ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫರಂಗಿಪೇಟೆ ಬಳಿಯ ನೇತ್ರಾವತಿ ನದಿ ತೀರದಲ್ಲಿ ಅಪಾರ ಪ್ರಮಾಣದ ಆಧಾರ್ ಕಾರ್ಡ್‌ಗಳು ಅನಾಥವಾಗಿ ಬಿದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಗಂಭೀರ ವಿಚಾರವನ್ನು ಗಣನೆಗೆ ತೆಗೆದುಕೊಂಡಿರುವ ವಿಧಾನಸಭಾ ಸ್ಪೀಕರ್ ಹಾಗೂ ಸ್ಥಳೀಯ ಶಾಸಕರೂ ಆಗಿರುವ ಯು.ಟಿ. ಖಾದರ್ ಫರೀದ್ ಅವರು, ಈ ಬಗ್ಗೆ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಯುಐಡಿಎಐ (UIDAI) ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾರ್ಚ್ 03 ರಂದು ಪುದು ಗ್ರಾಮದ ಫರಂಗಿಪೇಟೆಯ ನೇತ್ರಾವತಿ ನದಿ ತಟದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್‌ಗಳು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಸಾರ್ವಜನಿಕರು ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪಂಚಾಯಿತಿ ಅಧ್ಯಕ್ಷರು ಹಾಗೂ ಸ್ಥಳೀಯರು ಸೇರಿ ನದಿ ತೀರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿದ್ದಾರೆ. ನಂತರ ಈ ಕುರಿತು ಸ್ಪೀಕರ್ ಯು.ಟಿ. ಖಾದರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್‌ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಸ್ಪೀಕರ್ ಯು.ಟಿ. ಖಾದರ್, ಬೆಂಗಳೂರಿನ ಖನಿಜ ಭವನದಲ್ಲಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಯೋಜನಾ ವ್ಯವಸ್ಥಾಪಕರಿಗೆ ಬುಧವಾರ (ಮಾ. 04) ಅಧಿಕೃತ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ.
”ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರ ಪ್ರಮುಖ ದಾಖಲೆಯಾದ ಆಧಾರ್ ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಲು ಕಾರಣವೇನು ಮತ್ತು ಇದರ ಹಿಂದಿರುವ ದುಷ್ಕರ್ಮಿಗಳು ಯಾರು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಕೂಡಲೇ ಪತ್ತೆ ಹಚ್ಚಿ, ತಮ್ಮ ಇಲಾಖೆಯ ಮುಖಾಂತರ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಸ್ಪೀಕರ್ ಯು.ಟಿ. ಖಾದರ್ ನಿರ್ದೇಶನ ನೀಡಿದ್ದಾರೆ.





