ಉತ್ತರದ ಬೀದರ್‌ನಿಂದ ದಕ್ಷಿಣದ ಚಾಮರಾಜನಗರದ ತನಕ, ಪೂರ್ವದ ಮಂಗಳೂರಿನಿಂದ ಪಶ್ಚಿಮ ಕೋಲಾರದ ತನಕ, ಇಡೀ ಕರ್ನಾಟಕದ ಸಾವಿರಾರು ಗ್ರಾಮೀಣ ಭಾಗದ ನರೇಗಾ ಕಾರ್ಮಿಕರು ಒಂದೊತ್ತಿನ ಊಟ ಕಟ್ಟಿಕೊಂಡು ರಾಜಧಾನಿಗೆ ಬಂದಿದ್ದರು. ʼಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನರ ಬದುಕನ್ನು ಕಿತ್ತು ಕೊಳ್ಳುತ್ತಿದೆʼ ಎಂಬ ಆತಂಕದೊಂದಿದೆ ಅವರು ಒಂದೆಡೆ ಸೇರಿದ್ದರು.
ʼನರೇಗಾವನ್ನು ಮರುಸ್ಥಾಪಿಸಿʼ, ʼವಿಬಿ ಜಿ ರಾಮ್ ಜಿ ತಕ್ಷಣವೇ ವಾಪಸಾಗಬೇಕುʼ, ʼ200 ದಿನ ಕೆಲಸ ಕೊಡಬೇಕುʼ, ʼದುಡಿಯುವ ಕೈಗಳಿಗೆ ಕೆಲಸ ಕೊಡಲೇಬೇಕುʼ, ʼಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಕಡಿತ ಮಾಡಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ದಿಕ್ಕಾರʼ ಮಹಾಪಂಚಾಯತ್‌ನಲ್ಲಿ ಮೊಳಗಿದ ಘೋಷಣೆಗಳಿವು.
ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಉಳಿಸಿ ಆಂದೋಲನದ ಭಾಗವಾಗಿ ʼಮನರೇಗಾ ರಕ್ಷಣಾ ಒಕ್ಕೂಟ-ಕರ್ನಾಟಕʼ ವತಿಯಿಂದ ಇಂದು (ಫೆ.2) ಮಹಾ ಪಂಚಾಯತ್ ಅನ್ನು ನಡೆಸಲಾಯಿತು.
ನರೇಗಾ ಯೋಜನೆಯು ಕಳೆದ ಎರಡು ದಶಕಗಳಿಂದ ದೇಶದ ಗ್ರಾಮೀಣ ಕೂಲಿಕಾರರು ಮತ್ತು ಸಣ್ಣ ರೈತರ ಜೀವನೋಪಾಯಕ್ಕೆ ಬಲವಾದ ಆಧಾರವಾಗಿತ್ತು. ಅಂತಹ ಕಾನೂನನ್ನು ಕಿತ್ತು ಹಾಕಿರುವ ಕೇಂದ್ರ ಒಕ್ಕೂಟ ಸರ್ಕಾರವು ಹೊರತಂದಿರುವ ʼವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಅಥವಾ (ವಿಬಿ ಜಿ-ರಾಮ್-ಜಿ) 2025′ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರಾಜ್ಯದಾದ್ಯಂತ ಇರುವ ಸಾವಿರಾರು ಕಾರ್ಮಿಕರು ಒಂದೇ ವೇದಿಕೆಯ ಮಹಾಪಂಚಾಯತ್‌ನಲ್ಲಿ ಪ್ರತಿಭಟಿಸಿದರು.

ಹಾವೇರಿ ಜಿಲ್ಲೆ, ಡೊಳ್ಳೇಶ್ವರ ಗ್ರಾಮದಿಂದ ಬಂದಂತಹ ಮನರೇಗಾ ಕಾರ್ಮಿಕರಾದ ಲಲಿತಾ ʼಈದಿನʼ ಜೊತೆ ಮಾತನಾಡಿ “ನನ್ನ ಗಂಡ ತುಂಬಾ ಕುಡಿಯುತ್ತಾರೆ. ನರೇಗಾ ಮೂಲಕ ಗ್ರಾಮಪಂಚಾಯಿತಿಯಿಂದ ನಮ್ಮ ಹಳ್ಳಿಯಲ್ಲಿ ಕೆಲಸ ಕೊಟ್ಟಿದ್ದಕ್ಕೆ, ನನ್ನ ಮನೆ ಮತ್ತು ಸಂಸಾರವನ್ನು ಸಾಕಿದ್ದೀನಿ. ಈಗ ಮೋದಿ ಸರ್ಕಾರ ನಮ್ಮ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ನಮ್ಮ ಹಳ್ಳಿಗೆ ನರೇಗಾ ಬರುವ ತನಕ ಹೋರಾಟ ಮಾಡುತ್ತೀವಿ” ಎಂದು ತಮ್ಮ ಅಳಲನ್ನು ತೋಡಿಕೊಂಡರು.
ವಿಜಯನಗರ ಜಿಲ್ಲೆ, ಕೊಟ್ಟುರು ತಾಲ್ಲೂಕು, ಕೋಗಳಿ ಗ್ರಾಮದಿಂದ ಬಂದಿದ್ದಂತಹ ಈರಮ್ಮ ʼಈದಿನʼ ಜೊತೆ ಮಾತನಾಡಿ “ಮಹಿಳೆಯರಿಗೆ ಸಮಾನವಾದ ಕೂಲಿ ಸಿಗುತ್ತದೆ ಎಂಬ ಹೊಟ್ಟೆ ಉರಿಯಿಂದ, ಮೋದಿ ಸರ್ಕಾರ ಜಿ ರಾಮ್ ಜಿ ತರೋಕೆ ಹೊರಟಿದೆ. ನಮ್ಮ ಹಳ್ಳಿಯಲ್ಲಿ ಕೆಲಸ ನಿಲ್ಲಿಸಿ, ಕಟ್ಟಡ ಕಟ್ಟೋಕೆ, ಸಿಸಿ ರೋಡ್ ಮಾಡೋಕೆ ಬನ್ನಿ ಅಂತ ಹೇಳ್ತಾರೆ. ಇದೇ ತರ ಗ್ರಾಮೀಣ ಜನರ ಬದುಕಿಗೆ ಕೊಳ್ಳಿ ಇಟ್ತಿದ್ದಾರೆ. ಯಾವ ರಾಮ್ ಜಿ ಬೇಡ. ನಮಗೆ ಉದ್ಯೋಗ ಖಾತ್ರಿ ಕೊಡಿ” ಎಂದು ಆಗ್ರಹ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆ, ಲಿಂಗಸುಗೂರು ತಾಲ್ಲೂಕು, ಕೋಟಾ ಗ್ರಾಮದಿಂದ ಬಂದಿದ್ದ ಅಮರೇಗೌಡ ಎಂಬ ಕಾರ್ಮಿಕರು ʼಈದಿನʼ ಜೊತೆ ಮಾತನಾಡಿ “ಬಡ ಕೂಲಿಕಾರ್ಮಿಕರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ಮಾಡುತ್ತಿದೆ. 2005ರಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ವಿ. ಆದರೆ ಈಗ ಗ್ರಾಮಪಂಚಾಯತಿಗೆ ಕೆಲಸ ಕೇಳೋಕೆ ಹೋದ್ರೆ, ಕೇಂದ್ರದಿಂದ ಅನುಮತಿ ಬಂದಿಲ್ಲ, ಇನ್ನು ಎರಡು ತಿಂಗಳು ಕೆಲಸ ಇರೋಲ್ಲ ಅಂತಾರೆ. ಹಿಂಗಾದ್ರೆ ಹೊಟ್ಟೆ ಬಟ್ಟೆಗೆ ಏನ್ ಮಾಡೋದು” ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣಾ ಭಾಗದ ಸಾವಿರಾರು ಜನರು ಸೇರಿದ್ದ ಮಹಾಪಂಚಾಯತ್‌ಗೆ ಕಾರ್ಮಿಕ, ರೈತ, ದಲಿತ ಹಾಗೂ ಮಹಿಳಾ ಸಂಘಟನೆಗಳು ಕೈಜೋಡಿಸಿದ್ದವು. ಕೊನೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಕಾರ್ಯದರ್ಶಿಗಳಿಗೆ ʼವಿಬಿ ಜಿ-ರಾಮ್-ಜಿ ವಾಪಸು ಪಡೆಯುವಂತೆʼ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮನರೇಗಾ ರಕ್ಷಣಾ ಒಕ್ಕೂಟದ ಪ್ರಕಾಶ್ ಕಮ್ಮರಡಿ, ಕರ್ನಾಟಕ ಜನಶಕ್ತಿಯ ಮುಖ್ಯಸ್ಥರಾದ ನೂರ್ ಶ್ರೀಧರ್, ಭೂಮಿ ಮತ್ತು ವಸತಿ ಹಕ್ಕು ಸಮಿತಿಯ ಕುಮಾರ್ ಸಮತಲ, ಜಾಗೃತ ಮಹಿಳಾ ಫೆಡರೇಷನ್‌ನ ಶಾರದ ಗೋಪಾಲ್, ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಾವಳ್ಳಿ ಶಂಕರ್, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ನಮ್ಮೂರ ಭೂಮಿ ನಮಗಿರಲಿ ಆಂದೋಲನದ ವಿ ಗಾಯತ್ರಿ, ವಕೀಲರು ಮತ್ತು ಕಮ್ಯೂನಿಸ್ಟ್ ಪಕ್ಷದ ಮುಖಂಡರಾದ ಕ್ಲಿಫ್ಟನ್ ಡಿ’ ರೊಜಾರಿಯೋ, ಎಐಸಿಸಿಟಿಯುನ ಪ್ರೊ ರಾಜೆಂದ್ರನ್ ಹಾಗೂ ಮಹಾಪಂಚಾಯತ್ ಸಂಘಟಕರಾದ ದೇವಿ, ಪುಟ್ಟಮಾಧು, ಗುರುರಾಜ್, ಅಭಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.





