ಹೊಸ ಓದು | ‘ಎದೆಯ ಹಣತೆ’ಯ ಬೆಳಕು, ಬೆಳಕಿನೊಳಗಣ ಕಿಡಿಗೆ ‘ಎದೆಯ ನುಡಿ’ಯ ಸ್ಪಂದನ

Date:

'ಎದೆಯ ನುಡಿ' ವಿಮರ್ಶಾಪ್ರಬಂಧಗಳ ಸಂಕಲನವು 'ಎದೆಯ ಹಣತೆ'ಯ ಬೆಳಕು, ಬೆಳಕನೊಳಗಣ ಕಿಡಿಯ ಕಂಡಿರಿಸುವ ವಿನಮ್ರ ಕಾಯಕದ ಫಸಲು. ಕನ್ನಡ ವಿಮರ್ಶಾಕ್ಷೇತ್ರದ ಭವಿಷ್ಯದ ಕುರಿತ ಆತಂಕವನ್ನು ಸಕಾರಣವಾಗಿ ಒಂದಷ್ಟು ತಗ್ಗಿಸುವ ಭರವಸೆಯನ್ನಂತೂ ಈ ಸಂಕಲನ ಮೂಡಿಸಿದೆ. 

ಜಾಗತಿಕ ಮಟ್ಟದ ಬೂಕರ್ ಪ್ರಶಸ್ತಿ ಜಗತ್ತಿನ ಕಣ್ಣನ್ನು ಕನ್ನಡದತ್ತ ತಿರುಗಿಸಿತು. ಕನ್ನಡ ಸಾಹಿತ್ಯಕ್ಕೆ ಮತ್ತೊಮ್ಮೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿತು. ಈ ಸಂಭ್ರಮ ‘ಎದೆಯ ಹಣತೆ’ಯ ಬೆಳಕನ್ನು ಕಾಣುವ ಹಾದಿಯಲ್ಲಿ ಎಚ್ಚೆತ್ತ ಕನ್ನಡದ ಮನಸುಗಳನ್ನು ತೊಡಗಿಸಿತು.  

ಬಾನು ಅವರಿಗೆ ‘ಬೂಕರ್’ ಪ್ರಶಸ್ತಿ ಸಂದ ನಂತರ ಕರ್ನಾಟಕದ ಹಲವು ಭಾಗಗಳಲ್ಲಿ, ನಾಡಿನ ಒಳಗೂ, ಹೊರಗೂ, ಸಾಹಿತ್ಯ ಜಾತ್ರೆಗಳಲ್ಲಿಯೂ ಅವರನ್ನು ಅಭಿನಂದಿಸಿ ಗೌರವಿಸುವ ಕೆಲಸಗಳು ನಡೆಯುತ್ತಿವೆ. ಆದರೆ ಒಬ್ಬರು ಸಾಹಿತಿಗೆ ನಿಜವಾದ ಮನ್ನಣೆ ಎಂದರೆ ಅವರು ಸೃಜಿಸಿದ ಸಾಹಿತ್ಯವನ್ನು ಜನರು ಓದುವುದು ಮತ್ತು ಈ ಸಾಹಿತಿಯ ಸಾಹಿತ್ಯದ ಕುರಿತ ಚರ್ಚೆಗಳು ಮೌಖಿಕವಾಗಿ ಮತ್ತು ಬರಹಗಳಲ್ಲಿ ನಡೆಯುವುದು. ಜ್ಞಾನಪೀಠ, ಅಕಾಡೆಮಿ ಪ್ರಶಸ್ತಿಗಳು ಬಂದಾಗ ಆ ಕೃತಿಗಳು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಜನರಿಂದ ಖರೀದಿಯಾಗಿ ಓದಿಗೆ ತೆರೆದುಕೊಳ್ಳುವುದು ಸಾಮಾನ್ಯ. ಆದರೆ ಪ್ರಶಸ್ತಿ ಬಂದ ನಂತರ ಬಾನು ಅವರ ಸಾಹಿತ್ಯಕೃತಿಗಳು ಕರ್ನಾಟಕ ಮಾತ್ರವಲ್ಲದೆ ಅದರ ಇಂಗ್ಲಿಷ್ ಆವೃತ್ತಿ ಲಕ್ಷಗಳ ಪ್ರಮಾಣದಲ್ಲಿ ಜನರಿಂದ ಸ್ವೀಕಾರವಾಗುತ್ತಿರುವುದು ವಿಶೇಷ ಬೆಳವಣಿಗೆ. ಪ್ರತಿಷ್ಠಿತ ಎಂದು ಪ್ರಚಾರದಲ್ಲಿದ್ದರೂ ಸೀಮಿತ ವರ್ಗದ ಜನರನ್ನು ಒಳಗೊಳ್ಳುವ ಲಿಟರರಿ ಫೆಸ್ಟ್‌ಗಳಲ್ಲಿಯೂ ಬಾನು ಅವರ ಕಥೆಗಳು ಚರ್ಚೆಗೆ ಒಳಗಾಗುತ್ತಿವೆ.

ಕಳೆದ ಒಂದೂವರೆ ವರ್ಷಗಳಿಂದ ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಯುವ ತಲೆಮಾರನ್ನು ಸಜ್ಜುಗೊಳಿಸುವ ದಿಸೆಯಲ್ಲಿ ಕನ್ನಡ ಸಂಶೋಧನ ಅಕಾಡೆಮಿಯ ಯುವಮಿತ್ರರು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ಅವರೀಗ, ಕನ್ನಡ ಸಾಹಿತ್ಯದ ಗಂಭೀರ ಓದುಗರಾದ ಕನ್ನಡ ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಂದ ಬಾನು ಅವರ ಕಥೆಗಳ ಮೇಲೆ ವಿಮರ್ಶಾಪ್ರಬಂಧಗಳನ್ನು ಆಹ್ವಾನಿಸಿ ಉತ್ತಮ ಪ್ರಬಂಧಗಳನ್ನು ಸಂಕಲಿಸಿ ‘ಎದೆಯ ನುಡಿ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಮೂಲಕ ಬಾನು ಅವರ ಕಥನಸಾಹಿತ್ಯವನ್ನು ಗಂಭೀರ ಚರ್ಚೆಗೆ ಒಳಪಡಿಸುವ ಸಾಹಿತ್ಯಕ ಜವಾಬ್ದಾರಿಯೊಂದನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಎದೆಯ ನುಡಿ’ ಕೃತಿಯ ವಿಮರ್ಶಾ ಪ್ರಬಂಧಗಳ ರಚನೆಯ ಹಿಂದೆಯೂ ಬಾನು ಅವರ ಕಥೆಗಳ ಹಲವು ಆಯಾಮಗಳ ಓದು, ಸ್ತ್ರೀವಾದಿ ಚಿಂತನೆಗಳ ಅರಿವು, ಪುರುಷಾಧಿಪತ್ಯದ ಸಾಮಾಜಿಕ ವ್ಯವಸ್ಥೆ, ಈ ವ್ಯವಸ್ಥೆಯೂ ನಿಧಾನಕ್ಕೆ ಸಡಿಲಗೊಳ್ಳುತ್ತಿರುವ ಮತ್ತು ಆಧುನಿಕ ಪೋಷಾಕಿನಲ್ಲಿ ಬಿಗಿಗೊಳ್ಳುತ್ತಿರುವ  ಇಬ್ಬಗೆಯ ನಡೆಯ ಎಚ್ಚರ, ಸಾಹಿತ್ಯೇತರ ಜ್ಞಾನಶಾಖೆಗಳ ಓದು, ಮಹಿಳೆಯರನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವ ಹತಾರುಗಳಾದ ಧರ್ಮಗ್ರಂಥದ ಅಧ್ಯಯನ, ಮತ್ತು ಈ ಎಲ್ಲಾ ಅರಿವು, ಅಧ್ಯಯನ, ಓದಿನಿಂದ ಮೂಡಿದ ವಿವೇಕದ ಬೆಳಕಿದೆ. ಈ ಲೇಖನದಲ್ಲಿ ಪ್ರಾತಿನಿಧಿಕವಾಗಿ ಕೆಲವು ಪ್ರಬಂಧಗಳ ವಿಶಿಷ್ಟತೆಗಳ ಕಡೆ ಗಮನ ಸೆಳೆಯಲು ಪ್ರಯತ್ನಿಸಲಾಗಿದೆ.

”ಬಾನು ಮುಷ್ತಾಕ್ ಕಥನಗಳಲ್ಲಿ ಅಧಿಕಾರ, ಅಸ್ಮಿತೆ ಮತ್ತು ಪ್ರತಿರೋಧ” (ಡಾ. ರವಿ ಎಂ.) ಪ್ರಬಂಧದಲ್ಲಿ ಹಲವು ಜ್ಞಾನಶಿಸ್ತುಗಳ ಓದಿನ ಹಿನ್ನೆಲೆಯಿಂದ ದಕ್ಕಿದ ಒಳನೋಟಗಳಿವೆ. ಮತ್ತು ಈ ಒಳನೋಟಗಳು ಪಾಂಡಿತ್ಯದ ಪ್ರದರ್ಶನವಾಗದೇ ಬಾನು ಅವರ ಕಥೆಗಳು ಅಂತರ್ಗತಗೊಳಿಸಿಕೊಂಡ ಧ್ವನಿಗೆ ಸಹಜವಾಗಿ ಲಗತ್ತಾಗುತ್ತವೆ. ”ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳು ಹೇಗೆ ಲಿಂಗ ರಾಜಕಾರಣದಿಂದ ನಿರ್ಮಿಸಲ್ಪಟ್ಟಿವೆ ಮತ್ತು ಹೆಣ್ಣಿನ ಚಲನವಲನವನ್ನು ನಿಯಂತ್ರಿಸಲು ಬಳಸಲ್ಪಡುತ್ತವೆ ಎಂಬುದನ್ನು ಅವರ ಕಥನಗಳು ಶೋಧಿಸುತ್ತವೆ” ಎಂಬ ಪ್ರಬಂಧದ ಸಾಲುಗಳನ್ನು ಓದುವಾಗ ಬಾನು ಅವರ ಕಥೆಗಳಲ್ಲಿನ ಚಿತ್ರಣಗೊಂಡ ಮನೆಗಳ ಅಡುಗೆಮನೆ, ಹಿತ್ತಲು, ಕಿಟಕಿ, ಹಜಾರ, ಮಸೀದಿಯ ಗೇಟು, ಕಾಂಪೌಂಡು, ಆಸುಪಾಸಿನ ಓಣಿಗಳ ಸುತ್ತ ನಡೆಯುವ ಪಾತ್ರಗಳ ಮಾತು-ವರ್ತನೆಗಳ ಹಿಂದಿನ ರಾಜಕಾರಣಗಳು ಕಣ್ಣಮುಂದೆ ಬರುತ್ತವೆ.  

ಬಾನು ಮುಷ್ತಾಕ್ ಅವರ ಕಥೆಗಳನ್ನು ಒಂದು ಧರ್ಮದ ಪುರುಷಪ್ರಧಾನ ಸಮಾಜದಲ್ಲಿ ನಲುಗುವ ಹೆಣ್ಣುಗಳ ಕಥನವಾಗಿ ಗುರುತಿಸುವ ಸಾಂಪ್ರದಾಯಿಕ ವಿಮರ್ಶಾಮಾದರಿಗೆ ದೊಡ್ಡ ನೆಗೆತವನ್ನು ನೀಡಿ, ಜಾಗತಿಕ ಹಾಗೂ ಮಾನವಶಾಸ್ತ್ರೀಯ ಭಿತ್ತಿಯಲ್ಲಿ ಅವಲೋಕಿಸಿ, ”ಅಧಿಕಾರ, ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ ಜಗತ್ತಿನಾದ್ಯಂತ ನಡೆಯುತ್ತಿರುವ ಹೋರಾಟದ ಸಾರ್ವತ್ರಿಕ ಸ್ವರೂಪವನ್ನು ಧ್ವನಿಸುವ” ಕಥೆಗಳಾಗಿ ಗುರುತಿಸಿರುವುದು ಈ ಪ್ರಬಂಧವನ್ನು ಭಿನ್ನ ಸ್ತರದಲ್ಲಿ ನಿಲ್ಲಿಸಿದೆ.

deccanherald 2025 09 15 mohohsct file80xieqmfa0o169339gbl
ಬಾನು ಮುಷ್ತಾಕ್

”ಬಾನು ಮುಷ್ತಾಕ್ ಅವರ ಕತೆಗಳಲ್ಲಿ ತಾಯ್ತನದ ಆಯಾಮ” (ಡಾ.ಶೇಖರ ದೊಡ್ಡಿ) ಪ್ರಬಂಧವು, ಬಾನು ಮುಷ್ತಾಕ್ ಅವರ ಕತೆಗಳಲ್ಲಿ ತಾಯ್ತನದ ಆಯಾಮ ಹೇಗಿದೆ? ಅವುಗಳ ಸ್ವರೂಪವೇನು? ಏಕರೂಪಿಯಾಗಿವೆಯೇ ಇಲ್ಲ ಬಹು ಬಗೆಯಲ್ಲಿವೆಯೇ? ಬಹು ಬಗೆಯಲ್ಲಿ ವ್ಯಕ್ತವಾಗಿದ್ದರೆ, ಹೇಗೆ ಮತ್ತು ಯಾಕಾಗಿ? ಹಾಗೇ ಇರುವುದರ ಹಿಂದಿನ ತಾತ್ವಿಕತೆಯೇನು? ಯಾಕೆ ಬಾನು ಅವರ ಕತೆಗಳು ತಾಯ್ತನವನ್ನು ಮುಖ್ಯವೆಂದು ಪರಿಭಾವಿಸಿವೆ? ಅವರ ಕತೆಗಳಲ್ಲಿ ತಾಯ್ತನದ ವೈಭವೀಕರಣವಿದೆಯೇ? ಸಿದ್ಧ ಮಾದರಿಯ ತಾಯ್ತನದ ವಿಜೃಂಭಣೆಯಿದೆಯೇ? ಇಲ್ಲವಾದರೆ ಮತ್ತೆ ಹೇಗಿದೆ? ಎಲ್ಲಾ ಕತೆಗಳಲ್ಲೂ ಈ ತಾಯ್ತನದ ಆಯಾಮವಿರುವುದೆ? ಅವರ ಕತೆಗಳಲ್ಲಿ ತಾಯ್ತನಕ್ಕೆ ಯಾಕಿಷ್ಟು ಆದ್ಯತೆ ಸಿಕ್ಕಿದೆ? ತಾಯ್ತನವನ್ನು ಬಾನು ಕಥನ ಸಾಹಿತ್ಯ ಮತ್ತೆ ಮತ್ತೆ ಯಾಕೆ ಧ್ಯಾನಿಸಿದೆ- ಇಂತಹ ಪ್ರಮುಖ ಪ್ರಶ್ನಾವಳಿಗಳನ್ನು ರೂಪಿಸಿಕೊಂಡು ಅದಕ್ಕೆ ಬಾನು ಅವರ ಕಥೆಗಳ ಮೂಲಕವೇ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಲೇಖಕರು ಇಲ್ಲಿ ಮಾಡಿದ್ದಾರೆ. ಹೆಣ್ತನ ಮತ್ತು ತಾಯ್ತನವನ್ನು ಪ್ರತ್ಯೇಕವಾಗಿ ನೋಡುವ ಇಲ್ಲಿನ ಪ್ರಯತ್ನ ಹೊಸ ಹೊಳಹುಗಳನ್ನು ಹೊಮ್ಮಿಸಿವೆ. ಬಾನು ಅವರ ಸಾಹಿತ್ಯಕ್ಕೆ ನಮ್ಮ ಕನ್ನಡ ಸಾಹಿತ್ಯದ ವಿಮರ್ಶಾಲೋಕದ ತಣ್ಣನೆಯ ಪ್ರತಿಕ್ರಿಯೆಗೆ ಕಾರಣವನ್ನು ಶೋಧಿಸುವ ಪ್ರಯತ್ನವನ್ನೂ ಈ ಪ್ರಬಂಧ ಮಾಡಿದೆ. ಸಣ್ಣಕಥೆಗಳ ಮುಖ್ಯ ಆಂಥಾಲಜಿಗಳಲ್ಲೂ ಬಾನು ಅವರ ಕಥೆಗಳ ಗೈರುಹಾಜರಿಯ ಕಡೆಯೂ ಗಮನ ಸೆಳೆದಿದೆ.

ಇದನ್ನು ಓದಿದ್ದೀರಾ?: ಹಾಸನ ಮಣ್ಣಿನ ಹೆಣ್ಣು ಬೇರುಗಳು | ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಬಾನು ಅವರ ಒಂದೇ ಕಥೆಯನ್ನು ಆಯ್ದುಕೊಂಡು ರಚಿಸಿದ ಕೆಲವು ವಿಮರ್ಶಾಪ್ರಬಂಧಗಳು ಇಲ್ಲಿವೆೆ. ಪ್ರಾತಿನಿಧಿಕವಾಗಿ ನೋಡುವುದಾದರೆ ”ಬಾನು ಅವರ ಎದೆಯ ಹಣತೆ: ಕುಟುಂಬ ವ್ಯವಸ್ಥೆ ಮತ್ತು ಮಹಿಳೆ” (ಡಾ. ಸುಶ್ಮಿತಾ ವೈ.) ಪ್ರಬಂಧ. ಒಂದೇ ಕಥೆಯನ್ನಾಧರಿಸಿ ಈ ಪ್ರಬಂಧವಿದ್ದರೂ ಬಾನು ಅವರ ಕಥನದ ಬಹುಮುಖ್ಯ ನೆಲೆಗಳನ್ನು ಹೇಳುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಬಾನು ಅವರ ಕಥೆಗಳಲ್ಲಿನ ತಾಯ್ತನದ ಬಗ್ಗೆ ಚಿಂತಿಸುತ್ತ ‘ತಾಯ್ತನವೆನ್ನುವುದು ಲೋಕಪ್ರ‍್ರಸಿದ್ದವಾದ ಸುಕುಮಾರತನದ್ದು ಎನ್ನುವ ಮಿಥ್ಯೆಯನ್ನು ಒಡೆದು, ತಾಯ್ತನದಲ್ಲೂ ಬಂಡಾಯದ ಗುಣವಿರುವುದನ್ನು’ ಬಾನು ಅವರ ಕಥೆಗಳು ನಿರೂಪಿಸುತ್ತವೆ ಎನ್ನುವ ಒಳನೋಟವನ್ನು ಈ ಪ್ರಬಂಧ ನೀಡಿದೆ.

ಸಂಶೋಧನೆ ಮತ್ತು ವಿಮರ್ಶೆಯಲ್ಲಿ ತೊಡಗಿರುವ ನಾವು ಬಹು ಎಚ್ಚರದಲ್ಲಿ ಕೆಲವು ಸಂಗತಿಗಳನ್ನು ಗಮನಿಸಬೇಕಾಗಿದೆ. ಸಂಶೋಧನೆ ಮತ್ತು ವಿಮರ್ಶಾ ಪ್ರಬಂಧ ರಚನೆಗೆ ಸಹಜವಾಗಿಯೇ ಕೆಲವು ಸಿದ್ಧ ಮಾದರಿಗಳು ಸೃಷ್ಟಿಯಾಗಿವೆ. ಈಗ ಇವು ತಮ್ಮನ್ನು ಅನುಸರಿಸಿ, ಅನುಸರಿಸಿ ಸಿದ್ಧ ಮಾದರಿ ಎನಿಸುತ್ತವೆಯಾದರೂ ಇವುಗಳನ್ನು ಮೊದಲು ಸೃಷ್ಟಿಸಿದಾಗ ಆ ಕಾಲಘಟ್ಟಕ್ಕೆ ಆ ಮಾದರಿಯಲ್ಲಿ ಹುಟ್ಟಿದ ತಿಳಿವಳಿಕೆಗಳು ಹೊಸತನದಿಂದಲೇ ಮಿನುಗುತ್ತಿದ್ದವು. ಆದರೆ, ಬದಲಾದ ಸಮಾಜ, ಜೀವನಶೈಲಿ ಮತ್ತು ವಿವಿಧ ಜ್ಞಾನಶಾಖೆಗಳ ಅಧ್ಯಯನದ ಅರಿವಿನಿಂದ ಹೊಸ ತಿಳಿವಳಿಕೆಗಳು ಮೂಡಿ ಹಿಂದಿನವು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡವು. ಆದರೂ ಯುವ ಸಂಶೋಧಕರು ಈಗಾಗಲೇ ಬಳಕೆಯಲ್ಲಿರುವ ಹೊಸ ತಿಳಿವಳಿಕೆಗಳ ಅರಿವು ಅಥವಾ ಅಧ್ಯಯನದ ಕೊರತೆಯಿಂದ ತಮ್ಮ ಸಂಶೋಧನೆ ಮತ್ತು ವಿಮರ್ಶೆಯಲ್ಲಿ ಹೊಸತನ್ನು ಕಂಡುಕೊಳ್ಳಲು ವಿಫಲರಾಗುತ್ತಿದ್ದಾರೆ.

ಮೇಲ್ನೋಟಕ್ಕೆಯೇ ಓದುಗನಿಗೆ ಕಂಡುಬರುವ ಸಂಗತಿಗಳನ್ನು ವಿವರಿಸುವುದು, ಕಥೆಯನ್ನು ನಿರೂಪಿಸುವುದು ಕೃತಿಯ ಪರಿಚಯವಾಗುತ್ತದಷ್ಟೆ. ಕಥೆಯನ್ನೇ ತೆಗೆದುಕೊಂಡರೆ ಕಥೆಯಲ್ಲಿ ನಿರ್ದಿಷ್ಟ ಘಟನೆಯನ್ನು ಆಯ್ದುಕೊಳ್ಳುವುದರ ಹಿಂದೆ ಕಥೆಗಾರರಿಗೆ ನಿರ್ದಿಷ್ಟ ಉದ್ದೇಶವಿರುತ್ತದೆ. ಈ ಉದ್ದೇಶ ಸ್ವತಃ ಕಥೆಗಾರರಿಗೇ ಗೊತ್ತಿಲ್ಲದೆ ಅಪ್ರಜ್ಞಾಪೂರ್ವಕವಾಗಿಯೇ ಅಲ್ಲಿ ಬಂದಿರಬಹುದು. ಈ ಉದ್ದೇಶ ನಮಗೆ ತಿಳಿಯಬೇಕಾದರೆ ಕಥೆ ಸೃಷ್ಟಿಯಾದ ಕಾಲಘಟ್ಟ, ಆ ಸಂದರ್ಭದ ಸಾಮಾಜಿಕ, ರಾಜಕೀಯ ಪರಿಸ್ಥಿತಿಯ ಅರಿವು, ಸಾಹಿತ್ಯೇತರ ಜ್ಞಾನವಲಯಗಳ ಅಧ್ಯಯನದ ಹಿನ್ನೆಲೆ ಅಗತ್ಯವಾಗಿರುತ್ತದೆ.

ಇದನ್ನು ಓದಿದ್ದೀರಾ?: ಧರ್ಮಸ್ಥಳ ಸೌಜನ್ಯ ಪ್ರಕರಣ | ಸಿಬಿಐಗೆ ಹೈಕೋರ್ಟ್‌ ನೋಟಿಸ್; ಈವರೆಗೆ ನಡೆದಿದ್ದೇನು?

ಕಥೆಯನ್ನು ಅರ್ಥೈಸುವಲ್ಲಿ ಬಳಸಿಕೊಂಡ ಅಡಿಟಿಪ್ಪಣಿ, ಪರಾಮರ್ಶನ ಗ್ರಂಥಗಳು ಹಲವು ಸಂದರ್ಭಗಳಲ್ಲಿ, ವಿಮರ್ಶಕರು ಹೇಳಹೊರಡುವ ಗ್ರಹಿಕೆಗಳಿಗೆ ತಾಳೆಯಾಗದೆ ಹೊರಗೇ ಉಳಿಯುತ್ತವೆ. ಈಗಾಗಲೇ ವಿವಿಧ ಪುಸ್ತಕಗಳಲ್ಲಿ ದಾಖಲಾದ ಹೇಳಿಕೆ ಅಥವಾ ಗ್ರಹಿಕೆಗಳನ್ನು ನಮ್ಮ ಗ್ರಹಿಕೆಯ ಅನುಮೋದನೆಗೆ ಬಳಸಿಕೊಳ್ಳುವಿಕೆ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ಈಗಾಗಲೇ ಮಾನ್ಯತೆ ಪಡೆದ ಗ್ರಹಿಕೆಗಳನ್ನು ಸಕಾರಣವಾಗಿ, ವಿಮರ್ಶನಪ್ರಜ್ಞೆಯಿಂದ ನಾವು ಪ್ರಶ್ನಿಸಿ ಹೊಸತೊಂದು ನೋಟವನ್ನು ಹೊಮ್ಮಿಸಲು ಪ್ರಯತ್ನಿಸಬೇಕಾಗಿದೆ. ಅಂತಹ ಕೆಲವು ಹೊಸ ಮಿಂಚುಗಳು ಇಲ್ಲಿನ ಕೆಲವು ಪ್ರಬಂಧಗಳಲ್ಲಿಯೂ ಹೊಮ್ಮಿವೆ.

ಪಿಎಚ್.ಡಿ ಸಂಶೋಧನಾ ಮಹಾಪ್ರಬಂಧಕ್ಕೆ ಸಾಕಷ್ಟು ಅಡಿಟಿಪ್ಪಣಿಗಳು ಅಗತ್ಯಬೀಳಬಹುದು. ಆದರೆ ಇತರ ಸಂಶೋಧನೆ/ ವಿಮರ್ಶಾ ಬರಹಗಳಿಗೆ ಈ ಪ್ರಮಾಣದ ಅಡಿಟಿಪ್ಪಣಿಗಳ ಅಗತ್ಯ ಬೀಳಲಾರದು. ಸಂಶೋಧಕ/ವಿಮರ್ಶಾ ಬರಹದ ಲೇಖಕರು ಅಗತ್ಯವಿದ್ದು ಇದನ್ನು ಈ ಪ್ರಮಾಣದಲ್ಲಿ ಬಳಸಿದ್ದಾರೆಯೇ ಅಥವಾ ತನಗಿರುವ ಅಧ್ಯಯನದ ವಿಸ್ತಾರ ತಿಳಿಸಿಕೊಡಲು ಬಯಸಿದ್ದಾರೆಯೇ ಎಂಬ ಅರಿವು ಇದನ್ನು ಮೌಲ್ಯಮಾಪನ ಮಾಡುವವರಿಗೆ ತಕ್ಷಣ ಹೊಳೆಯುತ್ತದೆ. ಕೆಲವು ಪ್ರಬಂಧಗಳಿಗೆ ಅಡಿಟಿಪ್ಪಣಿಗಳೇ ಭಾರವೆನಿಸುತ್ತವೆ.

ಈ ವಿಮರ್ಶಾಪ್ರಬಂಧಗಳ ಸಂಕಲನ ‘ಎದೆಯ ಹಣತೆ’ಯ ಬೆಳಕು, ಬೆಳಕನೊಳಗಣ ಕಿಡಿಯ ಕಂಡಿರಿಸುವ ವಿನಮ್ರ ಕಾಯಕದ ಫಸಲು. ಮೇಲೆ ಪ್ರಸ್ತಾಪಿಸಿದ ವಿಮರ್ಶಾ ಪ್ರಬಂಧಗಳ ಗುಣ ಮತ್ತು ಮಿತಿಗಳು ಬಾನು ಮುಷ್ತಾಕ್ ಅವರ ಕಥೆಗಳನ್ನು ಕುರಿತ ಇಲ್ಲಿನ ಪ್ರಬಂಧಗಳಲ್ಲಿಯೂ ಇವೆ. ಆದರೆ, ಸಾರಾಂಶದಲ್ಲಿ, ಕನ್ನಡ ವಿಮರ್ಶಾಕ್ಷೇತ್ರದ ಭವಿಷ್ಯದ ಕುರಿತ ಆತಂಕವನ್ನು ಸಕಾರಣವಾಗಿ ಒಂದಷ್ಟು ತಗ್ಗಿಸುವ ಭರವಸೆಯನ್ನಂತೂ ಈ ಸಂಕಲನ ಮೂಡಿಸಿದೆ. 

1417716 531606640266610 1974048228 o
ಡಾ. ಸರ್ಜಾಶಂಕರ್ ಹರಳಿಮಠ
+ posts

ಲೇಖಕರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...