ಸಾಂಪ್ರದಾಯಿಕ ಹಾದಿಯಿಂದ ಹೊರಬರುವ ಹೊಸಯೋಜನೆಗಳತ್ತ ಸೂಪರ್‌ಸ್ಟಾರ್‌ಗಳು ಮನಸ್ಸು ಮಾಡಿದ್ದೇ ಆದರೆ, ಭಿನ್ನ ಚಿತ್ರಗಳು ಹಾಗೂ ಹೊಸ ನಿರ್ದೇಶಕರು ಸಿನಿ ಕ್ಷೇತ್ರಕ್ಕೆ ಸಿಗುತ್ತಾರೆ. ಅವರ ಸೂಪರ್‌ಸ್ಟಾರ್ ಸ್ಥಾನಮಾನವೇ ಇಂತಹ ಆಯ್ಕೆಗಳಿಗೆ ಅವಕಾಶವಾಗಿ ಒದಗಿ ಬರುತ್ತದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ, ‘ನಿರ್ದೇಶಕರು ಪಾತ್ರವನ್ನು ಕಟ್ಟುವಾಗ ನಟರನ್ನು ಗಮನದಲ್ಲಿಟ್ಟುಕೊಂಡು ಬರೆಯಬಾರದು. ಕಥೆ ಮತ್ತು ಪಾತ್ರದ ಮೇಲಷ್ಟೇ ಗಮನ ಹರಿಸಬೇಕು’ ಎಂದು ಹೇಳಿದ್ದರು.
74ರ ಹರೆಯದ, 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ, ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿ ಪಡೆದಿರುವ, ಹಿರಿಯ ಕಲಾವಿದ ಮಮ್ಮುಟ್ಟಿ, ಏನು ಹೇಳಿದರೂ ಸುದ್ದಿಯಾಗುವ ಸಂದರ್ಭದಲ್ಲಿ, ಏನು ಬೇಕಾದರೂ ಹೇಳುವ ಪೈಕಿಯಲ್ಲ. ಸೂಪರ್‌ಸ್ಟಾರ್ ಎಂಬ ಕಾರಣಕ್ಕೆ ಇಮೇಜಿಗೆ ಒಳಗಾಗುವುದಿಲ್ಲ. ಯಾವ ಪಾತ್ರ ಕೊಟ್ಟರೂ ಮಾಡದೇ ಇರುವುದಿಲ್ಲ. ಇದೇ ಇವರ ವಿಶೇಷ.
ಇದೆಲ್ಲವೂ ತಲೆಯಲ್ಲಿ ತೇಲಿಹೋಗುತ್ತಿದ್ದಂತೆ 90ರ ದಶಕದಲ್ಲಿ, ಕನ್ನಡ ಚಿತ್ರರಂಗದಲ್ಲಿ ಜರುಗಿದ ಘಟನೆಯೊಂದು ನೆನಪಾಯಿತು. ಅದು ಫಣಿ ರಾಮಚಂದ್ರ ನಿರ್ದೇಶನದ ‘ನಾನೆಂದೂ ನಿಮ್ಮವನೆ’ ಚಿತ್ರದ ಚಿತ್ರೀಕರಣ ಸಂದರ್ಭ. ಆ ಚಿತ್ರದಲ್ಲಿ ನಾಯಕನಟನಾಗಿ ವಿಷ್ಣುವರ್ಧನ್, ಆತನ ಗೆಳೆಯನಾಗಿ ರಮೇಶ್ ಭಟ್ ನಟಿಸಿದ್ದರು. ಗೆಳೆಯರಿಬ್ಬರು ಕೂತು ಮಾತನಾಡುವ ಸನ್ನಿವೇಶ ಚಿತ್ರೀಕರಣವಾಗುತ್ತಿತ್ತು. ನಾಯಕ ವಿಷ್ಣುವರ್ಧನ್ ಸಂಭಾಷಣೆಗೆ, ಗೆಳೆಯ ರಮೇಶ್ ಭಟ್ ಉತ್ತರಿಸುವಾಗ ‘ನೀವು’ ಎಂದು ಸಂಬೋಧಿಸುತ್ತಿದ್ದರು.
ಇದನ್ನು ಓದಿದ್ದೀರಾ?: ನೋಡಬೇಕಾದ ಚಿತ್ರ: ಅಲೆಕ್ಸಾಂಡ್ರೆ ಕೊಬೆರಿಡ್ಜೆ ಅವರ ‘ಡ್ರೈ ಲೀಫ್’
ನಮಗೆ ಅದು, ನಿರ್ದೇಶಕ ಫಣಿ ರಾಮಚಂದ್ರ ಅವರು ಸಹಜವಾಗಿ ಬರೆದ ಸಂಭಾಷಣೆಯೋ ಅಥವಾ ವಿಷ್ಣುವರ್ಧನ್ ಹಿರಿಯ ನಟ ಎಂಬ ಕಾರಣಕ್ಕೆ ರಮೇಶ್ ಭಟ್ ಅವರು ಹಾಗೆ ಸಂಬೋಧಿಸಿದ್ದೋ ಎಂಬ ಗೊಂದಲ ಕಾಡಿತು. ಗೆಳೆಯರ ನಡುವಿನ ‘ಬಹುವಚನ’ ಕಸಿವಿಸಿಗೂ ಕಾರಣವಾಯಿತು. ಆದರೆ, ವಿಷ್ಣುವರ್ಧನ್, ರಮೇಶ್ ಭಟ್ ಮತ್ತು ಫಣಿ ರಾಮಚಂದ್ರರಿಗೆ ಅದು ಸಹಜವೆನಿಸಿತ್ತು. ಚಿತ್ರೀಕರಣ ಮುಂದುವರೆದಿತ್ತು. ಆ ಕ್ಷಣದಲ್ಲಿ ವಿಷ್ಣುವರ್ಧನ್, ಹಿರಿಯ ಕಲಾವಿದ ಮತ್ತು ಸ್ಟಾರ್ ನಟ ಎನಿಸಿಕೊಂಡಿದ್ದರು. ಕನ್ನಡದ ಕೆಲ ಪತ್ರಕರ್ತರು ಕೂಡ ಅವರ ಅಭಿನಯದ ಬಗ್ಗೆ ವಸ್ತುನಿಷ್ಠವಾಗಿ ಬರೆಯದೆ, ಬೆಳೆಯದಂತೆ ಮಾಡಿಟ್ಟಿದ್ದರು, ಇರಲಿ.
ಬಹಳ ದೊಡ್ಡ ಅಥವಾ ಜನಪ್ರಿಯ ನಟರೆಂದರೆ, ಅವರೆಲ್ಲ ಶ್ರೇಷ್ಠ ಅಭಿನಯಕಾರರೇ ಆಗಬೇಕೆಂದಿಲ್ಲ. ಅದಕ್ಕೆ ಅನೇಕ ಉದಾಹರಣೆಗಳನ್ನೂ ಕೊಡಬಹುದು. ಆದರೆ ಅಭಿಮಾನಿಗಳ ಪ್ರೀತಿ ಅಸಾಧಾರಣ ರೀತಿಯಲ್ಲಿ, ಹಲವು ಬಗೆಯಲ್ಲಿ ವ್ಯಕ್ತವಾಗುತ್ತಿರುತ್ತದೆ. ಪರದೆ ಮೇಲಿನ ಪಾತ್ರ, ಅತಿರಂಜಿತ ನಿರೂಪಣೆ, ಅತಿಮಾನುಷ ವ್ಯಕ್ತಿತ್ವ, ವೈಶಿಷ್ಟ್ಯಗಳಿಂದ ಪ್ರೇಕ್ಷಕರು ನಟರನ್ನು ಆರಾಧಿಸುವಂತಹ ಸಂದರ್ಭ ಸೃಷ್ಟಿಯಾಗುತ್ತದೆ.
ಆದರೆ, ಮಲಯಾಳಂ ಚಿತ್ರರಂಗದ ಹಿರಿಯ ಕಲಾವಿದ ಮಮ್ಮುಟ್ಟಿಯವರು ಆಯ್ಕೆ ಮಾಡಿಕೊಳ್ಳುವ ಚಿತ್ರಗಳು ಮತ್ತು ಪಾತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅವರೇ ಬೇರೆ, ಅವರ ವ್ಯಕ್ತಿತ್ವವೇ ಬೇರೆ ಎಂಬುದು ವೇದ್ಯವಾಗುತ್ತದೆ. ಅವರ ಅಭಿನಯ ಸಾಮರ್ಥ್ಯ ಮತ್ತು ಜನಸಾಮಾನ್ಯರ ಅಪಾರ ಅಭಿಮಾನ- ಇವೆರಡರ ಸಂಯೋಜನೆ ಅಪರೂಪದ್ದೆನಿಸುತ್ತದೆ. ಅವರ ಇತ್ತೀಚಿನ ಕೆಲವು ಮಲಯಾಳಂ ಚಿತ್ರಗಳು ಮತ್ತವುಗಳ ಅಸಾಂಪ್ರದಾಯಿಕ ಪಾತ್ರಗಳು, ಕಲಾವಿದರಿಗೆ ಪ್ರೇರಣೆಯಾಗಬಲ್ಲವು ಎಂಬ ನಿರೀಕ್ಷೆಯನ್ನೂ ಹುಟ್ಟುಹಾಕುತ್ತವೆ.
ಇದನ್ನು ಓದಿದ್ದೀರಾ?: ಕೈರೋ ಸ್ಟೇಷನ್: ಅರಬ್ ಸಿನೆಮಾದ ಆಧುನಿಕತೆಯ ಉದಯ ಮತ್ತು ಅಲಕ್ಷಿತ ಮಾನವನ ದುರಂತ
ಇತ್ತೀಚಿಗೆ, 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ‘ಕಳಂಕಾವಲ್’ ಚಿತ್ರವನ್ನೇ ನೋಡಿ. ಇದು ಸೈಕಾಜಿಕಲ್ ಕ್ರೈಮ್ ಥ್ರಿಲ್ಲರ್ ಚಿತ್ರ. ಸರಣಿ ಹಂತಕನಾಗಿರುವ ಪೊಲೀಸ್ ಪಾತ್ರದಲ್ಲಿ ಮಮ್ಮುಟ್ಟಿ ಕಾಣಿಸಿಕೊಂಡಿದ್ದಾರೆ. ಅಮಾಯಕ ವಿಧವೆಯರು, ಮದುವೆ ವಯಸ್ಸು ಮೀರಿದ ಮುಗ್ಧ ಮಹಿಳೆಯರು, ಅಸಹಾಯಕ ಬಡ ಹೆಂಗಸರಿಗೆ ಮದುವೆಯ ಆಮಿಷ ಒಡ್ಡಿ, ಬಲೆಗೆ ಬೀಳಿಸಿಕೊಂಡು, ಸಂಭೋಗದ ನಂತರ ಸೈನೇಡ್ ಕೊಟ್ಟ ಸಾಯಿಸುವ ಪಾತ್ರ. ನಿಮಗೆ ಸೈನೇಡ್ ಮೋಹನ್ ನೆನಪಾದರೂ ಆಶ್ಚರ್ಯವಿಲ್ಲ. ಅಂತಹ ಪಾತ್ರವನ್ನು ಸ್ಟಾರ್‌ಗಳು ಮಾಡುವುದಿಲ್ಲ, ಇರಲಿ. ಆ ಪಾತ್ರ ನಿರ್ವಹಿಸಿರುವ ಮಮ್ಮುಟ್ಟಿ, ಕೊಲ್ಲುವಾಗ ವಿಚಿತ್ರ ಉನ್ಮಾದ ತೋರುವ, ಸಿಗರೇಟ್ ಸೇದುವ- ಸುರುಳಿ ಹೊಗೆ ಬಿಡುವ-ಅಗಿದು ನುಂಗುವ ವಿಕೃತಿ ಮೆರೆದಿದ್ದಾರೆ. ಅದು ನೋಡುಗರಲ್ಲಿ ಅಸಹ್ಯ ಭಾವನೆ ಉಂಟುಮಾಡುತ್ತದೆ.
ಆದರೆ, ಸೂಪರ್‌ಸ್ಟಾರ್ ಮಮ್ಮುಟ್ಟಿ, ಅದೊಂದು ಪಾತ್ರ, ನಾನೊಬ್ಬ ನಟ ಎಂಬಂತೆ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ನಿರ್ದೇಶಕ ಜಿತಿನ್ ಕೆ. ಜೋಸ್‌ಗೆ ಅದು ಮೊದಲ ಚಿತ್ರ. ಹೊಸ ನಿರ್ದೇಶಕನೊಂದಿಗೆ ಕೆಲಸ ಮಾಡಲು ಹಿರಿಯ ಕಲಾವಿದನಿಗೆ ಯಾವ ಹಮ್ಮೂ ಇಲ್ಲ ಬಿಮ್ಮೂ ಇಲ್ಲ. ಈಗ ಆ ಚಿತ್ರ ಗಳಿಸಿದ ಹಣಕ್ಕೆ ಲೆಕ್ಕವೇ ಇಲ್ಲ.

ಇದೊಂದೇ ಅಲ್ಲ, 2023ರಲ್ಲಿ ಬಂದ ‘ಕಾಥಲ್- ದ ಕೋರ್’ ಚಿತ್ರದ ‘ಗೇ’ ಪಾತ್ರವನ್ನು, ಯಾವ ಸೂಪರ್‌ಸ್ಟಾರ್ ಕೂಡ ಮಾಡುವುದಿಲ್ಲ. ಸಮಲೈಂಗಿಕತೆಯಿಂದ ದೂರ ಸರಿದು, ಮತ್ತೊಬ್ಬ ಪುರುಷನ ಲೈಂಗಿಕ ಆಕರ್ಷಣೆಗೆ ಒಳಗಾಗುವ ಪಾತ್ರ. ಆದರೆ ಆ ಪಾತ್ರ, ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಂತೆ ವರ್ತಿಸುತ್ತದೆ; ಪತ್ನಿ ಮತ್ತು ಮಗಳೊಂದಿಗೆ ಪರಿಪೂರ್ಣ ಕುಟುಂಬ ಜೀವನ ನಡೆಸುತ್ತದೆ. ಯಾರಿಗೂ ಯಾವ ಅನುಮಾನವೂ ಬರುವುದಿಲ್ಲ. ಆದರೆ ಅವನೊಂದಿಗೆ ಬದುಕುವ ಪತ್ನಿಯ ತಲ್ಲಣಗಳೇ ಬೇರೆ. ಕೊನೆಗೊಮ್ಮೆ ಪತ್ನಿಯೇ ಸಿಡಿದೆದ್ದು ಸಮಾಜದೆದುರು ಗಂಡನ ಮುಖವಾಡವನ್ನು ಕಳಚುತ್ತಾಳೆ. ಪುರುಷ ಪಾತ್ರ ಬೆತ್ತಲಾಗುತ್ತದೆ; ಮಹಿಳೆಯ ಪಾತ್ರ ಘನತೆ-ಗೌರವದಿಂದ ತಲೆ ಎತ್ತಿ ನಿಲ್ಲುತ್ತದೆ. ಮಮ್ಮುಟ್ಟಿ ಅಲ್ಲದೆ, ಮತ್ತೊಬ್ಬರು ಅಭಿನಯಿಸಲು ಒಪ್ಪದ ಪಾತ್ರ.
ಅದೇ ರೀತಿಯ ಮತ್ತೊಂದು ಚಿತ್ರ, 2022ರಲ್ಲಿ ಬಂದ ‘ನನ್ಪಾಕಲ್ ನೆರಥು ಮಯಕ್ಕಮ್’. ಸಾಮಾನ್ಯ ವ್ಯಕ್ತಿಯೊಬ್ಬನ ಪಾತ್ರ. ಒಬ್ಬನೇ ಎರಡು ಪಾತ್ರವಾಗಿ ಜೀವಿಸುವ ಪಾತ್ರ. ಕೇರಳದ ಯಾವುದೋ ಹಳ್ಳಿಯ ಜೋಸೆಫ್, ತಮಿಳುನಾಡಿನ ದೂರದ ಹಳ್ಳಿಗೆ ಹೋಗಿ, ಅಲ್ಲಿಯ ನಿವಾಸಿಯಂತೆ, ಆ ಹಳ್ಳಿಯವರೊಂದಿಗೆ ಬದುಕುವ ಪಾತ್ರ. ಈ ಮನೆಯ ಸದಸ್ಯನಾಗಿ ಇಲ್ಲೂ ಜೀವಿಸುವ, ಆ ಮನೆಯ ಮಗನಾಗಿ ಅಲ್ಲೂ ಓಡಾಡಿಕೊಂಡಿರುವ- ನೋಡುಗರಲ್ಲಿ ಗೊಂದಲ ಮೂಡಿಸುವ ಪಾತ್ರ. ಅಲೌಕಿಕ ಅನುಭವಗಳನ್ನು ಹುಟ್ಟುಹಾಕುವ ಪಾತ್ರ. ಮಮ್ಮುಟ್ಟಿಗೆ ಅದು ಕೇವಲ ಒಂದು ಪಾತ್ರ.

ಇವೆಲ್ಲವೂ ಸೂಪರ್‌ಸ್ಟಾರ್‌ಗಳು ನಿರ್ವಹಿಸದ ಪಾತ್ರಗಳು. ಪರಸ್ಪರ ಭಿನ್ನವಾದ ಪಾತ್ರಗಳು. ಅಷ್ಟೇ ಅಲ್ಲ, ಈ ಚಿತ್ರಗಳಲ್ಲಿ ಕೆಲವನ್ನು ಮಮ್ಮುಟ್ಟಿಯೇ ಹಣ ಹಾಕಿ ನಿರ್ಮಿಸಿದ್ದೂ ಇದೆ. ಹಾಗಂತ ತಮ್ಮ ಅಭಿನಯ ಸಾಮರ್ಥ್ಯ ತೋರಲು ತೆಗೆದ ಪ್ರಯೋಗಾತ್ಮಕ ಚಿತ್ರಗಳಲ್ಲ; ವಿಭಿನ್ನ ಚಿತ್ರಗಳನ್ನು ಪ್ರೋತ್ಸಾಹಿಸಬೇಕೆನ್ನುವ ಬದ್ಧತೆ ಅಷ್ಟೇ.
ಆ ಮೂಲಕ ಭಾರತೀಯ ಚಿತ್ರರಂಗದಲ್ಲಿ ಕಾಣದ, ಸೂಪರ್ ಸ್ಟಾರ್‌ಡಮ್ ನಿಯಮಗಳನ್ನು ಮುರಿದು ಹೊಸ ಮಾದರಿ ಕಟ್ಟುವ ಕೆಲಸದಲ್ಲಿ ಮಮ್ಮುಟ್ಟಿ ಮುಂದಿದ್ದಾರೆ. ಅವರ ಇತ್ತೀಚಿನ ಆಯ್ಕೆಗಳು, ಸೂಪರ್‌ಸ್ಟಾರ್ ಇಮೇಜ್ ಬಗ್ಗೆ ಅತಿಯಾಗಿ ಕಾಳಜಿ ವಹಿಸುವುದಕ್ಕಿಂತ; ಅಭಿನಯ, ಭಿನ್ನ ಚಿತ್ರ ಮತ್ತು ಚಿತ್ರ ನಿರ್ಮಾಣದ ಕೌಶಲ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಕಲಾವಿದನ ಕಾಣ್ಕೆಯನ್ನು ಬಿಂಬಿಸುತ್ತವೆ. ಈ ಕಾರಣದಿಂದಾಗಿಯೇ ಭಾರತೀಯ ಚಿತ್ರರಂಗದ ಇತಿಹಾಸವು ಮಮ್ಮುಟ್ಟಿಯನ್ನು ಅವರ ಸಮಕಾಲೀನರಿಂದ ವಿಭಿನ್ನವಾಗಿ ಸ್ಮರಿಸಲಿದೆ.
ಇದನ್ನು ಓದಿದ್ದೀರಾ?: eko | ಮುಗಿದ ನಂತರವೂ ಕಾಡುವ-ಕೆಣಕುವ ಚಿತ್ರ
ಇದೇ ಸಂದರ್ಭದಲ್ಲಿ ಮಮ್ಮುಟ್ಟಿ ಸೆಲ್ಯೂಲಾಯ್ಡ್ ಜಗತ್ತಿಗೆ ಪ್ರಶ್ನೆಯನ್ನೂ ಎಸೆದಿದ್ದಾರೆ. ಅದೇನೆಂದರೆ, ಸೂಪರ್‌ಸ್ಟಾರ್‌ಗಳು ಇಮೇಜಿನ ಭಯಕ್ಕೆ ಬಿದ್ದು ಯಾಕೆ ಒಂದೇ ರೀತಿಯ ಸ್ಟೀರಿಯೋಟೈಪ್ ಕತೆ, ಪಾತ್ರಗಳ ಚಿತ್ರಗಳಲ್ಲಿ ಸಿಲುಕಿರಬೇಕು? ಬದಲಿಗೆ, ಸಾಂಪ್ರದಾಯಿಕ ಹಾದಿಯಿಂದ ಹೊರಬರುವ ಹೊಸಯೋಜನೆಗಳತ್ತ ಸೂಪರ್‌ಸ್ಟಾರ್‌ಗಳು ಮನಸ್ಸು ಮಾಡಿದ್ದೇ ಆದರೆ, ಭಿನ್ನ ಚಿತ್ರಗಳು ಹಾಗೂ ಹೊಸ ನಿರ್ದೇಶಕರು ಸಿನಿ ಕ್ಷೇತ್ರಕ್ಕೆ ಸಿಗುತ್ತಾರೆ. ಅವರ ಸೂಪರ್‌ಸ್ಟಾರ್ ಸ್ಥಾನಮಾನವೇ ಇಂತಹ ಆಯ್ಕೆಗಳಿಗೆ ಅವಕಾಶವಾಗಿ ಒದಗಿ ಬರುತ್ತದೆ. ಆದರೆ ಸಮಾನ ಯಶಸ್ಸು ಮತ್ತು ಜನಪ್ರಿಯತೆ ಹೊಂದಿರುವ ಇತರ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಮಮ್ಮುಟ್ಟಿಯಂತೆ ಪ್ರಯೋಗಕ್ಕೆ ಒಡ್ಡಿಕೊಳ್ಳುವುದುಂಟೆ?

ಲೇಖಕ, ಪತ್ರಕರ್ತ




