ಲಂಕೇಶ್ ಲೇಖಕರಾಗಿ, ಪತ್ರಕರ್ತರಾಗಿ, ಚಲನಚಿತ್ರ ನಿರ್ದೇಶಕರಾಗಿ ಈ ನಾಡಿಗೆ ಕೊಟ್ಟ ಕೊಡುಗೆ, ಮುಂದಿನ ತಲೆಮಾರಿಗೆ ತಲುಪಿಸಲು ಯೋಗ್ಯವಾದದು ಎಂಬ ಕಾರಣಕ್ಕಾಗಿ... ಅವರ ಬರಹಗಳಿಂದ ಹೆಕ್ಕಿ ತೆಗೆದ ಒಂದಷ್ಟು 'ಲಂಕೇಶ್ ಚಿಂತನೆ' ಇಲ್ಲಿದೆ.
ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ಪಿ.ಲಂಕೇಶರು ಜನವರಿ 25, 2000ರಂದು ಈ ಲೋಕ ಬಿಟ್ಟು ತೆರಳಿದರು. ಅವರು ಭೌತಿಕವಾಗಿ ಇಲ್ಲವಾಗಿ ಇಂದಿಗೆ, ಬರೋಬ್ಬರಿ 26 ವರ್ಷಗಳಾದವು. ಅವರಿಲ್ಲದ ಈ ದೇಶದಲ್ಲಿ ಹಲವು ಬದಲಾವಣೆಗಳಾದವು. ಕಾಲದ ಚಕ್ರಕ್ಕೆ ಸಿಕ್ಕಿ ಎಂಥೆಂಥವರೋ ಏನೇನೋ ಆಗಿಹೋದರು. ಅವುಗಳ ನಡುವೆಯೇ ನಾಡಿನ ದೈತ್ಯಪ್ರತಿಭೆ ಲಂಕೇಶರು ಮಾತ್ರ ನಾಡಿನ ಜನತೆಯ ಮನಃಪಟಲದಿಂದ ಮರೆಯಾಗಲಿಲ್ಲ. ಅವರ ಬೌದ್ಧಿಕ ಚಿಂತನೆ ಮಸುಕಾಗಲಿಲ್ಲ. ಹೊಸ ತಲೆಮಾರಿನ ಯುವಕ-ಯುವತಿಯರು ಲಂಕೇಶರ ಪ್ರಭಾವಕ್ಕೊಳಗಾಗುವುದು ನಿಂತಿಲ್ಲ. ಲಂಕೇಶರು ಲೇಖಕರಾಗಿ, ಪತ್ರಕರ್ತರಾಗಿ, ಚಲನಚಿತ್ರ ನಿರ್ದೇಶಕರಾಗಿ ಈ ನಾಡಿಗೆ ಕೊಟ್ಟ ಕೊಡುಗೆ, ಮುಂದಿನ ತಲೆಮಾರಿಗೆ ತಲುಪಿಸಲು ಯೋಗ್ಯವಾದದು ಎಂಬ ಕಾರಣಕ್ಕಾಗಿ… ಅವರ ಬರಹಗಳಿಂದ ಹೆಕ್ಕಿ ತೆಗೆದ ಒಂದಷ್ಟು ‘ಲಂಕೇಶ್ ಚಿಂತನೆ’ ಇಲ್ಲಿದೆ.
ನುಡಿಕಟ್ಟುಗಳು ಹೇಗೆ ಮಾಯವಾಗುತ್ತವೆ?
ಏನನ್ನಾದರೂ ಮಾಡುವುದಕ್ಕೆ ಸಮಯ ಸಿಕ್ಕದಿದ್ದರೆ, ಬಿಡುವಾಗದಿದ್ದರೆ ಗ್ರಾಮಸ್ಥರು ‘ನನಗೆ ಕೂಡಲಿಲ್ಲ’ ಎನ್ನುತ್ತಾರೆ. ಹೇಗೆ ಅದು ‘ಕೂಡಲಿಲ್ಲ’ ಆಗುತ್ತದೆ. ಇದು ವೇಳೆಯ ಬಗ್ಗೆ, ಕೆಲಸದ ಬಗ್ಗೆ, ಮಾನಸಿಕ ಸ್ಥಿತಿಯ ಬಗ್ಗೆ ಹೇಳುತ್ತದೆ ಎಂದು ನನಗನ್ನಿಸುತ್ತದೆ. ನಿನಗೆ ಬೇಕಾದಷ್ಟು ವೇಳೆ ಇರುತ್ತದೆ, ಆದರೆ ಮನಸ್ಸು ತಲ್ಲಣಗೊಂಡಿರುತ್ತದೆ. ಮನಸ್ಸು ಶಾಂತವಾಗಿರುತ್ತದೆ, ಆದರೆ ಬೇರೆ ಕೆಲಸಗಳು ಬೇಕಾದಷ್ಟಿರುತ್ತವೆ. ಮನಸ್ಸು, ವಿರಾಮ ಎಲ್ಲ ಇದ್ದರೂ ಈ ವಿಶಿಷ್ಟ ಕೆಲಸಕ್ಕೆ ಬೇಕಾದ ಸ್ಫೂರ್ತಿ ಇರುವುದಿಲ್ಲ.
ದೈವಭಕ್ತನಿಗೆ ಲೌಕಿಕ ವಿಷಯ, ಜೂಜುಕೋರನಿಗೆ ಸಂಸಾರದ ವಿಷಯ, ಕ್ರಾಂತಿಕಾರನಿಗೆ ದಿನನಿತ್ಯದ ಸಾಮಾನ್ಯ ವಿಷಯ ಸ್ಫೂರ್ತಿಯನ್ನೇ ಕೊಡುವುದಿಲ್ಲ. ಆದ್ದರಿಂದ ಅದನ್ನೆಲ್ಲ ಮಾಡಲು ವ್ಯಕ್ತಿಗೆ ‘ಕೂಡಲಿಲ್ಲ’. ಇದನ್ನು ನಾನು ಸುಮ್ಮನೇ ಬರೆದಿದ್ದೇನೆ. ನಮ್ಮಲ್ಲಿರುವ ಅನೇಕ ವಿಶಿಷ್ಟ ನುಡಿಕಟ್ಟುಗಳು ಹೇಗೆ ಮಾಯವಾಗುತ್ತವೆ ಎಂದು ಅಚ್ಚರಿಯಾದ್ದರಿಂದ ಹೇಳಿದ್ದೇನೆ.
-ಮರೆಯುವ ಮುನ್ನ
ಇದನ್ನು ಓದಿದ್ದೀರಾ?: ಲಂಕೇಶ್ ಎಂಬ ಕನ್ನಡದ ಅಪ್ರತಿಮ ಸೃಷ್ಟಿಕರ್ತ
ಸಾಹಿತಿಯಾಗುವುದು ಎಂದರೆ…
ಪ್ರತಿಯೊಬ್ಬ ಕ್ರಿಯಾಶೀಲ ಲೇಖಕನಿಗೂ ಮನುಷ್ಯನ ಗುಣ ಹಲವು ಸ್ತರಗಳಲ್ಲಿ ಗೊತ್ತಿರುತ್ತದೆ. ಜನ ನೋಡುವಂತೆ ಒಬ್ಬ ವ್ಯಕ್ತಿ ಹೇಗಿದ್ದಾನೆ, ಜನ ನೋಡುವುದನ್ನೇ ಆತ ಹೇಗೆ ಪ್ರೋತ್ಸಾಹಿಸಿ ಇನ್ನಷ್ಟು credibility ಸಂಪಾದಿಸಲು ಪ್ರಯತ್ನಿಸುತ್ತಾನೆ; ಎರಡನೆಯದಾಗಿ ನಿಜಕ್ಕೂ ಆತನಿಗೆ ಆತನೇ ಹೇಗೆ ಕಾಣಿಸುತ್ತಾನೆ, ಮತ್ತು ತನ್ನ ಮತ್ತು ಜನರ ತಿಳಿವಳಿಕೆಯನ್ನು ಮೀರಿ ಆತ ಹೇಗೆ ವ್ಯಕ್ತವಾಗುತ್ತಾನೆ… ಇಷ್ಟೆಲ್ಲ ತಿಳಿಯದವನು ಸಾಹಿತಿಯಾಗುವುದು ಕಷ್ಟ.
ಟಾಲ್ ಸ್ಟಾಯ್ ತರಹದ ಸಾಹಿತಿ ‘ಅನ್ನಾಕರೇನಿನಾ’ ಬರೆದಾಗ ತುಂಬ ನೈತಿಕ ಜಾಡಿನಲ್ಲಿದ್ದ. ‘ಅಯ್ಯೋ ನಾನೆಂಥ ಅನೀತಿಯ ಕಾದಂಬರಿ ಬರೆದೆ’ ಎಂದು ಟಾಲ್‌ಸ್ಟಾಯ್ ಅನ್ನಾಕರೇನಿನಾ ಕೃತಿಯನ್ನು ತಿದ್ದಿ ಅನ್ನಾ ಒಬ್ಬಳು ಖಳನಾಯಕಿ ಎಂದು ತೋರಿಸಲು ಯತ್ನಿಸಿದ. ಆದರೆ ಅದು ಅನ್ನಾಕರೇನಿನಾ ಸೃಷ್ಟಿಕರ್ತ ಟಾಲ್‌ಸ್ಟಾಯ್‌ಗೇ ಸಾಧ್ಯವಾಗಲಿಲ್ಲ. ಖುಷಿಯ, ಜೀವಂತಿಕೆಯ ಜ್ವಾಲಾಮುಖಿಯಂತಿರುವ ಅನ್ನಾಕರೇನಿನಾ ಒಬ್ಬ ಲೇಖಕನ ಚಿಲ್ಲರೆ ಸಾಮಾಜಿಕ ಮರ್ಯಾದೆಗಳಿಗೆ ಒಳಪಡುವುದಿಲ್ಲ.
-ಟೀಕೆ ಟಿಪ್ಪಣಿ

ವಾಸ್ತವ ಮತ್ತು ಕಲ್ಪನೆ
ಬದುಕಿನ ಎಲ್ಲದರ ಹಿಂದೆ ನೋವು, ನಲಿವು, ವಿಷಾದವಿರುತ್ತದೆ… ಬದುಕೆನ್ನುವುದು, ಕ್ರಿಯಾಶಾಲಿ ಬದುಕೆನ್ನುವುದು ಕನಸನ್ನುಳ್ಳ ನಿದ್ರೆ; ಕನಸುಗಳಿಲ್ಲದ ನಿದ್ರೆಯೇ ಸಾವು. ಕನಸು ಮತ್ತು ನೆನಪುಗಳು ನಮ್ಮ ವ್ಯಕ್ತಿತ್ವವನ್ನು ಸಮತೂಕಕ್ಕೆ ತರುತ್ತವೆ-ಹಾಗೆಯೇ ನಾವು ಸಾಹಿತಿಗಳಾಗಿದ್ದರೆ ಕನಸು ಮತ್ತು ನೆನಪು ಸಾಹಿತ್ಯಕ್ಕೆ ತೇಜಸ್ಸು ಮತ್ತು ಅರ್ಥ ತರುತ್ತವೆ. ಇದನ್ನೇ ನಾವು ವಾಸ್ತವ ಮತ್ತು ಕಲ್ಪನೆ ಅನ್ನುವುದು.
-ಮರೆಯುವ ಮುನ್ನ
ಎಲ್ಲವೂ ಗೌಣ
ಮೂಲಭೂತವಾಗಿ ಪಾಪಿಯೂ, ನೀಚನೂ, ಅನೀತಿವಂತನೂ ಆದ ಮನುಷ್ಯ ನೀತಿಯನ್ನು ಹೇಳುವುದಕ್ಕೆ ಮಾತ್ರ ಬಳಸುತ್ತಾನೆ; ಅನೀತಿಯನ್ನು ಬದುಕುವುದಕ್ಕೆ ಬಳಸುತ್ತಾನೆ. ಪ್ರಕೃತಿಯ ದೃಷ್ಟಿಯಿಂದ ಎರಡೂ ಮುಖ್ಯವಲ್ಲ. ಪ್ರಕೃತಿ ನೈತಿಕವೂ ಅಲ್ಲ, ಅನೈತಿಕವೂ ಅಲ್ಲ; ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ.
ಮನುಷ್ಯ ಪಾದ್ರಿಯಾಗಿರಲಿ, ಆ ಪಾದ್ರಿಯೇ ಈ ಕ್ಷಣದಲ್ಲಿ ಮಾಂಸದ ಮುದ್ದೆಯಾಗಿ ಮಣ್ಣುಗೂಡಲಿ, ಮಣ್ಣು ಬೀಜವೊಂದನ್ನು ಬೆಳೆಸಲಿ, ಬೆಳೆಸದಿರಲಿ; ಎಲ್ಲವೂ ಪ್ರಕೃತಿಗೆ ಒಂದೇ. ಹುಟ್ಟು, ಬದುಕು, ಸಾವಿನ ವಿಚಿತ್ರ ಚಕ್ರದಲ್ಲಿ ದೇವರು, ಭಕ್ತ, ಸಜ್ಜನ, ದುರ್ಜನ- ಎಲ್ಲವೂ ಗೌಣ.
-ಟೀಕೆ ಟಿಪ್ಪಣಿ
ಸಾಹಿತ್ಯ ಮತ್ತು ಸೂಕ್ಷ್ಮಜ್ಞತೆ
ನಿಜವಾದ ಸಾಹಿತ್ಯಕ್ಕೆ ತಮ್ಮ ವ್ಯಕ್ತಿತ್ವವನ್ನು ಒಡ್ಡಿಕೊಳ್ಳದಿರುವವರಿಗೆ ಇದನ್ನು ಹೇಳುವುದು ಕಷ್ಟ. ಸಾಹಿತ್ಯ ಅನ್ನುವುದು ರಂಜನೆಯಲ್ಲ, ಅದು ಉತ್ತಮ ಪುಸ್ತಕಗಳನ್ನು ಬರೆಯುವ ವೃತ್ತಿಯಲ್ಲ. ಅನೇಕರು ಹೇಳುವಂತೆ ರಸಾಸ್ವಾದನೆಯಲ್ಲ. ಒಮ್ಮೆ ಇದು ರಸಾನುಭವ ನೀಡುವ ಮಷೀನ್ ಎಂದು ದೃಢವಾಗಿ ನಂಬಿದವರು ನವರಸಗಳನ್ನು ಕೃತಿಯಲ್ಲಿ ಹುಡುಕತೊಡಗಿದರು. ಯಾವ ರಸ ಇನ್ಯಾವ ರಸದೊಂದಿಗೆ ಮಿಳಿತವಾಗಿ ಬಂದಿದೆ ಎಂದು ವಿವರಿಸತೊಡಗಿದರು. ಒಂದು ಕತೆಯ ವಿನ್ಯಾಸ, ಶೈಲಿ, ಪಾತ್ರಗಳು ಎಲ್ಲವೂ ಕೆಲಸ ಮಾಡುವುದು ಈ ರಸವನ್ನು ಉತ್ಪಾದಿಸುವುದಕ್ಕೆ, ಅದಿಲ್ಲದಿದ್ದರೆ ಅಥವಾ ಅದರೊಂದಿಗೆ ಧರ್ಮವನ್ನು ಬೋಧಿಸುವುದಕ್ಕೆ ದೇವರ ಹಿರಿಮೆಯನ್ನು ಓದುಗರ ಮನಸ್ಸಿನಲ್ಲಿ ಒತ್ತುವುದಕ್ಕೆ.
ನಾವೆಲ್ಲ ದೇವರಿಲ್ಲದ, ಆತ್ಮವಿಲ್ಲದ, ಧರ್ಮವಿಲ್ಲದ ನಿಷ್ಕರುಣಿ ಭೂಮಿಯ ಮೇಲೆ ಒಬ್ಬಂಟಿಯಾಗಿ ನಿಂತು ದಿಗ್ಭ್ರಮೆಗೊಂಡಿದ್ದಾಗ, ಇಲ್ಲಿ ಏನು ಮಾಡಿದರೂ ನಮ್ಮ ವಿನಾಶದತ್ತವೇ ನಾವು ಸಾಗುತ್ತಿದ್ದಾಗ… ರಸ, ವಿರಸದ ಮಾತುಗಳೆಲ್ಲ ಅಸಂಬದ್ಧ ಎನಿಸುತ್ತವೆ. ಸಾಹಿತ್ಯ ಎನ್ನುವುದು ದೊಡ್ಡ ಸಾಹಿತಿಯ ಕೈಯಲ್ಲಿ ಈ ಶೂನ್ಯಮಯ ಬದುಕನ್ನು ಎದುರಿಸುವುದಕ್ಕೇ ಮೀಸಲಾಗುತ್ತದೆ. ಹತ್ತೊಂಬತ್ತನೆಯ ಶತಮಾನದಲ್ಲಿ ಮಹಾ ಸೂಕ್ಷ್ಮ ಮನಸ್ಸಿನವನಾಗಿ ಬದುಕಿದ ಪ್ರೂಸ್ಟ್ ಎಂಬ ಲೇಖಕ ತನ್ನ ಬದುಕು ಎನ್ನುವ ನಿಷ್ಠುರ ಶೂನ್ಯವನ್ನು ಎದುರಿಸುವ ಶೈಲಿಯಾಗಿ ತನ್ನಲ್ಲಿ ಹಾದುಹೋದ ಪ್ರಜ್ಞಾಪ್ರವಾಹವನ್ನು, ನೆನಪಿನ ಹೊಳೆಯನ್ನು ಅಕ್ಷರದಲ್ಲಿ ಹಿಡಿದಿಟ್ಟ. ಹದಿಮೂರು ಸಂಪುಟದಲ್ಲಿ ಇದನ್ನು ದಾಖಲೆಗೊಳಿಸಿದ. ಈಚೆಗೆ ವಿಮರ್ಶಕನೊಬ್ಬ ಅದನ್ನು ಓದಿ ತನ್ನ ವ್ಯಕ್ತಿತ್ವದಲ್ಲಿ ಹರಿಯುವಂತೆ ಮಾಡಿಕೊಂಡು ಮೊನ್ನೆ ಹೇಳಿದ: ‘ಪ್ರೂಸ್ಟ್‌ನನ್ನು ಓದಿದರೆ ನಾವು ಸಂವೇದಿಸುವ ರೀತಿಯೇ ಬದಲಾಗುತ್ತದೆ; ಶ್ರೇಷ್ಠ ಸಾಹಿತ್ಯ ಹೀಗೆ ನಮ್ಮ ಗ್ರಹಿಕೆಯ ಪರಿಧಿಯನ್ನೇ ವಿಸ್ತರಿಸುತ್ತದೆ.’
ಇದನ್ನು ಓದಿದ್ದೀರಾ?: ಕರ್ನಾಟಕದ ಹೋರಾಟಗಳ ಮನಸ್ಸನ್ನು ಹದಗೊಳಿಸಿದ ಲಂಕೇಶ್
ಇದೇನು ವಿಚಿತ್ರ ನೋಡಿ. ಜೇಮ್ಸ್ ಜಾಯ್ಸ್ ಎಂಬ ಐರಿಶ್ ಲೇಖಕ ತನ್ನ ಡಬ್ಲಿನ್ ನಗರದ ಅನುಭವಗಳನ್ನು ತನ್ನ ಕಾದಂಬರಿ ‘ಯೂಲಿಸಿಸ್’ನಲ್ಲಿ ಮಂಡಿಸಿದ. ವಾಕ್ಯಗಳು ನಿಲ್ಲುವುದೇ ಇಲ್ಲ; ನಿಂತರೆ, ಕೋಲನ್‌ಗಳಲ್ಲಿ ವಿಶ್ರಮಿಸಿಕೊಂಡರೆ, ಕಾಮಾಗಳಲ್ಲಿ ಎಡವಿದರೆ… ಎಲ್ಲವೂ ಕೃತಕವಾದೀತು ಎಂಬ ನಂಬಿಕೆಯಿಂದ ಜಾಯ್ಸ್ ಬರೆದ. ಅದು ಇಪ್ಪತ್ತನೆಯ ಶತಮಾನದ ಅಲೆದಾಟ, ನೆನಪು, ನೋವು, ನಲಿವನ್ನು ಸೃಷ್ಟಿಸಿತು… ಆ ಕಾದಂಬರಿ ಓದಲು ತುಂಬ ಕಷ್ಟ ಎಂದು ಜನ ಓದಲಿಲ್ಲ. ಅದು ಪುನರ್ಮುದ್ರಣಗೊಳ್ಳುವದೇ ಕಷ್ಟವಾಯಿತು.
ಆದರೆ ಜಾಯ್ಸ್ ತನ್ನ ‘ಯೂಲಿಸಿಸ್’ನಲ್ಲಿ ಸೃಷ್ಟಿಸಿದ ಜಗತ್ತು ಚೈನಾದ ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ವ್ಯಕ್ತವಾಗುತ್ತಿತ್ತು. ಚೈನಾದ ಕೆಲವರು ‘ಯೂಲಿಸಿಸ್’ ಕಾದಂಬರಿಯನ್ನು ಅನುವಾದಿಸಿದರು. ಅದು ಚೈನಾದಲ್ಲಿ ಅತ್ಯಂತ ಜನಪ್ರಿಯ ಕೃತಿಯಾಗಿ ಮಾರಾಟವಾಯಿತು; ಜನ ಅದನ್ನು ತಮ್ಮ ಆಂತರ್ಯಕ್ಕೆ ಕನ್ನಡಿ ಹಿಡಿದಂತೆ… ಓದಿದರು.
ಸಾಹಿತ್ಯ ಹೀಗೆ ನಮ್ಮ ಸೂಕ್ಷ್ಮಜ್ಞತೆಯನ್ನು ವಿಸ್ತರಿಸಬೇಕು. ನಾವು ನೋಡುವ ರೀತಿಯನ್ನು ಹರಿತಗೊಳಿಸಬೇಕು. ನಮ್ಮನ್ನು ಹೆಚ್ಚು ಹೆಚ್ಚು ಅನುಭವ ಸಂಪನ್ನರಾಗಿ ಮಾಡಬೇಕು.
ಹಾಗೆ ಮಾಡಿದ ಕೃತಿ ನಮ್ಮ ಕೃತಜ್ಞತೆ ಗಳಿಸುತ್ತದೆ.
-ಮರೆಯುವ ಮುನ್ನ
ಪತ್ರಕರ್ತನಿಗಿರಬೇಕಾದ ಗುಣ
ಯುರೋಪಿನ ಅತ್ಯಂತ ದೊಡ್ಡ ಸಂಪಾದಕನಾಗಿದ್ದ ಹೆರಲ್ಡ್ ಇವಾನ್ಸ್, ತಾನು ಸಂಪಾದಿಸುತ್ತಿದ್ದ ‘ಸಂಡೇ ಟೈಮ್ಸ್’ ಮತ್ತು ‘ಟೈಮ್ಸ್’ ಪತ್ರಿಕೆಗಳಿಂದ ಹೊರಬಂದ. ಆ ಕ್ಷಣದ ಆತನ ಏಕಾಂಗಿತನ ಮತ್ತು ತಬ್ಬಲಿತನ ಎಲ್ಲ ಪತ್ರಕರ್ತರ ಆಳದ ಭಾವನೆಯೂ ಆಗಬಹುದು.
ಕೋಟ್ಯಂತರ ಪೌಂಡುಗಳನ್ನು ಹೂಡಿ ಕಟ್ಟಿದ ಪತ್ರಿಕೆಯೊಂದಕ್ಕೆ ರಾಜಕೀಯ, ಸಾಂಸ್ಕೃತಿಕ ಅಧಿಕಾರ ಇರುವಂತೆಯೇ ಆರ್ಥಿಕ, ಸಾಮಾಜಿಕ ಕಾಳಜಿ, ಹೊಣೆಗಳಿರುತ್ತವೆ; ಅಲ್ಲಿರುವ ಸಾವಿರಾರು ಜನರಲ್ಲಿ ಅನೇಕರು ಅಶಿಸ್ತಿನ, ಮರ್ಜಿಗಳ, ಸರ್ಕಾರದ ಸವಲತ್ತು, ಎಂಜಲಿಗಾಗಿ ಬಾಯಿ ಬಿಡುವವರು ಇದ್ದೇ ಇರುತ್ತಾರೆ. ಆದರೆ ಪತ್ರಿಕೆಯೊಂದಕ್ಕೆ ಜೀವ ಇರಬೇಕಾದರೆ ಆ ಪತ್ರಿಕೆಯ ನಾಯಕನಿಗೆ ತೀವ್ರ ನ್ಯಾಯವಂತಿಕೆ, ನಿಷ್ಠುರತೆ, ಬಂಡಾಯದ ಗುಣ ಇರಬೇಕಾಗುತ್ತದೆ.
ನೀಚತನ ಕಂಡಲ್ಲಿ ಭೂತ ಬಿಡಿಸುವ, ಧಿಕ್ಕರಿಸುವ ಗುಣವಿಲ್ಲದ ಪತ್ರಿಕೆ ನೀಚತನದ ಪಾಲುದಾರ ಆಗುತ್ತದೆ. ಆದ್ದರಿಂದಲೇ ನಿಶ್ಚಯ, ಪ್ರಾಮಾಣಿಕತೆ ಮತ್ತು ಉಗ್ರ ನಿಷ್ಠುರತೆಯ ವ್ಯಕ್ತಿ ಏಕಾಂಗಿತನ ಮತ್ತು ತಬ್ಬಲಿತನವನ್ನು ಕಟ್ಟಿಕೊಂಡೇ ಬದುಕುತ್ತಾನೆ.
-ಟೀಕೆ ಟಿಪ್ಪಣಿ

ವಿನಯ ಮಾತ್ರ…
ಅಪಾರ ಜನಸಂಖ್ಯೆ, ವಿಪರ್ಯಾಸಮಯ ವಿಜ್ಞಾನ, ಅಂದಗೆಟ್ಟ ಮಾಧ್ಯಮಗಳು, ಮುಗ್ಧತೆ ಕಳೆದುಕೊಂಡ ಕಲೆಗಳು… ಎಲ್ಲರೆದುರು ಮನುಷ್ಯನನ್ನು ಇವತ್ತು ಕಾಪಾಡಬಲ್ಲ ಗುಣ ವಿನಯ. ತನ್ನ ದೌರ್ಬಲ್ಯ, ಸಣ್ಣತನ, ಬುದ್ಧಿಹೀನತೆ ಮತ್ತು ಅಪಾಯವನ್ನರಿತು; ತನ್ನಿಂದ ಸಾಧ್ಯವಾಗಬಲ್ಲ ಮುಗ್ಧತೆ, ಸಹನೆಯನ್ನರಿತು ಬಂದ ವಿನಯ… ಈ ವಿನಯ ಮಾತ್ರ ಅವನನ್ನು ಕೆಟ್ಟ ಬೋಧನೆ, ದುಷ್ಟ ಸಾಹಸಗಳಿಂದ ದೂರ ಇಡಬಲ್ಲದು.
-ಟೀಕೆ ಟಿಪ್ಪಣಿ
ಕಲೆ ಮತ್ತು ಸೇವೆ
ಬರೆಯುವ ಊಹೆ ಕೂಡ ಇಲ್ಲದೆ ಎಲ್ಲೋ ಕುಗ್ರಾಮದಲ್ಲಿ ಹುಟ್ಟಿದ ನಾನು ನನ್ನ ಬದುಕನ್ನು ನಡೆಸುವುದಕ್ಕಾಗಿ ಕೆಲಸ ಮಾಡುತ್ತಲೇ ಇದ್ದೇನೆ. ಸಾಹಿತ್ಯ ಸೇವೆ, ಕಲಾ ಸೇವೆ, ಶಿಕ್ಷಣ ಸೇವೆ ಎಂದು ಸೇವೆಯ ಮಾತಾಡದೆ ಬದುಕುವುದಕ್ಕಾಗಿಯೇ ಕೆಲಸ ಮಾಡುತ್ತಿದ್ದೇನೆ ಎನ್ನಲು ನನಗೆ ಇಷ್ಟ ಮತ್ತು ಹೀಗೆ ಹೇಳುವುದೇ ಹೆಚ್ಚು ಪ್ರಾಮಾಣಿಕ. ನನಗೆ ನನ್ನ ಕೆಲಸಗಳಿಂದ ಎಂದೂ ಬಿಡುವು ಸಿಕ್ಕಲಿಲ್ಲ. ಆದ್ದರಿಂದ ಕೆಲಸಗಳಲ್ಲಿ ಹೆಚ್ಚು ಹೆಚ್ಚು ಕ್ರಿಯಾಶಾಲಿಯಾಗುವುದೇ ನಾನು ನನ್ನನ್ನು ಬೆಳೆಸಿಕೊಳ್ಳುವ ಮಾರ್ಗವಾಯಿತು. ನನ್ನನ್ನು ನಂಬಿದ ಜನರೊಂದಿಗೆ, ಅವರ ಸಂಕಷ್ಟಗಳು, ಆತ್ಮಗೌರವ, ಇಷ್ಟ ಅನಿಷ್ಟಗಳ ಜೊತೆಗೆ ತೊಡಗಿ ಹೋಗುತ್ತಿರುವ ನಾನು ಬರೆಯುತ್ತಿರುವುದು ಕಲೆಯೋ, ಕಲೆಯಲ್ಲವೋ ಎಂಬುದನ್ನು ನಾನು ಚಿಂತಿಸುವುದಿಲ್ಲ.
-ಟೀಕೆ ಟಿಪ್ಪಣಿ
ಮೌನ… ಸಂಪನ್ನ
ಮಾತು ಹೆಚ್ಚಾದಷ್ಟೂ ಸತ್ಯ ನಮ್ಮ ಮಾತುಗಳ ಹೊರಗೆ ಅವಿತುಕೊಳ್ಳತೊಡಗುತ್ತದೆ. ಆದರೆ, ಏನಾಗುತ್ತದೆ ಎಂದರೆ, ಯಾರಾದರೊಬ್ಬ ಚೆನ್ನಾಗಿ ಮಾತಾಡುತ್ತಾನೆ ಎಂದರೆ ಜನ ದುಂಬಾಲು ಬಿದ್ದು ಅವನಿಂದ ಮಾತಾಡಿಸಿ ತಮಾಷೆ ನೋಡುತ್ತಾರೆ. ಇದನ್ನೆಲ್ಲ ನೋಡಿದಾಗಲೇ ನನಗೆ ಮೌನಿಯ ಮತ್ತು ಸಂಪನ್ನನ ಶಕ್ತಿಯ ಬಗ್ಗೆ ಕುತೂಹಲವಾಗುತ್ತದೆ. ನೂರಾರು ಜನ ಮಾತಾಡುವಲ್ಲಿ ಸುಮ್ಮನಿರಬಲ್ಲವ ಸ್ಫೋಟಕ ಸಾಮರ್ಥ್ಯ ಪಡೆದಿರುತ್ತಾನೆ.
-ಮರೆಯುವ ಮುನ್ನ





