ಹಿಂದೆ, ಸಿನೆಮಾ ವೀಕ್ಷಣೆ ಎಂಬದು ನಮ್ಮ ದೇಶದ ಅತ್ಯಂತ ಅಗ್ಗದ ಮತ್ತು ಗುಣಮಟ್ಟದ ಮನರಂಜನೆಯ ಏಕೈಕ ಮಾಧ್ಯಮವಾಗಿತ್ತು. ಈಗ ಚಿತ್ರಮಂದಿರಗಳು ಖಾಸಗಿ ಶಾಲೆ, ಆಸ್ಪತ್ರೆಯ ಮಾಲೀಕರಂತೆ ಗ್ರಾಹಕರನ್ನು ಶೋಷಿಸುವ ಕೇಂದ್ರಗಳಾಗಿ ಮಾರ್ಪಟ್ಟಿವೆ.
ಅಪಾರ ಪ್ರಚಾರದ ಮೂಲಕ ಇತ್ತೀಚಿಗೆ ರಜನೀಕಾಂತ್ ಅವರ ‘ಕೂಲಿ’ ಚಿತ್ರ ಬಿಡುಗಡೆಯಾಯ್ತು (ಗುರುವಾರ 14.8.2025). ಬಿಡುಗಡೆಯ ಹಿಂದಿನ ದಿನ (ಬುಧವಾರ) ಕುತೂಹಲದಿಂದ ಬುಕಿಂಗ್ ಆ್ಯಪ್‌ಗಳ ಮೂಲಕ ಎಲ್ಲ ಚಿತ್ರಮಂದಿರಗಳಲ್ಲಿ ನಡೆದಿದ್ದ ಮುಂಗಡ ಬುಕಿಂಗ್ ನೋಡಿ ಅಚ್ಚರಿಯಾಯ್ತು. ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 93 ಸ್ಥಳಗಳಲ್ಲಿ (ಮಾಲ್‌ಗಳೇ ಅಧಿಕ) ದಿನವಹಿ 526ಕ್ಕೂ ಅಧಿಕ ಪ್ರದರ್ಶನಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಬುಧವಾರ ಸಂಜೆ ಆರು ಗಂಟೆಯ ವೇಳೆಗೆ ಗುರುವಾರದಿಂದ ಭಾನುವಾರದವರೆಗೆ ಎಲ್ಲ ಪ್ರದರ್ಶನಗಳ ಬಹುತೇಕ ಆಸನಗಳ ಮುಂಗಡ ಬುಕಿಂಗ್ ಆಗಿ ಹೌಸ್‌ಫುಲ್ ಆಗುವ ಸೂಚನೆ ಸಿಕ್ಕಿತ್ತು.
ಆದರೆ ಇದಕ್ಕಿಂತ ಅಚ್ಚರಿಯ ವಿಷಯವೆಂದರೆ ಸಿನೆಮಾ ವೀಕ್ಷಣೆಗೆ ನಿಗದಿಪಡಿಸಿದ್ದ ಪ್ರವೇಶ ದರ(ಟಿಕೆಟ್ ದರ). ಅದು ಕನಿಷ್ಠ 200 ರೂ. ನಿಂದ 1800 ರೂ.ವರೆಗೆ ಇತ್ತು. ಕೆಲವು ಆಯ್ದ ಸ್ಕ್ರೀನ್‌ಗಳಲ್ಲಿ 2000 ರೂ. ದಾಟಿತ್ತು. ಈ ಚಿತ್ರದ ಬಿಡುಗಡೆಯ ಹಿಂದಿನ ವಾರ ನಾನು ನೋಡಿದ ‘ಸು ಫ್ರಮ್ ಸೋ’ ಚಿತ್ರಕ್ಕೆ ಇದ್ದ ಗರಿಷ್ಠ 400 ರೂ. ದರದ ಆಸನವು ಅದೇ ಚಿತ್ರಮಂದಿರದಲ್ಲಿ 1800 ರೂ.ಗೆ ಜಿಗಿದಿತ್ತು. ಈ ಕೂಲಿ ಬಡವನಲ್ಲ, ದುಬಾರಿ ಕೂಲಿ ಅನಿಸಿತ್ತು.
ಅದೇ ದಿನ ಚೆನ್ನೈನಲ್ಲಿ ಕೂಲಿ ಚಿತ್ರದ ಪ್ರದರ್ಶನದ ಬಗ್ಗೆ ಅದೇ ಮುಂಗಡ ಆ್ಯಪ್ ಮೂಲಕ ಮಾಹಿತಿ ಕಲೆಹಾಕಿದಾಗ ಇನ್ನಷ್ಟು ಅಚ್ಚರಿ ಕಾದಿತ್ತು. ಚೆನ್ನೈನ 57 ವಿವಿಧ ಸ್ಥಳಗಳಲ್ಲಿದ್ದ ಪ್ರದರ್ಶನ ಮಂದಿರಗಳಲ್ಲಿ ದಿನವಹಿ 531 ಪ್ರದರ್ಶನಗಳ ವ್ಯವಸ್ಥೆಯಾಗಿತ್ತು. ತುಸು ಹೆಚ್ಚು ಕಡಿಮೆ ಬೆಂಗಳೂರು ಮತ್ತು ಚೆನ್ನೈನಲ್ಲಿ ‘ಕೂಲಿ‘ ಒಂದೇ ಪ್ರಮಾಣದ ಪ್ರದರ್ಶನ ಕಂಡಿತ್ತು. ಅದರೆ ಆಘಾತಕಾರಿಯಾಗಿ ಕಂಡ ವಿಷಯವೆಂದರೆ ಚೆನ್ನೈನ ಮಾಲ್‌ಗಳಲ್ಲಿ ಸಹ ಟಿಕೆಟ್ ದರಗಳು 102ರಿಂದ 162.50 ರೂ.ವರೆಗೆ ಮತ್ತು ಗರಿಷ್ಠ ರೂ. 203.50 ದರ ಮಾತ್ರ ಇತ್ತು. ತಮಿಳುನಾಡು ಸರ್ಕಾರ ಸಿನೆಮಾ ಪ್ರವೇಶದರಗಳ ಬಗ್ಗೆ ಹಾಕಿರುವ ನಿಯಂತ್ರಣವು ಸಿನೆಮಾ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕರು ಟಿಕೆಟ್ ದರಗಳನ್ನು ತಮಗಿಷ್ಟ ಬಂದ ರೀತಿಯಲ್ಲಿ ಏರಿಸಿ ಇಳಿಸುವ ಅಧಿಕಾರ ಕಿತ್ತುಕೊಂಡಿರುವುದು ಇದರಿಂದ ಸ್ಪಷ್ಟವಾಗಿ ಕಾಣುತ್ತಿತ್ತು.
ಇದನ್ನು ಓದಿದ್ದೀರಾ?: ಗಾಜಾದಲ್ಲಿ ಮುಂದುವರೆದ ಇಸ್ರೇಲ್ ಕ್ರೌರ್ಯ; ಪ್ಯಾಲೆಸ್ಟೀನ್ ಸಮಾಜದ ಅಸ್ತಿತ್ವ ನಾಶ
ಭಾರೀ ತಾರಾಗಣ ಮತ್ತು ಅಬ್ಬರ ಪ್ರಚಾರದಿಂದ ಬಿಡುಗಡೆಯಾಗುವ ತಮಿಳು ಚಿತ್ರಗಳು ಚೆನ್ನೈ ನಗರಕ್ಕಿಂತ ಅಧಿಕ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ದುಡಿಯುತ್ತವೆ. ಇದಕ್ಕೆ ಮುಖ್ಯ ಕಾರಣ ಹೆಚ್ಚು ಕಡಿಮೆ ಎರಡೂ ನಗರಗಳಲ್ಲಿ ಮೊದಲ ವಾರ ಸಮಾನ ಪ್ರಮಾಣದ ಪ್ರದರ್ಶನಗಳನ್ನು ಕಾಣುವುದು ಮತ್ತು ಪ್ರವೇಶ ದರದಗಳಲ್ಲಿ ಇರುವ ಅಗಾಧ ಅಂತರ. ತಮಿಳು ಸೇರಿದಂತೆ ಇತರ ಅನ್ಯ ಭಾಷೆಯ ಚಿತ್ರರಂಗದವರು ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ತಮ್ಮ ಭಾಷೆಯ ಚಿತ್ರಗಳ ಬಿಡುಗಡೆಗೆ ಯಾಕಷ್ಟು ಮಹತ್ವ ನೀಡುತ್ತಾರೆ ಎಂಬುದು ಇದರಿಂದ ಮನದಟ್ಟಾಗುತ್ತದೆ. ಕಮಲಹಾಸನ್ ಅವರು ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಏಕಕಾಲಕ್ಕೆ ಬಿಡುಗಡೆಗೊಳಿಸಲು ಮಾಡಿದ ಸತತ ಪ್ರಯತ್ನದ ಹಿಂದೆ ಇದ್ದದ್ದು ಇದೇ ತರ್ಕ. ನ್ಯಾಯಾಲಯದ ತೀರ್ಪು ವಿಳಂಬವಾದ ಕಾರಣ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಯ್ತು. ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾದ ಮೊದಲ ವಾರವೇ ತೋಪೆದ್ದು ಅದರ ಹಣೆಬರಹ ನಿರ್ಧಾರವಾಗಿ ಹೋಯಿತು. ಮೊದಲವಾರ ಕರ್ನಾಟಕದಲ್ಲಿ ಬಿಡುಗಡೆಯಾಗದ ಕಾರಣ ಅವರಿಗಾಗಿರುವ ನಷ್ಟವನ್ನು ಊಹಿಸಬಹುದು.
ಇಲ್ಲಿ ಚರ್ಚಿಸಬೇಕಾದ ಮುಖ್ಯ ವಿಷಯವೆಂದರೆ ಸಿನೆಮಾ ಪ್ರದರ್ಶನಗಳ ಪ್ರವೇಶ ದರ ನಿಗದಿಯಲ್ಲಿ ಗ್ರಾಹಕರ ಹಿತಾಸಕ್ತಿಯನ್ನು ಲೆಕ್ಕಕ್ಕಿಡದೆ ಚಿತ್ರರಂಗದ ಪ್ರದರ್ಶನಕ್ಕೆ ಎಲ್ಲ ವಿಭಾಗದ ಲೋಭಿಗಳು (ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು) ತಳೆದಿರುವ ಲಜ್ಜೆಗೇಡಿನ ವರ್ತನೆ. ಜೊತೆಗೆ ಶಿಖಂಡಿಯ ಮುಂದೆ ಶಸ್ತ್ರತ್ಯಾಗ ಮಾಡಿದ ಭೀಷ್ಮನಂತೆ ಅಸಹಾಯಕತೆಯಿಂದ ನಿಂತಿರುವ ಸರ್ಕಾರ. ಕೆಲವು ತಿಂಗಳ ಹಿಂದೆ ಸಿನೆಮಾ ಪ್ರವೇಶ ದರವನ್ನು ತಮಿಳುನಾಡಿನ ಮಾದರಿಯಲ್ಲಿ ನಿಯಂತ್ರಿಸುವುದಾಗಿ ರಾಜ್ಯ ಸರ್ಕಾರ ಹೇಳಿಕೆ ಕೊಟ್ಟಾಗ ಸಂತೋಷವಾಗಿತ್ತು. ಆದರೆ ಅದು ಕಾರ್ಯಗತವಾಗುವ ಸೂಚನೆಯಂತೂ ಇಲ್ಲ. ದುಬಾರಿ ಪ್ರವೇಶದರದ ವಿರುದ್ಧ ಪ್ರೇಕ್ಷಕರೂ ಸೊಲ್ಲೆತ್ತದಿರುವುದು ಪ್ರದರ್ಶಕರಿಗೆ ಸಮಾಧಾನವನ್ನೇ ತಂದಿದೆ.
ಮಾಲ್ ಸಂಸ್ಕೃತಿ ಬರುವ ಮುನ್ನ, ಥಿಯೇಟರ್‍ಗಳೇ ಇದ್ದ ಕಾಲದಲ್ಲಿ ಸಾಮಾನ್ಯವಾಗಿ ಮೂರು ವಿಭಿನ್ನ ದರದ ಪ್ರವೇಶ ದರವನ್ನು ಥಿಯೇಟರ್‍ಗಳು ನಿಗದಿಪಡಿಸುತ್ತಿದ್ದವು. ಮೂರು ವರ್ಗದ ಪ್ರವೇಶ ದರದಲ್ಲಿ ಅಗಾಧ ಎನ್ನುವ ಪ್ರಮಾಣದ ವ್ಯತ್ಯಾಸ ಇರುತ್ತಿರಲಿಲ್ಲ. ಜೊತೆಗೆ ಅಪರೂಪಕ್ಕೆ ನಿರ್ಮಾಣಗೊಂಡ ಎ.ಸಿ. ಚಿತ್ರಮಂದಿರಗಳಲ್ಲಿ ತುಸು ಹೆಚ್ಚಿನ ದರ ಬಿಟ್ಟರೆ ಒಂದು ನಗರ/ಪಟ್ಟಣದಲ್ಲಿದ್ದ ಥಿಯೇಟರ್‍ಗಳ ನಡುವೆ ಸಹ ಪ್ರವೇಶ ದರದಲ್ಲಿ ಗಹನವಾದ ವ್ಯತ್ಯಾಸ ಇರುತ್ತಿರಲಿಲ್ಲ. ಚಿತ್ರಮಂದಿರಗಳಲ್ಲಿ ಮಾರುವ ತಿನಿಸು/ಪಾನೀಯಗಳನ್ನು ಮಾರುವ ಅಂಗಡಿ ಮಾಲೀಕರು ಈಗಿನಂತೆ ಜೇಬಿಗೆ ಕನ್ನ ಹಾಕುವ ಹಗಲು ದರೋಡೆಕೋರರಾಗಿರಲಿಲ್ಲ. ಜೊತೆಗೆ ವಿರಾಮ ಕಾಲದಲ್ಲಿ ಚಿತ್ರಮಂದಿರದ ಹೊರ ಆವರಣಕ್ಕೆ ಬಂದು ರಸ್ತೆಯಲ್ಲಿ ಮಾರುವ ವಿವಿಧ ತಿನಿಸುಗಳನ್ನು ಖರೀದಿಸಬಹುದಿತ್ತು. ಈಗಿನ ಹಾಗೆ ಮಾಲ್‌ಗಳಲ್ಲಿ ಕೊಡುವುದನ್ನೇ ತಿನ್ನಬೇಕೆಂಬ ಹೇರಿಕೆ ಇರಲಿಲ್ಲ. ಹಾಗಾಗಿಯೇ ಸಿನೆಮಾ ವೀಕ್ಷಣೆ ಎಂಬದು ನಮ್ಮ ದೇಶದ ಅತ್ಯಂತ ಅಗ್ಗದ ಮತ್ತು ಗುಣಮಟ್ಟದ ಮನರಂಜನೆಯ ಏಕೈಕ ಮಾಧ್ಯಮವಾಗಿತ್ತು. ಈಗ ಚಿತ್ರಮಂದಿರಗಳು ಖಾಸಗಿ ಶಾಲೆ, ಆಸ್ಪತ್ರೆಯ ಮಾಲೀಕರಂತೆ ಗ್ರಾಹಕರನ್ನು ಶೋಷಿಸುವ ಕೇಂದ್ರಗಳಾಗಿ ಮಾರ್ಪಟ್ಟಿವೆ.

ಇದರ ಜೊತೆಗೆ ಈಗ ಮುಂಗಡ ಬುಕಿಂಗ್ ಆ್ಯಪ್‌ಗಳೆಂಬ ಇಂಬಳಗಳು. ಜನರು ಚಿತ್ರಮಂದಿರದಲ್ಲಿ ಕ್ಯೂ ನಿಂತು ಟಿಕೆಟ್ ಕೊಳ್ಳಲು ಸ್ಥಳಾವಕಾಶ ಕಲ್ಪಿಸದ ಮಾಲ್‌ಗಳು ಬುಕಿಂಗ್ ಆ್ಯಪ್ ಮೂಲಕ ಟಿಕೆಟ್ ಅನ್ನು ಕಾಯ್ದಿರಿಸುವ ಪದ್ಧತಿ ಜಾರಿಗೆ ತಂದಿರುವುದು ಸರಿಯಷ್ಟೆ. ಅದೊಂದು ಯಾಂತ್ರಿಕೃತ ವ್ಯವಸ್ಥೆ. ಆದರೆ ಅದರಲ್ಲಿ ಬುಕ್ ಮಾಡಿದರೆ ಟಿಕೆಟ್ ದರದ ಮೇಲೆ ಇಂತಿಷ್ಟು ಎಂದು ಕಮಿಷನ್ ಪೀಕಬೇಕು. ಇದೊಂದು ಬಗೆಯ ನವಶೋಷಣೆ. ಹಿಂದೆ ಟಿಕೆಟ್ ನೀಡುವ ಸಿಬ್ಬಂದಿಯನ್ನು ಚಿತ್ರಮಂದಿರಗಳು ನೇಮಿಸಿಕೊಂಡು ಸಂಬಳ ನೀಡುತ್ತಿದ್ದರು. ಆದರೆ ಬಾಲ್ಕನಿ ಟಿಕೆಟ್ ಕೊಡುವವನಿಗೆ ಹೆಚ್ಚು ಸಂಬಳ, ಮುಂದಿನ ಆಸನಕ್ಕೆ ಟಿಕೆಟ್ ಕೊಡುವವನಿಗೆ ಕಡಿಮೆ ಸಂಬಳ ಅಂತೇನೂ ಇರಲಿಲ್ಲ. ಸೇವಾವಧಿ ನೋಡಿಕೊಂಡು ಸಂಬಳ ನಿಗದಿ ಮಾಡುತ್ತಿದ್ದರು. ಇಲ್ಲಿ ಒಂದು ಯಾಂತ್ರೀಕೃತ ವ್ಯವಸ್ಥೆ ನಿಭಾಯಿಸುವ ಸೇವೆಗೆ ಟಿಕೆಟ್ ದರದ ಮೇಲೆ 20 ರೂ.ನಿಂದ 80 ರೂ.ವರೆಗೆ ಪ್ರೇಕ್ಷಕ ಹೆಚ್ಚುವರಿ ನೀಡಬೇಕು. ಯಾಕಾಗಿ? ಇದು ಸಿಬ್ಬಂದಿ ವರ್ಗವನ್ನು ಕಡಿಮೆ ಮಾಡುವುದರಿಂದ ಪ್ರದರ್ಶಕರೇ ಈ ವೆಚ್ಚವನ್ನು ಭರಿಸುವುದು ನ್ಯಾಯೋಚಿತ. ಆದರೂ ಪ್ರೇಕ್ಷಕನೇ ಈ ಸೇವೆಗೆ ದುಬಾರಿ ಕಮಿಷನ್ ಕೊಡಬೇಕು. ‘ಕೂಲಿ’ ಚಿತ್ರದ ಮೊದಲ ನಾಲ್ಕು ದಿನಗಳ ಮುಂಗಡ ಬುಕಿಂಗ್‌ನಲ್ಲಿಯೇ ಮುಂಗಡ ಆ್ಯಪ್‌ಗಳು ಒಂದು ಕೋಟಿ ರೂ.ಗೂ ಅಧಿಕ ಕಮಿಷನ್ ಪಡೆದಿರುವ ಅಂದಾಜು ಸಿಕ್ಕಿದೆ.
ಇದನ್ನು ಓದಿದ್ದೀರಾ?: OBC ಮೀಸಲಾತಿ ಮೈಲಿಗಲ್ಲು- ʼಮಂಡಲ್ ಆಯೋಗʼದ ವರದಿಗೆ 35 ವರ್ಷಗಳು
ಹಿಂದಿನ ವ್ಯವಸ್ಥೆಯಲ್ಲಿ, ಅಂದರೆ ಮಾಲ್‌ಗಳ ಆಗಮನ ಪೂರ್ವದಲ್ಲಿ, ಇಷ್ಟವಿಲ್ಲದಿದ್ದರೂ ಅನಿವಾರ್ಯವಾದಾಗ ಬ್ಲಾಕ್‌ನಲ್ಲಿ ಟಿಕೆಟ್ ಕೊಂಡು ಚಿತ್ರ ನೋಡುವ ಪರಿಪಾಠವಿತ್ತು. ಥಿಯೇಟರ್‍ನ ಕೆಲವು ಸಿಬ್ಬಂದಿ, ಹೊಸ ಚಿತ್ರ ಬಿಡುಗಡೆಯಾದಾಗ ಒಂದು ಪ್ರಮಾಣದ ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಮಾರಲು ಕೊಡುತ್ತಿದ್ದರು. ಅಥವಾ ಕೆಲವು ನಿರುದ್ಯೋಗಿಗಳು ಗುಂಪಿನಲ್ಲಿ ಮೊದಲೇ ನಿಂತು ಐದೋ ಹತ್ತೋ ಟಿಕೆಟ್ ಕೊಂಡು ಬ್ಲಾಕ್‌ನಲ್ಲಿ ಮಾರುತ್ತಿದ್ದರು. ಅದು ಅವರ ಹೊಟ್ಟೆಪಾಡು. ಇದು ಬ್ಲಾಕ್ ಟಿಕೆಟ್ ಮಾರುವವರು ಪೊಲೀಸರಿಂದ ಗೂಸಾ ತಿಂದೋ ಇಲ್ಲಾ ಅವರನ್ನು ಸರಿಮಾಡಿಕೊಂಡೋ ಹೆದರಿಕೆಯಿಂದ ಕದ್ದುಮುಚ್ಚಿ ನಡೆಸುತ್ತಿದ್ದ ವ್ಯವಹಾರ. ಆದರೆ ಈಗ ನೋಡಿ ಥಿಯೇಟರ್ ಮಾಲೀಕರು, ಪ್ರದರ್ಶಕರು, ವಿತರಕರು ಸೇರಿಕೊಂಡೇ ತಮಗಿಷ್ಟ ಬಂದಷ್ಟು ದರ ಏರಿಸಿ ಕಾಳಸಂತೆಯ ವ್ಯವಹಾರವನ್ನು ಅಧಿಕೃತಗೊಳಿಸಿ ಹಗಲು ದರೋಡೆಗೇ ಇಳಿದಿದ್ದಾರೆ. ಇವರಿಗೆ ಪೊಲೀಸರ ಭಯವೂ ಇಲ್ಲ. ಸರ್ಕಾರವನ್ನಂತೂ ಕ್ಯಾರೇ ಅನ್ನೋದಿಲ್ಲ. ಜನರೇ ಇದನ್ನು ಪ್ರತಿಭಟಿಸಿ ಮದ್ದು ಅರೆಯದಿದ್ದರೆ ಇದು ನಿಲ್ಲುವ ಸೂಚನೆಯಂತೂ ಇಲ್ಲ. ಹೊಸ ತೆರಿಗೆಗಳಿಗೆ ಜನ ಸಜ್ಜಾದಂತೆ ಇದಕ್ಕೂ ಒಗ್ಗಿಹೋಗಿದ್ದಾರೆ.

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.




