಳುತ್ತಾರೆ. ಅದರಿಂದ ಬಂದ ಹಣದಿಂದ ಮನೆ ಸಂಸಾರವನ್ನು ಸಾಕುತ್ತಾರೆ.
ಕೋಗಿಲು ಬಡಾವಣೆಯಲ್ಲಿದ್ದ ಬಹುತೇಕರ ಬದುಕು ಹೀಗೆಯೇ ನಡೆಯುತ್ತಿತ್ತು. ಕಸ ಹಾಕುತ್ತಿದ್ದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಸುಮಾರು 25 ವರ್ಷಗಳಿಂದ ನೆಲೆಸಿರುವವರಿಗೆ ನಿರ್ದಯವಾಗಿ ಸರ್ಕಾರ ನಡೆಸಿಕೊಂಡಿತು. ಇದರಿಂದ ರಾಜಕೀಯವಾಗಿ ಸಾಕಷ್ಟು ಛೀಮಾರಿ ಹಾಕಿಸಿಕೊಂಡ ಸರ್ಕಾರ, ಯಾರದೋ ಒತ್ತಡಕ್ಕೆ ಮಣಿದು, ಎಲ್ಲರಿಗೂ ಸೂರು ಎಂಬುದಾಗಿ ಘೋಷಿಸಿತು. ಆ ತಕ್ಷಣವೇ ವಿರೋಧ ಪಕ್ಷ ಎದ್ದುನಿಂತು ಸ್ಥಳಿಯರು, ವಲಸಿಗರು ಎಂದು ವಿಂಗಡಿಸಿ, ಹಿಂದು-ಮುಂದು ನೋಡದೆ ʼಬಾಂಗ್ಲಾದೇಶಿʼಗಳು ಎಂದು ಕರೆದುಬಿಟ್ಟರು.
ಜವಬ್ದಾರಿಯಿಂದ ನಡೆದುಕೊಳ್ಳಬೇಕಾದ ಕೆಲವು ಮಾಧ್ಯಮಗಳು ಬಿಜೆಪಿಗರ ಒಡೆದು ಆಳುವ ನೀತಿಗೆ ಕೈಜೋಡಿಸಿರುವಂತೆ ವರ್ತಿಸಿದವು. ಎಲ್ಲಾ ರೀತಿಯ ರಾಜಕೀಯ ಪ್ರಹಸನಗಳ ನಂತರವೂ, ಸಂತ್ರಸ್ತರಿಗೆ ಇನ್ನು ಮನೆ ಸಿಕ್ಕಿಲ್ಲ. ಮನೆ ಕಳೆದುಕೊಂಡ ಜಾಗದಲ್ಲಿಯೇ ಟಾರ್ಪಲ್ ಕಟ್ಟಿಕೊಂಡ, ಮತ್ತೆ ಜಿಬಿಎ ಅಧಿಕಾರಿಗಳು ಬರಬಹುದು ಎಂಬ ಭಯದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಕುರಿತು ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಸಂತ್ರಸ್ತರಿಗೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಎಲ್ಲಾ ಕೇಂದ್ರಗಳು ಬೀಗ ಹಾಕಿದ ಸ್ಥಿತಿಯಲ್ಲಿವೆ.
ಮನೆ ಕಳೆದುಕೊಂಡ ಸಂತ್ರಸ್ತರು ಪ್ರತಿದಿನ ಜಿಬಿಎ ಅಧಿಕಾರಿಗಳ ಬಳಿ ಸೂರಿಗಾಗಿ ಅಂಗಲಾಚುವುದು ನಡೆಯುತ್ತಿದೆ. ಅನೇಕ ಸಂದರ್ಭಗಳಲ್ಲಿ ಅಧಿಕಾರಿಗಳು ದರ್ಪದಿಂದ ನಡೆದುಕೊಂಡಿರುವ ಘಟನೆಗಳಿವೆ. ಈ ಬಂದೊದಗಿರುವ ಸಮಸ್ಯೆ ಎಂದರೆ, ʼವೋಟರ್ ಐಡಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಶಾಲಾ ದಾಖಲಾತಿ ಪತ್ರ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರವಿದ್ದರೆ ಮಾತ್ರ ಮನೆಯ ಅರ್ಜಿ ಮುಂದಕ್ಕೆ ಹೋಗುತ್ತದೆʼ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಆರಂಭದಲ್ಲಿ 26 ಕುಟುಂಬಗಳನ್ನು ಅರ್ಹ ಎಂದು ಪರಿಗಣಿಸಿದ ಸರ್ಕಾರ, ಎರಡನೇ ಬಾರಿ ದಾಖಲೆಗಳನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿದೆ. ಅದರಂತೆಯೇ ಕಳೆದ ವಾರ ಕೋಗಿಲು ಬಡಾವಣೆಯ ಹಜ್ ಭವನದಲ್ಲಿ ಸಂತ್ರಸ್ತರನ್ನು ಕರೆದು ದಾಖಲೆಗಳನ್ನು ಪರಿಶೀಲನೆ ಮಾಡಿದೆ.
ಕರ್ನಾಟಕದಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು, ಶಾಲಾ ದಾಖಲಾತಿ ಅಥವಾ ಶಾಲಾ ವರ್ಗಾವಣೆ ಪತ್ರ ಕಡ್ಡಾಯವಾಗಿ ಕೊಡಬೇಕು. ಆದರೆ ಈ ಫಕೀರ್ ಸಮುದಾಯದಲ್ಲಿ ನೂರಕ್ಕೆ ತ್ತೊಂಬತ್ತರಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದವರೆ ಹೆಚ್ಚು. ಹೀಗಾಗಿ ಜಾತಿ ಪ್ರಮಾಣ ಪತ್ರ ಪಡೆಯುವುದು ದೊಡ್ಡ ಸಮಸ್ಯೆಯಾಗಿ ಉದ್ಭವಿಸಿದೆ.
ಹೀಗಿದ್ದಾಗಿಯೂ ಸರ್ಕಾರವು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ ಕೊಡುವ ಅನೇಕ ಸಾಧ್ಯತೆಗಳಿವೆ. ಮುಖ್ಯವಾಗಿ ಕಂದಾಯ ಇಲಾಖೆ, ಆಹಾರ ಮತ್ತು ಸರಬರಾಜು ಇಲಾಖೆ ಹಾಗೂ ಸ್ಥಳಿಯ ತಹಶಿಲ್ದಾರ್ ಜೊತೆಗೂಡಿ ಕೋಗಿಲು ಬಡಾವಣೆಯಲ್ಲಿ ಕ್ಯಾಂಪ್ಗಳನ್ನು ತೆರೆದು ದಾಖಲೆಗಳ ದೃಡಿಕರಣವನ್ನು ಮಾಡಬಹುದು. ಇದರಲ್ಲಿ ರಾಜಕೀಯಕ್ಕಿಂತ ಮಾನವೀಯ ಹೃದಯ ಮುಖ್ಯವಾಗುತ್ತದೆ.
ಇದನ್ನೂ ಓದಿ ಕೋಗಿಲು ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ : ʼಅನ್ನʼವಿಲ್ಲದೆ ಸಂತ್ರಸ್ತರ ಪರದಾಟ
ದುಡಿಯುವ ಜನರ ವೇದಿಕೆಯ ನಂದಿನಿ ʼಈದಿನʼ ಜೊತೆ ಮಾತನಾಡಿ “ಸರ್ಕಾರ ಕೇಳುವ ಮಾನದಂಡಗಳು ಜನರ ಬಳಿ ಇಲ್ಲ. ಅಂದವ ಮಾತ್ರಕ್ಕೆ ಜನರು ಅಲ್ಲಿ ವಾಸವಿಲ್ಲವೆಂದು ಸಾರಾಸಗಟಾಗಿ ತಿರಸ್ಕರಿಸಬಾರದು. ಸರ್ಕಾರವೇ ಮನೆ ನೆಲಸಮಗೊಳಿಸಿರುವುದರಿಂದ, ಮನೆಯನ್ನು ಪುನಃ ನಿರ್ಮಿಸಿಕೊಡುವುದು ಸರ್ಕಾರದ ಜವಾಬ್ದಾರಿಯೇ ಆಗಿದೆ. ಈ ಕುರಿತು ವಿಶೇಷವಾದ ಅಧ್ಯಯನ ನಡೆಸಿ ಜಾತಿ ಪ್ರಮಾಣಪತ್ರವನ್ನು ಹಾಗೂ ಪಡಿತರ ಚೀಟಿಯನ್ನು ಹೇಗೆ ನೀಡಬಹುದು ಎಂದು ತ್ವರಿತವಾಗಿ ಚಿಂತಿಸಬೇಕು” ಎಂದು ಆಗ್ರಹಿಸಿದರು.
ಬೆಂಗಳೂರು ಬೆಳೆದಿದೆ. ಅದೇ ರೀತಿಯಲ್ಲಿ ವಲಸೆ ಬರುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಲಸೆ ಬಂದ ಮಧ್ಯಮ ವರ್ಗದವರಾದರೂ ಕನಿಷ್ಠ ಪಕ್ಷ ಬಾಡಿಗೆ ಮನೆಯಲ್ಲಿ ಬದುಕು ಸಾಗಿಸುತ್ತಾರೆ. ಆದರೆ ಫಕೀರ್ ಸಮುದಾಯದ ನಿರ್ಗತಿಕರು, ಭಿಕ್ಷೆ ಬೇಡಿ ಬದುಕು ನಡೆಸಿ, ಒಂದೊತ್ತಿನ ಊಟಕ್ಕಾಗಿಯೇ ಜೀವವನ್ನು ಸವೆಸುತ್ತಿರುವಾಗ, ಬಾಡಿಗೆ ಮನೆ ಪಡೆಯುದಾದರೂ ಹೇಗೆ. ಇಂತಹ ಸಂದರ್ಭಗಳಲ್ಲಿ ಮನುಷ್ಯತ್ವ ಮುಖ್ಯವಾಗಬೇಕು. ಆಳುವ ಸರ್ಕಾರ, ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳ ಆದ್ಯತೆ ಸೂರಿಲ್ಲದವರ ಪರವಾಗಿ ನಿಲ್ಲುವುದೇ ಮನುಷ್ಯ ಧರ್ಮ.





