ಆನ್‌ಲೈನ್ ಗೇಮ್ ಚಟಕ್ಕೆ ದಾಸನಾಗಿದ್ದ ಅಕ್ಕನ ಮಗನನ್ನು ಕೊಲೆಗೈದ ಪಾಪಪ್ರಜ್ಞೆ ಹಾಗೂ ಜಿಗುಪ್ಸೆಯಿಂದ ನೊಂದ ಮಾವ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಬಿಹಾರದ ಯಾತ್ರಾಸ್ಥಳವೊಂದರಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ನಡೆದಿದೆ.
ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳಾಗಿದ್ದ ನಾಗಪ್ರಸಾದ್ (50), ಇವರ ತಾಯಿ ಸುಮಂಗಲಾ (78) ಹಾಗೂ ಸಹೋದರಿಯರಾದ ಶಿಲ್ಪಾ (48) ಮತ್ತು ಶ್ರುತಾ (43) ಮೃತ ದುರ್ದೈವಿಗಳು. ಬಿಹಾರದ ನಾಲಂದಾ ಜಿಲ್ಲೆಯ ರಾಜಗಿರದಲ್ಲಿರುವ ಜೈನ ಧರ್ಮಶಾಲೆಯೊಂದರಲ್ಲಿ ಇವರ ಮೃತದೇಹಗಳು ಪತ್ತೆಯಾಗಿವೆ.
ಕೆಲವು ತಿಂಗಳ ಹಿಂದೆ (ಆಗಸ್ಟ್ 2025ರಲ್ಲಿ) ಬೆಂಗಳೂರಿನಲ್ಲಿ ನಡೆದಿದ್ದ ಅಮೋಘಕೀರ್ತಿ ಎಂಬ ಬಾಲಕನ ಕೊಲೆ ಪ್ರಕರಣ ಈ ದುರಂತಕ್ಕೆ ಮುನ್ನುಡಿ ಬರೆದಿದೆ. ಅಮೋಘಕೀರ್ತಿ ‘ಫ್ರೀಫೈರ್’ (Free Fire) ಎಂಬ ಆನ್‌ಲೈನ್ ಗೇಮ್‌ಗೆ ದಾಸನಾಗಿದ್ದ. ಗೇಮ್ ಆಡಲು ಹಣ ನೀಡುವಂತೆ ತನ್ನ ಮಾವ ನಾಗಪ್ರಸಾದ್ ಅವರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ರೋಸಿಹೋದ ನಾಗಪ್ರಸಾದ್, ಬಾಲಕನ ಕತ್ತು ಸೀಳಿ ಕೊಲೆ ಮಾಡಿದ್ದ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸರು ನಾಗಪ್ರಸಾದ್‌ನನ್ನು ಬಂಧಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು
ಜೈಲು ಸೇರಿದ್ದ ನಾಗಪ್ರಸಾದ್‌ನನ್ನು ಆತನ ಸಹೋದರಿ ಶಿಲ್ಪಾ ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ. ಅಳಿಯನ ಸಾವಿನ ನೋವು ಮತ್ತು ಮಗನ ಕೃತ್ಯದಿಂದ ಉಂಟಾದ ಕಳಂಕದಿಂದ ತೀವ್ರ ಮನನೊಂದಿದ್ದ ಕುಟುಂಬ, ಮಾನಸಿಕ ಶಾಂತಿಗಾಗಿ ತೀರ್ಥಯಾತ್ರೆಗೆ ತೆರಳಿತ್ತು. ಜನವರಿ 31ರಂದು ಬಿಹಾರದ ರಾಜಗಿರಕ್ಕೆ ತೆರಳಿದ್ದ ಕುಟುಂಬ, ಅಲ್ಲಿನ ಧರ್ಮಶಾಲೆಯಲ್ಲಿ ತಂಗಿತ್ತು. ಫೆಬ್ರವರಿ 2ರಿಂದ ಇವರ ಕೋಣೆಯ ಬಾಗಿಲು ತೆರೆದಿರಲಿಲ್ಲ. ಶುಕ್ರವಾರ (ಫೆ. 6) ಕೋಣೆಯಿಂದ ದುರ್ವಾಸನೆ ಬರಲಾರಂಭಿಸಿದಾಗ ಬಾಗಿಲು ಒಡೆದು ನೋಡಿದಾಗ ನಾಲ್ವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳದಲ್ಲಿ ನಿದ್ದೆ ಮಾತ್ರೆಗಳು ಪತ್ತೆಯಾಗಿದ್ದು, ಅತಿಯಾದ ಮಾತ್ರೆ ಸೇವನೆಯೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಬಾಲಕನನ್ನು ಕೊಂದ ಪಾಪ ಪ್ರಜ್ಞೆ ಕಾಡಿದ್ದರಿಂದ ಇಡೀ ಕುಟುಂಬವೇ ಹೀಗೊಂದು ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ನಾಗಪ್ರಸಾದ್ ಅವರ ಜೇಬಿನಲ್ಲಿದ್ದ ಚೀಟಿ ಮತ್ತು ಆಧಾರ್ ಕಾರ್ಡ್ ಆಧಾರದ ಮೇಲೆ ಮೃತರ ಗುರುತು ಪತ್ತೆಹಚ್ಚಲಾಗಿದ್ದು, ನಳಂದ ಪೊಲೀಸರು ಬೆಂಗಳೂರು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ.
ಒಂದು ಆನ್‌ಲೈನ್ ಗೇಮ್ ವ್ಯಸನ ಹೇಗೆ ಹದಿಹರೆಯದ ಜೀವವನ್ನು ಬಲಿ ಪಡೆಯಿತಲ್ಲದೆ, ಅಂತಿಮವಾಗಿ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿತು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಬಾಲಕನ ಸಾವಿನ ನಂತರ ದಿಕ್ಕು ತೋಚದಂತಾಗಿದ್ದ ಕುಟುಂಬ, ಬಿಹಾರದ ತನಕ ಹೋಗಿ ಸಾವಿನ ಮನೆಯ ಕದ ತಟ್ಟಿರುವುದು ವಿಪರ್ಯಾಸ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.





