ಕರ್ನಾಟಕದಲ್ಲಿ ಅವಧಿ ಮುಗಿಯುತ್ತಿರುವ ಸಾವಿರಾರು ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳನ್ನು ನೇಮಿಸುವ ಸರ್ಕಾರದ ನಿರ್ಧಾರಕ್ಕೆ ಗ್ರಾಮ ಪಂಚಾಯತಿ ಸದಸ್ಯರ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 29ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ “ಜನಾಧಿಕಾರ ಸಮಾವೇಶ” ಹಮ್ಮಿಕೊಂಡಿದೆ.
ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜನವರಿ 16, 2026ರಂದು ಹೊರಡಿಸಿದ ಸುತ್ತೋಲೆಯಲ್ಲಿ (ಸಂಖ್ಯೆ: ಗ್ರಾಅವಂ 1003 ಗ್ರಾವಂಆ 2025) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 8(iii)ರ ಅಡಿಯ. ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾಧಿಕಾರಿಗಳನ್ನು ಅಡಳಿತಾಧಿಕಾರಿಗಳನ್ನಾಗಿ ನೇಮಿಸುವಂತೆ ಸೂಚಿಸಲಾಗಿದೆ. 2020-25 ಅವಧಿಯ ಗ್ರಾಮ ಪಂಚಾಯತಿಗಳು ಜನವರಿ-ಮಾರ್ಚ್ 2026ರೊಳಗೆ ವಿವಿಧ ದಿನಾಂಕಗಳಲ್ಲಿ ಅವಧಿ ಮುಗಿಯಲಿವೆ. ಚುನಾವಣೆಗಳನ್ನು ತಕ್ಷಣ ನಡೆಸುವ ಸಾಧ್ಯತೆ ಇಲ್ಲದ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿದೆ. ಸರ್ಕಾರದ ನಿರ್ಧಾರವನ್ನು ‘ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟ” ತೀವ್ರವಾಗಿ ಖಂಡಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯ ಪೊಲೀಸ್ ವ್ಯವಸ್ಥೆ ಕೆಡಲು ಕಾರಣರಾರು?
ಅಡಳಿತಾಧಿಕಾರಿ ನೇಮಕದ ಬದಲು ಪ್ರಸ್ತುತ ಆಡಳಿತ ಸಮಿತಿಯನ್ನೇ ಮುಂದುವರಿಸಿ 6 ತಿಂಗಳುಗಳ ಕಾಲ ವಿಸ್ತರಣೆ ನೀಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಆಗ್ರಹಿಸಿದೆ. ಅಧಿನಿಯಮದ ಸೆಕ್ಷನ್ 8(1)(i)ರ ಪ್ರಕಾರ, ಚುನಾಯಿತ ಸದಸ್ಯರನ್ನೊಳಗೊಂಡ ಅಡಳಿತ ಸಮಿತಿಯನ್ನು ನೇಮಿಸುವ ಆಯ್ಕೆ ಇದ್ದರೂ ಸರ್ಕಾರ ಉಪಸೆಕ್ಷನ್ (ii)ಯಡಿ ಅಡಳಿತಾಧಿಕಾರಿ ನೇಮಕದ ಆಯ್ಕೆಯನ್ನು ಆರಿಸಿಕೊಂಡಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
2020ರಲ್ಲಿ ಕೋವಿಡ್ ಸಮಯದಲ್ಲಿ ಅಂದಿನ ವಿರೋಧಪಕ್ಷದ ನಾಯಕರಾಗಿದ್ದ ಸಿಎಂ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಹ ಇದೇ ಬೇಡಿಕೆ ಇಟ್ಟಿದ್ದನ್ನು ಸಂಘಟನೆ ಈ ಸಂದರ್ಭದಲ್ಲಿ ನೆನಪಿಸಿದೆ. ಈಗ ಅದೇ ಬೇಡಿಕೆ ಈಡೇರಿಸಬೇಕೆಂದು ಮಹಾ ಒಕ್ಕೂಟ ಒತ್ತಾಯಿಸಿದೆ.
ಹಾಗೆಯೇ, 2025-26ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನ ಮತ್ತು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಸಂಘಟನೆ ಆಗ್ರಹಿಸಿದೆ. ನಾಳೆ (ಜನವರಿ 29) ನಡೆಯಲಿರುವ ಜನಾಧಿಕಾರ ಸಮಾವೇಶದಲ್ಲಿ ಸಾವಿರಾರು ಗ್ರಾಮ ಪಂಚಾಯತಿ ಸದಸ್ಯರು ಮತ್ತು ನಾಗರಿಕರು ಭಾಗವಹಿಸಲಿದ್ದಾರೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಪ್ರಜಾಪ್ರಭುತ್ವದ ತಳಮಟ್ಟದ ಆಡಳಿತವನ್ನು ಕಾಪಾಡಬೇಕೆಂದು ಸಂಘಟನೆ ಕೋರಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾಡಪೆಟ್ಟಿಹಳ್ಳಿ ಸತೀಶ್ ತಿಳಿಸಿದ್ದಾರೆ.





