“ಬೆಂಗಳೂರು ನಮ್ಮ ಮೆಟ್ರೋ ದರ ಪರಿಷ್ಕರಣೆಯು ರಾಜ್ಯ ಸರ್ಕಾರದ ನಿರ್ಧಾರವಲ್ಲ, ಅದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸ್ವತಂತ್ರ ದರ ನಿಗದಿ ಸಮಿತಿಯ (FFC) ಶಿಫಾರಸಾಗಿದೆ. ಈ ವಿಷಯದಲ್ಲಿ ರಾಜ್ಯದ ಜನರನ್ನು ದಾರಿತಪ್ಪಿಸುವುದನ್ನು ಬಿಟ್ಟು, ಕರ್ನಾಟಕದ ಹಿತಾಸಕ್ತಿಗಾಗಿ ಬಿಜೆಪಿ ಸಂಸದರು ಕೇಂದ್ರದ ಬಳಿ ಧ್ವನಿ ಎತ್ತಲಿ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚಿನ ಮೆಟ್ರೋ ದರ ಏರಿಕೆಯ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಆತಂಕ ಮತ್ತು ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೆಟ್ರೋ ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಅದು ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಜೀವನಾಡಿ ಎಂಬುದನ್ನು ಸರ್ಕಾರ ಅರಿತಿದೆ. ಜನರ ಅಹವಾಲುಗಳೇ ನಮಗೆ ಆದ್ಯತೆಯಾಗಿದ್ದು, ಸತ್ಯಾಂಶವನ್ನು ಜನರ ಮುಂದಿಡುವುದು ತಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.
ಮೆಟ್ರೋ ದರ ಏರಿಕೆಯ ಹೊಣೆಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುತ್ತಿರುವ ಕ್ರಮವನ್ನು ‘ಅಪ್ರಾಮಾಣಿಕ ಮತ್ತು ದುಷ್ಟತನದ ನಡೆ’ ಎಂದು ಹೇಳಿರುವ ಮುಖ್ಯಮಂತ್ರಿಗಳು, ಮೆಟ್ರೋ ರೈಲ್ವೇಸ್ (ಆಪರೇಷನ್ ಮತ್ತು ಮೇಂಟೆನೆನ್ಸ್) ಕಾಯ್ದೆ-2002ರ ಉಲ್ಲೇಖ ನೀಡಿದ್ದಾರೆ. “ಈ ಕಾಯ್ದೆಯ ಅಡಿಯಲ್ಲಿ ದರಗಳನ್ನು ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಚಿಸುವ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ‘ದರ ನಿಗದಿ ಸಮಿತಿ’ (FFC) ದರವನ್ನು ನಿರ್ಧರಿಸುತ್ತದೆ. ಕಾಯ್ದೆಯ ಸೆಕ್ಷನ್ 36 ಮತ್ತು 37ರ ಪ್ರಕಾರ, ಈ ಸಮಿತಿಯ ಶಿಫಾರಸುಗಳನ್ನು ಮೆಟ್ರೋ ಆಡಳಿತವು ಕಡ್ಡಾಯವಾಗಿ ಜಾರಿಗೊಳಿಸಲೇಬೇಕಿದ್ದು, ಇದನ್ನು ರದ್ದುಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಾಗಲೀ ಅಥವಾ ಬಿಎಂಆರ್‌ಸಿಎಲ್‌ಗಾಗಲೀ ಇರುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು
ಕಾನೂನಿನ ಇತಿಮಿತಿಗಳಿದ್ದರೂ, ಜನಹಿತದ ದೃಷ್ಟಿಯಿಂದ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಸಿಎಂ ತಿಳಿಸಿದ್ದಾರೆ. “ದರ ಏರಿಕೆಯು ಪ್ರಯಾಣಿಕರಿಗೆ ಹೊರೆಯಾಗಬಾರದು. ಈ ನಿಟ್ಟಿನಲ್ಲಿ ದರ ನಿಗದಿ ಸಮಿತಿಯು ಶಿಫಾರಸು ಮಾಡಿರುವ ದರವನ್ನು ಮರುಪರಿಶೀಲಿಸಬೇಕು ಎಂದು ನಾನು ಕೇಂದ್ರ ಸರ್ಕಾರವನ್ನು ಔಪಚಾರಿಕವಾಗಿ ಒತ್ತಾಯಿಸಲಿದ್ದೇನೆ. ಪ್ರಮುಖವಾಗಿ ವಿದ್ಯಾರ್ಥಿಗಳು, ಬಡವರು ಮತ್ತು ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಸುಸ್ಥಿರ ಆರ್ಥಿಕತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ದರ ನಿಗದಿಪಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರದೊಂದಿಗೆ ಚರ್ಚಿಸಲಾಗುವುದು,” ಎಂದು ಅವರು ಭರವಸೆ ನೀಡಿದ್ದಾರೆ.
ದರ ಏರಿಕೆಯ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರ ನಡೆಯನ್ನು ಮುಖ್ಯಮಂತ್ರಿಗಳು ಕಟುವಾಗಿ ಟೀಕಿಸಿದ್ದಾರೆ. “ಸಂಸತ್ತಿನಲ್ಲಿ ಈ ಶಿಫಾರಸುಗಳನ್ನು ಕಡ್ಡಾಯಗೊಳಿಸಿದವರೇ ಈಗ ರಾಜ್ಯದ ಮೇಲೆ ಗೂಬೆ ಕೂಡಿಸುತ್ತಿದ್ದಾರೆ. ದೆಹಲಿಯಲ್ಲಿ ಕರ್ನಾಟಕದ ಹಿತ ಕಾಪಾಡಲು ವಿಫಲರಾಗಿರುವ ಬಿಜೆಪಿ ಸಂಸದರು ಮತ್ತು ಸಚಿವರು, ಅಲ್ಲಿ ಬಾಯಿ ಮುಚ್ಚಿ ಕುಳಿತು, ಇಲ್ಲಿ ದೆಹಲಿ ಸರ್ಕಾರದ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಕೇಂದ್ರದಲ್ಲಿನ ಉನ್ನತ ದರದ ಸ್ಲ್ಯಾಬ್‌ಗಳನ್ನು ಇವರು ಏಕ ವಿರೋಧಿಸಲಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಇದು ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ, ಬದಲಿಗೆ ತೆರಿಗೆ ಹಂಚಿಕೆ, ಅನುದಾನ ತಾರತಮ್ಯದಂತೆ ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ಎಸಗುತ್ತಿರುವ ಅನ್ಯಾಯದ ಸರಣಿಯ ಭಾಗವಾಗಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ದುರ್ಬಲಗೊಳಿಸುವ ಕೇಂದ್ರದ ನೀತಿಗಳ ವಿರುದ್ಧ ಮತ್ತು ರಾಜ್ಯದ ಜನರ ಹಿತರಕ್ಷಣೆಗಾಗಿ ತಮ್ಮ ಸರ್ಕಾರ ದೃಢವಾಗಿ ನಿಲ್ಲಲಿದ್ದು, ಯಾವುದೇ ಅನ್ಯಾಯಕ್ಕೂ ತಕ್ಕ ಉತ್ತರ ನೀಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.





