ದರ ನಿಗದಿ ಸಮಿತಿ ಶಿಫಾರಸು ಮಾಡಿದ ಅವಧಿಯೊಳಗೆ ಮೆಟ್ರೋ ಆಡಳಿತವು ಒಪಲೇಬೇಕಿದೆ ಮತ್ತು ಜಾರಿ ಮಾಡಬೇಕು. ಆದರೆ, ರಾಜ್ಯಸರ್ಕಾರಕ್ಕೆ ಅಥವಾ ಬಿಎಂಆರ್‌ಸಿಎಲ್‌ಗೆ ಶಿಫಾರಸುಗಳನ್ನು ರದ್ದುಗೊಳಿಸುವ ಅಥವಾ ಉಲ್ಲಂಘಿಸುವ ಕಾನೂನಾತ್ಮಕ ಅಧಿಕಾರವಿರುವುದಿಲ್ಲ. ಜೊತೆಗೆ ರಾಜ್ಯ ಸರ್ಕಾರ ಮೆಟ್ರೋ ದರ ನಿಗದಿ ಆಗಲಿ ಅಥವಾ ಪರಿಷ್ಕರಣೆ ಆಗಲಿ ಮಾಡಲು ಬರುವುದಿಲ್ಲ.
ದೇಶದಲ್ಲೇ ಎರಡನೇ ಅತಿದೊಡ್ಡದಾದ 96.10 ಕಿ.ಮೀ ಮೆಟ್ರೋ ಜಾಲ ಹೊಂದಿರುವ ಬೆಂಗಳೂರಿನ ʼನಮ್ಮ ಮೆಟ್ರೋʼ ಕೇವಲ ಸಾರಿಗೆ ವ್ಯವಸ್ಥೆ ಮಾತ್ರವಲ್ಲ; ನಗರದ ಬೆಳವಣಿಗೆಗೆ ಸಕಾರವಾಗುವ ಹಾಗೂ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು, ಹಾಗೂ ಸಾಮಾನ್ಯ ಕುಟುಂಬಗಳ ಕನಸುಗಳನ್ನು ಹೊತ್ತೊಯ್ಯುವ ಜೀವನಾಡಿಯ ಸಂಕೇತವಾಗಿದೆ. ಎಲ್ಲರಿಗೂ ಸುಲಭವಾಗಿ ಸಿಗಬೇಕಾದ ʼನಮ್ಮ ಮೆಟ್ರೋʼ, ಈಗ ಮಧ್ಯಮ ವರ್ಗದವರಿಂದ ದೂರವಾಗುವಂತೆ ಭಾಸವಾಗುತ್ತಿದೆ.
ಈಚಿನ ದಿನಗಳಲಿ ಮೆಟ್ರೋ ʼಪ್ರಯಾಣ ದರʼ ದುಬಾರಿಯಾಗುತ್ತಿದೆ. ಗಗನ ಮುಟ್ಟುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೇ ಮೇಟ್ರೋ ಪ್ರಯಾಣ ದರ ಪರಿಷ್ಕರಣೆಯೂ ಪ್ರಯಾಣಿಕರಿಗೆ ಆತಂಕ ಉಂಟುಮಾಡುತ್ತಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು, ಪ್ರತಿದಿನದ ಸಂಚರಿಸುವ ಲಕ್ಷಾಂತರ ಪ್ರಯಾಣಿಕರಿಗೆ ʼಮೆಟ್ರೋ ದರʼ ಅನುಕೂಲವಾಗುವಂತೆ ಮಾಡುವ ಬದಲು ರಾಜಕೀಯ ಮಾಡುತ್ತಾ ಬೀದಿಗೆ ಬಂದಿವೆ. ಒಂದು ಕಡೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ, ಕೇಂದ್ರದತ್ತ ಬೊಟ್ಟು ಮಾಡಿದರೆ, ಕೇಂದ್ರದ ಮಂತ್ರಿಗಳು ಮತ್ತು ರಾಜ್ಯದ ಸಂಸದ ತೇಜಸ್ವಿ ಸೂರ್ಯ ʼರಾಜ್ಯ ಸರ್ಕಾರವೇ ಕಾರಣʼ ಎಂದು ಬೀದಿಯಲ್ಲಿ ಹೈಡ್ರಾಮಾ ಮಾಡುತ್ತಿದ್ದಾರೆ. ಇವರಿಬ್ಬರ ನಾಟಕದಲ್ಲಿ ಸಾಮಾನ್ಯ ಪ್ರಯಾಣಿಕರ ಪಾಡನ್ನು ಕೇಳುವವರ್ಯಾರು?
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಇದೇ ಫೆ.09 ರಿಂದ ಶೇ 5 ರಷ್ಟು ಮೆಟ್ರೋ ದರವನ್ನು ಏರಿಕೆ ಮಾಡಲಾವುದು ಎಂದು ತಿಳಿಸಿತ್ತು. ಈ ಏರಿಕೆಯಿಂದ ಕನಿಷ್ಠ ಬೆಲೆ 10 ರೂಪಾಯಿಂದ 11 ರೂಪಾಯಿಗೆ ಮತ್ತು ಗರಿಷ್ಠ 90 ರೂಪಾಯಿಂದ 95ರೂಗಳಿಗೆ ಏರಿಕೆಯಯಾಗುತ್ತಿತ್ತು.
ಇದನ್ನು ಓದಿ : ಪ್ರಾದೇಶಿಕ ಅಸಮಾನತೆ: ಹೊಣೆಗಾರಿಕೆ ಅಧಿಕಾರಸ್ಥರ ಮೇಲಿದೆ
ಶುಲ್ಕ ನಿಗದಿ ಸಮಿತಿ (ಎಫ್‌ಎಫ್‌ಸಿ) ವಾರ್ಷಿಕ ದರ ಪರಿಶೀಲನೆ ಮಾಡಿ ಶಿಫಾರಸ್ಸು ಮಾಡಿದ ನಂತರ ಬಿಎಂಆರ್‌ಸಿಎಲ್ ದರ ಏರಿಕೆಯ ಅನುಮೋದನೆ ಮುದ್ರೆ ಒತ್ತಿತ್ತು. ಈ ದರ ಪರಿಷ್ಕರಣೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಅನುಮತಿ ಅಗತ್ಯವಿಲ್ಲದೆ ಜಾರಿಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದರು. ಆದರೆ ಈ ಪರಿಷ್ಕರಣೆಗೆ ಸದ್ಯ ತಾತ್ಕಾಲಿಕ ತಡೆ ಬಿದ್ದಿದೆ.
ದರ ಏರಿಕೆ ಮಾಡದಂತೆ ಕೇಂದ್ರ ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ನೀಡಿದ ಸೂಚನೆ ಮೇರೆಗೆ ಭಾನುವಾರ(ಫೆ.08) ರಾತ್ರಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ.ರವಿಶಂಕರ್ ಅವರು ದರ ಏರಿಕೆಯನ್ನು ಮುಂದೂಡುವ ಸೂಚನೆ ನೀಡಿದ್ದಾರೆ.
ಇದರ ನಡುವೆ ಬಿಜೆಪಿಯ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ಹಿಡಿದು ರಾಷ್ಟ್ರೀಯ ವಿದ್ಯಾಲಯ ರಸ್ತೆ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆಗೆ ಇಳಿದಿದ್ದರು. ಮೆಟ್ರೋ ನಿಲ್ದಾಣದಲ್ಲಿ ಪೂರ್ವಾನುಮತಿ ಪಡೆಯದೆ ಪ್ರತಿಭಟನೆಗೆ ಮುಂದಾಗಿದ್ದಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸತ್ತಿನಲ್ಲಿ ಮೆಟ್ರೋ ಪ್ರಯಾಣದ ಬಗ್ಗೆ ಧ್ವನಿ ಎತ್ತದ ಸಂಸದ ಸೂರ್ಯ ಬೀದಿಗೆ ಬಂದು ಪ್ರಹಸನ ಮಾಡುತ್ತಿರುವುದು ನಾಗರಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಬಿಜೆಪಿ ಮಾಡುತ್ತಿರುವ ಆರೋಪವು ಸತ್ಯಕ್ಕೆ ದೂರವಾದದ್ದು ಎಂದು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ. “ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಕೇಂದ್ರ ಸರ್ಕಾರದ್ದು. ನಾವೆಂದಿಗೂ ದರ ಏರಿಕೆ ಮಾಡಿಲ್ಲ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಪ್ರತಿಕ್ರಿಯಿಸಿ “ಅಸಮರ್ಪಕ ತೆರಿಗೆ ಹಂಚಿಕೆ, ನ್ಯಾಯಯುತ ಅನುದಾನದ ನಿರಾಕರಣೆ, ಮೂಲಭೂತ ಸೌಲಭ್ಯಗಳಿಗೆ ಬೆಂಬಲ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ ಮತ್ತು ಈಗ ಸಾಮಾನ್ಯ ಜನರ ಮೇಲೆ ಹೊರೆ ಹಾಕುವ ಮೆಟ್ರೋ ದರಗಳು, ಇವೆಲ್ಲವೂ ಕನ್ನಡಿಗರನ್ನು ಶೋಷಣೆಗೊಳಿಪಡಿಸಲು ಕೇಂದ್ರ ಸರ್ಕಾರದ ಅಸ್ತ್ರಗಳಾಗಿವೆ” ಎಂದು ಆರೋಪಿಸಿದ್ದಾರೆ.
ಮೆಟ್ರೋ ದರ ಏರಿಕೆ ಅಥವಾ ಪರಿಷ್ಕರಣೆಯ ಬಗ್ಗೆ ಪದೇ ಪದೇ ಗೊಂದಲ ಸೃಷ್ಟಿಯಾಗುತ್ತಿದೆ. ಸತ್ಯಾಸತ್ಯತೆಯನ್ನು ಬಿಟ್ಟು ರಾಜಕೀಯ ಮಾಡುವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಂಡವಾಳವಾಗಿದೆ. ಜನರ ಅಹವಾಲಿಗೆ ಕಿವಿಯಾಗಬೇಕಿರುವ ಜವಾಬ್ದಾರಿಯನ್ನು ಸರ್ಕಾರಗಳು ಮರೆತಂತಿದೆ.
ಮೆಟ್ರೋ ದರ ಏರಿಕೆ ಯಾರ ಹೊಣೆ?
ಮೆಟ್ರೋ ರೈಲ್ವೆ ಕಾರ್ಯಚರಣೆ ಮತ್ತು ನಿರ್ವಹಣಾ ಕಾಯ್ದೆ 2002ರ ಪ್ರಕಾರ ಮೆಟ್ರೋ ದರಗಳನ್ನು ಏರಿಕೆ ಮಾಡುವುದು ಅಥವಾ ಪರಿಷ್ಕರಣೆ ಮಾಡುವುದು ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಮೂಲಕ ರಚಿಸಲಾದ ಸ್ವತಂತ್ರ ಶುಲ್ಕ ನಿಗದಿ ಸಮಿತಿ (ಎಫ್‌ಎಫ್‌ಸಿ) ಯ ಜವಾಬ್ದಾರಿಯಾಗಿರುತ್ತದೆ. ಕೇಂದ್ರ ನಗರ ವ್ಯವಹಾರಗಳ ಸಚಿವಾಲಯವೇ ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತದೆ.
ದರ ನಿಗದಿ ಸಮಿತಿ ಶಿಫಾರಸು ಮಾಡಿದ ಅವಧಿಯೊಳಗೆ ಮೆಟ್ರೋ ಆಡಳಿತವು ಒಪಲೇಬೇಕಿದೆ ಮತ್ತು ಜಾರಿ ಮಾಡಬೇಕು. ಆದರೆ, ರಾಜ್ಯಸರ್ಕಾರಕ್ಕೆ ಅಥವಾ ಬಿಎಂಆರ್‌ಸಿಎಲ್‌ಗೆ ಶಿಫಾರಸುಗಳನ್ನು ರದ್ದುಗೊಳಿಸುವ ಅಥವಾ ಉಲ್ಲಂಘಿಸುವ ಕಾನೂನಾತ್ಮಕ ಅಧಿಕಾರವಿರುವುದಿಲ್ಲ. ಜೊತೆಗೆ ರಾಜ್ಯ ಸರ್ಕಾರ ಮೆಟ್ರೋ ದರ ನಿಗದಿ ಆಗಲಿ ಅಥವಾ ಪರಿಷ್ಕರಣೆ ಆಗಲಿ ಮಾಡಲು ಬರುವುದಿಲ್ಲ.
ದರ ನಿಗದಿ ಸಮಿತಿಯನ್ನು ಕೇಂದ್ರ ಸರ್ಕಾರವೇ ರಚಿಸುತ್ತದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯವರು ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಸಂಪೂರ್ಣ ಸಮಿತಿಯು ಕೇಂದ್ರ ಸರ್ಕಾರದ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಸಂಸತ್ತಿನಲ್ಲಿ ಕೇಂದ್ರದ ಸಚಿವರೇ ಶಿಫಾರಸುಗಳಿಗೆ ಅನುಮತಿ ನೀಡಿರುತ್ತಾರೆ.
ಪ್ರತಿಕ್ರಿಯೆ
ವಕೀಲರು, ಸಾಮಾಜಿಕ ಕಾರ್ಯಕರ್ತರಾದ ವಿನಯ್ ಶ್ರೀನಿವಾಸ್ ʼಈ ದಿನʼ ಜೊತೆ ಮಾತನಾಡಿ, “ಮೆಟ್ರೋ ದರ ಏರಿಕೆಗೆ ರಾಜ್ಯ ಮತ್ತು ಕೇಂದ್ರದ ಒಕ್ಕೂಟ ಸರ್ಕಾರಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಮೆಟ್ರೋ ಬೋರ್ಡ್‌ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದವರೇ ಇರುತ್ತಾರೆ. ಯೋಜನೆ ಯಶಸ್ವಿಯಾದಾಗ ತಮ್ಮದು ಹೇಳಿಕೊಳ್ಳುವ ಸರ್ಕಾರಗಳು, ದರ ಏರಿಕೆ ಆದಾಗಲೂ ಸಹ ಜವಾಬ್ದಾರಿಯಿಂದ ವರ್ತಿಸಬೇಕು” ಎಂದು ಆಗ್ರಹಿಸಿದರು.
“ಮೆಟ್ರೋ ಯೋಜನೆ ತಡವಾಗಿರುವುದೇ, ದರ ಏರಿಕೆಗೆ ಕಾರಣ. ತಡ ಆಗಿರುವುದಕ್ಕೆ ಸರ್ಕಾರಗಳೇ ನೇರ ಹೊಣೆ. ಮೆಟ್ರೋ ಮೊದಲ ಹಂತದ ಯೋಜನೆ ಆರಂಭವಾದಾಗ 6,500 ಕೋಟಿ ಎಂದಿದ್ದವರು ಮುಗಿಯುವ ಹಂತದಲ್ಲಿ 14,000 ಕೋಟಿಗೆ ತಂದಿದ್ದರು. ಅದೇ ರೀತಿ ಎರಡನೇ ಹಂತದಲ್ಲಿ 26,000 ಕೋಟಿಯಿಂದ 40,000 ಕೋಟಿಗೆ ಬಂದಿದೆ. ಇದಕ್ಕೆ ಜವಾಬ್ದಾರರು ಯಾರು?” ಎಂದು ಪ್ರಶ್ನಿಸಿದರು.
“ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರವು ಒಬ್ಬರೊನ್ನಬ್ಬರ ಮೇಲೆ ದೋಷಾರೋಪಣೆ ಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಮೆಟ್ರೋ ದರ ಏರಿಕೆಯ ಜೊತೆಗೆ, ಕಡಿಮೆ ಹಣದಲ್ಲಿ ಮೆಟ್ರೋವನ್ನು ಹೇಗೆ ಪ್ರಯಾಣಿಕರಿಗೆ ಒದಗಿಸಬಹುದು ಎಂಬ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಆಗಿದ್ದ ಮೆಟ್ರೋ ದರ ಏರಿಕೆ
2011ರಲ್ಲಿ 6.4 ಕಿ.ಮೀ ಉದ್ದದಷ್ಟು ಆರಂಭವಾದ ಬೆಂಗಳೂರಿನ ʼನಮ್ಮ ಮೆಟ್ರೋʼ ಮುಂದಿನ 15 ವರ್ಷಗಳಲ್ಲಿ 90 ಕಿ.ಮೀ.ಗಿಂತ ಹೆಚ್ಚು ದೂರವನ್ನೂ ಹಾಗೂ 80ಕ್ಕೂ ಹೆಚ್ಚು ನಿಲ್ದಾಣಗಳನ್ನು ತಲುಪುವ ಮಟ್ಟಕ್ಕೆ ಬಂದಿದೆ.
ಎಫ್‌ಎಫ್‌ಸಿ ಶಿಫಾರಸ್ಸಿನ ನಂತರ 2017 ಮತ್ತು 2025ರಲ್ಲಿ ಎರಡು ಬಾರಿ ಮಾತ್ರ ಮೆಟ್ರೋ ದರಗಳನ್ನು ಹೆಚ್ಚಿಸಲಾಗಿದೆ. ಎಫ್‌ಎಫ್‌ಸಿ ತನ್ನ ವರದಿಯಲ್ಲಿ ಸಿಬ್ಬಂದಿಯ ವೆಚ್ಚಗಳು, ಇಂಧನ ವೆಚ್ಚಗಳು, ನಿರ್ವಹಣಾ ವೆಚ್ಚವು 450 ಪ್ರತಿಶತಕ್ಕಿಂತ ಹೆಚ್ಚಾಗಿರುವುದರಿಂದ ಮೆಟ್ರೋ ದರ ಏರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಪ್ರಸ್ತುತ ಬೆಂಗಳೂರು ಮೆಟ್ರೋ ದರ ಎರಡು ಕಿಲೋ ಮೀಟರ್‌ಗಳವರೆಗೆ 10 ರೂಪಾಯಿ ಹಾಗೂ 25 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ ಗರಿಷ್ಠ 90ರೂಪಾಯಿ ಶುಲ್ಕ ನಿಗದಿಯಾಗಿದೆ. ಈಗ ಬಂದಿರುವ ಹೊಸ ದರ ಪರಿಷ್ಕರಣೆಯ ಪ್ರಕಾರ, ಈ ದರಗಳು ಕ್ರಮವಾಗಿ 11 ರೂಪಾಯಿ ಮತ್ತು 95 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ.
ಈ ತೀರ್ಮಾನವು ಕಳೆದ ವರ್ಷ ಏರಿಕೆಯಾಗಿದ್ದ ಮೆಟ್ರೋ ದರದ ಬಗ್ಗೆ ಗಮನ ಸೆಳೆದಿದೆ. 2025 ಫೆ.09 ರಂದು ಬಿಎಂಆರ್‌ಸಿಎಲ್ ಶೇ100 ರಷ್ಟು ಏರಿಕೆಗೆ ಆದೇಶ ಹೊರಡಿಸಿತ್ತು. ಇದರ ವಿರುದ್ಧ ತೀವ್ರತರವಾದ ಪ್ರತಿಭಟನೆಗಳು ನಡೆದವು. ವ್ಯಾಪಕ ಪ್ರತಿಭಟನೆಯ ಬಳಿಕ ಶೇ71 ರಷ್ಟು ಏರಿಕೆ ಮಾಡುವ ತೀರ್ಮಾನ ಮಾಡಿತು.ಈ ವರ್ಷದಂತೆ ಕಳೆದ ವರ್ಷವೂ ರಾಜಕೀಯ ಪ್ರಹಸನಗಳಿಗೆ ಮೆಟ್ರೋ ದರ ಪರಿಷ್ಕರಣೆ ಕಾರಣವಾಗಿತ್ತು.
ಮೊದಲು ಗರಿಷ್ಠ 60 ರೂಪಾಯಿ ಇದ್ದ ಮೆಟ್ರೋ ದರ ಕಳೆದ ವರ್ಷದ ಪರಿಷ್ಕರಣೆಯ ನಂತರ 90 ರೂಪಾಯಿಗೆ ಜಿಗಿಯಿತು. ಮೆಟ್ರೋ ಕಾರ್ಡ್‌ಗಳಿಗೆ ಕನಿಷ್ಠ 50ರೂಪಾಯಿಂದ 90 ರೂಪಾಯಿಗೆ ಹೆಚ್ಚಿಸಲಾಯಿತು.
ಒಟ್ಟಾರೆಯಾಗಿ ಮೆಟ್ರೋ ದರ ಏರಿಕೆಯ ಬಗ್ಗೆ ರಾಜ್ಯದ ಸಂಸದರು ಸಂಸತ್ತಿನಲ್ಲಿ ಪ್ರಶ್ನೆ ಮಾಡುವ ಬದಲು ರಾಜ್ಯದಲ್ಲಿ ಪ್ರಯಾಣಿಕರ ದಿಕ್ಕು ತಪ್ಪಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಸರಿಯಾಗಿ ಸಮರ್ಥಿಸಿಕೊಳ್ಳಲು ರಾಜ್ಯ ಸರ್ಕಾರವೂ ಸಹ ಹರಸಾಹಸ ಪಡುತ್ತಿದೆ.





